ದೇವಸ್ಥಾನ ಧ್ವಂಸದಲ್ಲಿ ಟಿಪ್ಪು ಪಾತ್ರ ಇದೆ...
ದೇವಸ್ಥಾನ ಧ್ವಂಸ....ಖಂಡನೀಯ...ಹಿಂದೂ ಧರ್ಮದ ಮೇಲೆ ದಾಳಿ....’ ಎಂದು ಮೈಸೂರಿನ ಮಹಿಷಾಸುರ ಪ್ರತಿಮೆಗೆ ತಲೆ ಬಡಿಯುತ್ತಾ ಪ್ರಲಾಪ ತಿಮ್ಮ ಪ್ರಲಾಪ ಆರಂಭಿಸಿದ್ದು ಕೇಳಿ ಪತ್ರಕರ್ತ ಎಂಜಲು ಕಾಸಿ ಬೆಚ್ಚಿ ಬಿದ್ದ. ‘ಮತ್ತೆ ಬಾಬರ್ ದಾಳಿ ಮಾಡಿದನೇ? ಹಿಂದೂ ದೇವಸ್ಥಾನವನ್ನು ಕೆಡವಿದನೇ?’ ಎಂದು ಹೆದರಿದವನೇ ತನ್ನ ಜೋಳಿಗೆ ಸಮೇತ ಪ್ರಲಾಪ ತಿಮ್ಮನ ಬಳಿಗೆ ಧಾವಿಸಿದ. ‘‘ಸಾರ್...ಏನಾಯ್ತು ಸಾರ್? ಎಲ್ಲಿ ಸಾರ್....? ಯಾರು ಸಾರ್?’ ಪ್ರಶ್ನಿಸಿದ.
‘‘ನೋಡ್ರೀ...ಹಿಂದೂಗಳಿಗೆ ಎಂತಹ ಸ್ಥಿತಿ ಬಂತು. ಹಿಂದೂ ಧರ್ಮ ಅಪಾಯದಲ್ಲಿದೆ. ಹಾಡಹಗಲೇ ಹಿಂದೂ ದೇವಸ್ಥಾನವನ್ನು ಕೆಡವಲಾಯಿತು...’’ ಎಂದು ತಿಮ್ಮ ಸಿಂಹದಂತೆ ಗರ್ಜಿಸಲು ಯತ್ನಿಸಿದ. ಆದರೆ ಕಲ್ಲೇಟು ತಿಂದ ನಾಯಿ ಮರಿ ಕುಂಯ್ ಕುಂಯ್ ಎಂದಂತೆ ಸದ್ದು ಹೊರಗೆ ಬಂತು. ಬಹುಶಃ ನಾಯಿ ಮರಿಯ ಭಾಷೆಯಲ್ಲಿ ಗರ್ಜಿಸಿರಬೇಕು ಎಂದು ಎಂಜಲು ಕಾಸಿ ಭಾವಿಸಿದ. ‘‘ಎಲ್ಲಿ ಸಾರ್? ಅಫ್ಘಾನಿಸ್ತಾನದಲ್ಲಿ ನಾಶ ಮಾಡಿದ್ದು ಬುದ್ಧನ ಪ್ರತಿಮೆಯನ್ನು ಸಾರ್....ಅದರ ಬಗ್ಗೆ ಬೆತ್ತಲೆ ತಿಮ್ಮ ಅಂಕಣದಲ್ಲಿ ಈಗಾಗಲೇ ಬರೆದು ಬೆತ್ತಲಾಗಿದ್ದೀರಿ ಸಾರ್’’ ಕಾಸಿ ನೆನಪಿಸಿದ.
‘ಅದಲ್ಲರೀ....ಮೈಸೂರಿನಲ್ಲಿ ಕಣ್ರೀ....’’ ಪ್ರಲಾಪ ತಿಮ್ಮ ಪ್ರಲಾಪ ಶುರು ಹಚ್ಚಿಕೊಂಡ.
‘‘ಯಾರು ಸಾರ್ ಕೆಡವಿದ್ದು...ಟಿಪ್ಪು ಸುಲ್ತಾನನ? ಎಲ್ಲಿ ಸಾರ್?’’ ಕಾಸಿ ಗೊಂದಲದಿಂದ ಕೇಳಿದ.
‘‘ಮೊನ್ನೆ ಮೊನ್ನೆ ಕಣ್ರೀ....ಹಾಡಹಗಲೇ ಕೆಡವಿದ್ದು....’’ ತಿಮ್ಮ ಮಹಿಷಾಸುರನ ಕೈಯಲ್ಲಿದ್ದ ಕತ್ತಿಗೆ ಮತ್ತೊಮ್ಮೆ ತಲೆ ಚಚ್ಚಿಕೊಂಡ.
