varthabharthi


ಸಂಪಾದಕೀಯ

ಕ್ರೈಸ್ತ ಸನ್ಯಾಸಿನಿಯರ ವಿವೇಕ ಸರ್ವರಿಗೂ ಮಾದರಿಯಾಗಲಿ

ವಾರ್ತಾ ಭಾರತಿ : 21 Sep, 2021

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಯಾವುದೇ ಧರ್ಮಕ್ಕೆ ಸೇರಿದ ಸಮಾರಂಭ ಅಥವಾ ವೇದಿಕೆಯಿರಲಿ, ಅಲ್ಲಿ ನಿಂತು ಆಯಾ ಧರ್ಮದ ನಾಯಕನೆಂದು ಕರೆಸಿಕೊಂಡಾತ ಇನ್ನೊಂದು ಧರ್ಮದ ವಿರುದ್ಧ ಉದ್ದೇಶಪೂರ್ವಕವಾಗಿ ದ್ವೇಷದ ಮಾತುಗಳನ್ನು ಆಡುತ್ತಾನೆಂದರೆ ಅದರಿಂದ ಮೊದಲು ಹಾನಿಯಾಗುವುದು ಅವನು ಪ್ರತಿನಿಧಿಸುವ ಧರ್ಮಕ್ಕೆ. ಆದುದರಿಂದ, ಆತನ ಹೇಳಿಕೆಯ ವಿರುದ್ಧ ಮೊದಲು ಪ್ರತಿಭಟಿಸಬೇಕಾದವರು ಆ ವೇದಿಕೆಯಲ್ಲಿರುವ ಆತನ ಸಹಧರ್ಮೀಯರು. ಇತ್ತೀಚೆಗೆ ಇಂತಹದೊಂದು ಪ್ರಕರಣ ಕೇರಳದಲ್ಲಿ ನಡೆಯಿತು. ಕೊಟ್ಟಾಯಂನ ಕುರುವಿಲಂಗಡ್‌ನ ಕ್ರಿಶ್ಚಿಯನ್ ಧಾರ್ಮಿಕ ಸಭೆಯೊಂದರಲ್ಲಿ ನೆರೆದ ಅನುಯಾಯಿಗಳಿಗೆ ಧರ್ಮಗುರುವೊಬ್ಬರು ಬೈಬಲ್‌ನಲ್ಲಿರುವ ಶಾಂತಿ, ಸಹಬಾಳ್ವೆಯನ್ನು ಬೋಧಿಸುವ ಬದಲು, ದ್ವೇಷ ರಾಜಕಾರಣವನ್ನು ಬಿತ್ತುವುದಕ್ಕೆ ಧರ್ಮಸಭೆಯನ್ನು ಬಳಸಿಕೊಳ್ಳಲು ಪ್ರಯತ್ನಿಸಿದರು. ಬೈಬಲ್‌ನ ಜೊತೆಗೆ ಯಾವ ಸಂಬಂಧವೂ ಇಲ್ಲದ 'ಬೇರೆ ಸಮುದಾಯದ ಜನರ ಜೊತೆಗೆ ವ್ಯಾಪಾರ ನಡೆಸಬೇಡಿ, ಅವರ ಹೊಟೇಲ್‌ಗಳಿಗೆ ತೆರಳಿ ಊಟ ಮಾಡಬೇಡಿ' ಎಂದು ಆ ಧಾರ್ಮಿಕ ಸಭೆಯಲ್ಲಿ ಕ್ರಿಶ್ಚಿಯನ್ ಧರ್ಮಗುರುಗಳು 'ಬೋಧನೆ' ಮಾಡತೊಡಗಿದರು.

