ಲಾಕ್ಡೌನ್ : ಉಳ್ಳಾಲದಲ್ಲಿ ಕುಸಿದ ವ್ಯಾಪಾರ, ತತ್ತರಿಸಿದ ಜೀವನ
ಸಾಂದರ್ಭಿಕ ಚಿತ್ರ
ಉಳ್ಳಾಲ : ಕೊರೋನ ಲಾಕ್ಡೌನ್ ಜನರ ಜೀವನದ ಮೇಲೆ ಪರಿಣಾಮ ಬೀರಿದ್ದು, ಈ ಸೋಂಕಿಗೆ ಮಂಗಳೂರು ವಿಧಾನ ಸಭೆ ಕ್ಷೇತ್ರ ವ್ಯಾಪ್ತಿಯ ಉಳ್ಳಾಲವೂ ತತ್ತರಿಸಿದೆ.
ಉಳ್ಳಾಲವು ಮೊದಲನೇ ಅಲೆ ಸಂದರ್ಭದಲ್ಲಿ ಒಂದೇ ಕುಟುಂಬದ ಎಲ್ಲರಿಗೂ ಸೋಂಕು ದೃಢಪಟ್ಟ ದಾಖಲೆ ಪಡೆದಿತ್ತು. ಹಲವು ಜೀವಗಳು ಇಲ್ಲಿ ಬಲಿಯಾಗಿವೆ. ಬಹಳಷ್ಟು ಕುಟುಂಬಗಳು ಸೋಂಕಿಗೆ ತತ್ತರಿಸಿ ಹೋಗಿದ್ದು, ಉದ್ಯೋಗ ಇಲ್ಲದೆ ಸಂಕಷ್ಟಕ್ಕೀಡಾಗಿದ್ದಾರೆ. ಅದೇ ರೀತಿ ಬಹಳಷ್ಟು ಬೃಹತ್ ಗಾತ್ರದ ಉದ್ಯಮಗಳ ಬೆಳವಣಿಗೆಯನ್ನು ಈ ಸೋಂಕು ಕುಂಠಿತಗೊಳಿಸಿದೆ.
ದೈನಂದಿನ ಖರ್ಚಿಗೆ ಹಣ ಹೊಂದಾಣಿಕೆ ಮಾಡಲು ಆಗದೆ ಕೆಲವರು ಮನೆ ಮಾರಿದರೆ, ಇನ್ನೂ ಕೆಲವರು ಸಾಲ ಮಾಡಿ ಕಂಟಕದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಕಂಗೆಟ್ಟ ಜನರು ಹಳೇ ವೈಹಿವಾಟು ಬಿಟ್ಟು ಚಿಲ್ಲರೆ ಕೆಲಸ ಮಾಡಿ ದಿನ ದೂಡಬೇಕಾದ ಪರಿಸ್ಥಿತಿ ಒಂದೆಡೆ. ಈ ನಡುವೆ ಸರಕಾರ ಜನರ ಕಷ್ಟ ಅರ್ಥ ಮಾಡದೇ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಕಷ್ಟದ ಕೂಪಕ್ಕೆ ತಳ್ಳಿದೆ.
ಸಣ್ಣ ಉದ್ಯಮ, ವ್ಯಾಪಾರ ಮಾಡುವವರೇ ಉಳ್ಳಾಲದಲ್ಲಿ ಜಾಸ್ತಿ ಇದ್ದು, ಕೊರೋನ ಲಾಕ್ಡೌನ್ ಇವರ ಬದುಕಿಗೆ ಅಡ್ಡಿಯಾಗಿದೆ. ಈ ಪೈಕಿ ಕೆಲವರು ವಾರ್ತಾಭಾರತಿಯೊಂದಿಗೆ ತಮ್ಮ ಸಮಸ್ಯೆಗಳನ್ನು ಹಂಚಿಕೊಂಡಿದ್ದಾರೆ.
ಲೈನ್ಸೇಲ್ ನನ್ನ ಸಂಪಾದನೆಯ ಮೂಲವಾಗಿತ್ತು. ಲಾಕ್ಡೌನ್ ಬಳಿಕ ಜನರಲ್ಲಿ ಹಣದ ಕೊರತೆ ಎದುರಾದ ಹಿನ್ನೆಲೆಯಲ್ಲಿ ಬೇಡಿಕೆ ಕಡಿಮೆ ಆಯಿತು. ನಷ್ಟ ಅನುಭವಿಸಿ ಕೊನೆಗೆ ಈ ಉದ್ಯಮವನ್ನೇ ಬಿಟ್ಟು ದಕ್ಕೆಯಲ್ಲಿ ಮೀನು ಮಾರಾಟ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಸರಕಾರ ಸದ್ಯಕ್ಕೆ ಸಾಲ ಕಟ್ಟಬೇಡಿ ಎನ್ನುತ್ತದೆ. ಆದರೆ ಬ್ಯಾಂಕ್ನವರು ಪಡೆದ ಸಾಲಕ್ಕೆ ಬಡ್ಡಿ ಸೇರಿಸಿ ಇಷ್ಟು ಕಟ್ಟಿ ಎನ್ನುತ್ತಾರೆ. ತಿಂಗಳಿಗೆ 3,500 ರೂ. ವಾಹನ ಸಾಲ ಕಟ್ಟಬೇಕು. ಚಿಲ್ಲರೆ ಮೀನು ವ್ಯಾಪಾರದಲ್ಲಿ ಬದುಕು ಕಷ್ಟವಾಗುತ್ತಿದೆ ಎನ್ನುತ್ತಾರೆ ಮಾಸ್ತಿಕಟ್ಟೆಯ ತೌಸೀಫ್.
ನಾನು ವೃತ್ತಿಯಲ್ಲಿ ಟೈಲರ್ ಆಗಿದ್ದೇನೆ. ಪ್ರಸಕ್ತ ನಮ್ಮ ಕುಟುಂಬದ ದೇವಸ್ಥಾನದಲ್ಲಿ ಅರ್ಚಕನಾಗಿ ಕೆಲಸ ಮಾಡುತ್ತೇನೆ. ಟೈಲರ್ ವೃತ್ತಿಯಿಂದ ಬದುಕು ಕಟ್ಟಿಕೊಂಡ ನನಗೆ ಕೊರೋನ ಬಳಿಕ ಜೀವನಕ್ಕೆ ದಾರಿ ಇಲ್ಲದಂತಾಗಿದೆ. ಶಾಲೆ ಇರುವಾಗ ವಿದ್ಯಾರ್ಥಿಗಳ ಬಟ್ಟೆಗಳು ಹೊಲಿಯಲು ಬರುತ್ತಿತ್ತು. ಈಗ ಯಾರಲ್ಲೂ ಹಣ ಇಲ್ಲ. ಬದುಕಿಗೆ ಕಷ್ಟದ ಪರಿಸ್ಥಿತಿ ಒದಗಿದೆ. ಈಗ ಟೈಲರ್ ಅಂಗಡಿ ಮುಚ್ಚಿದ್ದೇನೆ. ಬಾಡಿಗೆ ಕೊಡಲು ಕೂಡ ಬಾಕಿ ಇದೆ. ಸರಕಾರ ಕೈಕಟ್ಟಿ ಕುಳಿತರೆ ನಮ್ಮ ಬದುಕಿಗೆ ದಾರಿ ಹುಡುಕುವುದಾದರೂ ಹೇಗೆ ಎಂದು ಪ್ರಶ್ನಿಸುತ್ತಾರೆ ಬೀರಿಯ ಜಗದೀಶ್ ಬಂಗೇರ.
