ಸುರಕ್ಷಿತ ವ್ಯವಸ್ಥೆ ರೂಪಿಸಿದ ಬಳಿಕ 10 ಮಿಲಿಯನ್ ಯಾತ್ರಿಗಳಿಂದ ಉಮ್ರಾ ಯಾತ್ರೆ: ಸೌದಿ ಅರೇಬಿಯಾ
photo : PTI
ಜೆದ್ದಾ, ಸೆ.18: ಕಳೆದ ವರ್ಷದ ಅಕ್ಟೋಬರ್ 4ರಂದು ಸುರಕ್ಷಿತ ಉಮ್ರಾಯಾತ್ರೆ ವ್ಯವಸ್ಥೆಯನ್ನು ಆರಂಭಿಸಿದಂದಿನಿಂದ ಸುಮಾರು 10 ಮಿಲಿಯನ್ ಯಾತ್ರಿಗಳು ಉಮ್ರಾ ಯಾತ್ರೆಯನ್ನು ಯಶಸ್ವಿಯಾಗಿ ಕೈಗೊಂಡಿದ್ದಾರೆ ಎಂದು ಸೌದಿಯ ಹಜ್ ಮತ್ತು ಉಮ್ರಾ ಇಲಾಖೆ ಘೋಷಿಸಿದೆ.
ಅಲ್ಲದೆ, ಈ ವರ್ಷದ ಆಗಸ್ಟ್ 10ರಂದು ಇತರ ದೇಶಗಳ ಯಾತ್ರಿಗಳಿಗೂ ಪವಿತ್ರ ಯಾತ್ರೆಗೆ ಅವಕಾಶ ನೀಡಿದ ಬಳಿಕ 12 ಸಾವಿರಕ್ಕೂ ಹೆಚ್ಚು ವೀಸಾಗಳನ್ನು ವಿತರಿಸಲಾಗಿದೆ. ಯಾತ್ರಿಗಳ ಆರೋಗ್ಯ ಮತ್ತು ಸುರಕ್ಷತೆಯ ರಕ್ಷಣೆಯ ಪ್ರಯತ್ನಗಳು ಮುಂದುವರಿಯಲಿದ್ದು ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಜಾರಿಗೊಳಿಸಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಮತ್ತು ಸೂಚನೆಗಳನ್ನು ಯಾತ್ರಿಗಳು ಪಾಲಿಸಬೇಕು . ಈಗ ಪ್ರತೀ ದಿನ 70,000 ಯಾತ್ರಿಗಳಿಗೆ ಪವಿತ್ರ ಯಾತ್ರೆಗೆ ಅವಕಾಶವಿದ್ದು ಇದನ್ನು ದಿನಾ 3.5 ಮಿಲಿಯಕ್ಕೆ ಹೆಚ್ಚಿಸುವ ಉದ್ದೇಶವಿದೆ ಎಂದು ಇಲಾಖೆ ಹೇಳಿದೆ.
ಉಮ್ರಾ ಯಾತ್ರೆಗೆ ಅನುಮತಿ ದೊರಕಬೇಕಿದ್ದರೆ ಕೊರೋನ ವಿರುದ್ಧದ ಸಂಪೂರ್ಣ ಲಸಿಕೆ ಪಡೆದಿರಬೇಕು. ಅನುಮತಿಯನ್ನು ‘ತವಕ್ಕಲ್ನ’ ಆ್ಯಪ್ನಲ್ಲಿರುವ ಅರ್ಜಿಯ ಮೂಲಕ ಪಡೆಯಬಹುದು. ಸೌದಿ ಅರೆಬಿಯಾದಲ್ಲಿ 12 ವರ್ಷ ಮೀರಿದ ಎಲ್ಲರಿಗೂ ಲಸಿಕೆ ಪಡೆಯಲು ಅವಕಾಶವಿದೆ ಎಂದು ಹಜ್ ಮತ್ತು ಉಮ್ರಾ ಇಲಾಖೆಯ ಉಪಸಚಿವ ಅಬ್ದುಲ್ ಫತಾಹ್ ಬಿನ್ ಸುಲೈಮಾನ್ ಮಷತ್ ಹೇಳಿದ್ದಾರೆ.