ಸಾಧಾರಣವಾಗಿ ಇಂತಹ ಭಾಷಣಗಳನ್ನು 'ಹಿಂದೂ ಸಮಾಜೋತ್ಸವ'ದ ಹೆಸರಿನಲ್ಲಿ ಸಂಘಪರಿವಾರದ ರಾಜಕೀಯ ನಾಯಕರು ಮಾಡುತ್ತಾ ಬರುತ್ತಿದ್ದಾರೆ. ಆದರೆ ಆ ಸಭೆ ಯಾವುದೇ ಹಿಂದೂ ಅಧ್ಯಾತ್ಮಿಕತೆಯನ್ನು ಅಧಿಕೃತವಾಗಿ ಪ್ರತಿನಿಧಿಸುವುದಿಲ್ಲ ಎನ್ನುವುದು ವೇದಿಕೆಯಲ್ಲಿರುವವರಿಗೂ, ಅದನ್ನು ಕೇಳುವವರಿಗೂ ಮೊದಲೇ ಗೊತ್ತಿರುತ್ತದೆ. ರಾಜಕೀಯ ದುರುದ್ದೇಶಕ್ಕಾಗಿಯೇ ಆ ಸಮಾವೇಶ ಹಮ್ಮಿಕೊಂಡಿರುವುದರಿಂದ ಅದನ್ನು ಯಾರೂ ಗಂಭೀರವಾಗಿ ಪರಿಗಣಿಸುವುದೂ ಇಲ್ಲ. ಆದರೆ ರವಿವಾರ ಕ್ರಿಶ್ಚಿಯನ್ನರ ಧಾರ್ಮಿಕ ಸಭೆಯನ್ನು ಧರ್ಮಗುರುವೊಬ್ಬರು ರಾಜಕೀಯ ದುರ್ಬಳಕೆಗೆ ಬಳಸಲು ಯತ್ನಿಸಿ ಕ್ರಿಶ್ಚಿಯನ್ ಧರ್ಮದ ಮೌಲ್ಯಗಳಿಗೇ ಅವಮಾನಿಸಿದ್ದರು. ಆದರೆ ಇದನ್ನು ವೇದಿಕೆಯಲ್ಲಿದ್ದ ಕ್ರೈಸ್ತ ಸನ್ಯಾಸಿಯರೇ ಪ್ರತಿಭಟಿಸಿ ಅಲ್ಲಿಂದ ಹೊರನಡೆದರು. ಈ ಮೂಲಕ ಅವರು ಸಭೆಯಲ್ಲಿ ಧರ್ಮಗುರು ಮಾಡುವ ಭಾಷಣಕ್ಕೂ ಕ್ರೈಸ್ತ ಧರ್ಮಕ್ಕೂ ಯಾವ ಸಂಬಂಧವೂ ಇಲ್ಲ ಎನ್ನುವ ಸಂದೇಶವನ್ನು ಕ್ರೈಸ್ತಾನುಯಾಯಿಗಳಿಗೆ ತಲುಪಿಸಿದರು ಮಾತ್ರವಲ್ಲ, ಆ ಮೂಲಕ ಬೈಬಲ್ ಮತ್ತು ಜೀಸಸ್‌ನ ಘನತೆಯನ್ನು ಎತ್ತಿ ಹಿಡಿದರು. ಇತ್ತೀಚೆಗೆ ಬಿಷಪ್‌ರೊಬ್ಬರು ಮಾಡಿದ 'ನಾರ್ಕೋಟಿಕ್ಸ್ ಅಥವಾ ಅಮಲು ದ್ರವ್ಯ ಜಿಹಾದ್'ನ ಕುರಿತ ಹೇಳಿಕೆಯ ಮುಂದುವರಿದ ಭಾಗವಾಗಿತ್ತು ಈ ಪ್ರಕರಣ. ಆದರೆ ಕ್ರೈಸ್ತ ಸನ್ಯಾಸಿನಿಯರ ಪ್ರಬುದ್ಧತೆ ಮತ್ತು ವಿವೇಕದಿಂದಾಗಿ ಧಾರ್ಮಿಕ ಸಭೆಯನ್ನು ದುರುಪಯೋಗ ಪಡಿಸುವ ಪ್ರಯತ್ನ ವಿಫಲವಾಯಿತು.

