ಕರ್ತವ್ಯಕ್ಕೆ ಹಾಜರಾದ 2 ಗಂಟೆಯಲ್ಲೇ ಔಟ್ಲುಕ್ ಸಂಪಾದಕರ ವಜಾ!
ರೂಬೆನ್ ಬ್ಯಾನರ್ಜಿ
ಹೊಸದಿಲ್ಲಿ: 33 ದಿನಗಳ ಸುದೀರ್ಘ ರಜೆ ಬಳಿಕ ಬುಧವಾರ ಕರ್ತವ್ಯಕ್ಕೆ ಹಾಜರಾದ ಔಟ್ಲುಕ್ ನಿಯತಕಾಲಿಕದ ಪ್ರಧಾನ ಸಂಪಾದಕ ರೂಬೆನ್ ಬ್ಯಾನರ್ಜಿಯವರನ್ನು, ಕರ್ತವ್ಯಕ್ಕೆ ಮರಳಿದ 2 ಗಂಟೆಗಳಲ್ಲೇ ವಜಾ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಮುಂದಿನ ವಾರದ ಮುಖಪುಟ ವರದಿಯಾಗಿ 'ಅಬ್ಬಾ ಜಾನ್ ಮತ್ತು ಆದಿತ್ಯನಾಥ್' ವರದಿ ಪ್ರಕಟಿಸುವಂತೆ ಹಿರಿಯ ಸಂಪಾದಕರಿಗೆ ಸೂಚನೆ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಮುಖ್ಯ ಕಾರ್ಯನಿರ್ವಾಹಕರಾದ ಇಂದ್ರನಿಲ್ ರಾಯ್ ಅವರು ಬ್ಯಾನರ್ಜಿಯವರ ಉದ್ಯೋಗ ಗುತ್ತಿಗೆಯನ್ನು ರದ್ದುಪಡಿಸುವ ಸ್ವಲ್ಪ ಸಮಯ ಮೊದಲು ನಿಯತಕಾಲಿಕದ ವ್ಯವಸ್ಥಾಪಕ ಸಂಪಾದಕರಾದ ಸುನೀಲ್ ಮೆನನ್ ಕೂಡಾ ರಾಜೀನಾಮೆ ನೀಡಿದರು. ಸೋಮವಾರ ಕಂಪೆನಿ ಚಿಂಕಿ ಸಿನ್ಹಾ ಅವರನ್ನು ಸಂಪಾದಕರನ್ನಾಗಿ ನೇಮಕ ಮಾಡಿತ್ತು.
ಯಾವುದೇ ಪೂರ್ವ ಮಾಹಿತಿ ಇಲ್ಲದೇ ತಮ್ಮನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದೆ ಎಂದು 'ThePrint' ಜತೆ ಮಾತನಾಡಿದ ಬ್ಯಾನರ್ಜಿ ಹೇಳಿದರು. ಬ್ಯಾನರ್ಜಿ ಆಗಸ್ಟ್ 12ರಿಂದ ರಜೆಯಲ್ಲಿದ್ದರು.
"ಆರೋಗ್ಯ ಕಾರಣಕ್ಕಾಗಿ ನನ್ನ ರಜೆಯನ್ನು ವಿಸ್ತರಿಸುವಂತೆ ಸೆಪ್ಟಂಬರ್ 12ರಂದು ಕೇಳಿದ್ದೆ. ಗುಣಮುಖನಾಗಿ ಇಂದು ಕರ್ತವ್ಯಕ್ಕೆ ಸೇರಿದ್ದೆ. ಕರ್ತವ್ಯಕ್ಕೆ ಮರು ಸೇರ್ಪಡೆಯಾಗುವುದು ಶಿಸ್ತಿಗೆ ಸಂಬಂಧಿಸಿದ ವಿಷಯವೇ?" ಎಂದು ಅವರು ಪ್ರಶ್ನಿಸಿದರು.
ನಿಯತಕಾಲಿಕದಲ್ಲಿ ಪ್ರಕಟವಾಗುವ ವಿಷಯಗಳ ಬಗ್ಗೆ ಔಟ್ಲುಕ್ ಆಡಳಿತ ಮಂಡಳಿ ಮತ್ತು ತಮ್ಮ ಮಧ್ಯೆ ಅಭಿಪ್ರಾಯ ಭೇದ ಇರುವುದನ್ನು ಒಪ್ಪಿಕೊಂಡರು. ಮುಖ್ಯವಾಗಿ ಆಡಳಿತಾರೂಢ ನರೇಂದ್ರ ಮೋದಿ ಸರಕಾರದ ಬಗೆಗಿನ ವಿಮರ್ಶಾತ್ಮಕ ವರದಿಗಳ ವಿಚಾರದಲ್ಲಿ ಭಿನ್ನಾಭಿಪ್ರಾಯ ಇದೆ ಎಂದವರು ಸ್ಪಷ್ಟಪಡಿಸಿದ್ದಾರೆ.
ಆದರೆ 'ThePrint' ಜತೆ ಮಾತನಾಡಿದ ಸಿಇಓ ಇಂದ್ರನಿಲ್ ರಾಯ್, "ಬ್ಯಾನರ್ಜಿಯವರನ್ನು ದಿಢೀರನೇ ವಜಾಗೊಳಿಸಿಲ್ಲ. ಬ್ಯಾನರ್ಜಿ ರಜೆಯಲ್ಲಿದ್ದರು. ಔಟ್ಲುಕ್ನ ಮಹತ್ವಾಕಾಂಕ್ಷಿ ಡಿಜಿಟಲ್ ಬಿಡುಗಡೆ ಕಾರ್ಯಕ್ರಮಕ್ಕೂ ಗೈರುಹಾಜರಾಗಿದ್ದರು" ಎಂದು ಹೇಳಿದ್ದಾರೆ.