ನೆತ್ತಿಯ ಮೇಲಿನ ತೂಗುಗತ್ತಿ ತಪ್ಪಿಸಿಕೊಳ್ಳಲು ಹೊಸ ಉಪಾಯ ‘ಅರ್ಕಾ’ ಇಂಗಾಲ ಹೀರುಕ
ಕಳೆದ ಒಂದೂವರೆ ಶತಮಾನಗಳಿಂದ ಇತ್ತೀಚೆಗೆ ಭೂಮಿಯ ವಾತಾವರಣದ ಬಿಸಿ ಏರುತ್ತಲೇ ಇದೆ. ಈ ಬಿಸಿ ಏರಿಕೆಗೆ ಮುಖ್ಯ ಕಾರಣ ವಾತಾವರಣದಲ್ಲಿ ಇಂಗಾಲದ ಡೈ ಆಕ್ಸೈಡ್ ಮಟ್ಟ ಹೆಚ್ಚಾಗಿರುವುದು ಎಂಬುದು ಎಲ್ಲರಿಗೂ ತಿಳಿದ ಸಂಗತಿ. 1850ರಲ್ಲಿ 288 ಪಿ.ಪಿ.ಎಂ.ನಷ್ಟಿದ್ದ ಇಂಗಾಲದ ಡೈ ಆಕ್ಸೈಡ್‌ನ ಪ್ರಮಾಣ ಈಗ 414 ಪಿ.ಪಿ.ಎಂ.ನಷ್ಟಾಗಿದೆ. ಭೂಮಿಯ ಉಷ್ಣತೆ ಸರಿಸುಮಾರು 1.1 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ಲಕ್ಷಾಂತರ ವರ್ಷಗಳಿಂದ ಕಾಡುಗಳು, ಪ್ಲಾಂಕ್ಟನ್‌ಗಳು ಹಾಗೂ ಸಸ್ಯಗಳು ಭೂಮಿಯ ವಾತಾವರಣವನ್ನು ಕಾಪಾಡಲು ಮಾಡಿದ್ದ ಶ್ರಮವನ್ನು ಕೇವಲ 150 ವರ್ಷಗಳ ಅವಧಿಯಲ್ಲಿ ನಾವು ಹಾಳುಮಾಡಿದೆವು. ಪಳೆಯುಳಿಕೆ ಇಂಧನಗಳ ಬಳಕೆ ದಿನೇ ದಿನೇ ಹೆಚ್ಚಾದಂತೆ ವಾತಾವರಣಕ್ಕೆ ಬಿಡುವ ಇಂಗಾಲ ಡೈ ಆಕ್ಸೈಡ್‌ನ ಪ್ರಮಾಣವೂ ಅಧಿಕವಾಯಿತು. ಕಳೆದ 50 ವರ್ಷಗಳಲ್ಲಿ 1,200 ಶತಕೋಟಿ ಟನ್‌ಗಳಿಗಿಂತ ಹೆಚ್ಚು ಇಂಗಾಲದ ಡೈ ಆಕ್ಸೈಡನ್ನು ಭೂ ವಾತಾವರಣಕ್ಕೆ ಸೇರಿಸಿದ್ದೇವೆ. 2018ರಲ್ಲಿ 36.6 ಶತಕೋಟಿ ಟನ್ ಇಂಗಾಲದ ಡೈ ಆಕ್ಸೈಡ್ ಹೊರಹಾಕಿದ್ದೇವೆ. ಜಾಗತಿಕ ಸರಾಸರಿ ತಾಪಮಾನವನ್ನು ಕೇವಲ ಅರ್ಧ ಶತಮಾನದಲ್ಲಿ 0.8 ಡಿಗ್ರಿಗಳಷ್ಟು ಹೆಚ್ಚು ಮಾಡಿದ್ದೇವೆ. ಐ.ಪಿ.ಸಿ.ಸಿ.