varthabharthi


ರಾಷ್ಟ್ರೀಯ

ನವೀಕರಣದ ಬಳಿಕ ಗತವೈಭವದೊಂದಿಗೆ ಪುನರಾರಂಭಕ್ಕೆ ಸಜ್ಜಾಗಿರುವ ಭಾರತದ ಅತ್ಯಂತ ಹಳೆಯ ಮಸೀದಿ

ವಾರ್ತಾ ಭಾರತಿ : 22 Sep, 2021

photo: twitter.com/AdityaMenon22

ತ್ರಿಶ್ಶೂರು(ಕೇರಳ),ಸೆ.22: ನವೀಕರಣದ ಬಳಿಕ ತನ್ನ ಗತವೈಭವವನ್ನು ಮತ್ತೆ ಪಡೆದುಕೊಂಡಿರುವ ಭಾರತದ ಮೊಟ್ಟಮೊದಲ ಮತ್ತು ಉಪಖಂಡದ ಅತ್ಯಂತ ಹಳೆಯ ಮಸೀದಿಯು ಪುನರಾರಂಭಗೊಳ್ಳಲು ಸಜ್ಜಾಗಿದೆ.

ಕ್ರಿ.ಶ. 629ರಷ್ಟು ಹಿಂದಿನ ಚೆರಾಮನ್ ಜುಮಾ ಮಸೀದಿಯು ಸರಕಾರದ ಅಧೀನದ ಮುಝಿರಿಸ್ ಹೆರಿಟೇಜ್ ಪ್ರಾಜೆಕ್ಟ್ (ಎಂಎಚ್ಪಿ) ಕೈಗೊಂಡಿದ್ದ ನವೀಕರಣ ಮತ್ತು ಸಂರಕ್ಷಣೆ ಕಾಮಗಾರಿಯ ಬಳಿಕ ತನ್ನ ಅತ್ಯುತ್ಕೃಷ್ಟ ಸೌಂದರ್ಯ ಮತ್ತು ವಿನೀತ ಶೈಲಿಯನ್ನು ಮರಳಿ ಪಡೆದುಕೊಂಡಿದೆ. ಮೇ 2019ರಲ್ಲಿ ಆರಂಭಗೊಂಡಿದ್ದ ನವೀಕರಣ ಕಾಮಗಾರಿಯು ಸುಮಾರು 30 ತಿಂಗಳುಗಳ ಕಾಲಾವಧಿಯಲ್ಲಿ ಪೂರ್ಣಗೊಂಡಿದೆ.

ತ್ರಿಶ್ಶೂರು ಜಿಲ್ಲೆಯ ಕೊಡಂಗಲ್ಲೂರು ತಾಲೂಕಿನಲ್ಲಿರುವ ಈ ಪಾರಂಪರಿಕ ಕಟ್ಟಡವನ್ನು ಅದರ ಮೂಲಸ್ವರೂಪ ಮತ್ತು ಸೌಂದರ್ಯಕ್ಕೆ ಅನುಗುಣವಾಗಿ ಮರುಸೃಷ್ಟಿಸಲಾಗಿದೆ ಎಂದು ಎಂಎಚ್ಪಿ ಆಡಳಿತ ನಿರ್ದೇಶಕ ಪಿ.ಎಂ.ನೌಷಾದ್ ತಿಳಿಸಿದರು.

ನವೀಕರಣ ಮತ್ತು ಸಂರಕ್ಷಣೆಯ ಜೊತೆ ಸುಮಾರು ಒಂದು ಕೋ.ರೂ.ವೆಚ್ಚದಲ್ಲಿ ಎರಡಂತಸ್ತಿನ ಇಸ್ಲಾಮಿಕ್ ಹೆರಿಟೇಜ್ ಮ್ಯೂಝಿಯಂ ಅನ್ನು ಸಹ ಮಸೀದಿಯ ಆವರಣದಲ್ಲಿ ನಿರ್ಮಿಸಲಾಗಿದ್ದು,ಒಳಾಂಗಣ ವಿನ್ಯಾಸ ಕಾರ್ಯ ನಡೆಯುತ್ತಿದೆ ಎಂದರು.

