ಆರೋಗ್ಯ
ಇಂದು 'ವಿಶ್ವ ಅಲ್ಝೀಮರ್ಸ್ ದಿನ'
ನೆನಪು ಅಳಿಸುವ ಅಲ್ಝೀಮರ್ಸ್
ಆಸ್ಪತ್ರೆಯ ನ್ಯೂರೋಲಜಿ ಹೊರರೋಗಿ ವಿಭಾಗದಲ್ಲಿ ನಾನು ಆ ತಾಯಿ ಮತ್ತು ಆಕೆಯ ಮಗನನ್ನು ಭೇಟಿಯಾಗಿದ್ದೆ. ಜಗತ್ತಿನಲ್ಲಿ ತಾಯಿ ಹಾಗೂ ಮಕ್ಕಳ ಸಂಬಂಧ ಅತ್ಯಂತ ಶ್ರೇಷ್ಠವಾದುದು, ಭಾವನಾತ್ಮಕವಾದುದು. ಆದರೆ ತಾಯಿಯೇ ತನ್ನ ಮಗನನ್ನು ಗುರುತಿಸಲಾಗದ ಹಂತಕ್ಕೆ ತಲುಪಿದರೆ ಅದಕ್ಕಿಂತ ದುಃಖದ ಸಂಗತಿ ಇನ್ನೊಂದಿದೆಯೇ?
ಆ ತಾಯಿಯ ಮಗ ನನ್ನಲ್ಲಿ ತನ್ನ ತಾಯಿಯ ಆರೋಗ್ಯ ಸಮಸ್ಯೆಯ ಬಗ್ಗೆ ''ನನ್ನ ತಾಯಿಗೆ ಮೊದಮೊದಲು ತಮ್ಮ ಕನ್ನಡಕವನ್ನು ಮರೆಯುವುದು, ಮಾತನಾಡಲು ಚಡಪಡಿಸುವುದು ಇಂತಹ ಕೆಲವು ಸಮಸ್ಯೆಗಳಿದ್ದವು. ಆದರೆ ಈ ಸಮಸ್ಯೆಗಳು ಹೆಚ್ಚುತ್ತಾ ಹೋಗಿ ಕೊನೆಗೆ ಹಾಸಿಗೆಗೇ ಅಂಟಿಕೊಳ್ಳುತ್ತಾ ನನ್ನನ್ನೇ ಗುರುತಿಸಲು ಸಾಧ್ಯವಾಗದ ಸ್ಥಿತಿಗೆ ತಲುಪಿದ್ದಾರೆ'' ಎಂದು ವಿವರಿಸಿದರು.
ವ್ಯಕ್ತಿಯ ಬದುಕಿನಲ್ಲಿ ಆರೋಗ್ಯ ಎಷ್ಟು ಮುಖ್ಯ ಎಂಬುದನ್ನು ನನ್ನ ವೈದ್ಯಕೀಯ ವೃತ್ತಿ ಜೀವನದಲ್ಲಿ ನಾನು ಅರಿತಿದ್ದೇನೆ. ಅಲ್ಝೀಮರ್ಸ್ ರೋಗಿಗಳು ನನ್ನನ್ನು ಸಂದರ್ಶಿಸಿದಾಗ ಆರೋಗ್ಯದ ಮಹತ್ವ ಇನ್ನೂ ಹೆಚ್ಚಾಗಿ ಅರಿವಾಗುತ್ತದೆ.
ಜಗತ್ತಿನಲ್ಲಿ ಒಳ್ಳೆಯ ನೆನಪುಗಳು ಬಿಟ್ಟರೆ ಸಂಬಂಧಗಳಲ್ಲಿ ಉಳಿಯುವುದಾದರೂ ಏನು? ತಮ್ಮ ಪ್ರೀತಿಪಾತ್ರ ಕುಟುಂಬ ಸದಸ್ಯರೊಬ್ಬರು ಆ ಸಂಬಂಧಗಳನ್ನೇ ನೋಡಿ ಗುರುತಿಸಲು ಸಾಧ್ಯವಾಗದಿದ್ದರೆ ಆ ಕುಟುಂಬಕ್ಕೆ ಅದು ಬಹಳ ಕಷ್ಟಕರವಾದ ಸನ್ನಿವೇಶವಾಗಿ ಪರಿಣಮಿಸುತ್ತದೆ.