(ಇಂಟರ್ ಗವರ್ನಮೆಂಟಲ್ ಪ್ಯಾನಲ್ ಆನ್ ಕ್ಲೈಮೇಟ್ ಚೇಂಜ್) ಪ್ರಕಾರ ಈ ಶತಮಾನದ ಅಂತ್ಯದ ವೇಳೆಗೆ ನಮ್ಮ ಗ್ರಹದ ಉಷ್ಣತೆ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಲಿದೆಯಂತೆ. ಇಷ್ಟು ಪ್ರಮಾಣದಲ್ಲಿ ಭೂಮಿ ಬಿಸಿಯಾದರೆ ಬಹುತೇಕ ಸಸ್ಯಗಳು ಹಾಗೂ ಪ್ರಾಣಿಗಳು ಭೂಮಿಯ ಮೇಲೆ ಇಲ್ಲದಂತಾಗುತ್ತವೆ.
ವಾಯುಮಂಡಲದಲ್ಲಿ ಇಂಗಾಲದ ಡೈ ಆಕ್ಸೈಡ್ ಕನಿಷ್ಠ ಪ್ರಮಾಣದಲ್ಲಿ ಉಳಿಯಬೇಕು ಎಂದು ನಿರ್ಧರಿಸಿದ ಬಹುತೇಕ ರಾಷ್ಟ್ರಗಳು 2015ರಲ್ಲಿ ಪ್ಯಾರೀಸ್ ಒಪ್ಪಂದಕ್ಕೆ ಸಹಿ ಹಾಕಿದವು. ಜಾಗತಿಕ ತಾಪಮಾನ ಏರಿಕೆಯನ್ನು 2 ಡಿಗ್ರಿಯಿಂದ 1.5 ಡಿಗ್ರಿಗೆ ಕಡಿಮೆ ಮಾಡುವುದು ಈ ಒಪ್ಪಂದದ ಉದ್ದೇಶವಾಗಿತ್ತು. 1.5 ಡಿಗ್ರಿಗಳಿಗೆ ಸೀಮಿತಗೊಳಿಸಿದರೆ ಶೇಕಡಾ 50ರಷ್ಟು ಇಂಗಾಲದ ಡೈ ಆಕ್ಸೈಡ್ ಏರಿಕೆಯನ್ನು ತಡೆಯಬಹುದು ಎಂಬುದು ಐ.ಪಿ.ಸಿ.ಸಿ.ಯ ವಾದವಾಗಿತ್ತು. ಇಂಗಾಲದ ಡೈ ಆಕ್ಸೈಡ್ ವಾತಾವರಣ ಸೇರುವುದನ್ನು ತಡೆಯಲು ಮರು ಅರಣ್ಯೀಕರಣ ಮಾತ್ರ ಒಂದು ಯೋಜಿತ ಕಾರ್ಯಕ್ರಮ ಎಂದು ಐ.ಪಿ.ಸಿ.ಸಿ. ಹೇಳಿತ್ತು. ಇಂತಹ ಅದೆಷ್ಟೋ ಹೇಳಿಕೆಗಳು, ವಾದಗಳು ನಮ್ಮ ಮುಂದಿದ್ದರೂ ನಾವು ಮಾತ್ರ ಅದೇ ರಾಗ ಹಾಡುತ್ತಿದ್ದೇವೆ. ಅದೇ ಚಾಳಿ ಮುಂದುವರಿಸಿದ್ದೇವೆ. ಇಂಗಾಲದ ಡೈ ಆಕ್ಸೈಡ್‌ನ ಪ್ರಮಾಣ ಮಾತ್ರ ನಿರೀಕ್ಷಿತ ಪ್ರಮಾಣದಲ್ಲಿ ಕಡಿಮೆಯಾಗುತ್ತಿಲ್ಲ. ಆದರೆ ಪ್ರಯತ್ನಗಳು ಮಾತ್ರ ನಿಂತಿಲ್ಲ. ವಿಶ್ವದ ನಾನಾ ಭಾಗಗಳಲ್ಲಿ ಇಂಗಾಲದ ಡೈ ಆಕ್ಸೈಡನ್ನು ಕಡಿಮೆ ಮಾಡುವ ಕಾರ್ಯಯೋಜನೆಗಳು ನಡೆಯುತ್ತಲೇ ಇವೆ. ಅಂತಹ ಒಂದು ಪ್ರಯತ್ನವೇ ‘ಅರ್ಕಾ’ ಯೋಜನೆ.