‘‘ಹಾಗಾದರೆ ಯಾರೋ ಟಿಪ್ಪು ಸುಲ್ತಾನ್‌ನ ವಂಶಜರೇ ಇರಬೇಕು ಸಾರ್. ಅದರ ಬಗ್ಗೆ ಇನ್ನೊಂದು ಅಂಕಣ ಬರೆದು ಜಗತ್ತಿನ ಮುಂದೆ ಬೆತ್ತಲಾಗಿ ಬಿಡಿ ಸಾರ್...’’
‘‘ಇದು ಹಾಗಲ್ಲರೀ....ಸರಕಾರವೇ ದೇವಸ್ಥಾನ ಕೆಡವಿದೆ. ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದೆ...’’ ತಿಮ್ಮ ಮುಂದುವರಿಸಿದ.
‘‘ಯಾವ ಸರಕಾರ ಸಾರ್? ತಾಲಿಬಾನ್ ಸರಕಾರವಾದರೆ ಅಫ್ಘಾನಿಸ್ತಾನದ ಮೇಲೆ ಯುದ್ಧ ಹೂಡಬೇಕು ಸಾರ್...ನಮ್ಮ ಸೇನೆಯನ್ನು ಅಲ್ಲಿಗೆ ಕಳುಹಿಸುವ ವ್ಯವಸ್ಥೆ ಮಾಡಿ ಸಾರ್...’’ ಕಾಸಿ ಒತ್ತಾಯಿಸಿದ.
‘‘ನಮ್ಮೂರಲ್ಲಿ ತಾಲಿಬಾನ್ ಸರಕಾರ ಎಲ್ಲಿ ಬಂತು? ನಮ್ಮದು ಮೋದಿ ಸರಕಾರ ಕಣ್ರೀ....’’
‘‘ಅಂದರೆ ಮೋದಿ ಸರಕಾರ ದೇವಸ್ಥಾನ ಕೆಡವಿತು ಎಂದು ಹೇಳುತ್ತಾ ಇದ್ದೀರಾ?’’ ಕಾಸಿ ಅರ್ಥವಾಗದೆ ಮತ್ತೆ ಕೇಳಿದ.
‘‘ಹಿಂದೂ ಧರ್ಮದ ಉದ್ಧಾರಕ್ಕೆಂದೇ ಅವತಾರ ಎತ್ತಿ ಬಂದಿರುವ ಮೋದಿಯವರು ದೇವಸ್ಥಾನವನ್ನು ಧ್ವಂಸ ಮಾಡುತ್ತಾರೆಯೇ?’’ ತಿಮ್ಮ ಸಿಟ್ಟಿನಿಂದ ಕೇಳಿದ.
‘‘ಹಾಗಾದರೆ ರಾಜ್ಯ ಸರಕಾರ ಕೆಡವಿತೇ? ರಾಜ್ಯದಲ್ಲಿ ಬಿಜೆಪಿ ಸರಕಾರ ಇರುವುದಲ್ಲವೇ? ನೀವು ಬಿಜೆಪಿಯ ಸಂಸದರಲ್ಲವೇ?’’ ಕಾಸಿ ಅರ್ಥವಾಗದೆ ಮತ್ತೆ ಕೇಳಿದ.
‘‘ಬಿಜೆಪಿ ಸರಕಾರ ಇರುವುದೇ ಹಿಂದೂ ಧರ್ಮದ ರಕ್ಷಣೆಗೆ ಕಣ್ರೀ...’’
‘‘ಮತ್ತೆ ದೇವಸ್ಥಾನವನ್ನು ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ ಯಾಕೆ?’’ ಕಾಸಿಗೆ ಒಟ್ಟು ವಿಷಯ ಅರ್ಥವಾಗಲಿಲ್ಲ.
‘‘ಯಾಕೆಂದರೆ ಕಾಂಗ್ರೆಸಿಗರು ಇದ್ದಾರಲ್ಲ....ಆದುದರಿಂದ ದೇವಸ್ಥಾನ ರಕ್ಷಣೆ ಮಾಡಲು ಆಗಲಿಲ್ಲ.....’’ ತಿಮ್ಮ ಸ್ಪಷ್ಟನೆ ನೀಡಿದ.