ಬಿಷಪ್‌ರೊಬ್ಬರು ನೀಡಿರುವ 'ನಾರ್ಕೋಟಿಕ್ಸ್ ಜಿಹಾದ್' ಹೇಳಿಕೆಯನ್ನೂ ಕ್ರೈಸ್ತ ಧರ್ಮದೊಳಗಿರುವ ಹಲವು ಧರ್ಮಗುರುಗಳು ಖಂಡಿಸಿರುವುದು, ಈ ಹೇಳಿಕೆ ಪೂವಾಗ್ರಹ ಪೀಡಿತವಾದುದು ಎಂದು ಹೇಳಿರುವುದನ್ನೂ ಇಲ್ಲಿ ಸ್ಮರಿಸಬಹುದು. ಬಹುಶಃ ಕೇರಳಾದ್ಯಂತ ಸುದ್ದಿಯಲ್ಲಿರುವ ಕ್ರೈಸ್ತ ಸನ್ಯಾಸಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಮತ್ತು ಇನ್ನಿತರ ಆರೋಪಗಳ ಚರ್ಚೆಯ ದಿಕ್ಕು ತಪ್ಪಿಸಲು ಬಿಷಪರು ಈ ವಿವಾದಿತ ಹೇಳಿಕೆಯನ್ನು ನೀಡಿರುವ ಸಾಧ್ಯತೆಗಳಿವೆ ಅಥವಾ ಕೆಲವು ರಾಜಕೀಯ ಶಕ್ತಿಗಳು ಅವರಿಂದ ಇಂತಹ ಕೈಸ್ತ ಚಿಂತನೆಗೆ ವಿರುದ್ಧವಾದ ಹೇಳಿಕೆಯನ್ನು ನೀಡಿಸಿರುವುದನ್ನು ಅಲ್ಲಗಳೆಯುವಂತಿಲ್ಲ. ಆದರೆ, ಇದನ್ನು ಅರಿತು ಕ್ರೈಸ್ತ ಧರ್ಮದೊಳಗಿಂದಲೇ ಅದರ ವಿರುದ್ಧ ಪ್ರತಿಭಟನಾ ಧ್ವನಿ ಮೊಳಗಿರುವುದನ್ನು ನಾವು ಗುರುತಿಸಿ, ಅದನ್ನು ಮಾದರಿಯಾಗಿಸಿಕೊಳ್ಳಬೇಕಾಗಿದೆ. ಇಂದು ಮಾದಕ ದ್ರವ್ಯಕ್ಕೆ ದೇಶ ಮಾತ್ರವಲ್ಲ, ಇಡೀ ವಿಶ್ವವೇ ಬಲಿಯಾಗುತ್ತಿದೆ. ಮಾದಕದ್ರವ್ಯ ಕ್ರೈಸ್ತ ಧರ್ಮದ ಯುವತಿಯರ ಸಮಸ್ಯೆ ಮಾತ್ರ ಅಲ್ಲ, ಇಡೀ ದೇಶದ ಯುವಜನತೆಯ ಸಮಸ್ಯೆ. ಪಂಜಾಬ್ ಸೇರಿದಂತೆ ಹಲವು ರಾಜ್ಯಗಳು ಇದರ ವಿರುದ್ಧ ಹೋರಾಟವನ್ನು ನಡೆಸುತ್ತಾ ಬಂದಿವೆ. ಇಸ್ಲಾಂ ಧರ್ಮ ಮಾದಕದ್ರವ್ಯ ಮಾತ್ರವಲ್ಲ, ಇತರ ಮದ್ಯಗಳ ಕುರಿತಂತೆ ಯಾವ ನಿಲುವನ್ನು ತಳೆಯುತ್ತದೆ ಎನ್ನುವುದನ್ನು ವಿವರಿಸುವ ಅಗತ್ಯವೂ ಇಲ್ಲ. ಎಲ್ಲ ಧರ್ಮಗಳ ಮುಖಂಡರೂ ಈ ಮಾದಕದ್ರವ್ಯದ ವಿರುದ್ಧ ಮಾತನಾಡುತ್ತಾ ಬಂದಿದ್ದಾರೆ. ಹೀಗಿರುವಾಗ, ಮಾದಕ ದ್ರವ್ಯವನ್ನು ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಬಳಸಲಾಗುತ್ತದೆ ಮತ್ತು ಒಂದು ನಿರ್ದಿಷ್ಟ ಸಮುದಾಯ ಅದನ್ನು ಬಳಸುತ್ತಿದೆ ಎನ್ನುವ ಹೇಳಿಕೆಯ ಹಿಂದಿರುವ ರಾಜಕೀಯ ಉದ್ದೇಶ ಮುಖಕ್ಕೆ ರಾಚುವಷ್ಟು ಸ್ಪಷ್ಟವಾಗಿದೆ. ಅದನ್ನು ಗಂಭೀರವಾಗಿ ಸ್ವೀಕರಿಸುವ ಅಗತ್ಯವಿಲ್ಲ. ಆದರೆ ಆ ಬಳಿಕದ ಕ್ರೈಸ್ತ ಸನ್ಯಾಸಿನಿಯರ ಮತ್ತು ಕ್ರೈಸ್ತ ಮುಖಂಡರ ನಿಲುವು ನಮಗೆಲ್ಲ ಮಾದರಿಯಾಗಬೇಕಾಗಿದೆ.

 ಧಾರ್ಮಿಕ ವೇದಿಕೆಗಳಿರುವುದು ಜನರಿಗೆ ಒಳಿತನ್ನು, ಪ್ರೀತಿ, ಸಹಬಾಳ್ವೆಯನ್ನು ಬೋಧಿಸುವುದಕ್ಕೆ. ಅಂತಹ ವೇದಿಕೆಗಳನ್ನು ದುರುಪಯೋಗ ಪಡಿಸಲು ವಿವಿಧ ರಾಜಕೀಯ ಶಕ್ತಿಗಳು ಸದಾ ಕಾಯುತ್ತಿರುತ್ತವೆ. ಎಲ್ಲ ಧರ್ಮಗಳಲ್ಲೂ ಇಂತಹ ಶಕ್ತಿಗಳಿವೆ. ಚರ್ಚ್, ಮಸೀದಿ, ದೇವಸ್ಥಾನದ ಆವರಣದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಆಡುವ ಮಾತುಗಳು ಆಯಾ ಧರ್ಮದ ಸಂದೇಶವೆಂದು ಅನುಯಾಯಿಗಳು ಭಾವನಾತ್ಮಕವಾಗಿ ಸ್ವೀಕರಿಸುತ್ತಾರೆ. ಇಂತಹ ವೇದಿಕೆಯಲ್ಲಿ ಧಾರ್ಮಿಕ ನೇತಾರನೆಂದು ಗುರುತಿಸಿಕೊಳ್ಳುವ ವ್ಯಕ್ತಿ ತಪ್ಪು ಮಾತುಗಳನ್ನು ಆಡಿದರೆ ಅದು ಸಮಾಜದ ಮೇಲೆ ಬೀರುವ ದುಷ್ಪರಿಣಾಮ ತೀವ್ರವಾದುದಾಗಿರುತ್ತದೆ. ಜೊತೆಗೆ ಆಯಾ ಧರ್ಮವೂ ಅದಕ್ಕಾಗಿ ಭಾರೀ ಬೆಲೆತೆರಬೇಕಾಗಿ ಬರಬಹುದು. ಆದುದರಿಂದ, ಇಸ್ಲಾಮ್ ಧರ್ಮದ ತತ್ವ, ಸಂದೇಶಗಳನ್ನು ಹರಡುವ ವೇದಿಕೆಯನ್ನು ಏರಿ ಯಾರಾದರೂ, ಇನ್ನೊಂದು ಧರ್ಮೀಯರ ವಿರುದ್ಧ ದ್ವೇಷದ ಮಾತುಗಳನ್ನಾಡಿದರೆ ತಕ್ಷಣ ಆ ವೇದಿಕೆಯಲ್ಲಿರುವ ಇತರ ಮುಸ್ಲಿಮ್ ಮುಖಂಡರು ಅದನ್ನು ತಡೆಯಬೇಕು ಅಥವಾ ಆ ವೇದಿಕೆಯಿಂದ ಹೊರಬರಬೇಕು. ಒಂದು ವೇಳೆ, ಆ ಮಾತುಗಳನ್ನು ಕೇಳಿಯೂ ಅವರು ವೌನವಾಗಿ ಅಲ್ಲೇ ಉಳಿದರೆ, ಪರೋಕ್ಷವಾಗಿ ಅವರೂ ಆ ಮಾತನ್ನು ಬೆಂಬಲಿಸಿದಂತಾಯಿತು. ವಿವಿಧ ಧರ್ಮಗಳ ವೇದಿಕೆಗಳನ್ನು ರಾಜಕೀಯ ಶಕ್ತಿಗಳು ದುರುಪಯೋಗ ಪಡಿಸುವ ಪ್ರಯತ್ನಗಳು ಹೆಚ್ಚುತ್ತಿರುವ ಈ ದಿನಗಳಲ್ಲಿ, ಅವುಗಳ ವಿರುದ್ಧ ಪ್ರತಿಭಟಿಸುವ ಧೈರ್ಯವನ್ನು ಆ ಧರ್ಮದೊಳಗಿನ ಸಾತ್ವಿಕ ನಾಯಕರೇ ತೋರಿಸಬೇಕು. ಧರ್ಮಗಳಿರುವುದು ಪ್ರೀತಿಸುವುದನ್ನು ಕಲಿಸುವುದಕ್ಕೇ ಹೊರತು, ದ್ವೇಷಿಸುವುದಕ್ಕಲ್ಲ ಎನ್ನುವುದನ್ನು ಜೋರು ಧ್ವನಿಯಲ್ಲಿ ವ್ಯಕ್ತ ಪಡಿಸುವ ಧಾರ್ಮಿಕ ಮುಖಂಡರ ಸಂಖ್ಯೆ ಎಲ್ಲ ಧರ್ಮಗಳಲ್ಲೂ ಹೆಚ್ಚಾಗಬೇಕು.

ಹಿಂದೂ ಧರ್ಮದಲ್ಲಿ ಹತ್ತು ಹಲವು ವೌಢ್ಯಗಳು, ಅಜ್ಞಾನಗಳು ತಾಂಡವವಾಡುತ್ತಿದ್ದಾಗ, ಆ ಧರ್ಮದೊಳಗಿಂದಲೇ ಸ್ವಾಮಿ ವಿವೇಕಾನಂದ, ನಾರಾಯಣ ಗುರು, ಮಹಾತ್ಮಾ ಗಾಂಧೀಜಿಯಂತಹ ನಾಯಕರು ಪ್ರತಿಭಟನಾ ಧ್ವನಿಯನ್ನು ಮೊಳಗಿಸಿದರು. ಆದರೆ ಇಂದು, ಹಿಂದೂ ಧರ್ಮದ ಆಧ್ಯಾತ್ಮಿಕ ವೇದಿಕೆಯಲ್ಲಿ ಸನ್ಯಾಸಿಗಳ, ಋಷಿ ಮುನಿಗಳ ಧ್ವನಿಗಿಂತ ರಾಜಕೀಯ ನಾಯಕರ ಧ್ವನಿ ಜೋರಾಗಿ ಕೇಳಿಸುತ್ತಿದೆ. ಇವುಗಳ ವಿರುದ್ಧ ಹತ್ತು ಹಲವು ಧಾರ್ಮಿಕ ನಾಯಕರು ಮಾತನಾಡುತ್ತಿದ್ದಾರಾದರೂ, ಆ ಧ್ವನಿ ಮೆದುವಾಗಿರುವ ಕಾರಣದಿಂದಲೇ, ಹಿಂದೂ ಸಮಾಜೋತ್ಸವವನ್ನು ಸಮಾಜ ಒಡೆಯುವುದಕ್ಕೆ ಬಳಸುವಲ್ಲಿ ರಾಜಕೀಯ ಶಕ್ತಿಗಳು ಯಶಸ್ವಿಯಾಗುತ್ತಿವೆ.