ನಾನು ದೈನಂದಿನ ಅಡುಗೆ ಕೆಲಸಕ್ಕೆ ಹೋಗುತ್ತಿದ್ದೆ. ಕೊರೋನ ಸಂಕಷ್ಟ ಎದುರಾದ ಬಳಿಕ ಎಲ್ಲಾ ವ್ಯವಹಾರ ಸ್ಥಗಿತಗೊಂಡಿದ್ದು, ಮದುವೆ ಇನ್ನಿತರ ಕಾರ್ಯಕ್ರಮ ನಿಂತು ಹೋದ ಹಿನ್ನೆಲೆಯಲ್ಲಿ ನನಗೆ ಕೆಲಸ ಇಲ್ಲದಂತಾಗಿದೆ. ಇದರಿಂದಾಗಿ ಜೀವನ ಕಷ್ಟದ ಪರಿಸ್ಥಿತಿಯಲ್ಲಿದೆ. ಇದ್ದ ಮನೆಯನ್ನೇ ಲೀಝ್ಗೆ ನೀಡಿ ಬಾಡಿಗೆ ಮನೆಯಲ್ಲಿ ವಾಸ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ನನ್ನ ಮಕ್ಕಳು ವಿದ್ಯಾರ್ಥಿಗಳು. ಸಣ್ಣ ಕೆಲಸಕ್ಕೆ ಹೋದರೂ ಸಂಪಾದನೆ ಕಡಿಮೆ. ಅದೂ ಯಾವಾಗಲು ಕೆಲಸ ಇರುವುದಿಲ್ಲ. ದಾನಿಗಳು ನೀಡಿದ ಆಹಾರ ಕಿಟ್ ಬಿಟ್ಟರೆ, ಸರಕಾರದ ಯಾವುದೇ ಪ್ಯಾಕೇಜ್ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಉಳ್ಳಾಲ ಬೈಲ್ನ ಹಸೈನಾರ್.
''ನಾನು ಉಳ್ಳಾಲ ನಿವಾಸಿ ಆಗಿದ್ದು, ಸದ್ಯ ಬೆಂಗಳೂರು ಮೈಸೂರು ಕಡೆ ಸಣ್ಣ ಪ್ರಮಾಣದ ಮ್ಯಾನ್ಪವರ್ ವೃತ್ತಿ ನಡೆಸುತ್ತಿದ್ದೆ. ಕೊರೋನ ನಂತರ ಅದನ್ನು ನಡೆಸಲು ಸಾಧ್ಯ ಆಗುತ್ತಿಲ್ಲ. ವ್ಯಾಪಾರಕ್ಕಾಗಿ ಬ್ಯಾಂಕ್ನಿಂದ ಪಡೆದ ಸಾಲದ ಮರುಪಾವತಿಗಾಗಿ ಇಂದು ಬ್ಯಾಂಕ್ನವರು ಮನೆಯನ್ನು ಸ್ವಾಧೀನ ಪಡಿಸಿ ಏಲಂ ನಡೆಸಲು ಮುಂದಾಗಿದ್ದಾರೆ. ನಾನು ಮಾತ್ರವಲ್ಲ ನನ್ನಂತಹ ನೂರಾರು ಮಂದಿ ಬೀದಿ ಪಾಲಾಗುವ ಭೀತಿ ಎದುರಿಸುತ್ತಿದ್ದಾರೆ''.
- ಅಬ್ದುರ್ರಶೀದ್, ಉಳ್ಳಾಲ
''ವಾಹನಗಳನ್ನು ಬಾಡಿಗೆಗೆ ನೀಡುವ ವೃತ್ತಿ ಮಾಡುತ್ತಿದ್ದೆ. ಅದರಿಂದ ಬರುವ ಬಾಡಿಗೆಯೇ ನನ್ನ ಜೀವನಕ್ಕೆ ಮೂಲ ಆದಾಯವಾಗಿತ್ತು. ಆದರೆ ಈಗ ಬಾಡಿಗೆ ಇಲ್ಲ. ಒಂದು ವರ್ಷದಿಂದ ಇದೇ ಕಂಟಕದ ಪರಿಸ್ಥಿತಿ. ಇದರಿಂದ ಮನೆಯ ವಿದ್ಯುತ್ ಬಿಲ್ ಪಾವತಿಗೂ ಕಷ್ಟವಾಗಿದೆ. ಸರಕಾರ ಪ್ಯಾಕೇಜ್ ಘೋಷಣೆ ಮಾಡಿದ್ದು ಮಾತ್ರ. ಅದಿನ್ನೂ ಜನರ ಬಳಿ ತಲುಪಿಲ್ಲ. ಬದುಕಿಗೆ ಪರ್ಯಾಯ ವ್ಯವಸ್ಥೆ ಇಲ್ಲದೆ ಕಷ್ಟದ ಪರಿಸ್ಥಿತಿ ನನ್ನದಾಗಿದೆ''.
- ದಿನೇಶ್, ಕುಂಪಲ