ವಾತಾವರಣದಿಂದ ಇಂಗಾಲದ ಡೈ ಆಕ್ಸೈಡನ್ನು ಹೀರಿಕೊಂಡು ಅದನ್ನು ಭೂಗರ್ಭದಲ್ಲಿ ಜಮಾ ಮಾಡುವ ಬೃಹತ್ ಯೋಜನೆ ಐಸ್‌ಲ್ಯಾಂಡ್‌ನಲ್ಲಿ ಪ್ರಾರಂಭವಾಗಿದೆ. ಇದು ಪ್ಯಾರಿಸ್ ಒಪ್ಪಂದದ ಗುರಿಗಳನ್ನು ಪೂರೈಸುವ ಹಿನ್ನೆಲೆಯಲ್ಲಿ ಹಸಿರು ಮನೆ ಅನಿಲಗಳನ್ನು ಕಡಿಮೆ ಮಾಡಲು ಹವಾಮಾನ ತಜ್ಞರು ಸೂಚಿಸಿದ ತಂತ್ರಜ್ಞಾನದ ಬಹುದೊಡ್ಡ ಹೆಜ್ಜೆಯಾಗಿದೆ. ‘ಅರ್ಕಾ’ ಹೆಸರಿನಲ್ಲಿ ಪ್ರಾರಂಭವಾದ ಈ ಯೋಜನೆಯಿಂದ ಪ್ರತಿವರ್ಷ 4,000 ಟನ್ (ಸುಮಾರು 870 ಕಾರುಗಳಿಂದ ಉಂಟಾದ ಹಸಿರುಮನೆ ಅನಿಲಗಳಿಗೆ ಸಮ) ಇಂಗಾಲದ ಡೈ ಆಕ್ಸೈಡನ್ನು ಹೀರಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಸ್ವಿಸ್ ಕಂಪೆನಿ ಕ್ಲೈಮ್‌ವರ್ಕ್ ಮತ್ತು ಐಸ್‌ಲ್ಯಾಂಡ್ ಕಂಪೆನಿ ಕಾರ್ಬ್ ಫಿಕ್ಸ್ ಜಂಟಿಯಾಗಿ ಈ ಘಟಕ ನಿರ್ಮಿಸಿದ್ದು, ಇದರ ಅಂದಾಜು ಮೊತ್ತ 10 ರಿಂದ 15 ಮಿಲಿಯನ್ ಡಾಲರ್‌ಗಳು. ಇದೊಂದು ಯಾದೃಚ್ಛಿಕವಾಗಿ ಪ್ರಾರಂಭಿಸಿದ ಯೋಜನೆಯಲ್ಲ. ಬದಲಿಗೆ ಸಣ್ಣ ಸಣ್ಣ ದ್ವೀಪರಾಷ್ಟ್ರಗಳು ಇಂಗಾಲದ ಡೈ ಆಕ್ಸೈಡ್‌ನ ಪ್ರಮಾಣವನ್ನು ತಗ್ಗಿಸಲು ಕೈಗೊಂಡ ಕ್ರಮವಾಗಿದೆ. ಪ್ರತಿ ಮೆಟ್ರಿಕ್ ಟನ್ ಇಂಗಾಲದ ಡೈ ಆಕ್ಸೈಡ್‌ಗೆ ಸುಮಾರು 600 ರಿಂದ 800 ಡಾಲರ್ ವೆಚ್ಚ ತಗಲುತ್ತದೆ. ಇದೊಂದು ಹೊಸ ತಂತ್ರಜ್ಞಾನವಾಗಿದ್ದು, ಕೆಲಸ ಮಾಡುವ ವಿಧಾನ ಆಸಕ್ತಿದಾಯಕವಾಗಿದೆ. ‘ಅರ್ಕಾ’ ತಂತ್ರಜ್ಞಾನವು ನಾಲ್ಕು ಘಟಕಗಳನ್ನು