ನವೆಂಬರ್ 3, 1906 ಟ್ಯೂಬಿಂಗನ್‌ನಲ್ಲಿ ನಡೆದ '37ನೇ ಸೌತ್ ವೆಸ್ಟ್ ಜರ್ಮನಿ ಸೈಕ್ಯಾಟ್ರಿಕ್' ಸಭೆಯಲ್ಲಿ ಮನೋವೈದ್ಯ ಹಾಗೂ ನ್ಯೂರೋ ಅನಾಟಮಿಸ್ಟ್ ಆದ ಅಲಾಯ್ಸ್ ಅಲ್ಝೀಮರ್ ಎಂಬವರು 'A peculiar severe disease process of the cerebral cortex' ಎಂಬ ವರದಿಯನ್ನು ಮಂಡಿಸುತ್ತಾರೆ.
ಅಂದು ಅಲಾಯ್ಸ ಅಲ್ಝೀಮರ್ ಅವರು 50 ವರ್ಷ ವಯಸ್ಸಿನ ಮಹಿಳೆಯಲ್ಲಿ ನಿದ್ರೆ, ಗೊಂದಲ, ಸಿಟ್ಟು ಹಾಗೂ ನೆನಪು ಶಕ್ತಿಯ ತೊಂದರೆಯನ್ನು ಗಮನಿಸುತ್ತಾರೆ. ಆ ಮಹಿಳೆಯ ಮೆದುಳಿನ ಅಧ್ಯಯನದಲ್ಲಿ ಅವರು ಕೆಲವು ರೋಗಲಕ್ಷಣಗಳನ್ನು ಗುರುತಿಸುತ್ತಾರೆ. ಅಲ್ಝೀಮರ್‌ರ ಅಧ್ಯಯನವನ್ನು ನೋಡಿ ಕ್ರಾಪಲಿನ್ ಎಂಬ ಮನೋವೈದ್ಯರು 1910ರಲ್ಲಿ ಆ ಕಾಯಿಲೆಯನ್ನು ತನ್ನ ಮನೋವೈದ್ಯಕೀಯ ಪುಸ್ತಕದ ಮೂರನೇ ಆವೃತ್ತಿಯಲ್ಲಿ ಸೇರಿಸುತ್ತಾರೆ.
51 ವರ್ಷಗಳ ಕಾಲವಷ್ಟೇ ಬದುಕಿದ ಅಲ್ಝೀಮರ್ 1915ರಲ್ಲಿ ನಿಧನರಾದರು. ಇಂದು ಅವರ ಹೆಸರಿನಲ್ಲೇ 'ಅಲ್ಝೀಮರ್ಸ್' ರೋಗವು ವೈದ್ಯಕೀಯ ರಂಗದಲ್ಲಿ ಮನೆಮಾತಾಗಿದೆ. ಪ್ರತಿವರ್ಷ ಸೆಪ್ಟಂಬರ್ 21ರಂದು 'ವಿಶ್ವ ಅಲ್ಝೀಮರ್ಸ್ ದಿನ' ಎಂದು ಆಚರಿಸಲಾಗುತ್ತದೆ ಈ ರೋಗದ ಅರಿವು ಮೂಡಿಸಲು ಹಾಗೂ ಜನರಿಗೆ ಅಲ್ಝೀಮರ್ಸ್‌ನ ಲಕ್ಷಣಗಳನ್ನು ಪರಿಚಯಿಸಲು ಇಂತಹದ್ದೊಂದು ಆಚರಣೆ ವೈದ್ಯಕೀಯ ಜಗತ್ತಿಗೆ ಬಹುಮುಖ್ಯವಾಗಿದೆ. ಅಲ್ಝೀಮರ್ಸ್ ಕಾಯಿಲೆಯು ವೈದ್ಯಕೀಯ ರಂಗದಲ್ಲಿ ಬಹುದೊಡ್ಡ ಆರೋಗ್ಯ ಸಮಸ್ಯೆಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ.
ಅಲ್ಝೀಮರ್ಸ್ ಕಾಯಿಲೆಯ ರೋಗ ಲಕ್ಷಣಗಳ ಅರಿವಿದ್ದಲ್ಲಿ ರೋಗವು ಉಲ್ಬಣವಾಗುವ ಮುನ್ನವೇ ರೋಗಿಯು ವೈದ್ಯರನ್ನು ಸಂಪರ್ಕಿಸುವುದರಿಂದ ರೋಗಿಗೆ ಆ ಕಾಯಿಲೆಯಿಂದ ಬರುವಂತಹ ತೊಂದರೆಗಳು ಕಡಿಮೆಯಾಗಬಹುದು. ವಯಸ್ಸು ಹೆಚ್ಚಾದಂತೆ ಮರೆವು ಎಂಬುದು ಮನುಷ್ಯನ ಜೀವನದಲ್ಲಿ ಸಾಮಾನ್ಯ. ಆದರೆ ನಿತ್ಯದ ಕಾರ್ಯಗಳಿಗೆ ಸಮಸ್ಯೆಯಾಗುವ ಮರೆವು ಸ್ವಾಭಾವಿಕವಲ್ಲ. ಈ ಸಮಸ್ಯೆಯನ್ನು ಅವರ ಕುಟುಂಬಿಕರು ಅಥವಾ ಗೆಳೆಯರು ಕಂಡುಹಿಡಿಯಬಹುದು.
'ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್' ಅಲ್ಝೀಮರ್ಸ್ ಕಾಯಿಲೆಯ ಹತ್ತು ಲಕ್ಷಣಗಳನ್ನು ಪಟ್ಟಿ ಮಾಡಿದೆ. ಈ ಕೆಳಗಿನ ಲಕ್ಷಣಗಳು ಕಂಡುಬಂದರೆ ಸಂಬಂಧಪಟ್ಟವರು ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು.
1. ದಿನನಿತ್ಯದ ಕೆಲಸಗಳಿಗೆ ತೊಂದರೆಯಾಗುವಂತಹ ಮರೆವು, ಪದೇ ಪದೇ ಒಂದೇ ಕಾರ್ಯವನ್ನು ಮಾಡುವುದು, ತಮ್ಮ ಆಪ್ತರ ಇಲ್ಲವೇ ಕುಟುಂಬಿಕರ ಹೆಸರು ಮರೆಯುವುದು ಇತ್ಯಾದಿ.
2. ನಿತ್ಯ ಕೆಲಸಕಾರ್ಯಗಳನ್ನು ಸಮರ್ಪಕವಾಗಿ ಮಾಡಲು ಸಾಧ್ಯವಾಗದೆ ಇರುವುದು. ಉದಾಃ ಹಣದ ವಹಿವಾಟು ಮತ್ತು ಮನೆಕೆಲಸ ಇತ್ಯಾದಿಗಳ ಮರೆವು.
3. ದೈನಂದಿನ ಕೆಲಸಗಳಲ್ಲಿ ಹಾಗೂ ಉದ್ಯೋಗದ ಸ್ಥಳಗಳಲ್ಲಿ ತಾವು ಮಾಡುವ ಕೆಲಸದ ಬಗ್ಗೆ ಮರೆವು ಹೆಚ್ಚಾಗುವುದು. ಉದಾ: ಅಡುಗೆ, ವಾಹನ ಚಲಾವಣೆ, ಮೊಬೈಲ್ ಬಳಕೆ ಮತ್ತು ಹೊರಗಿನ ವ್ಯವಹಾರ ಇತ್ಯಾದಿ.
4. ತಾವಿರುವ ಸ್ಥಳ ಮತ್ತು ಸಮಯದ ಪರಿಜ್ಞಾನ ಇಲ್ಲದಿರುವುದು.
5. ತಾವು ಕಂಡ ಸಾಮಗ್ರಿಗಳ ಪರಿಚಯವಿಲ್ಲದಿರುವುದು ಮತ್ತು ತಾವು ಇರುವ ಜಾಗದಿಂದ ಇನ್ನೊಂದು ಕಡೆಗೆ ಇರುವ ಅಂತರ ತಿಳಿಯದಿರುವುದು. ಕೈಯಲ್ಲಿ ಹಿಡಿದ ವಸ್ತುಗಳು ಜಾರಿ ಬೀಳುವುದು.
6. ಮಾತನಾಡಲು ಇಲ್ಲವೇ ಬರೆಯಲು ಒಂದೊಂದು ಪದಕ್ಕಾಗಿ ತಡಕಾಡುವುದು. ಜನರ ನಡುವೆ ಬೆರೆಯಲು, ಅವರೊಂದಿಗೆ ಮಾತನಾಡಲು ಕಷ್ಟವಾಗುವುದು.
7. ಪ್ರತಿಯೊಂದು ವಸ್ತುವಿನ ಇಟ್ಟ ಸ್ಥಳ ಮರೆತು ಅದಕ್ಕಾಗಿ ಹುಡುಕುವುದು. ಉದಾ: ಕಾರಿನ ಕೀ, ಕನ್ನಡಕ, ಮನೆಯ ಕೀ ಇತ್ಯಾದಿ.
8. ತಮ್ಮ ತೀರ್ಮಾನವನ್ನು ಸರಿಯಾಗಿ ನಿರ್ವಹಿಸಲು ಆಗದಿರುವುದು. ಸುಲಭದಲ್ಲಿ ಇನ್ನೊಬ್ಬರು ಅವರನ್ನು ವಂಚಿಸಬಹುದು. ಹಣಕಾಸಿನ ವ್ಯವಹಾರವನ್ನೂ ಸರಿಯಾಗಿ ನಿರ್ವಹಿಸಲಾಗುವುದಿಲ್ಲ. ಅಲ್ಲದೆ ಸ್ವತಃ ಶುಚಿತ್ವದ ಬಗ್ಗೆಯೂ ನಿಗಾ ವಹಿಸಲಾಗುವುದಿಲ್ಲ.
