varthabharthi


ಕರ್ನಾಟಕ

ಪಿಯು ಫಲಿತಾಂಶ ಪ್ರಕಟ;36 ವಿದ್ಯಾರ್ಥಿಗಳಿಗೆ ಸಂಕಷ್ಟ

ವಾರ್ತಾ ಭಾರತಿ : 20 Sep, 2021

ಬೆಂಗಳೂರು, ಸೆ.20: ಪ್ರಸ್ತುತ ಶೈಕ್ಷಣಿಕ ವಾರ್ಷಿಕ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.29.91ರಷ್ಟು ಫಲಿತಾಂಶ ಬಂದಿದ್ದು, ಬಾಲಕಿಯರೇ ಹೆಚ್ಚು ತೇರ್ಗಡೆಯಾಗಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ.ನಾಗೇಶ್ ಹೇಳಿದರು.

ಸೋಮವಾರ ವಿಧಾನಸೌಧದ ತಮ್ಮ ಕೊಠಡಿಯಲ್ಲಿ ಆಗಸ್ಟ್-ಸೆಪ್ಟೆಂಬರ್‍ನಲ್ಲಿ ನಡೆದ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದ ಅವರು, ಆ.19ರಿಂದ ಸೆ.3ರವರೆಗೆ 187 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿಯು ಪರೀಕ್ಷೆ ನಡೆಸಲಾಗಿದೆ. ಒಟ್ಟು 18,413 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ 5,507 ಅಭ್ಯರ್ಥಿಗಳು (ಶೇ.29.91) ತೇರ್ಗಡೆಗೊಂಡಿದ್ದಾರೆ ಎಂದು ಹೇಳಿದರು.

ನಾಲ್ಕು ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆಸಲಾಗಿದೆ. ಪಿಯು ಮಂಡಳಿಯಿಂದ ನೀಡಲಾಗಿದ್ದ ಫಲಿತಾಂಶವನ್ನು ತಿರಸ್ಕರಿಸಿ 592 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಅದರಲ್ಲಿ 556 ಅಭ್ಯರ್ಥಿಗಳು ತೇರ್ಗಡೆಯಾಗಿದ್ದಾರೆ. 36 ಅಭ್ಯರ್ಥಿಗಳು ಅನುತ್ತೀರ್ಣಗೊಂಡಿದ್ದಾರೆ ಎಂದು ಹೇಳಿದರು.

ಪುನರಾವರ್ತಿತ 351 ಅಭ್ಯರ್ಥಿಗಳ ಪೈಕಿ 183 ಅಭ್ಯರ್ಥಿಗಳು ತೇರ್ಗಡೆಯಾಗಿದ್ದಾರೆ. 168 ಅಭ್ಯರ್ಥಿಗಳು ಅನುತ್ತೀರ್ಣಗೊಂಡಿದ್ದಾರೆ ಎಂದ ಅವರು, 17,470 ಖಾಸಗಿ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು, 4,768 ಅಭ್ಯರ್ಥಿಗಳು ತೇರ್ಗಡೆಯಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಬಾಲಕಿಯರು ಮುಂದು: ಅದೇ ರೀತಿ, ಕಲಾ ವಿಭಾಗದಲ್ಲಿ ಶೇ.32.06ರಷ್ಟು ಅಭ್ಯರ್ಥಿಗಳು, ವಾಣಿಜ್ಯ ವಿಭಾಗದಲ್ಲಿ ಶೇ.24.98 ಮತ್ತು ವಿಜ್ಞಾನ ವಿಭಾಗದಲ್ಲಿ ಶೇ.70.83ರಷ್ಟು ಅಭ್ಯರ್ಥಿಗಳು ತೇರ್ಗಡೆಗೊಂಡಿದ್ದಾರೆ. ತೇರ್ಗಡೆಗೊಂಡವರಲ್ಲಿ ಬಾಲಕಿಯರ ಪ್ರಮಾಣ ಶೇ.36.72ರಷ್ಟು ಇದ್ದು, ಬಾಲಕರ ತೇರ್ಗಡೆ ಪ್ರಮಾಣ ಶೇ.26.02ರಷ್ಟಿದೆ ಎಂದು ವಿವರಿಸಿದರು.