ಹೊಂದಿದೆ. ಹಡಗು ನಿರ್ಮಾಣದಲ್ಲಿ ಬಳಸಿದಂತೆ ಇಲ್ಲಿನ ಪ್ರತಿಯೊಂದು ಘಟಕವು ಎರಡು ಲೋಹದ ಪೆಟ್ಟಿಗೆಗಳಿಂದ ಮಾಡಲ್ಪಟ್ಟಿರುತ್ತದೆ. ಪೆಟ್ಟಿಗೆಗಳಲ್ಲಿ ಫ್ಯಾನ್‌ಗಳನ್ನು ಅಳವಡಿಸಲಾಗಿದೆ. ಫ್ಯಾನ್‌ಗಳ ಹಿಂಭಾಗದಲ್ಲಿ ಸ್ಪಂಜಿನಂತಹ ಫಿಲ್ಟರ್‌ಗಳನ್ನು ಅಳವಡಿಸಲಾಗಿದೆ. ಫ್ಯಾನ್‌ಗಳು ತಿರುಗುವ ಮೂಲಕ ಗಾಳಿಯಿಂದ ಇಂಗಾಲದ ಡೈ ಆಕ್ಸೈಡನ್ನು ಹೀರಿಕೊಂಡು ಫಿಲ್ಟರ್‌ಗಳಿಗೆ ರವಾನಿಸುತ್ತವೆ. ಫಿಲ್ಟರ್‌ಗಳಲ್ಲಿನ ಇಂಗಾಲದ ಡೈ ಆಕ್ಸೈಡನ್ನು ಶಾಖದಿಂದ ಸ್ಫೋಟಿಸಲಾಗುತ್ತದೆ ಮತ್ತು ಅನಿಲವನ್ನು ಮುಕ್ತಗೊಳಿಸಲಾಗುತ್ತದೆ. ಮುಕ್ತಗೊಳಿಸಿದ ಅನಿಲವನ್ನು ನೀರಿನೊಂದಿಗೆ ಬೆರೆಸಿ ಭೂಗತ ಗುಹೆಗಳಿಗೆ ಪಂಪ್ ಮಾಡಲಾಗುತ್ತದೆ. ಅಲ್ಲಿ ಅದು ಬೂದು ಕಲ್ಲಾಗಿ ಬದಲಾಗುತ್ತದೆ. ಇದರ ಸಂಪೂರ್ಣ ಕಾರ್ಯನಿರ್ವಹಣೆಗೆ ನವೀಕರಿಸುವ ಶಕ್ತಿಯನ್ನು ಬಳಸಲಾಗುತ್ತದೆ. ಇದೊಂದು ನವೀನ ತಂತ್ರಜ್ಞಾನಾಧಾರಿತ ಇಂಗಾಲ ಹೀರುಕವಾಗಿದ್ದು ವೆಚ್ಚ ಕೊಂಚ ಹೆಚ್ಚು ಎನಿಸಬಹುದು. ಆದರೆ ಇದರ ವಿವಿಧ ಬಳಕೆಗಳನ್ನು ಗಮನಿಸಿದರೆ ಘಟಕದ ವೆಚ್ಚ ಕಡಿಮೆ ಎನಿಸುತ್ತದೆ. ವಾತಾವರಣದಿಂದ ಹೀರಿಕೊಂಡ ಇಂಗಾಲವನ್ನು ನೀರಿನೊಂದಿಗೆ ಬೆರೆಸಿ ಭೂಗರ್ಭ ಸೇರುವಂತೆ ಮಾಡುವುದು ಅರ್ಕಾ ತಂತ್ರಜ್ಞಾನದ ಕಾರ್ಯ. ಇದನ್ನೇ ಕೊಂಚ ವಿಭಿನ್ನವಾಗಿ ಬಳಸಲು ಅವಕಾಶವಿದೆ ಎನ್ನುತ್ತಾರೆ ನಿರ್ಮಿಸಿದ ತಂತ್ರಜ್ಞರು. ರೈತರು ತಮ್ಮ ಸಸ್ಯಗಳಿಗೆ ಇದನ್ನು ಬಳಸಬಹುದು. ಇಂಧನ ಕಂಪೆನಿಗಳು ಇಂಧನ ತಯಾರಿಸಲು