9. ಸಾಮಾಜಿಕ ಕೆಲಸ ಕಾರ್ಯಗಳಿಂದ ಆದಷ್ಟು ದೂರವಿರುವುದು. ಪ್ರಾರ್ಥನಾ ಸ್ಥಳಗಳು, ಪ್ರವಾಸಿ ತಾಣಗಳಿಗೆ ಮೊದಲಿನಂತೆ ಭೇಟಿ ನೀಡುವುದನ್ನು ನಿಲ್ಲಿಸುವುದು.
10. ನಿತ್ಯದ ಚಟುವಟಿಕೆ ಮತ್ತು ವ್ಯಕ್ತಿತ್ವದಲ್ಲಿ ಬದಲಾವಣೆಯಾಗಿ ಬೇಗನೆ ಮನಸ್ಸಿನ ಸ್ಥಿಮಿತ ಕಳೆದುಕೊಳ್ಳುವುದು. ಸಂಶಯ ಮತ್ತು ಭಯಭೀತರಾಗುವುದು.
ಈ ಕಾಯಿಲೆಯ ಬಗ್ಗೆ ಜನರಲ್ಲಿ ತಿಳುವಳಿಕೆ ಕಡಿಮೆ ಇರುವುದರಿಂದ ಅದನ್ನು ಅವಮಾನ ಎಂಬಂತೆ ಪರಿಗಣಿಸಲಾಗುತ್ತದೆ. ಅಲ್ಝೀಮರ್ಸ್ ಮೆದುಳಿನಲ್ಲಿ ನೆನಪಿನ ಶಕ್ತಿ, ತೀರ್ಮಾನ ತೆಗೆದುಕೊಳ್ಳುವ, ಭಾಷೆ ನಿಯಂತ್ರಿಸುವ ಭಾಗಗಳಿಗೆ ಹಾನಿಯುಂಟು ಮಾಡುತ್ತದೆ. ಇದರಿಂದ ವ್ಯಕ್ತಿಯ ದೈನಂದಿನ ಬದುಕಿನ ಮೇಲೆ ಭಾರೀ ಪರಿಣಾಮ ಬೀರುತ್ತದೆ. ಈ ರೋಗದಿಂದಾಗಿ ಮಿದುಳಿನ ನೆನಪು ಶಕ್ತಿಯು ನಿಷ್ಕ್ರಿಯವಾಗುತ್ತದೆ. ಹಾಗಾಗಿ ದಿನನಿತ್ಯದ ಕೆಲಸ ಕಾರ್ಯಗಳಲ್ಲಿ ವ್ಯತ್ಯಯವುಂಟಾಗುತ್ತದೆ. ಧೂಮಪಾನ, ಅಧಿಕ ರಕ್ತದ ಒತ್ತಡ ಮತ್ತು ಚಟುವಟಿಕೆಗಳಿಲ್ಲದ ಜೀವನ ಕ್ರಮ ಇತ್ಯಾದಿಗಳಲ್ಲಿ ಬದಲಾವಣೆ ಮಾಡಿದರೆ ಈ ರೋಗವು ಭಾಗಶಃ ಶಮನವಾಗಬಹುದು. ಈ ಕಾಯಿಲೆಯ ಲಕ್ಷಣವುಳ್ಳವರು ಆದಷ್ಟು ಬೇಗ ವೈದ್ಯರನ್ನು ಸಂಪರ್ಕಿಸಿ ಶೀಘ್ರವಾಗಿ ಚಿಕಿತ್ಸೆಯನ್ನು ಪ್ರಾರಂಭಿಸಬೇಕು.
ವಿಶ್ವದೆಲ್ಲೆಡೆ ಈ ರೋಗದ ಬಗ್ಗೆ ಜನರಲ್ಲಿ ಆದಷ್ಟು ಜಾಗೃತಿ ಮೂಡಿಸಬೇಕಾಗಿದೆ. ಈ ಕಾರ್ಯದಲ್ಲಿ ರೋಗಿಗಳಿಗೆ ಮತ್ತು ಅವರ ಕುಟುಂಬಿಕರಿಗೆ ಸಮಾಜ ತಮ್ಮಿಂದಾದಷ್ಟು ಸಹಾಯ ನೀಡಿ ಸಹಕರಿಸಬೇಕು. ಈ ಬಾರಿಯ 'ವಿಶ್ವ ಅಲ್ಝೀಮರ್ಸ್ ದಿನ'ದಂದು ಎಲ್ಲರೂ ಒಂದಾಗಿ ಈ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸೋಣ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