varthabharthi


ಮುಂಬೈ ಸ್ವಗತ

ಮುಂಬೈ ಕನ್ನಡಕ್ಕೆ ಮುಸ್ಲಿಮರ ಕೊಡುಗೆ

ವಾರ್ತಾ ಭಾರತಿ : 17 Sep, 2021
ದಯಾನಂದ ಸಾಲ್ಯಾನ್

ಹತ್ತು ಹಲವು ಸಂಘಟನೆಗಳಲ್ಲಿ ಕ್ರಿಯಾಶೀಲರಾಗಿದ್ದ ಜನಾನುರಾಗಿ ಎ.ಆರ್. ಕುದ್ರೋಳಿ ಅವರ ಹೆಸರಿನಲ್ಲಿ ಅವರ ನಿಧನಾನಂತರ ಕರ್ನಾಟಕ ಸ್ಪೋರ್ಟ್ಸ್ ಅಸೋಸಿಯೇಶನ್ 'ಎ.ಆರ್. ಕುದ್ರೋಳಿ ಸ್ಮಾರಕ ಫುಟ್ಬಾಲ್ ಕಪ್'ಗಾಗಿ ಫುಟ್ಬಾಲ್ ಟೂರ್ನಮೆಂಟ್‌ನ್ನು ಹಮ್ಮಿಕೊಂಡು ಬರುತ್ತಿದೆ. ಮುಂಬೈ ಕನ್ನಡಿಗರಿಗೆ ಕುದ್ರೋಳಿ ಅವರು ಸದಾ ಪ್ರಾತಃಸ್ಮರಣೀಯರು.


''ಭೇದಭಾವ ನೀಗಬೇಕು ದುಡಿದು ಹಿರಿಮೆ ಗಳಿಸಬೇಕು

ಭಾರತೀಯರೆನಿಸುವೆಲ್ಲ ಎಲ್ಲ ಜಾತಿ ಮತದ ಮಕ್ಕಳು''

ಕೆ.ಎಸ್. ನಿಸಾರ್ ಅಹ್ಮದ್ ಅವರ 'ರಾಷ್ಟ್ರ ವಂದನೆ' ಕವಿತೆಯ ಈ ಆಶಯ ಬಹುಶಃ ಮುಂಬೈಯಲ್ಲಿ ಸಾಕಾರಗೊಳ್ಳುತ್ತದೆ. ಬಹು ಸಂಸ್ಕೃತಿಯ, ಬಹು ಭಾಷೆಗಳ ನಮ್ಮ ದೇಶದಲ್ಲಿ ಮುಂಬೈ ನಗರಿ ಎಲ್ಲವನ್ನು ಮೀರಿ ವಿಶಿಷ್ಟ ನಗರವಾಗಿ ರೂಪುಗೊಂಡಿದೆ. ಇಲ್ಲಿನ ಕನ್ನಡಿಗರು ಈ ನಂದನವನದಲ್ಲಿ ಕನ್ನಡದ ಕನ್ನಡತನದ ಕಂಪನ್ನು ಜಾತಿ, ಮತ, ಧರ್ಮಗಳನ್ನು ಮೀರಿ ಪಸರಿಸಿದ್ದಾರೆ.