ಹೈಡ್ರೋಜನ್‌ನೊಂದಿಗೆ ಇದನ್ನು ಬೆರೆಸಬಹುದು ಮತ್ತು ಸೋಡಾ ತಯಾರಕರು ತಮ್ಮ ಪಾನೀಯವನ್ನು ಫೀಜ್ ಮಾಡಲು ಬಳಸಬಹುದು. ಅಲ್ಲದೇ ಪ್ರಸ್ತುತ ಇಂತಹ ಘಟಕ ನಿರ್ಮಾಣಕ್ಕಾಗಿ ಸರಕಾರದ ಸಬ್ಸಿಡಿ ಲಭ್ಯವಿದೆ. ಇದು ಬಹುತೇಕವಾಗಿ ವೈಜ್ಞಾನಿಕ ಕಾಲ್ಪನಿಕ ಕಥೆಯಂತೆ ತೋರುತ್ತದೆ. ಆದರೆ ನಮ್ಮ ಇತಿಹಾಸದಲ್ಲಿ ತಂತ್ರಜ್ಞಾನದ ಅದ್ಭುತ ಪ್ರಗತಿಯ ಉದಾಹರಣೆಗಳನ್ನು ಮರೆಯುವಂತಿಲ್ಲ. ‘‘ಇದು ನಿಜವಾಗಿಯೂ ಶೂನ್ಯ ಹಸಿರುಮನೆ ಅನಿಲ ಹೊರಹಾಕುವಿಕೆಯ ಪ್ರಥಮ ಹೆಜ್ಜೆಯಾಗಿದೆ ಮತ್ತು ಹವಾಮಾನ ಬಿಕ್ಕಟ್ಟನ್ನು ನಿರ್ವಹಿಸಲು ಅಗತ್ಯವಾಗಿದೆ’’ ಎಂದು ಐಸ್‌ಲ್ಯಾಂಡ್ ಪ್ರಧಾನಿ ಕತ್ರಿನ್ ಜಾಕೋಬ್ಸ್ಡ್ ಟ್ವಿರ್ ಉದ್ಘಾಟನಾ ಸಮಯದಲ್ಲಿ ಹೇಳಿದ ಮಾತು ಸತ್ಯ ವಾಗಲಿದೆ. ಏಕೆಂದರೆ ನಮ್ಮಿಂದ ವಾತಾವರಣಕ್ಕೆ ಬಿಡುವ ಇಂಗಾಲವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತಲೇ ಇಲ್ಲ. ಬಿಡುತ್ತಿರುವ ಇಂಗಾಲವನ್ನು ಹೀರಿಕೊಂಡು ಅದನ್ನು ಪರ್ಯಾಯವಾಗಿ ಬಳಸುವತ್ತ ಯೋಜಿಸಿದ ಈ ಯೋಜನೆ ನಿಜಕ್ಕೂ ಪ್ರಶಂಸಾರ್ಹ ಮತ್ತು ಇತರ ಎಲ್ಲಾ ದೇಶಗಳಿಗೆ ಮಾದರಿ ಎನಿಸುತ್ತದೆ. ಅರ್ಕಾ ಯೋಜನೆಯು ವಾತಾವರಣದಿಂದ ಇಂಗಾಲವನ್ನು ಸೆರೆಹಿಡಿಯುವ ಕೆಲವು ವಿಧಾನಗಳಲ್ಲಿ ಒಂದಾಗಿದ್ದು, ಇಲ್ಲಿ ಬಳಸುವ ತಂತ್ರಜ್ಞಾನವು ನೇರವಾಗಿ ಇಂಗಾಲವನ್ನು ಹೀರಿಕೊಳ್ಳುತ್ತದೆ. ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟದಲ್ಲಿ ಇದು ಅಗತ್ಯವಾದ ಹೆಜ್ಜೆಯಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ವಿಮರ್ಶಕರು ಇದು ತುಂಬಾ ದುಬಾರಿಯಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ದಶಕಗಳೇ ಬೇಕಾಗಬಹುದು ಎಂದು ವಾದಿಸಿದ್ದಾರೆ. ಆದಾಗ್ಯೂ ವಿಷಮ ಪರಿಸ್ಥಿತಿಯಲ್ಲಿ ಅರ್ಕಾ ಪ್ರಾರಂಭವಾಗಿರುವುದು ಒಂದು ದೊಡ್ಡ ಹೆಜ್ಜೆ ಎನ್ನಬಹುದು. ಈಗಾಗಲೇ ವಿಶ್ವದಾದ್ಯಂತ 15 ನೇರ ಇಂಗಾಲ ಹೀರುಕಗಳು ಕಾರ್ಯನಿರ್ವಹಿಸುತ್ತಿವೆ. ಮುಖ್ಯವಾಗಿ ಯು.ಎಸ್., ಯುರೋಪ್ ಮತ್ತು ಕೆನಡಾದಲ್ಲಿ ಕಂಡುಬರುತ್ತವೆ. ಇವು ಸಂಚಿತವಾಗಿ ವರ್ಷಕ್ಕೆ ಸುಮಾರು 9,000 ಟನ್‌ಗಳಷ್ಟು ಇಂಗಾಲಾಮ್ಲವನ್ನು ಸೆರೆಹಿಡಿಯುತ್ತವೆ ಎಂದು ಐ.ಇ.ಎ(ಅಂತರ್‌ರಾಷ್ಟ್ರೀಯ ಇಂಧನ ಸಂಸ್ಥೆ) ಹೇಳಿದೆ. ಪ್ರಸ್ತುತ ಯು.ಎಸ್.ನಲ್ಲಿ ಒಂದು ದೊಡ್ಡ ಪ್ರಮಾಣದ ಸ್ಥಾವರವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಅದು ವರ್ಷಕ್ಕೆ ವಾತಾವರಣದಿಂದ ಒಂದು ಮಿಲಿಯನ್ ಟನ್ ಇಂಗಾಲಾಮ್ಲ ಹೀರಿಕೊಳ್ಳುವ ಸಾಮರ್ಥ್ಯ ಹೊಂದಿರುತ್ತದೆ. ಅರ್ಕಾ ಘಟಕವನ್ನು ಕೇವಲ 15 ತಿಂಗಳುಗಳಲ್ಲಿ ನಿರ್ಮಿಸಲಾಗಿದ್ದು, ನಿರ್ಮಾಣ ಸಮಯವನ್ನು ಇನ್ನೂ ಕಡಿತಗೊಳಿಸಲು ಅವಕಾಶವಿದೆ ಎಂದು ಕಂಪೆನಿ ಹೇಳಿಕೊಂಡಿದೆ. ನವೀಕರಿಸಬಹುದಾದ ಶಕ್ತಿ ಮತ್ತು ಶೇಕರಣಾ ಪರಿಸ್ಥಿತಿಗಳೊಂದಿಗೆ ಪ್ರಪಂಚದ ಯಾವುದೇ ಸ್ಥಳದಲ್ಲಿಯಾದರೂ ಇದನ್ನು ನಿರ್ಮಿಸಬಹುದು ಎಂದು ಕಂಪೆನಿ ಹೇಳಿದೆ. ಅರ್ಕಾ ಘಟಕವು