‘‘ರಾಜಸ್ಥಾನದಲ್ಲಿ ಕಾಂಗ್ರೆಸ್ ಸರಕಾರ ಇದ್ದರೆ, ಮೈಸೂರಿನಲ್ಲಿ ದೇವಸ್ಥಾನ ರಕ್ಷಣೆ ಮಾಡುವುದಕ್ಕಾಗುವುದಿಲ್ಲವೇ?’’ ಕಾಸಿ ಆತಂಕದಿಂದ ಪ್ರಶ್ನೆ ಮಾಡಿದ.
‘‘ವಿರೋಧ ಪಕ್ಷದಲ್ಲಿ ಕಾಂಗ್ರೆಸಿಗರಿದ್ದಾರಲ್ಲ....ಅವರಿಂದಾಗಿ ಇದೆಲ್ಲ ಆಗಿರುವುದು...ದೇವಸ್ಥಾನ ಕೆಡವಿದ್ದಕ್ಕಾಗಿ ಸಿದ್ದರಾಮಯ್ಯ, ಕುಮಾರಸ್ವಾಮಿ ರಾಜೀನಾಮೆ ನೀಡಬೇಕು...’’ ತಿಮ್ಮ ಒತ್ತಾಯಿಸಿದ.
‘‘ಸಿದ್ದರಾಮಯ್ಯ ಯಾವುದಕ್ಕೆ ರಾಜೀನಾಮೆ ನೀಡಬೇಕು ಸಾರ್?’’
‘‘ಸಿದ್ದರಾಮಯ್ಯ ಎಂಎಲ್‌ಎ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅಷ್ಟೇ ಅಲ್ಲ, ಎಲ್ಲ ಕಾಂಗ್ರೆಸಿಗರು ತಮ್ಮ ವಿರೋಧ ಪಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಮನೆಯಲ್ಲಿ ಕೂರಬೇಕು...’’ ತಿಮ್ಮ ಮತ್ತೊಮ್ಮೆ ಉಗ್ರವಾಗಿ ಆಗ್ರಹಿಸಿದ. ‘‘ಆದರೆ ದೇವಸ್ಥಾನ ಧ್ವಂಸಕ್ಕೆ ಆದೇಶ ನೀಡಿದ್ದು ಬಿಜೆಪಿ ಸರಕಾರವಲ್ಲವೇ?’’ ಕಾಸಿ ಕೇಳಿದ.
‘‘ನೋಡ್ರೀ...ಬಿಜೆಪಿ ಆದೇಶ ನೀಡಿದಾಕ್ಷಣ ಅದನ್ನು ಪಾಲಿಸುವ ಅಗತ್ಯವಿತ್ತೇ? ಸರಕಾರ ನೀಡಿದ ಎಲ್ಲಾ ಆದೇಶಗಳನ್ನು ಅಧಿಕಾರಿಗಳು, ಸಿಬ್ಬಂದಿ ಪಾಲಿಸುತ್ತಾರೆಯೇ? ಹಾಗಾದರೆ ಇದನ್ನು ಮಾತ್ರ ಶಿರಸಾವಹಿಸಿ ಪಾಲಿಸಿರುವುದರ ಉದ್ದೇಶ ಏನು? ಆದೇಶ ಪಾಲಿಸಿದವರ ಹಿಂದೆ ಹಿಂದೂ ವಿರೋಧಿ ಶಕ್ತಿಗಳಿದ್ದಾರೆ ಎಂದಾಯಿತು. ಹಿಂದೂ ವಿರೋಧಿಗಳು ಎಂದ ಮೇಲೆ ಅಲ್ಲಿ ಕಾಂಗ್ರೆಸಿಗರು ಇರಲೇಬೇಕು....’’ ತಿಮ್ಮ ತನ್ನ ವಾದವನ್ನು ಮಂಡಿಸಿ, ಇಲಿ ಮೀಸೆಯನ್ನು ತಿರುಗಿಸಿದ. ಹೌದಲ್ಲ! ಅನ್ನಿಸಿತು ಕಾಸಿಗೆ. ‘‘ಹಾಗಾದರೆ ಬಿಜೆಪಿ ಸರಕಾರ ದೇವಸ್ಥಾನ ಕೆಡವಲಿಲ್ಲ ಅಂತೀರಾ?’’