  'ಪ್ರತಿಗಂಧರ್ವ' ಅಭಿದಾನಕ್ಕೆ ಪಾತ್ರರಾಗಿರುವ ಗೋಹರ್ ಬಾಯಿ ಕರ್ನಾಟಕಿ ಹಾಗೂ ಅವರ ತಂಗಿ ಅಮೀರ್ ಬಾಯಿ ಅವರನ್ನು ಕನ್ನಡದ ಸಾಧಕರ ಸಾಲಿನಲ್ಲಿ ಸೇರಿಸದಿದ್ದರೆ ಪ್ರತಿಭೆಗೆ ಗೈದ ಅನ್ಯಾಯವಾಗುತ್ತದೆ. ''ಕನ್ನಡದ ರಂಗಭೂಮಿ ಬಿಟ್ಟು ಮುಂಬೈಗೆ ತೆರಳಿದ ಬಳಿಕ ಗೋಹರ್ ತಮ್ಮನ್ನು ಹಿಂದಿ ಮತ್ತು ಮರಾಠಿ ಸಿನೆಮಾಗಳಲ್ಲಿ ಹಾಡುವ ನಟಿಯಾಗಿ ತೊಡಗಿಸಿಕೊಂಡರು. ಅವರು ಗ್ರಾಮಫೋನ್ ಕಂಪೆನಿಗಳಿಗಾಗಿ ಹಿಂದೂಸ್ತಾನಿ ಅರೆ ಶಾಸ್ತ್ರೀಯ ಗಾಯಕಿಯಾಗಿ ಗಝಲ್, ಭಜನೆ, ಅಭಂಗ ಹಾಗೂ ರಂಗಗೀತೆಗಳನ್ನು ಹಾಡಿದರು. ಇಷ್ಟಾದರೂ ಅವರನ್ನು ಮುಖ್ಯವಾಗಿ ರಂಗಭೂಮಿ ಕಲಾವಿದೆ ಎಂದೇ ಗುರುತಿಸಲಾಗುತ್ತದೆ'' ಎಂದು 'ಅಮೀರ್ ಬಾಯಿ ಕರ್ನಾಟಕಿ' ಎಂಬ ಮಹತ್ವದ ಕೃತಿಯಲ್ಲಿ ಅಕ್ಕ ಗೋಹರ್ ಬಾಯಿ ಅವರ ಬಗ್ಗೆ ರಹಮತ್ ತರೀಕೆರೆ ಉಲ್ಲೇಖಿಸಿದ್ದಾರೆ. ಇವರೀರ್ವರ ಬಗ್ಗೆ ಕನ್ನಡದಲ್ಲಿ ಹೆಚ್ಚಾಗಿ ಕೃತಿಗಳು ಬಂದಿಲ್ಲ; ಬಹುಶಃ ತರೀಕೆರೆಯವರ ಕೃತಿಯೊಂದೇ ಬಂದಿರುವುದೆಂದು ಉಲ್ಲೇಖಿಸಬಹುದು. ಮುಂಬೈಗೆ ಆಗಮಿಸಿ ಗೋಹರ್ ಅವರು ನಟಿಸಿದ ಮೊದಲ ಚಿತ್ರ (1932) ಶಾರದಾ ಫಿಲ್ಮ್ ಕಂಪೆನಿಯ 'ರಾಸವಿಲಾಸ'. 'ರಂಭಾರಾಣಿ', 'ಸೋಹ್ನಿ ಮಹಿವಾಲ್', 'ದರ್ದ್ ಯೇ ದಿಲ್', 'ಗರೀಬ್ ಕಾ ಪ್ಯಾರ್', 'ಗೋಲ್ ನಿಶಾನ್', 'ಬುರ್ಖಾವಾಲಿ', 'ತಾರಣಹಾರ', 'ಬಾನ್ಸುರಿ ವಾಲಾ', 'ಗ್ರಾಜುವೇಟ್', 'ಸಿಂಹಲ ದ್ವೀಪ್‌ಕೀ ಸುಂದರಿ', 'ಕಾಲಾ ಭೂತ್', 'ಕುಲದೀಪಕ್', 'ಗುರು ಘಂಟಾಲ' ಇತ್ಯಾದಿ ಚಿತ್ರಗಳಲ್ಲಿ ನಟಿಸಿದ್ದ ಗೋಹರ್ ಅವರು 'ಗೋಲ್ ನಿಶಾನ್'ನಲ್ಲಿ ಹಾಡಿದ್ದ 'ಹೇ ಅಂಬಿಕಾ ಜಗದಂಬೆ' ಜನಮಾನಸದಲ್ಲಿ ಅಂದು ಗುಣುಗುಣಿಸಲ್ಪಡುತ್ತಿತ್ತು. ''ಅಮೀರ್‌ಬಾಯಿ ವಿಜಯಪುರ ಬಿಟ್ಟು ಮುಂಬೈಗೆ, ರಂಗಭೂಮಿ ಬಿಟ್ಟು ಸಿನೆಮಾಕ್ಕೆ, ಕನ್ನಡವನ್ನು ಬಿಟ್ಟು ಹಿಂದಿ ಮಾಧ್ಯಮಕ್ಕೆ ಹೋದರು.'' (1931). ''ಕನ್ನಡ ನಾಟಕಗಳಲ್ಲಿ ಅಮೀರ್ ಬಾಯಿ ಹಾಡುತ್ತಿದ್ದ ಹಾಡುಗಳ ಜನಪ್ರಿಯತೆ ಕಂಪೆನಿಗೆ ಮುಟ್ಟಿತು. ಅವರ ಗ್ರಾಮಫೋನ್ ರೆಕಾರ್ಡ್‌ಗಳು ಮತ್ತು ಅವುಗಳಲ್ಲಿದ್ದ ಅವರ ಕೊರಳ ಇಂಪು ಅವರಿಗೆ ಮುಂಬೈ ಪ್ರವೇಶ ದೊರಕಿಸಿದವು'' ಎಂದು ರಹಮತ್ ಅವರು ಅಮೀರ್‌ಬಾಯಿ ಮುಂಬೈಗೆ ಆಗಮಿಸಿದ್ದ ಸಂಗತಿ ತೆರೆದಿಟ್ಟಿದ್ದಾರೆ.