ಗ್ರಾಮಾಂತರ ಪ್ರದೇಶದ ಶೇ.32.59 ಅಭ್ಯರ್ಥಿಗಳು ಮತ್ತು ನಗರ ಪ್ರದೇಶದ ಶೇ.28.62ರಷ್ಟು ಅಭ್ಯರ್ಥಿಗಳು ತೇರ್ಗಡೆಯಾಗಿದ್ದಾರೆ. ಅಲ್ಲದೆ, ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ತೆಗೆದುಕೊಂಡ ಶೇ.31.72ರಷ್ಟು ಅಭ್ಯರ್ಥಿಗಳು ಮತ್ತು ಇಂಗ್ಲಿಷ್‍ನಲ್ಲಿ ಪರೀಕ್ಷೆ ತೆಗೆದುಕೊಂಡ ಶೇ.26.08ರಷ್ಟು  ಅಭ್ಯರ್ಥಿಗಳು ತೇರ್ಗಡೆಗೊಂಡಿದ್ದಾರೆ ಎಂದರು.

ಕಲಾ ಸಂಯೋಜನೆಯಲ್ಲಿ ಗರಿಷ್ಠ 592 ಅಂಕ ಸಾಧನೆ ಮಾಡಲಾಗಿದೆ. ವಾಣಿಜ್ಯ ಸಂಯೋಜನೆಯಲ್ಲಿ ಗರಿಷ್ಠ 594 ಅಂಕ ಮತ್ತು ವಿಜ್ಞಾನ ಸಂಯೋಜನೆಯಲ್ಲಿ ಗರಿಷ್ಠ 568 ಅಂಕ ಗಳಿಸಲಾಗಿದೆ. ಉನ್ನತ ಶ್ರೇಣಿಯಲ್ಲಿ (ಶೇ.85ಕ್ಕಿಂತ ಹೆಚ್ಚು ಅಂಕ) 580 ಅಭ್ಯರ್ಥಿಗಳು ತೇರ್ಗಡೆಯಾಗಿದ್ದಾರೆ. ಪ್ರಥಮ ದರ್ಜೆಯಲ್ಲಿ 1,939, ದ್ವಿತೀಯ ದರ್ಜೆ 1,578 ಮತ್ತು ಶೇ.50ಕ್ಕಿಂತ ಕಡಿಮೆ ಅಂಕಗಳೊಂದಿಗೆ 1,410 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಹೇಳಿದರು.

ಕೋವಿಡ್-19 ಹಿನ್ನೆಲೆಯಲ್ಲಿ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ರದ್ದುಗೊಳಿಸಿದ ಕಾರಣ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಆಧಾರದ ಮೇಲೆ ಅಂಕ ನೀಡಿ ತೇರ್ಗಡೆಗೊಳಿಸಲಾಗಿತ್ತು. ಫಲಿತಾಂಶ ತೃಪ್ತಿಕರವಾಗಿಲ್ಲ ಎನ್ನುವ ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಸಲಾಗಿತ್ತು ಎಂದು ನಾಗೇಶ್ ನುಡಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್,ನಿರ್ದೇಶಕಿ ಆರ್.ಸ್ನೇಹಲ್ ಸೇರಿದಂತೆ ಪ್ರಮುಖರಿದ್ದರು.

ಉತ್ತರ ಪತ್ರಿಕೆಯ ಸ್ಕ್ಯಾನಿಂಗ್ ಪ್ರತಿ ಮತ್ತು ಮರುಮೌಲ್ಯಮಾಪನಕ್ಕೆ ಸೆ.20ರಿಂದ ಸೆ.25ರವರೆಗೆ ಅವಕಾಶವಿದೆ. ಶುಲ್ಕವನ್ನು ಆನ್‍ಲೈನ್ ಮೂಲಕ ಪಾವತಿಸಬಹುದು ಎಂದು ಸಚಿವ ನಾಗೇಶ್ ತಿಳಿಸಿದರು. 


36 ವಿದ್ಯಾರ್ಥಿಗಳಿಗೆ ಸಂಕಷ್ಟ

ಒಟ್ಟಾರೆ, 18,414 ಸಾವಿರ ವಿದ್ಯಾರ್ಥಿಗಳ ಪೈಕಿ 5,507 ಸಾವಿರ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 36 ವಿದ್ಯಾರ್ಥಿಗಳಿಗೆ ಸಂಕಷ್ಟ ಎದುರಾಗಿದೆ.

ನೀವೂ ಫಲಿತಾಶ ನೋಡಿ

ಅಭ್ಯರ್ಥಿಗಳು ವೆಬ್‍ಸೈಟ್ http://karresults.nic.in ಮೂಲಕ ಫಲಿತಾಂಶ ನೋಡಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)