‘‘ಬಿಜೆಪಿ ಸರಕಾರ ಹಿಂದೂ ಸರಕಾರ ಆಗಿರುವುದರಿಂದ ದೇವಸ್ಥಾನ ಕೆಡವಲು ಸಾಧ್ಯವೇ ಇಲ್ಲ. ಮುಖ್ಯವಾಗಿ ಇದರಲ್ಲಿ ದೇವಸ್ಥಾನ ಕೆಡವಲು ಜೆಸಿಬಿಯನ್ನು ಚಲಾಯಿಸಿದ ಚಾಲಕನ ಪಾತ್ರ ಪ್ರಮುಖವಾಗಿದೆ. ಆದುದರಿಂದ ಈ ಕುರಿತಂತೆ ಸಿಬಿಐ ತನಿಖೆಯಾಗಬೇಕು...’’
‘‘ಅಂದರೆ...’’
‘‘ಅಂದರೆ ಜೆಸಿಬಿಯನ್ನು ಚಲಾಯಿಸಿ ದೇವಸ್ಥಾನ ಕೆಡವಿದ ಸಿಬ್ಬಂದಿಯ ಹೆಸರೇನು? ಅವನ ಧರ್ಮ ಯಾವುದು? ಅವನ ಪಕ್ಷ ಯಾವುದು? ಇವೆಲ್ಲವೂ ತನಿಖೆಗೊಳಗಾಗಬೇಕು. ಹಾಗೆಯೇ ಜೆಸಿಬಿಯದ್ದು ಕೂಡ ತಪ್ಪಿದೆ. ಆದುದರಿಂದ ಆ ಜೆಸಿಬಿಯ ಮಾಲಕ ಯಾರು? ಆ ಮಾಲಕನ ಧರ್ಮ ಯಾವುದು? ಇವೆಲ್ಲವೂ ತನಿಖೆಗೊಳಗಾಗಿ ಜೆಸಿಬಿಗೆ ಮರಣದಂಡನೆ ಶಿಕ್ಷೆಯನ್ನು ಕೊಡಬೇಕು. ಹಾಗೆಯೇ ಜೆಸಿಬಿ ಚಾಲಕನಿಗೆ ಜೀವಾವಧಿ ಶಿಕ್ಷೆ ನೀಡಬೇಕು. ಅದರ ಮಾಲಕನನ್ನು ತನಿಖೆ ಮಾಡಿ ಆತನಿಗೆ ಐಎಸ್‌ಐ ಮತ್ತು ಅಲ್‌ಖಾಯಿದಾ ಜೊತೆಗೆ ಸಂಬಂಧವಿದೆಯೇ ಎನ್ನುವುದನ್ನು ವಿಚಾರಣೆ ನಡೆಸಬೇಕು. ಹಾಗೆಯೇ ವಿರೋಧ ಪಕ್ಷದವರ ಪಾತ್ರವೂ ಇದರ ಹಿಂದಿದೆ. ಜೊತೆಗೆ ಟಿಪ್ಪು ಸುಲ್ತಾನ್‌ನ ಪಾತ್ರವೇನಾದರೂ ಇದೆಯೇ ಎನ್ನುವುದನ್ನು ಭವಿಷ್ಯದಲ್ಲಿ ಆರೆಸ್ಸೆಸ್‌ನ ಇತಿಹಾಸ ತಜ್ಞರು ಸಂಶೋಧನೆ ನಡೆಸಲಿದ್ದಾರೆ. ಟಿಪ್ಪು ಸುಲ್ತಾನ್ ಕೆಡವಿದ ದೇವಸ್ಥಾನವನ್ನು ಬಿಜೆಪಿ ಸರಕಾರದ ತಲೆಗೆ ಕಟ್ಟಲಾಗಿದೆಯೇ ಎನ್ನುವ ಬಗ್ಗೆಯೂ ತನಿಖೆ ನಡೆಯಲಿದೆ’’ ತಿಮ್ಮ ಹೇಳಿದ.
‘‘ಸಾರ್...ತಾಲಿಬಾನ್ ಕೈವಾಡವಿರುವ ಬಗ್ಗೆಯೂ ಒಂದು ತನಿಖೆ ನಡೆಸಬಹುದಲ್ಲ....’’ ಕಾಸಿ ಸಲಹೆ ನೀಡಿದ.
‘‘ನೋಡೋಣ...ಆ ಬಗ್ಗೆ ಗೃಹ ಸಚಿವರಿಗೆ ಒಂದು ಮನವಿ ನೀಡಬೇಕು ಎಂದಿದ್ದೇನೆ....’’
‘‘ಅಕ್ರಮ ದೇವಸ್ಥಾನಗಳನ್ನು ಕೆಡವಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆಯಲ್ಲ?’’ ಕಾಸಿ ಕೇಳಿದ.