ಇವರು ನಟಿಸಿ ಹಾಡಿದ್ದ 'ಪ್ರಭುಜೀ ತುಜು ಬಿನ್ ಕೋನ್ ಸುಝಾಯೆ', 'ಭಗವಾನ್ ತೇರೆ ಸಂಸಾರ್ ಕೆ ಹೈ ಖೇಲ್ ನಿರಾಲೆ', 'ಬೇದರ್ದ್ ಜಮಾನ ಕ್ಯಾ ಜಾನೆ' ಇತ್ಯಾದಿ ಜನಮಾನಸವನ್ನು ಗೆದ್ದವುಗಳು. ಅಮೀರ್ ಬಾಯಿ ಹಿಂದಿಯಲ್ಲದೆ ವಿ. ಶಾಂತಾರಾಂ ತಯಾರಿಕೆಯ 'ಮಾಳಿ ಭಕ್ತಿ ಚ ಮಾಳಾ' ಮೊದಲಾದ ಮರಾಠಿ ಚಿತ್ರಗಳಲ್ಲೂ ನಟಿಸಿದ್ದಾರೆ. 'ಚಿರಂಜೀವಿ' ಅಥವಾ 'ಮಾರ್ಕಂಡೇಯ' ಅಮೀರ್‌ಬಾಯಿ ನಟಿಸಿದ ಮೊದಲ ಕನ್ನಡ ಚಿತ್ರ. ಅಮೀರ್‌ಬಾಯಿ ತಮ್ಮ ಅಪೂರ್ವ ಮತ್ತು ವಿಶಿಷ್ಟ ಧ್ವನಿಯಿಂದ ತಮ್ಮದೇ ಆದ ಸ್ಥಾನ ಪಡೆದುಕೊಂಡರು. ಭಾರತವು ತನ್ನ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದಾಗ ಅಮೀರ್ ಬಾಯಿ ತಮ್ಮ ಧ್ವನಿಪೂರ್ಣ ಹಾಡು, ಅಭಿನಯದಿಂದಲೇ ದೇಶದ ಸ್ವಾತಂತ್ರ್ಯಕ್ಕೆ ತಮ್ಮ ಕೊಡುಗೆಯನ್ನು ನಿಷ್ಠೆಯಿಂದ ನೀಡಿದ್ದಾರೆ. ''ಸೋದರಿಯರು ಬೀಳಗಿಯ ಮುಹರ್ರಂ ಮತ್ತು ಉರೂಸ್‌ಗಳಿಗೆ ಒಟ್ಟಿಗೆ ಬರುತ್ತಿದ್ದರು'' ಎಂದು ಉಲ್ಲೇಖಿಸುವ ರಹಮತ್ ತರೀಕೆರೆ ಸೋದರಿಯರೀರ್ವರ ಅಂತ್ಯದ ಬಗ್ಗೆ ''ಗೋಹರ್ ಮುಂಬೈನಲ್ಲಿ ದಫನವಾದರೆ ಅಮೀರ್ ಬಾಯಿ ವಿಜಯಪುರದಲ್ಲಿ ದಫನಗೊಂಡರು'' ಎಂದು ಬರೆದಿದ್ದಾರೆ. ಮಾಹಿಮ್‌ನಲ್ಲಿ ಮನೆ ಮಾಡಿದ್ದ ಅಮೀರ್‌ಬಾಯಿ ಕರ್ನಾಟಕಿ ಅವರ ಇಚ್ಛೆಯಂತೆ ಅವರು ನಿಧನರಾದ ನಂತರ ವಿಜಯಪುರದಲ್ಲಿರುವ 'ಇಬ್ರಾಹೀಂ ರೋಜಾ'ದ ಬಳಿ ಅವರ ಸಮಾಧಿ ಮಾಡಲಾಗಿದೆ.

ವಾಂಖೆಡೆ ಸ್ಟೇಡಿಯಮ್ ರೂಪುಗೊಳ್ಳುತ್ತಿರುವ ಸಂದರ್ಭ ಕನ್ನಡಿಗರ ಆಟದ ಕೇಂದ್ರವಾಗಿದ್ದ ಆ ಸ್ಥಳವು ನಮ್ಮವರಿಂದ ದೂರವಾಗುವ ಆತಂಕದಲ್ಲಿದ್ದಾಗ ಅದಕ್ಕೆ ಪ್ರತಿರೋಧ ಒಡ್ಡಿ ಹೋರಾಡಿ ಈಗಿರುವ ಕರ್ನಾಟಕ ಸ್ಪೋರ್ಟ್ಸ್ ಅಸೋಸಿಯೇಶನ್‌ನ ಆಟದ ಬಯಲನ್ನು ದೊರಕಿಸಿಕೊಟ್ಟವರು ಅಬ್ದುಲ್ ರಶೀದ್ ಕುದ್ರೋಳಿ. ಎ.ಆರ್. ಕುದ್ರೋಳಿ ಎಂದೇ ಖ್ಯಾತರಾಗಿದ್ದ ಇವರು ಮುಂಬೈ ಹೈಕೋರ್ಟ್‌ನಲ್ಲಿ ಪ್ರಸಿದ್ಧ ನ್ಯಾಯವಾದಿ. ಕರ್ನಾಟಕ ಸ್ಪೋರ್ಟ್ಸ್ ಅಸೋಸಿಯೇಶನ್‌ನ ಅಧ್ಯಕ್ಷರಾಗಿ, ಆಝಾದ್ ಮೈದಾನ್ ಅಸೋಸಿಯೇಶನ್ ನ ಜತೆ ಕಾರ್ಯದರ್ಶಿಯಾಗಿ, ಪ್ರತಿಷ್ಠಿತ ಮುಂಬೈ ಕ್ರಿಕೆಟ್ ಅಸೋಸಿಯೇಶನ್‌ನ ಜತೆ ಕಾರ್ಯದರ್ಶಿಯಾಗಿ, ಬಿಸಿಸಿಐ ಇದರ ಸದಸ್ಯರಾಗಿ, ಮುಂಬೈ ಸ್ಕೂಲ್ ಸ್ಪೋರ್ಟ್ಸ್ ಅಸೋಸಿಯೇಶನ್‌ನ ಉಪಾಧ್ಯಕ್ಷರಾಗಿ, ಮುಂಬೈ ಅಸೋಸಿಯೇಶನ್ ಆಫ್ ಕ್ರಿಕೆಟ್ ಅಂಪೈರ್ ಇದರ ಉಪಾಧ್ಯಕ್ಷರಾಗಿ, ಐದನೇ ವರ್ಲ್ಡ್ ಕಪ್ ಹಾಕಿ ಟೂರ್ನಮೆಂಟ್‌ನ ಗ್ರೌಂಡ್ ಕಂಟ್ರೋಲರ್ ಹೀಗೆ ಅನೇಕ ಕ್ರೀಡಾ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದವರು. ಮೋಟರ್ ಆ್ಯಕ್ಸಿಡೆಂಟ್ ಟ್ರಿಬ್ಯುನಲ್ ಬಾರ್ ಅಸೋಸಿಯೇಶನ್ ಇದರ ಚುನಾಯಿತ ಅಧ್ಯಕ್ಷರಾಗಿ, ಬಾರ್ ಕೌನ್ಸಿಲ್ ಆಫ್ ಮಹಾರಾಷ್ಟ್ರ ಆ್ಯಂಡ್ ಗೋವಾ ಇದರ ಅಧ್ಯಕ್ಷರಾಗಿ, ಕನ್ನಡ ಲಾ ಸೊಸೈಟಿಯ ಉಪಾಧ್ಯಕ್ಷರಾಗಿ, ತುಳು ಸಂಘದ ಉಪಾಧ್ಯಕ್ಷರಾಗಿ, ಮಹಾರಾಷ್ಟ್ರ ಮುಸ್ಲಿಂ ನ್ಯಾಯವಾದಿಗಳ ಫೋರಂನ ಅಧ್ಯಕ್ಷ ಹಾಗೂ ಅಖಿಲ ಭಾರತ ಮುಸ್ಲಿಂ ನ್ಯಾಯವಾದಿಗಳ ಫೋರಂನ ಅಧ್ಯಕ್ಷ ಹೀಗೆ ಹತ್ತು ಹಲವು ಸಂಘಟನೆಗಳಲ್ಲಿ ಕ್ರಿಯಾಶೀಲರಾಗಿದ್ದ ಜನಾನುರಾಗಿ ಎ.ಆರ್. ಕುದ್ರೋಳಿ ಅವರ ಹೆಸರಿನಲ್ಲಿ ಅವರ ನಿಧನಾನಂತರ ಕರ್ನಾಟಕ ಸ್ಪೋರ್ಟ್ಸ್ ಅಸೋಸಿಯೇಷನ್ 'ಎ.ಆರ್. ಕುದ್ರೋಳಿ ಸ್ಮಾರಕ ಫುಟ್ಬಾಲ್ ಕಪ್'ಗಾಗಿ ಫುಟ್ಬಾಲ್ ಟೂರ್ನಮೆಂಟ್‌ನ್ನು ಹಮ್ಮಿಕೊಂಡು ಬರುತ್ತಿದೆ. ಮುಂಬೈ ಕನ್ನಡಿಗರಿಗೆ ಕುದ್ರೋಳಿ ಅವರು ಸದಾ ಪ್ರಾತಃಸ್ಮರಣೀಯರು.