ಮಸೀದಿಯ ಉದ್ಘಾಟನೆಗಾಗಿ ಎಂಎಚ್ಪಿ ಅಧಿಕಾರಿಗಳು ಈಗ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ದಿನಾಂಕಕ್ಕಾಗಿ ಕಾಯುತ್ತಿದ್ದಾರೆ. ಕೋವಿಡ್ ಸ್ಥಿತಿ ಸಂಪೂರ್ಣವಾಗಿ ನಿಯಂತ್ರಣದಲ್ಲಿದ್ದರೆ ಮುಂದಿನೆರಡು ವಾರಗಳಲ್ಲಿ ಮಸೀದಿ ಉದ್ಘಾಟನೆಗೊಳ್ಳಲಿದೆ ಎಂದು ನೌಷಾದ್ ತಿಳಿಸಿದರು.

ಸ್ಥಳೀಯ ಸಂಪ್ರದಾಯದ ಪ್ರಕಾರ ಏಳನೇ ಶತಮಾನದ ಆರಂಭದಲ್ಲಿ ಕೇರಳದ ಚೆರಾ ಅರಸೊತ್ತಿಗೆಯ ದೊರೆ 'ಚೆರಾಮನ್ ಪೆರುಮಾಳ್' ಅರೇಬಿಯಕ್ಕೆ ತೆರಳಿದ್ದಾಗ ಅಲ್ಲಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದರು. ಅಲ್ಲಿಂದ ಅವರು ಭಾರತಕ್ಕೆ ಪ್ರಯಾಣಿಸಿದ್ದ ಪರ್ಷಿಯನ್ ವಿದ್ವಾಂಸ ಮಾಲಿಕ್ ಇಬ್ನ್ ದಿನಾರ್ ಜೊತೆ ಪತ್ರಗಳನ್ನು ಕಳುಹಿಸಿದ್ದರು. ದೊರೆಯ ನಿಧನದ ಐದು ವರ್ಷಗಳ ಬಳಿಕ ಕ್ರಿ.ಶ.629ರಲ್ಲಿ ದಿನಾರ್ ಈ ಮಸೀದಿಯನ್ನು ನಿರ್ಮಿಸಿದ್ದರು ಎನ್ನಲಾಗಿದೆ.

'ಹಳೆಯ ಕಟ್ಟಡದ ಅಸ್ತಿತ್ವದಲ್ಲಿದ್ದ ಭಾಗಗಳ ಸಂರಕ್ಷಣೆಗೆ ನಾವು ಹೆಚ್ಚಿನ ಗಮನವನ್ನು ನೀಡಿದ್ದೆವು ಮತ್ತು ಹಳೆಯ ಚಿತ್ರಗಳ ಆಧಾರದಲ್ಲಿ ಅದರ ನೋಟವನ್ನು ಮರುಸೃಷ್ಟಿಸಿದ್ದೇವೆ. 1974ರಲ್ಲಿ ಮುಖ್ಯ ಕಟ್ಟಡಕ್ಕೆ ಸೇರಿಸಲಾಗಿದ್ದ ಹೆಚ್ಚುವರಿ ಕಾಂಕ್ರೀಟ್ ರಚನೆಯನ್ನು ನೆಲಸಮಗೊಳಿಸಿದ್ದು,ಹಳೆಯ ಚಿತ್ರಗಳಲ್ಲಿ ಕಂಡು ಬರುತ್ತಿರುವಂತೆ ಹಂಚಿನ ಛಾವಣಿಯೊಂದಿಗೆ ಮಸೀದಿಯ ಹಳೆಯ ಸ್ವರೂಪವನ್ನು ಮರಳಿಸಿದ್ದೇವೆ' ಎಂದು ನೌಷಾದ್ ತಿಳಿಸಿದರು.

