varthabharthi


ಸಂಪಾದಕೀಯ

ಹೌದು, ಗಾಂಧಿಯನ್ನು ಕೊಂದವರಿಗೆ ಉಳಿದವರ ಹತ್ಯೆ ಕಷ್ಟವಲ್ಲ!

ವಾರ್ತಾ ಭಾರತಿ : 20 Sep, 2021

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

‘‘ಗಾಂಧಿಯನ್ನೇ ಕೊಂದ ನಮಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಯಾವ ಲೆಕ್ಕ?’’ ಎಂಬ ಹೇಳಿಕೆಯನ್ನು ಹಿಂದೂ ಮಹಾಸಭಾ ಸಂಘಟನೆಯ ಮುಖಂಡ, ಬಹಿರಂಗವಾಗಿ ಹೆಮ್ಮೆಯಿಂದ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೊಂಡಿದ್ದಾನೆ. ಹಿಂದೂ ಮಹಾಸಭಾ ಮಹಾತ್ಮ್ಮಾಗಾಂಧೀಜಿಯ ಕೊಲೆಯಲ್ಲಿ ನೇರ ಪಾತ್ರವನ್ನು ವಹಿಸಿದ್ದರೂ, ಬಹಿರಂಗವಾಗಿ ಅದನ್ನು ಘೋಷಿಸಿಕೊಂಡದ್ದಿಲ್ಲ. ನಾಥೂರಾಂ ಗೋಡ್ಸೆಗೂ ಹಿಂದೂ ಮಹಾಸಭಾಕ್ಕೂ ಸಂಬಂಧವಿಲ್ಲ ಎಂದು ಅಂದಿನ ಕೆಲವು ನಾಯಕರು ಸ್ಪಷ್ಟನೆಯನ್ನೂ ನೀಡಿದ್ದರು. ಗಾಂಧಿಯನ್ನು ಕೊಂದ ಸುಮಾರು ಆರು ದಶಕಗಳ ಬಳಿಕ ಹಿಂದೂ ಮಹಾ ಸಭಾದ ಮುಖಂಡರು ಅದನ್ನು ಹೆಮ್ಮೆಯಿಂದ ಒಪ್ಪಿಕೊಳ್ಳುವ ರಾಜಕೀಯ ವಾತಾವರಣ ಭಾರತದಲ್ಲಿ ನಿರ್ಮಾಣವಾಗಿದೆ ಎನ್ನುವುದು ಇಲ್ಲಿ ನಮಗೆ ಮುಖ್ಯವಾಗಬೇಕಾಗಿದೆ. ಗಾಂಧಿ ಹುಟ್ಟಿದ ದೇಶ ಎನ್ನುವ ಕಾರಣಕ್ಕಾಗಿ ಭಾರತ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಗೌರವವನ್ನು ಪಡೆಯುತ್ತಿದೆ. ಗಾಂಧಿ ಎಂದರೆ ಒಬ್ಬ ವ್ಯಕ್ತಿ ಮಾತ್ರವಲ್ಲ, ಅವರು ಭಾರತೀಯ ಮೌಲ್ಯದೊಳಗೆ ಅವಿನಾಭಾವವಾಗಿ ಬೆಸೆದುಕೊಂಡಿದ್ದಾರೆ. ಇಂತಹ ಗಾಂಧಿಯನ್ನು ಕೊಂದ ಹೊಣೆಯನ್ನು ಬಹಿರಂಗವಾಗಿ ಹೆಮ್ಮೆಯಿಂದ ಒಪ್ಪಿಕೊಳ್ಳುವ ಸಂಘಟನೆಯೊಂದು ಸರಕಾರದ ಸಮ್ಮತಿಯೊಂದಿಗೆ ನಮ್ಮ ನಡುವೆ ಅಸ್ತಿತ್ವದಲ್ಲಿದೆ. ದೇಶ ನಿಧಾನಕ್ಕೆ ಗಾಂಧಿಯ ಮೌಲ್ಯದಿಂದ, ಗಾಂಧಿಯನ್ನು ಕೊಂದ ಗೋಡ್ಸೆಯ ಮೌಲ್ಯದೆಡೆಗೆ ವಾಲುತ್ತಿದೆ ಮತ್ತು ಆ ಮೌಲ್ಯವನ್ನು ಪೋಷಿಸುವ ಸರಕಾರವೊಂದು ಅಸ್ತಿತ್ವದಲ್ಲಿರುವ ಕಾರಣದಿಂದಲೇ ಪತ್ರಿಕಾಗೋಷ್ಠಿಯಲ್ಲಿ ಹಿಂದೂ ಮಹಾಸಭಾದ ಮುಖಂಡ ಅದನ್ನು ಹೆಮ್ಮೆಯಿಂದ ಘೋಷಿಸಿಕೊಳ್ಳಲು ಸಾಧ್ಯವಾಯಿತು.

