varthabharthi


ಬೆಂಗಳೂರು

ವಿದ್ಯಾರ್ಥಿಗಳ ಮೇಲಿನ ಲಾಠಿಚಾರ್ಜ್ ಪ್ರಕರಣದ ಸೂಕ್ತ ತನಿಖೆಯಾಗಲಿ: ಸಿಎಫ್ಐ ಆಗ್ರಹ

ವಾರ್ತಾ ಭಾರತಿ : 15 Sep, 2021

ಬೆಂಗಳೂರು, ಸೆ.15: ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ವಿರುದ್ಧ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ(ಎನ್ಇಪಿ) ನೇತೃತ್ವದಲ್ಲಿ ನಡೆದ ವಿಧಾನಸಭಾ ಮುತ್ತಿಗೆ ಸಂದರ್ಭ ನಡುವೆ ಶಾಂತಿಯುತವಾಗಿದ್ದ ವಿದ್ಯಾರ್ಥಿಗಳ ಮೇಲೆ ಪೋಲಿಸರು ನಡೆಸಿದ ಲಾಠಿಚಾರ್ಜ್ ಕುರಿತು ಸೂಕ್ತ ತನಿಖೆಯಾಗಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಿಎಫ್ಐ ರಾಜ್ಯಾಧ್ಯಕ್ಷ ಅಥಾವುಲ್ಲ ಪುಂಜಾಲಕಟ್ಟೆ ಒತ್ತಾಯಿಸಿದ್ದಾರೆ.

ನಗರದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಭಟಿಸುವ ಹಕ್ಕನ್ನು ದಮನಿಸುವ ದಾಜ್ಯ ಸರಕಾರದ ನಡೆ ಖಂಡನೀಯ: ವಿದ್ಯಾರ್ಥಿಗಳ ಮೇಲೆ ಏಕಾಏಕಿ ಪೋಲಿಸರು ಲಾಠಿ ಬೀಸಿದ್ದು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ, ಪ್ರತಿಭಟನಾನಿರತ ಹಲವಾರು ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿದ್ದು, ಇದೊಂದು ಸರಕಾರಿ ಪ್ರಾಯೋಜಿತ ಭಿನ್ನಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಎಂದು ಆರೋಪಿಸಿದ್ದಾರೆ.

ವಿಧಾನಸೌಧ ಮುತ್ತಿಗೆ ನಡೆಸುವ ಕುರಿತು ಈ ಮೊದಲೇ ಸುದ್ದಿಗೋಷ್ಠಿ ಕರೆದು ತಿಳಿಸಿದ್ದು, ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದು ಪ್ರತಿಭಟನೆಗೆ ಮುಂದಾಗಿದ್ದೆವು. ಆದರೆ ಪೊಲೀಸರು ಹಾಗೂ ವಿಶೇಷ ಪಡೆ ತಂಡ ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸಿದೆ. ಇಲ್ಲಿಯವರೆಗೆ ಯಾವುದೇ ಪ್ರತಿಭಟನೆಗಳ ಸಂದರ್ಭ ಕಾಣಸಿಗದ ಸ್ಪೆಷಲ್ ಫೋರ್ಸ್ ತಂಡವನ್ನು ಯಾಕಾಗಿ ಈ ಪ್ರತಿಭಟನೆಗೆ ನಿಯೋಜಿಸಲಾಗಿತ್ತು ಹಾಗೂ ಇವರಿಗೆ ವಿದ್ಯಾರ್ಥಿಗಳ ಮೇಲೆ ಲಾಠಿ ಬೀಸಲು, ಹಲ್ಲೆ ನಡೆಸಲು ಅನುಮತಿ ನೀಡಿದವರು ಯಾರು ಎಂಬುದನ್ನು ಇಲಾಖೆ ಸ್ಪಷ್ಟಪಡಿಸಬೇಕಾಗಿದೆ ಎಂದು ಒತ್ತಾಯಿಸಿದ ಅವರು, ಈ ಸ್ಪೆಷಲ್ ಪೋರ್ಸ್ ತಂಡವು ವಿದ್ಯಾರ್ಥಿ-ವಿದ್ಯಾರ್ಥಿನಿಯರ ಮೇಲೆ ಕೈ ಹಾಕಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಇದರಿಂದ ಇಬ್ಬರು ವಿದ್ಯಾರ್ಥಿಗಳ ತಲೆಗೆ, ಒಬ್ಬರ ಕಣ್ಣಿಗೆ ತೀವ್ರತರದ ಗಾಯಗಳಾಗಿದ್ದರೆ, ಹಲವಾರು ವಿದ್ಯಾರ್ಥಿಗಳ ಕಾಲು, ಕೈಗಳಿಗೆ ಗಾಯಗಳಾಗಿವೆ. ಈ ರೀತಿಯಾಗಿ ಅಮಾನವೀಯವಾಗಿ ವರ್ತಿಸಿದ ಪೊಲಿಸರ ಹಾಗೂ ಸ್ಪೆಷಲ್ ಫರ್ಸ್ ತಂಡದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದವರು ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸಿಎಫ್ಐ ರಾಜ್ಯ ಕಾರ್ಯದರ್ಶಿ ಸರ್ಫರಾಝ್ ಗಂಗಾವತಿ, ಪ್ರತಿಭಟನೆ ವೇಳೆ ಪೊಲೀಸ್ ಲಾಠಿ ಪ್ರಹಾರದಿಂದ ಗಾಯಗೊಂಡಿದ್ದ ಹಫೀಝ್, ಮುಖ್ತಾರ್, ರಾಝಿಕ್ ಹಾಗೂ ಅರ್ಮಾನ್ ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)