ಅದೃಷ್ಟವಶಾತ್ ಮೂಲ ಕಟ್ಟಡದ ಹಲವಾರು ಭಾಗಗಳು ಹಾಗೆಯೇ ಉಳಿದುಕೊಂಡಿದ್ದವು ಮತ್ತು ಅವುಗಳನ್ನು ನವೀಕರಿಸಿ ಸಂರಕ್ಷಿಸಲಾಗಿದೆ ಎಂದರು.

ಮಸೀದಿಯ ತಳಅಂತಸ್ತಿನಲ್ಲಿ ಕನಿಷ್ಠ ಎರಡರಿಂದ ಮೂರು ಸಾವಿರ ಜನರಿಗೆ ಅವಕಾಶ ಕಲ್ಪಿಸಬಲ್ಲ ನಮಾಝ್ ಹಾಲ್ ಅನ್ನು ಅಂದಾಜು 15ರಿಂದ 20 ಕೋ.ರೂ.ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಅದರ ಮುಖ್ಯ ಕಾಮಗಾರಿಗಳು ಪೂರ್ಣಗೊಂಡಿದ್ದು, ನೆಲಹಾಸು ಹಾಗೂ ಅಲಂಕರಣ ಕಾರ್ಯಗಳು ಬಾಕಿಯಿವೆ ಮತ್ತು ಶೀಘ್ರ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ನೌಷಾದ್ ಹೇಳಿದರು.

ನವೀಕರಣದ ಬಳಿಕ ಎಂಎಚ್ಪಿಯು ಈಗ ಚೆರಾಮಾನ್ ಜುಮಾ ಮಸೀದಿಯನ್ನು ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ 'ರಾಷ್ಟ್ರೀಯ ಯಾತ್ರಾ ಪುನರುಜ್ಜೀವನ ಮತ್ತು ಆಧ್ಯಾತ್ಮಕ ವರ್ಧನೆ ಅಭಿಯಾನ'ದಲ್ಲಿ ಸೇರಿಸಲು ಅನುಮತಿಗಾಗಿ ಕಾಯುತ್ತಿದೆ. ಈ ಸಂಬಂಧ 10 ಕೋ.ರೂ.ಗಳ ಯೋಜನೆಯ ಪ್ರಸ್ತಾವವೊಂದನ್ನು ಕೇಂದ್ರಕ್ಕೆ ಸಲ್ಲಿಸಲಾಗಿದೆ. ಮಸೀದಿಯು ರಾಷ್ಟ್ರೀಯ ಅಭಿಯಾನದಲ್ಲಿ ಸೇರ್ಪಡೆಗೊಂಡರೆ ಮಸೀದಿ ಆವರಣದಲ್ಲಿ ಸೌಲಭ್ಯ ಕೇಂದ್ರದ ನಿರ್ಮಾಣ ಮತ್ತು ಕೊಳದ ಪುನರುಜ್ಜೀವನ ಕಾರ್ಯಗಳು ಸಾಕಾರಗೊಳ್ಳಲಿವೆ. ನವೀಕೃತ ಮಸೀದಿಯನ್ನು ನೋಡಲು ರಾಜ್ಯಾದ್ಯಂತದಿಂದ ಭಾರೀ ಸಂಖ್ಯೆಯಲ್ಲಿ ಜನರು ಇಲ್ಲಿಗೆ ಬರುತ್ತಿದ್ದಾರೆ ಎಂದು ನೌಷಾದ್ ತಿಳಿಸಿದರು.

ಪ್ರಾಚೀನ ಜಗತ್ತಿನಲ್ಲಿ ಪೂರ್ವದ ಅತ್ಯಂತ ದೊಡ್ಡ ವ್ಯಾಪಾರ ಕೇಂದ್ರವೆಂಬ ಹೆಗ್ಗಳಿಕೆಯನ್ನು ಹೊಂದಿದ್ದ ಮುಝಿರಿಸ್ ನಾಗರಿಕತೆಯಲ್ಲಿ ಚೆರಾಮನ್ ಮಸೀದಿಯು ಪ್ರಮುಖ ಸ್ಥಾನವನ್ನು ಹೊಂದಿದೆ. ