varthabharthi


ಗಲ್ಫ್ ಸುದ್ದಿ

ಉದ್ಯಮ ರಂಗದ ಡಿಜಿಟಲೀಕರಣದ ಸವಾಲು ಎದುರಿಸಲು ಸಜ್ಜಾಗಿ: ಬಿಸಿಸಿಐ ಯುಎಇ ವೆಬಿನಾರ್ ನಲ್ಲಿ ರಾಶಿದ್ ಹಝಾರಿ

ವಾರ್ತಾ ಭಾರತಿ : 15 Sep, 2021

ದುಬೈ ಸರಕಾರದ ಎಕಾನಮಿಕ್ ಡೆವಲಪ್ ಮೆಂಟ್ ವಿಭಾಗದ ಮುಖ್ಯ ತಂತ್ರಜ್ಞ ರಾಶಿದ್ ಹಝಾರಿ

ಯುಎಇ, ಸೆ.15: ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ (ಬಿಸಿಸಿಐ) ಯುಎಇ ವತಿಯಿಂದ 'ಡಿಜಿಟಲ್ ರೆವಲ್ಯೂಶನ್ ಆನ್ ಬ್ಯುಸಿನೆಸ್ ಆ್ಯಂಡ್ ಎಂಟರ್ ಪ್ರಿನರ್ ಶಿಪ್' ಎಂಬ ವಿಷಯದಲ್ಲಿ ವೆಬಿನಾರ್ ಸೆ.10ರಂದು ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದುಬೈ ಸರಕಾರದ ಎಕಾನಮಿಕ್ ಡೆವಲಪ್ ಮೆಂಟ್ ವಿಭಾಗದ ಮುಖ್ಯ ತಂತ್ರಜ್ಞ ರಾಶಿದ್ ಹಝಾರಿ ಮಾತನಾಡಿ, 'ಜಗತ್ತು ಅತ್ಯಂತ ವೇಗವಾಗಿ ಬದಲಾಗುತ್ತಿದೆ. ಆದರೆ ಈ ಬದಲಾವಣೆಗೆ ಅನುಗುಣವಾಗಿ ನಮ್ಮ ಕಲಿಕೆಯ ವಿಷಯವನ್ನು, ಉಜ್ವಲ ಭವಿಷ್ಯವಿರುವ ಉದ್ಯೋಗ ವಿಭಾಗವನ್ನು ಆಯ್ಕೆ ಮಾಡುವುದರಲ್ಲಿ ಎಡವುತ್ತಿದ್ದೇವೆ. 2030ರ ಆಸುಪಾಸಿನಲ್ಲಿ ಇನ್ನಷ್ಟು ಅತ್ಯಾಧುನಿಕ ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಮಾನವರಹಿತ, ರೋಬೋಟಿಕ್‌ ತಂತ್ರಜ್ಞಾನ 80 ಕೋಟಿಗೂ ಹೆಚ್ಚು ಜನರ ಉದ್ಯೋಗಕ್ಕೆ ಕುತ್ತುಂಟು ಮಾಡಲಿದೆ.‌ ದುಬೈ ಸೇರಿದಂತೆ ಹಲವು ದೇಶಗಳಲ್ಲಿ ರೋಬೋಟಿಕ್ ತಂತ್ರಜ್ಞಾನದ ಅಳವಡಿಕೆ ಈಗಾಗಲೇ ಪ್ರಾರಂಭವಾಗಿದೆ' ಎಂದರು.

'ಹಲವು ಹೊಸ ಸಾಫ್ಟ್ ವೇರ್ ನಿಂದಾಗಿ ಈಗಾಗಲೇ ಹಣಕಾಸು ವಿಭಾಗ, ಅಕೌಂಟೆಂಟ್ ಉದ್ಯೋಗಕ್ಕೆ ಕತ್ತರಿ ಬಿದ್ದಿದೆ. ತೆರಿಗೆ ಪಾವತಿ ವಿಭಾಗವೂ  ಯಾಂತ್ರೀಕೃತವಾಗಿ ಲೆಕ್ಕ ಪರಿಶೋಧಕರ ಉದ್ಯೋಗವನ್ನು ಕಡಿತಗೊಳಿಸಿದೆ. ಒಂದು ನಿರ್ದಿಷ್ಟ ಉದ್ಯೋಗ ಪಡೆಯಲು ಆಶಿಸಿ ನಿರ್ದಿಷ್ಟ ವಿಷಯವನ್ನು ಆಯ್ಕೆ ಮಾಡಿದ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಪೂರ್ಣಗೊಳ್ಳುವ ಮುನ್ನವೇ ಆ ವಿಭಾಗವನ್ನು ರೋಬೋಟಿಕ್ ತಂತ್ರಜ್ಞಾನ ಸಂಪೂರ್ಣವಾಗಿ ಸ್ವಾಧೀನಪಡಿಸಿಕೊಂಡರೆ ಅವರ ಭವಿಷ್ಯದ ಗತಿಯೇನು? ಈ ಬಗ್ಗೆ ವಿದ್ಯಾರ್ಥಿಗಳು, ಹೆತ್ತವರು ಜಾಗೃತರಾಗಬೇಕಾಗಿದ್ದು, ವೇಗವಾಗಿ ಬದಲಾಗುತ್ತಿರುವ ಜಗತ್ತಿಗೆ ಒಗ್ಗಿಕೊಂಡು ಬದಲಾವಣೆಯನ್ನು ಅರಿತು, ಅಳವಡಿಸಿಕೊಂಡು ಸೂಕ್ತ ಆಯ್ಕೆ ಮಾಡಬೇಕು' ಎಂದು ಸಲಹೆ ನೀಡಿದರು.

ಡಿಜಿಟಲ್ ಜಗತ್ತಿನಲ್ಲಿ ಹೇಗೆ ಉಬರ್, ಓಲಾ ಟ್ಯಾಕ್ಸಿ ಕ್ಷೇತ್ರದಲ್ಲಿ ಕ್ಷಿಪ್ರ ಬದಲಾವಣೆಗೆ ಸಾಕ್ಷಿಯಾಯಿತು, ಕಳೆದ ಹತ್ತು ವರ್ಷಗಳಿಂದ ದುಬೈ ಯಶಸ್ವಿಯಾಗಿ ಚಾಲಕ ರಹಿತ ಮೆಟ್ರೋದಿಂದ ಕೋಟ್ಯಂತರ ಪ್ರಯಾಣಿಕರ ಪ್ರಯಾಣವನ್ನು ಸರಳಗೊಳಿಸಿದೆಯೋ ಅದೇ ರೀತಿ ಮುಂದೆ ಮಾನವರಹಿತ, ಹಾರುವ 'ಏರ್ ಟ್ಯಾಕ್ಸಿ' ಮತ್ತು 150 ಕಿ.ಮೀ ದೂರವನ್ನು 12 ನಿಮಿಷಗಳಲ್ಲಿ ತಲುಪಬಲ್ಲ ಹೈಪರ್ಲೂಪ್ ಸಾರಿಗೆ ಕ್ಷೇತ್ರದಲ್ಲಿ ಹೊಸ ಬದಲಾವಣೆಗೆ ನಾಂದಿ ಹಾಡಲಿದೆ. ಈ ಬದಲಾವಣೆಯೂ ನೇರವಾಗಿ, ಪರೋಕ್ಷವಾಗಿ ದೊಡ್ಡ ಮಟ್ಟದ ಉದ್ಯೋಗ ನಷ್ಟಕ್ಕೆ ಕಾರಣವಾಗಲಿದೆ ಎಂದವರು ಎಚ್ಚರಿಸಿದರು.

ಈ ಡಿಜಿಟಲ್ ಕ್ರಾಂತಿ ಎಲ್ಲಾ ಉದ್ಯೋಗ ಕ್ಷೇತ್ರದಲ್ಲೂ ಬದಲಾವಣೆ ತರಲಿದೆ, ಕೆಲವು ಕ್ಷೇತ್ರಗಳಲ್ಲಿ ತುರ್ತು ಬದಲಾವಣೆ ಇನ್ನು ಕೆಲವು ಕ್ಷೇತ್ರಗಳಲ್ಲಿ ನಿಧಾನವಾಗಿ, ಹಲವು ಕ್ಷೇತ್ರಗಳಲ್ಲಿ ಸಂಪೂರ್ಣ ಬದಲಾವಣೆ ಉಂಟಾದರೆ, ಇನ್ನು ಕೆಲವು ಕ್ಷೇತ್ರಗಳಲ್ಲಿ ಭಾಗಶಃ ಬದಲಾವಣೆಗೆ ಕಾರಣವಾಗುತ್ತದೆ. ರಿಟೇಲ್ ಅಥವಾ ಚಿಲ್ಲರೆ ವ್ಯಾಪಾರ ಆನ್ಲೈನ್ ಈ ಕಾಮರ್ಸ್ ಕಂಪನೆಗಳ ಭರಾಟೆಯಿಂದ ಬಹುತೇಕ ನಷ್ಟ ಅನುಭವಿಸಿದೆ. ಸಾವಿರಾರು ರಿಟೇಲ್ ಮಳಿಗೆಗಳು ಮುಚ್ಚಿವೆ. ಹೊಸ ಹೊಸ‌‌ ಬುಕ್ಕಿಂಗ್ ಅಪ್ಲಿಕೇಶನ್ ನಿಂದಾಗಿ ಟ್ರಾವೆಲ್ ಏಜೆಂಟ್ ಗಳ ಉದ್ಯಮಕ್ಕೂ ಹೊಡೆತ ಬಿದ್ದಿದೆ. ಹಣಕಾಸು, ದೂರ ಸಂಪರ್ಕ, ಅಟೋಮೊಬೈಲ್ ಸರಕು ಸಾಗಣೆ, ರೀಟೇಲ್, ಆರೋಗ್ಯ ಜೀವವಿಜ್ಞಾನ, ಮಾಧ್ಯಮ, ಮನೋರಂಜನೆ, ರಿಯಲ್ ಎಸ್ಟೇಟ್, ಸರ್ಕಾರ ಮತ್ತು ಸಾರ್ವಜನಿಕ ವಲಯ ಈ ಎಲ್ಲಾ ವಿಭಾಗಗಳಲ್ಲೂ ಬದಲಾವಣೆ ಆಗುತ್ತಿದೆ, ಡಿಜಿಟಲ್ ಜಗತ್ತಿಗೆ ಅಳವಡಿಸಿಕೊಳ್ಳುವ ಕೆಲಸ ನಡೆಯುತ್ತಿದೆ ಎಂದು ರಾಶಿದ್ ಹಝಾರಿ ಮಾಹಿತಿ ನೀಡಿದರು.

ಬದಲಾವಣೆ ಜಗದ ನಿಯಮ, ಈ ಬದಲಾವಣೆಯಿಂದ ಕೇವಲ ಉದ್ಯೋಗ ನಷ್ಟ ಸಂಭವಿಸಲಿದೆ ಎಂದು ಮಾತ್ರ ಚಿಂತಿಸಬೇಕಾಗಿಲ್ಲ. ಈ ಬದಲಾವಣೆ ಹೊಸ ಹೊಸ ಉದ್ಯಮ, ಉದ್ಯೋಗಪತಿ, ಉದ್ಯೋಗಾವಕಾಶಕ್ಕೂ ಕಾರಣವಾಗಲಿದೆ. ನಮ್ಮ ಬದುಕುವ ಶೈಲಿಯನ್ನೇ ಬದಲಾಯಿಸಲಿದೆ. ಬದಲಾವಣೆಯನ್ನು ಗ್ರಹಿಸಿ, ಅಳವಡಿಸಿಕೊಂಡರೆ, ಸವಾಲಾಗಿ ಸ್ವೀಕರಿಸಿದರೆ ದೊಡ್ಡ ಮಟ್ಟದ ಹೊಸ ಅವಕಾಶಗಳಿಗೆ ದಾರಿಯಾಗಲಿದೆ ಎಂದವರು ತಿಳಿಸಿದು.

 ಕೋವಿಡ್ 19ನಿಂದಾಗಿ ಡಿಜಿಟಲೀಕರಣದ ವೇಗ ಇನ್ನಷ್ಟು ಹೆಚ್ಚಾಯಿತು, ಜನಸಾಮಾನ್ಯರಿಗೂ ಡಿಜಿಟಲ್ ಜಗತ್ತಿಗೆ ಪರಿಚಯವೂ ಆಗತೊಡಗಿತು.