ಕರ್ನಾಟಕ ಸಂಘದ ಅಧ್ಯಕ್ಷರಾಗಿದ್ದ ಎ.ಕೆ. ಹಫೀಝ್ಕ ಅವರ ಸಾರಥ್ಯದಲ್ಲಿ ಸಂಘಕ್ಕೆ ಹೊಸ ಸಂಚಲನ ಉಂಟಾಯಿತು. ಅವರ ಕಾಲಾವಧಿಯಲ್ಲಿ (1962)ಅರ್ಥಪೂರ್ಣವಾಗಿ ನಡೆದ ಸಂಘದ ಬೆಳ್ಳಿಹಬ್ಬ ನೆಪದಲ್ಲಿ ಹುಟ್ಟಿಕೊಂಡ 'ಭವನ'ವೊಂದು ಸಾಕಾರಗೊಳ್ಳಲು ಪ್ರಾರಂಭವಾದದ್ದು ಇವರ ಕಾಲಘಟ್ಟದಲ್ಲೇ. ತಮ್ಮ ಅಧಿಕಾರದ ನಂತರವೂ ಹಫೀಝ್ಕಾ ಮುಂದಿನ ಅಧ್ಯಕ್ಷರಿಗೆ ಹೆಗಲಿಗೆ ಹೆಗಲು ಕೊಟ್ಟು ಭವನ ಎದ್ದುಬರಲು ಶ್ರಮಿಸಿದ್ದಾರೆ. ಕನ್ನಡ ಭಾಷೆ, ಸಂಸ್ಕೃತಿಗೆ ಸದಾ ಪ್ರೋತ್ಸಾಹ ನೀಡುತ್ತಿದ್ದವರು ಎ.ಕೆ. ಹಫೀಝ್ಕಿ.