ಕ್ಲೈಮ್‌ವರ್ಕ್ ಕಂಪೆನಿಯ ಎರಡನೇ ಘಟಕವಾಗಿದೆ. ಕಂಪೆನಿಯು 2017ರಲ್ಲಿ ಸ್ವಿಟ್ಸರ್‌ಲ್ಯಾಂಡ್‌ನಲ್ಲಿ ಪ್ರಾಯೋಗಿಕ ಸ್ಥಾವರವನ್ನು ಆರಂಭಿಸಿತ್ತು. ಅಲ್ಲಿ ಸಂಗ್ರಹಿಸಿದ ಇಂಗಾಲವನ್ನು ರಸಗೊಬ್ಬರಗಳು, ಫಿಜ್ಜಿ ಪಾನೀಯಗಳು ಮತ್ತು ಸಂಶ್ಲೇಷಿತ ಇಂಧನಗಳಲ್ಲಿ ವಾಣಿಜ್ಯ ಬಳಕೆ ಮಾಡಲಾಗಿತ್ತು. ಅರ್ಕಾ ಘಟಕವು ಹೆಚ್ಚಿನ ಪ್ರಮಾಣದಲ್ಲಿ ಇಂಗಾಲದ ಡೈ ಆಕ್ಸೈಡನ್ನು ಸೆರೆಹಿಡಿಯುತ್ತದೆ. ಅದನ್ನು ನೈಸರ್ಗಿಕ ಖನಿಜೀಕರಣ ಪ್ರಕ್ರಿಯೆ ಮೂಲಕ ಶೇಖರಣೆಗಾಗಿ ಪರಿವರ್ತಿಸಲಾಗುತ್ತಿದೆ. ಇಲ್ಲಿ ಇಂಗಾಲದ ಡೈ ಆಕ್ಸೈಡನ್ನು ನೀರಿನೊಂದಿಗೆ ಬೆರೆಸಿ ಆಳವಾದ ಭೂಗತ ಗುಂಡಿಗಳಲ್ಲಿ ಸಂಗ್ರಹಿಸಲಾಗುತ್ತದೆ. ಅದು ಅಲ್ಲಿನ ಶಿಲೆಗಳಲ್ಲಿ ಸಿಲುಕಿಕೊಂಡು ಕಲ್ಲಿನ ರೂಪ ಹೊಂದುತ್ತದೆ. ಹಾಗಾಗಿ ವಾತಾವರಣದಿಂದ ಇಂಗಾಲವನ್ನು ಶಾಶ್ವತವಾಗಿ ತೊಡೆದು ಹಾಕುವ ಯೋಜನೆ ಇದಾಗಿದೆ ಎಂಬುದು ಕಂಪೆನಿಯ ಆಶಯ.
ವಾತಾವರಣದಲ್ಲಿ ಇಂಗಾಲದ ಡೈ ಆಕ್ಸೈಡ್‌ನ ಪ್ರಮಾಣ ಮಿತವಾಗಿರಬೇಕೆಂದು ಹೇಳುತ್ತಲೇ ಅದರ ಪ್ರಮಾಣವನ್ನು ಏರಿಸುತ್ತಿದ್ದೇವೆ. ಅಭಿವೃದ್ಧಿಯ ಹೆಸರಿನಲ್ಲಿ ಹಸಿರು ಕಾಡುಗಳನ್ನು ನೆಲಸಮ ಮಾಡಿ ಕಾಂಕ್ರಿಟ್ ಕಾಡು ನಿರ್ಮಿಸುತ್ತಿದ್ದೇವೆ. ಈಗ ದುಬಾರಿ ವೆಚ್ಚದಲ್ಲಿ ಇಂಗಾಲಾಮ್ಲವನ್ನು ಹೊರಹಾಕುವ ಪ್ರಯತ್ನ ಮಾಡುತ್ತಿದ್ದೇವೆ. ಇದು ಎಷ್ಟರ ಮಟ್ಟಿಗೆ ಸಫಲವಾಗು ವುದೋ ಕಾದು ನೋಡಬೇಕಿದೆ. ಆದರೆ ಇಂಗಾಲಾಮ್ಲವನ್ನು ಕಡಿಮೆ ಮಾಡುವ ನಮ್ಮ ಪ್ರಯತ್ನಗಳು ನಿಲ್ಲದೇ ಇರಲಿ.