ನಾಥೂರಾಂ ಗೋಡ್ಸೆಯ ಪ್ರತಿಮೆಯನ್ನು ಸ್ಥಾಪಿಸುವುದನ್ನು ತಡೆಯಲು ಸಂವಿಧಾನಪರ ಸಂಘಟನೆಗಳು ಬೀದಿಗಿಳಿಯಬೇಕಾದ ದಿನಗಳಲ್ಲಿ ನಾವಿದ್ದೇವೆ. ನಾಥೂರಾಂ ಗೋಡ್ಸೆಯ ಪ್ರತಿಮೆಯನ್ನು ಸ್ಥಾಪಿಸುವುದು ಎಂದರೆ, ಗಾಂಧೀಜಿಯ ಕೊಲೆಯನ್ನು ಸಂಭ್ರಮಿಸುವುದು ಮಾತ್ರವಲ್ಲ, ಕೊಲೆಗಾರನ ಮೌಲ್ಯಗಳನ್ನು ನೇರವಾಗಿ ಎತ್ತಿ ಹಿಡಿಯುವುದು ಎಂದು ಅರ್ಥ. ನಮ್ಮ ಸರಕಾರಕ್ಕೆ ಗಾಂಧಿ ಮೌಲ್ಯದ ಮೇಲೆ ನಂಬಿಕೆ ಇದೆ ಎಂದಾದರೆ, ತಾನೇ ಸ್ವತಃ ಮುಂದೆ ನಿಂತು ಪ್ರತಿಮೆ ಸ್ಥಾಪನೆಯನ್ನು ವಿರೋಧಿಸುತ್ತದೆ ಮಾತ್ರವಲ್ಲ, ದುಷ್ಕರ್ಮಿಗಳ ಮೇಲೆ ಭಯೋತ್ಪಾದನೆಗೆ ಬೆಂಬಲ ನೀಡಿದ ಆರೋಪದಲ್ಲಿ ಪ್ರಕರಣ ದಾಖಲಿಸುತ್ತದೆ. ದುರದೃಷ್ಟ ವಶಾತ್, ಇಂದು ನಾಥೂರಾಂ ಪ್ರತಿಮೆ ಸ್ಥಾಪನೆಯಾಗುವುದನ್ನು ತಡೆಯಿರಿ ಎಂದು ಜನಸಾಮಾನ್ಯರೇ ಸರಕಾರವನ್ನು ಒತ್ತಾಯಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಗೋಡ್ಸೆಯ ಕುರಿತ ಸರಕಾರದ ಈ ಮೌನವೇ, ಇಂದು ಗಾಂಧಿ ಹತ್ಯೆಯನ್ನು ‘ನಾವು ಮಾಡಿದ್ದೇವೆ’ ಎಂದು ಹೆಮ್ಮೆಯಿಂದ ಘೋಷಿಸಿಕೊಳ್ಳುವ ಧೈರ್ಯವನ್ನು ಹಿಂದೂ ಮಹಾಸಭಾ ಮುಖಂಡರಿಗೆ ನೀಡಿದೆ. ಎರಡು ವರ್ಷಗಳ ಹಿಂದೆ ಗಾಂಧಿ ಹುತಾತ್ಮರಾದ ದಿನದಂದು ಸಂಘಪರಿವಾರಕ್ಕೆ ಸೇರಿದ ಕೆಲವು ದುಷ್ಕರ್ಮಿಗಳು ಮಹಾತ್ಮಾ ಗಾಂಧೀಜಿಯ ಪ್ರತಿಕೃತಿಯನ್ನು ಮಾಡಿ, ಅದಕ್ಕೆ ಗುಂಡಿಕ್ಕಿ ಆ ದಿನವನ್ನು ಸಂಭ್ರಮಿಸಿದರು. ಆ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಯಿತು. ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ಪ್ರತಿಭಟಿಸಿದವರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸುವ ಪೊಲೀಸರು ಈ ಪ್ರಕರಣವನ್ನು  ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಕಳೆದೆರಡು ವರ್ಷಗಳಿಂದ ನಾಥೂರಾಂ ಗೋಡ್ಸೆಯ ವೈಭವೀಕರಣ ಅಲ್ಲಲ್ಲಿ ಕಂಡು ಬರುತ್ತಿದೆ. ಅಷ್ಟೇ ಅಲ್ಲ, ನಾಥೂರಾಂಗೋಡ್ಸೆಯ ಮೌಲ್ಯಗಳನ್ನು ಪ್ರತಿರೋಧಿಸುತ್ತಿರುವ ಯುವ ತಲೆಮಾರುಗಳನ್ನೇ ದೇಶದ್ರೋಹಿಗಳಾಗಿ ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಇಂತಹ ಕಲುಷಿತ ರಾಜಕೀಯ ವಾತಾವರಣದಲ್ಲಿ, ಒಬ್ಬ ಗಾಂಧೀಜಿಯ ಹತ್ಯೆ ಮಾಡಿರುವುದನ್ನು ಹೆಮ್ಮೆಯಿಂದ ಘೋಷಿಸದೇ ಇನ್ನೇನು ಮಾಡುತ್ತಾನೆ?

ವಿಪರ್ಯಾಸವೆಂದರೆ ಸರಕಾರಕ್ಕೆ ಸಮಸ್ಯೆಯಾಗಿರುವುದು ಆತನ ಸಂಘಟನೆ ಎಸಗಿರುವ ‘ಗಾಂಧಿಯ ಹತ್ಯೆ’ ಅಲ್ಲ. ಬದಲಿಗೆ ‘ಗಾಂಧಿಯನ್ನು ಹತ್ಯೆ ಮಾಡಲು ಸಾಧ್ಯವಾಗುತ್ತೆ ಎಂದ ಮೇಲೆ ನಿಮ್ಮ ವಿಚಾರದಲ್ಲಿ ಆಲೋಚಿಸುವುದಕ್ಕೆ ಸಾಧ್ಯವಿಲ್ಲ ಎನ್ನುತ್ತೀರಾ?’ ಎಂದು ನೇರವಾಗಿ ಬಿಜೆಪಿ ಸರಕಾರದ ಮುಖ್ಯಮಂತ್ರಿಗೆ ಬೆದರಿಕೆ ಒಡ್ಡಿರುವುದು. ಒಂದು ರೀತಿಯಲ್ಲಿ, ಹಿಂದೂ ಮಹಾಸಭಾದ ಮುಖಂಡ ಧರ್ಮೇಂದ್ರ ಎಂಬಾತನ ಮಾತಿನಲ್ಲಿ ತರ್ಕವಿದೆ. ವಿಶ್ವವೇ ಗೌರವಿಸುವ ಮಹಾತ್ಮಾಗಾಂಧೀಜಿಯನ್ನು ಕೊಂದು ಹಾಕುವುದು ನಮಗೆ ಸಾಧ್ಯವಿದ್ದರೆ, ನೀವು ಒಂದು ಲೆಕ್ಕವೇ? ಎಂಬ ಪ್ರಶ್ನೆ ಸಹಜವಾದುದೇ ಅಲ್ಲವೇ? ಮಹಾತ್ಮ್ಮಾ ಗಾಂಧೀಜಿಗೆ ಹೋಲಿಸಿದರೆ ಬಸವರಾಜ ಬೊಮ್ಮಾಯಿ ಏನೇನು ಅಲ್ಲ. ಗಾಂಧಿಯನ್ನು ಕೊಲ್ಲುವುದು ಸರಿ ಎಂದಾದರೆ, ಗಾಂಧಿಯ ಮಟ್ಟಕ್ಕೆ ಯಾವ ರೀತಿಯಲ್ಲೂ ಏರಲು ಸಾಧ್ಯವಿಲ್ಲದ ರಾಜಕಾರಣಿಯನ್ನು ಇವರಿಗೆ ಕೊಲ್ಲುವುದು ಸಾಧ್ಯವಿಲ್ಲವೇ? ಆದುದರಿಂದ, ಗಾಂಧಿಯ ಹತ್ಯೆಯನ್ನು ಸಮರ್ಥಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಮೂಲಕ ಹತ್ಯೆ ಸಂಸ್ಕೃತಿಯನ್ನು ಕಟುವಾಗಿ ವಿರೋಧಿಸುವುದು ಸರಕಾರದ ಕರ್ತವ್ಯವಾಗಬೇಕು. ಪ್ರಕರಣ ಗಂಭೀರವಾಗುತ್ತಿದ್ದಂತೆಯೇ ಆರೋಪಿ ಕ್ಷಮೆ ಯಾಚನೆ ಮಾಡಿದ್ದಾನೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿವೆ. ಆತನ ಕ್ಷಮೆಯಾಚನೆಯೇ ಅತ್ಯಂತ ವಿಕ್ಷಿಪ್ತವಾಗಿದೆ, ವಿಲಕ್ಷಣವಾಗಿದೆ. ‘ಹತ್ಯೆ ಮಾಡಲು ಸಾಧ್ಯವಾಗುತ್ತೆ ಎಂದದ್ದು ಸಂವಿಧಾನ ವಿರೋಧ ಎಂದು ಯಾರಿಗಾದರೂ ಅನ್ನಿಸಿದರೆ ಕ್ಷಮೆಯಾಚಿಸುತ್ತೇನೆ’ ಎಂದು ಹೇಳಿದ್ದಾನೆ. ಗಾಂಧೀಜಿಯ ಹತ್ಯೆಯಾಗಲಿ ಅಥವಾ ಇನ್ನಿತರ ಯಾರನ್ನೇ ಹತ್ಯೆ ಮಾಡುವುದಾಗಲಿ ಸಂವಿಧಾನ ವಿರೋಧಿ ಮಾತ್ರವಲ್ಲ, ಮನುಷ್ಯ ವಿರೋಧಿಯಾದ ಚಿಂತನೆ ಎನ್ನುವುದು ಅರಿವಿಲ್ಲದ ಮನುಷ್ಯ, ನಾಗರಿಕ ಸಮಾಜದಲ್ಲಿ ಅದರಲ್ಲೂ ಮುಖ್ಯವಾಗಿ ಭಾರತೀಯ ಸಮಾಜದಲ್ಲಿ ಇರುವುದಕ್ಕೆ ಅನರ್ಹ. ಇಂತಹ ಭಯೋತ್ಪಾದಕ ಚಿಂತನೆಯುಳ್ಳ ಸಂಘಟ ನೆ ನಿಷೇಧಕ್ಕೆ ಅರ್ಹವಾದುದು. ಸರಕಾರ ಇನ್ನೂ ಆ ಸಂಘಟನೆಯ ಕುರಿತಂತೆ ಮೃದು ನಿಲುವು ತಾಳುತ್ತದೆ ಎಂದಾದರೆ, ಸರಕಾರವೇ ಭಯೋತ್ಪಾದಕ ಚಿಂತನೆಗಳಿಗೆ, ಹತ್ಯೆ ಸಂಸ್ಕೃತಿಗೆ ಬೆಂಬಲ ನೀಡಿದಂತಾಗುತ್ತದೆ. ಆದುದರಿಂದ, ಗಾಂಧಿ ಹತ್ಯೆಯನ್ನು ಬಹಿರಂಗವಾಗಿ ಹೆಮ್ಮೆಯಿಂದ ಸಮರ್ಥಿಸಿಕೊಂಡ, ‘ಮುಖ್ಯಮಂತ್ರಿ ಬೊಮ್ಮಾಯಿಗೂ ಅದೇ ಗತಿ ಬರಬಹುದು’ ಎಂಬ ಬೆದರಿಕೆಯನ್ನು ನೀಡಿದ ಮನುಷ್ಯನನ್ನು ಭಯೋತ್ಪಾದನಾ ಕಾಯ್ದೆಯ ಅಡಿಯಲ್ಲಿ ಬಂಧಿಸುವುದಷ್ಟೇ ಅಲ್ಲ, ಆತನ ಸಂಘಟನೆಯನ್ನು ನಿಷೇಧಿಸಿ ಅದರ ಇತರ ಮುಖಂಡರನ್ನು ಜೈಲಿಗೆ ತಳ್ಳುವ ಕೆಲಸ ನಡೆಯಬೇಕಾಗಿದೆ. ಅಫ್ಘಾನಿಸ್ತಾನದಲ್ಲಿರುವ ತಾಲಿಬಾನ್ ಬಗ್ಗೆ ಕಳವಳ ವ್ಯಕ್ತಪಡಿಸುವ ಮುನ್ನ, ತನ್ನ ಪಾದ ಬುಡದಲ್ಲಿರುವ ತಾಲಿಬಾನ್‌ಗಳ ಬಗ್ಗೆ ಯೋಚಿಸುವ ಅಗತ್ಯವಿದೆ. ಗೋಡ್ಸೆಯ ಪ್ರತಿಮೆಗಳ ಬಗ್ಗೆ ವೌನವಹಿಸುವುದೆಂದರೆ ಈ ದೇಶದಲ್ಲಿ ಭಿಂದ್ರನ್‌ವಾಲೆ, ಅಫ್ಝಲ್‌ಗುರು ಪ್ರತಿಮೆಗಳನ್ನು ನಿರ್ಮಿಸಲು ದುಷ್ಕರ್ಮಿಗಳಿಗೆ ಸ್ವತಃ ಪ್ರಚೋದನೆ ನೀಡಿದಂತೆ ಎಂಬ ಎಚ್ಚರಿಕೆಯೂ ಸರಕಾರಕ್ಕಿರಬೇಕಾಗಿದೆ.

ರಾಜ್ಯದಲ್ಲಿ ಅಕ್ರಮ ದೇವಸ್ಥಾನವೊಂದನ್ನು ನ್ಯಾಯಾಲಯದ ಆದೇಶದಂತೆ ಕೆಡವಿದ ಪ್ರಕರಣವೊಂದು ಹಿಂದೂ ಮಹಾಸಭಾ ಮುಖಂಡನ ಹೇಳಿಕೆಗೆ ಮುಖ್ಯ ಕಾರಣವಾಗಿದೆ. ಈ ಅಕ್ರಮ ದೇವಸ್ಥಾನವನ್ನು ಕೆಡವಿರುವುದರ ವಿರುದ್ಧ ಈಗಾಗಲೇ ಕೆಲವು ಸಂಘಪರಿವಾರ ಸಂಘಟನೆಗಳು ಹೋರಾಟಕ್ಕಿಳಿದಿವೆ. ಬಿಜೆಪಿಯ ಮುಖಂಡರು ತಮ್ಮದೇ ಸರಕಾರದ ವಿರುದ್ಧ ಪ್ರತಿಭಟನೆ ಮಾಡಬೇಕಾದ ಹತಾಶ ಸ್ಥಿತಿಗೆ ಬಂದು ತಲುಪಿದ್ದಾರೆ. ಒಂದಂತೂ ಸತ್ಯ. ಬಡವರ ಮನೆಗಳನ್ನು, ಅಂಗಡಿಗಳನ್ನು ಅಕ್ರಮವೆಂದು ಸರಕಾರ ನಾಶ ಮಾಡಬಹುದಾದರೆ, ಅಕ್ರಮ ದೇವಸ್ಥಾನ, ಮಸೀದಿ, ಚರ್ಚುಗಳನ್ನು ಯಾಕೆ ಕೆಡವಬಾರದು ಎಂಬ ಪ್ರಶ್ನೆ ಜನಸಾಮಾನ್ಯರೂ ಕೇಳಬಹುದು? ಬಡವರ ಮನೆಗಳನ್ನು ನಾಶ ಮಾಡಲು ಅವಕಾಶ ನೀಡಿ, ತನ್ನ ಅಕ್ರಮ ಮನೆಯನ್ನು ಉಳಿಸಿಕೊಳ್ಳಲು ಯಾವ ಧರ್ಮದ ದೇವರೂ ಬಯಸುವುದಿಲ್ಲ. ಇದನ್ನು ಎಲ್ಲ ಧರ್ಮದ ಮುಖಂಡರೂ ಅರ್ಥಮಾಡಿಕೊಳ್ಳಬೇಕಾಗಿದೆ. ಹಾಗೆಯೇ ತಮ್ಮ ತಮ್ಮ ಧರ್ಮದ ಅನುಯಾಯಿಗಳಿಗೆ ಧಾರ್ಮಿಕ ಮುಖಂಡರು ಇದನ್ನು ಮನವರಿಕೆ ಮಾಡಿಕೊಡಬೇಕಾಗಿದೆ. ಸಾರ್ವಜನಿಕರಿಗೆ ತೊಂದರೆ ಕೊಟ್ಟು ಅಕ್ರಮವಾಗಿ ಸ್ಥಾಪಿಸಿದ ದೇವಸ್ಥಾನ, ಮಸೀದಿ, ಚರ್ಚುಗಳಲ್ಲಿ ನಿರ್ವಹಿಸಿದ ಪೂಜೆ, ಪ್ರಾರ್ಥನೆ ದೇವರಿಗೆ ತಲುಪುವುದು ಕಷ್ಟ. ಖಾಲಿ ಸ್ಥಳ ಕಂಡಲ್ಲಿ ಗುಡಿ, ಮಸೀದಿಗಳನ್ನು ಸ್ಥಾಪಿಸುವುದು, ನಿಧಾನಕ್ಕೆ ಇಡೀ ಸಾರ್ವಜನಿಕ ಸ್ಥಳವನ್ನೇ ಆಪೋಷನ ತೆಗೆದುಕೊಂಡು ಸಾರ್ವಜನಿಕರಿಗೆ ತೊಂದರೆ ನೀಡುವುದು ಇತ್ತೀಚೆಗೆ ಹೆಚ್ಚುತ್ತಿದೆೆ. ಇದು ನಿಲ್ಲಬೇಕಾಗಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ನ ತೀರ್ಪಿನ ಹಿಂದಿರುವ ಉದ್ದೇಶವನ್ನು ಜನರು ಅರ್ಥ ಮಾಡಿಕೊಳ್ಳುವುದು ಅಗತ್ಯವಾಗಿದೆ. ಇದೇ ಸಂದರ್ಭದಲ್ಲಿ ಸರಕಾರವೂ ಈ ವಿಷಯದಲ್ಲಿ ಸಂಯಮದಿಂದ ಹೆಜ್ಜೆಯಿಡುವುದು ಅತ್ಯಗತ್ಯ. ದೇವರು, ಧರ್ಮವನ್ನು ವಿವಾದವಾಗಿಸಿ ಅಧಿಕಾರ ಹಿಡಿದಿರುವ ಬಿಜೆಪಿಗೆ, ಇದರ ಬಗ್ಗೆ ವಿಶೇಷ ಪಾಠದ ಅಗತ್ಯವೂ ಇಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)