 ನಿವೋಸ್ಟಾರ್ ಆಟೊಮೊಬೈಲ್ ಅನ್ನುವ ಆ ಚಿಕ್ಕ ಸೈಕಲ್ ಅಂಗಡಿಯೊಂದರಿಂದ ಮುಂಬೈ ಬದುಕನ್ನು ಪ್ರಾರಂಭಿಸಿದ್ದ (1963) ಹಾಜಿ ಮುಹಮ್ಮದ್ ಶಿರ್ವ ಛಲವಾದಿ. ತಾನು ಕಂಡುಂಡ ಬಡತನದ ಕಾವು ಇತರರಿಗೆ ಕಾಡದಿರಲೆಂದು ಸದಾ ದೀನದಲಿತರ ನೆರವಿಗೆ ಮುಂದಾಗುತ್ತಿದ್ದವರು. ಇನ್ನೊಬ್ಬ ಕನ್ನಡಿಗ ರೆಹಮಾನ್ ಅವರದ್ದು ಪ್ರಾಮಾಣಿಕ ಹಾಗೂ ಶ್ರಮದ ಬದುಕು. ಅವರು ನಾನಾಬಾಯಿ ಲೇನ್‌ನಲ್ಲಿರುವ ಸಿಂಧು ಹೌಸ್‌ನಲ್ಲಿ 'ಬಾವಾ ಎಂಟರ್‌ಪ್ರೈಸಸ್' ಎಂಬ ಸಂಸ್ಥೆ ಹೊಂದಿದ್ದರು. ಸೌದಿಯ ಕಂಪೆನಿಗಳಿಗಾಗಿ ಕ್ಯಾಟರಿಂಗ್‌ಗಾಗಿ 'ಕಂಪೆನಿ ರೇಟ್'ನಲ್ಲೇ ಇಲ್ಲಿಂದ ಕೆಲಸಕ್ಕೆ ಕಳಿಸುತ್ತಿದ್ದರು. ಅವರ ಪ್ರಾಮಾಣಿಕ ಪ್ರಯತ್ನದ ಪ್ರಯೋಜನ ತುಳು-ಕನ್ನಡಿಗರ ಬಹು ಮಂದಿಗೆ ಆಗಿದೆ. ಆ ಮೂಲಕ ಅವರ ಬದುಕು ಬಂಗಾರವಾಗಿದೆ. ಮಹಾರಾಷ್ಟ್ರ ಸರಕಾರದ ಹಣಕಾಸು ಇಲಾಖೆಯಲ್ಲಿ ಉನ್ನತ ಅಧಿಕಾರಿಯಾಗಿದ್ದ ಸೂರಿಂಜೆಯ ಅಬ್ದುಲ್ ಖಾದರ್ ತೋಕೂರು, ಹಳೆಯಂಗಡಿಯ ಬಿ.ಎಸ್. ಸೂರಿಂಜೆ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಎಸ್.ಕೆ. ಬ್ಯಾರಿ, ಬಾಂಬೆ ಡೈಯಿಂಗ್‌ನಲ್ಲಿ ಸೇಲ್ಸ್ ಅಧಿಕಾರಿ ಆಗಿದ್ದ ಮುಹಮ್ಮದ್ ಅಲಿ, ಸಿಂಡಿಕೇಟ್ ಬ್ಯಾಂಕ್‌ನ ಕೆ. ಅಹ್ಮದ್ ಮೊದಲಾದವರು ಸೇರಿ ವ್ಯವಸ್ಥಿತವಾಗಿ ನಡೆಸುತ್ತಿದ್ದ 'ಶಾಫಿ ವೆಲ್ಫೇರ್ ಅಸೋಸಿಯೇಶನ್'ನ ಮುಖಾಂತರ ಮುಂಬೈ ಹಾಗೂ ತಮ್ಮ ತಾಯ್ನಿಡಿನಲ್ಲಿ ಜನಪರ ಕೆಲಸ ಮಾಡುತ್ತಿದ್ದರು.