ಅಮೆಝಾನ್ ಗಳಂತಹ ಈ ಕಾಮರ್ಸ್, ವ್ಯಾಲೆಟ್, ಮೊಬೈಲ್ ಪೇ, ಬಿಟ್ ಕಾಯಿನ್ ಗಳಂತಹ ಡಿಜಿಟಲ್ ಕರೆನ್ಸಿ, ಓಲಾ ಉಬರ್ ಗಳಂತಹ ಶೇರಿಂಗ್ ಎಕಾನಮಿ, ಈ-ಗೇಮಿಂಗ್, ನೆಟ್'ಫ್ಲಿಕ್ಸ್ ತರಹದ ಒಟಿಟಿ ಪ್ಲಾಟ್ ಫಾರ್ಮ್, ಅಪ್ಲಿಕೇಶನ್ ಡೆವಲಪ್ಮೆಂಟ್, ಟ್ವಿಟರ್, ಫೇಸ್ ಬುಕ್, ಇನ್ಸ್ಟಾಗ್ರ್ಯಾಮ್ ಗಳಂತಹ ಹಲವು ಹೊಸ ಸಾಮಾಜಿಕ ಜಾಲತಾಣಗಳು , ಬಿಗ್ ಡೇಟಾ, ಓಪನ್ ಬ್ಯಾಂಕಿಂಗ್ ಗಳಂತಹ ಡೆಟಾ ಎಕಾನಮಿ, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಡ್ರೋನ್ಸ್, ನ್ಯಾನೋ ಟೆಕ್ನಾಲಜಿ, 3ಡಿ ಪೈಂಟಿಂಗ್ ಇವೆಲ್ಲವೂ ಭವಿಷ್ಯದಲ್ಲಿ ಹೆಚ್ಚು ಬೆಳವಣಿಗೆ ಹೊಂದಲಿರುವ ಕೆಲವು ಕ್ಷೇತ್ರಗಳು.

ಯುವ ಉದ್ಯಮಿಗಳು, ವ್ಯಾಪಾರಿಗಳು ಡಿಜಿಟಲ್ ಕ್ಷೇತ್ರದಲ್ಲಿ ಬೆಳವಣಿಗೆ ಹೊಂದುತ್ತಿರುವ ಕಂಪೆನಿಗಳ ಬಗ್ಗೆ ಅರಿತು, ಹೇಗೆ ನಿಮ್ಮ ಉದ್ಯಮದಲ್ಲಿ ಅದನ್ನು ಅಳವಡಿಸಬಹುದು, ನಿಮ್ಮ ಗ್ರಾಹಕರ ನಿರೀಕ್ಷೆಗಳ ಬಗ್ಗೆಯೂ ಗ್ರಾಹಕರ ದೃಷ್ಟಿಕೋನದಿಂದಲೇ ವಿಶ್ಲೇಷಣೆ ನಡೆಸಿ, ಹೊಸ ರೂಪುರೇಷೆ ಗಳೊಂದಿಗೆ, ಡಿಜಿಟಲೀಕರಣದ ಸಹಾಯದಿಂದ ಬೆಳವಣಿಗೆ ಹೊಂದಬಹುದು ಎಂದು ಸಲಹೆ ನೀಡಿದರು.

ಬಿಸಿಸಿಐ ಯುಎಇ ಚಾಪ್ಟರ್ ಅಧ್ಯಕ್ಷ ಎಸ್.ಎಂ.ಬಶೀರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಬಿಸಿಸಿಐನ ಧ್ಯೇಯೋದ್ದೇಶಗಳನ್ನು ವಿವರಿಸಿ, ಯುಎಇ ಚಾಪ್ಟರ್ ನ ತಂಡವನ್ನು ಪರಿಚಯಿಸಿದರು. ಉಪಾಧ್ಯಕ್ಷ ಅಬ್ದುಲ್ಲಾ ಮದುಮೂಲೆ ಕಾರ್ಯಕ್ರಮದ ಮುಖ್ಯ ಅತಿಥಿಯ ಸಂಕ್ಷಿಪ್ತ ಪರಿಚಯ ನೀಡಿದರು.

ಬಿಸಿಸಿಐ ಯುಎಇ ಚಾಪ್ಟರ್ ಉಪಾಧ್ಯಕ್ಷ ಹಿದಾಯತ್ ಅಡ್ಡೂರ್ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಅನ್ವರ್ ಹುಸೇನ್ ಕಾರ್ಯಕ್ರಮ ನಿರೂಪಿಸಿದರು.

ವೆಬಿನಾರಿನಲ್ಲಿ 16ಕ್ಕೂ ಹೆಚ್ಚಿನ ದೇಶಗಳಿಂದ 225ಕ್ಕೂ ಹೆಚ್ಚಿನ ಆಸಕ್ತರು ಪಾಲ್ಗೊಂಡಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)