‘‘ನೋಡ್ರೀ....ಕೆಡವುವ ಕೆಲಸವನ್ನು ಸುಪ್ರೀಂಕೋರ್ಟ್ ಮಂಗ ಪರಿವಾರಗಳಿಗೆ ಬಿಡಲಿ. ನಾವು ಯಾವುದನ್ನು ಕೆಡವಬೇಕು ಎನ್ನುವುದನ್ನು ತೀರ್ಮಾನಿಸುತ್ತೇವೆ. ನಾವು ಕೆಡವಿದ ಜಾಗದಲ್ಲಿ ಏನನ್ನು ಕಟ್ಟಬೇಕು ಎನ್ನುವುದನ್ನು ನಮಗೆ ಪೂರಕವಾಗಿ ಸುಪ್ರೀಂಕೋರ್ಟ್ ಹೇಳಬೇಕು. ಅದು ನ್ಯಾಯಾಲಯದ ಕರ್ತವ್ಯ. ಈಗ ನೋಡಿ, ಬಾಬರಿ ಮಸೀದಿ ನಾವು ಕೆಡವಿದೆವು. ಸುಪ್ರೀಂಕೋರ್ಟ್ ಆ ಅಕ್ರಮ ಜಾಗದಲ್ಲಿ ದೇವಸ್ಥಾನವನ್ನು ಕಟ್ಟುವುದಕ್ಕೆ ಹೇಳಲಿಲ್ಲವೇ? ಅಲ್ಲಿ ಕಟ್ಟಬಹುದಾದರೆ ಇಲ್ಲಿ ಯಾಕೆ ಕಟ್ಟಬಾರದು?’’ ತಿಮ್ಮ ವಾದಿಸಿದ.
ವಾದದಲ್ಲಿ ತಿರುಳು ಇದೆ ಅನ್ನಿಸಿತು.
‘‘ಈಗ ನಿಮ್ಮ ಮುಂದಿನ ನಡೆ ಏನು ಸಾರ್?’’
‘‘ಹೇಗೂ ಒಂದು ದೇವಸ್ಥಾನವನ್ನು ಕೆಡವಲಾಗಿದೆ. ಇದರಿಂದ ಒಂದು ಧರ್ಮದ ಜನರ ಮನಸ್ಸಿಗೆ ನೋವಾಗಿದೆ. ಆ ಧರ್ಮದ ಮನಸ್ಸನ್ನು ಸಮಾಧಾನಿಸಲು ಇನ್ನೊಂದು ಧರ್ಮದ ಪ್ರಾರ್ಥನಾ ಮಂದಿರವನ್ನು ಕೆಡವಲೇ ಬೇಕು. ಸಮಾಜದಲ್ಲಿ ಶಾಂತಿ ಸೌಹಾರ್ದ ನೆಲೆಸಬೇಕಾದರೆ ಇದನ್ನು ತಕ್ಷಣ ಮಾಡಬೇಕು ಎಂದು ಆಗ್ರಹಿಸಿ ಆಂದೋಲನ ಮಾಡಲಿದ್ದೇವೆ...’’ ತಿಮ್ಮ ಹೇಳಿದ. ‘‘ಸಾರ್...ನಿಮ್ಮ ಮನೆ ಅಕ್ರಮ ಸೈಟ್‌ನಲ್ಲಿ ಕಟ್ಟಿದ್ದು ಎಂಬ ಆರೋಪವಿದೆ. ಆ ಮನೆಯನ್ನು ಕೆಡವುವ ಬಗ್ಗೆ ಏನಾದರೂ ಆಂದೋಲನ ಇದೆಯಾ?’’
ಕೆಂಡಾಮಂಡಲವಾದ ತಿಮ್ಮ ಒಮ್ಮೆಲೆ ಗರ್ಜಿಸಿದ ‘‘ನೋಡ್ರೀ....ನೀವು ಹೀಗೆಲ್ಲ ಆರೋಪ ಮಾಡಿದರೆ ನಿಮ್ಮ ಮುಂದೆ ಬಟ್ಟೆ ಬಿಚ್ಚಿ ಬೆತ್ತಲೆ ನಿಂತು ನಿಮ್ಮ ಮಾನ ಮರ್ಯಾದೆ ಎಲ್ಲ ತೆಗೆದು ಬಿಡುವೆ..’’ ಎಂದದ್ದೇ ತಿಮ್ಮ ಪ್ಯಾಂಟ್ ಕಳಚಲು ಹೊರಟ.
ಕಾಸಿ ಮಾನ ಮರ್ಯಾದೆ ಉಳಿಸಿಕೊಳ್ಳಲು ಅಲ್ಲಿಂದ ಓಡ ತೊಡಗಿದ.