ಮಜ್‌ಗಾಂವ್‌ನಲ್ಲಿ ಸೇಲ್ಸ್‌ಟ್ಯಾಕ್ಸ್ ಆಫೀಸಿನಲ್ಲಿ ಉನ್ನತಾಧಿಕಾರಿಯಾಗಿದ್ದ ಸಿ.ಎಸ್. ಗುರುಪುರ ಮದರ್ ಇಂಡಿಯಾ ರಾತ್ರಿಶಾಲೆಯಲ್ಲಿ ಪ್ರತಿಫಲ ಬಯಸದೆ ಮಕ್ಕಳಿಗೆ ಕಲಿಸುತ್ತಿದ್ದವರು. ವಿದ್ಯಾರ್ಥಿಗಳಿಗೆ ಮೆಚ್ಚಿನ ಗುರುವಾಗಿದ್ದ ಅವರು ಹಲವಾರು ವಿದ್ಯಾರ್ಥಿಗಳಿಗೆ ಉದ್ಯೋಗ ಒದಗಿಸಿಕೊಡುತ್ತಿದ್ದರು. ಕೋಟೆ ಪರಿಸರದ ಮೋದಿ ಸ್ಟ್ರೀಟ್‌ನಲ್ಲಿ (1963) 'ಫಾತಿಮಾ ಪ್ರಿಂಟಿಂಗ್ ಪ್ರೆಸ್' ಮೂಲಕ ಅಂದವಾದ ಕನ್ನಡ ಮುದ್ರಣಕ್ಕೆ ಹೆಸರುವಾಸಿಯಾಗಿದ್ದ ಎಸ್. ಸುಲೈಮಾನ್ ಮೂಲತಃ ಕಾಪುವಿನವರು. ಒಳ್ಳೆಯ ಲೇಖಕರೂ ಆಗಿದ್ದ ಇವರ ಬರಹಗಳು 50-60ರ ದಶಕಗಳಲ್ಲಿ 'ನವಭಾರತ' ಮೊದಲಾದ ಪತ್ರಿಕೆಗಳಲ್ಲಿ ಬೆಳಕು ಕಾಣುತ್ತಿತ್ತು. ವಿಟಿಯ ಬಗಲಿಗೆ 'ಕಾಕಾ ಹೊಟೇಲ್' ರಾರಾಜಿಸುತ್ತಿತ್ತು. ಅದನ್ನು ನಡೆಸುತ್ತಿದ್ದ ಎಸ್. ಮುಹಮ್ಮದ್ ಅನ್ವರ್ ಅಪ್ಪಟ ಕನ್ನಡಿಗ. ಇವರೆಲ್ಲರ ಜತೆ ಶಾಫಿ ವೆಲ್ಫೇರ್ ಅಸೋಸಿಯೇಶನ್‌ನಲ್ಲಿ ಹಲವಾರು ವರ್ಷಗಳಿಂದ ವಿವಿಧ ಹುದ್ದೆಯಲ್ಲಿದ್ದು ಈಗ ಅಧ್ಯಕ್ಷರಾಗಿರುವವರು ಬಿ. ಮೊಹಿದೀನ್ ಮುಂಡ್ಕೂರು. 1963ರಲ್ಲಿ ಮುಂಬೈಗೆ ಬಂದು ಇಲ್ಲಿ ಅರ್ಧಕ್ಕೆ ನಿಂತ ಶಿಕ್ಷಣವನ್ನು 'ಕನ್ನಡ ಪ್ರೊಗ್ರೆಸ್ಸಿವ್ ರಾತ್ರಿ ಶಾಲೆ'ಯಲ್ಲಿ ಮುಗಿಸಿ ಮುಂದೆ ಝನ್‌ಝನ್ ವಾಲಾ ಕಾಲೇಜಿನಲ್ಲಿ ಬಿಎ ಹಾಗೂ ಸಿದ್ಧಾರ್ಥ ಕಾಲೇಜಿನಲ್ಲಿ ಎಲ್‌ಎಲ್‌ಬಿ ಪದವಿ ಪಡೆದರು. ಆರಂಭದಲ್ಲಿ ಮಹಾತ್ಮಾ ಗಾಂಧೀಜಿಯವರು ನ್ಯಾಯವಾದಿಯಾಗಿದ್ದ ಲಘು ನ್ಯಾಯಾಲಯದಲ್ಲಿ ಕೆಲಸಕ್ಕೆ ಸೇರಿಕೊಂಡರು. 1970ರಿಂದ 1988ರ ತನಕ ಚೆಂಬೂರು ಕರ್ನಾಟಕ ಸಂಘದಲ್ಲಿ ವಿವಿಧ ಪದಾಧಿಕಾರಿ, ಕಾರ್ಯದರ್ಶಿಯೂ ಆಗಿದ್ದು, ಸಂಘವು ಎದುರಿಸುತ್ತಿದ್ದ ಹಲವೊಂದು ತೊಂದರೆಗಳ ನಿವಾರಣೆಯಲ್ಲಿ ಕಾನೂನು ರೀತಿ ಸರಿ ಮಾಡಿದ ಶ್ರೇಯ ಮೊಹಿದೀನ್ ಮುಂಡ್ಕೂರು ಅವರಿಗೆ ಸಲ್ಲುತ್ತದೆ. ಹಲವಾರು ಕನ್ನಡ ತುಳು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದ ಮುಂಡ್ಕೂರು, ಬ್ಯಾರಿ, ತುಳು, ಕನ್ನಡ ಭಾಷೆಗಳಲ್ಲಿ ಕಾವ್ಯಕೃಷಿ ಮಾಡಿದ್ದಾರೆ.