ಇಂದು ಅಂತಿಮವಾಗಿ ಘಾಸಿಗೊಳಿಸುವುದು ವಿವೇಕಾನಂದರು, ನಾರಾಯಣಗುರುಗಳು, ಸ್ವಾಮಿ ಪರಮಹಂಸರಂತಹ ಧಾರ್ಮಿಕ ವ್ಯಕ್ತಿಗಳು ಪ್ರತಿಪಾದಿಸಿದ ಹಿಂದೂ ಧರ್ಮದ ಮೇಲೆ. ಅಶ್ಲೀಲ ವೀಡಿಯೊಗಳಲ್ಲಿ ಕಾಣಿಸಿಕೊಂಡ ನಾಯಕರು, ಧಾರ್ಮಿಕ ವೇದಿಕೆಯನ್ನು ಬಳಸಿಕೊಂಡು, ಸಂಸ್ಕೃತಿಯ ಬಗ್ಗೆ ಭಾಷಣ ಮಾಡುವ ಸ್ಥಿತಿ ನಿರ್ಮಾಣವಾದರೆ ನಷ್ಟ ಆಯಾ ಧರ್ಮಕ್ಕೇ ಆಗಿರುತ್ತದೆ. ವಿಶ್ವದಲ್ಲಿ ಇಸ್ಲಾಮ್ ಧರ್ಮವನ್ನು ಅರಿತ ಹಿರಿಯ ಧಾರ್ಮಿಕ ವಿದ್ವಾಂಸರ ಮಾತುಗಳು ಜೋರಾಗಿ ಕೇಳಿ ಬಂದಾಗ ಮಾತ್ರ, ಐಸಿಸ್‌ನಂತಹ ಉಗ್ರವಾದಿಗಳ ಮಾತುಗಳು ತಣ್ಣಗಾಗ ತೊಡಗುತ್ತವೆ. ಇಸ್ಲಾಮ್ ಧರ್ಮವನ್ನು ರಾಜಕೀಯ ಶಕ್ತಿಗಳು ದುರ್ಬಳಕೆ ಮಾಡಿದಷ್ಟ್ಟೂ ಅದರಿಂದ ನಷ್ಟ ಇಸ್ಲಾಮ್ ಧರ್ಮಕ್ಕೆ ಆಗಿರುವುದರಿಂದ, ಅದರ ವಿರುದ್ಧ ಮೊದಲು ಪ್ರತಿಭಟಿಸಬೇಕಾದವರೂ ಇಸ್ಲಾಮ್ ಧರ್ಮದ ಪ್ರಮುಖರೇ. ಇದನ್ನು ಎಲ್ಲ ಧರ್ಮದ ವಿದ್ವಾಂಸರು, ಅಧ್ಯಾತ್ಮ ನಾಯಕರು ಅರಿತುಕೊಂಡಾಗ ಎಲ್ಲ ಧರ್ಮದ ಅನುಯಾಯಿಗಳು ಸಮಾಜದಲ್ಲಿ ಪರಸ್ಪರ ಪ್ರೀತಿ ವಿಶ್ವಾಸದೊಂದಿಗೆ ಸಹಬಾಳ್ವೆಯನ್ನು ನಡೆಸುವುದಕ್ಕೆ ಸಾಧ್ಯ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)