ಉತ್ತಮ ಸಂಘಟಕ ಜನಾನುರಾಗಿಯಾಗಿದ್ದ ಪ್ರತಿಷ್ಠಿತ ಬಾಂಬೆ ಟ್ಯಾಕ್ಸಿಮನ್ ಯೂನಿಯನ್‌ನ ಗೌರವ ಕಾರ್ಯದರ್ಶಿಯಾಗಿದ್ದ ಮುಹಮ್ಮದ್ ಹುಸೈನ್ ಬಾಜಿ ಕನ್ನಡಿಗರು. ಆರ್.ಜೆ. ಕಾಲೇಜಿನ ಕಾಮರ್ಸ್ ವಿಭಾಗದ ಮುಖ್ಯಸ್ಥರಾಗಿದ್ದ ಡಾ. ಶಂಸುದ್ದೀನ್ ಎಸ್. ನಾಯಕ್‌ವಾಡಿ ಬಿಜಾಪುರದವರು. ಹಾಗೂ ಪ್ರಾಧ್ಯಾಪಕ ರಂಗನಾಥ್ ಭಾರದ್ವಾಜ್ ಅವರ ಆತ್ಮೀಯ ಶಿಷ್ಯರಲ್ಲಿ ಓರ್ವರಾದ ಎಂ.ಎ. ಪಟೇಲ್ ಅದೇ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದರು. ಪಟೇಲ್ ಅವರ ಅಂತರ್‌ರಾಷ್ಟ್ರೀಯ ಆರ್ಥಿಕ ವ್ಯವಸ್ಥೆಗೆ ಸಂಬಂಧಿಸಿದ ಮಹಾಪ್ರಬಂಧ ಮನ್ನಣೆಗೆ ಪಾತ್ರವಾಗಿದೆ. ಇವರೀರ್ವರು ಕನ್ನಡ ಪ್ರೇಮಿಗಳು ಆರ್.ಜೆ. ಕಾಲೇಜಿನ ಕನ್ನಡ ವಿಭಾಗದ ಕಾರ್ಯಕ್ರಮಗಳಲ್ಲೂ ಸದಾ ಉತ್ಸುಕತೆಯಿಂದ ಭಾಗಿಯಾಗುತ್ತಿದ್ದರು.

ಅಂಬರ್‌ನಾಥ್ ನಿಜಲಿಂಗಪ್ಪ ಶಾಲೆಯಲ್ಲಿ ಕಲಿಸುತ್ತಿದ್ದ ರಾವಿಯಾ ರಾಜೂರು ಮೂಲತಃ ಬಾಗಲಕೋಟೆಯವರು. ನಿಜಲಿಂಗಪ್ಪ ಹೈಸ್ಕೂಲಿನ ಸದ್ಯದ ಮುಖ್ಯೋಪಾಧ್ಯಾಯರಾಗಿರುವ ಎ.ಕೆ. ಹೊನ್ನಾಳಿ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನವರು. ಇನ್ನು ಏಳೆಂಟು ತಿಂಗಳಲ್ಲಿ ನಿವೃತ್ತಿ ಹೊಂದಲಿರುವ ಇವರು ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ಗಣಿತವನ್ನು ಬೋಧಿಸುತ್ತಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)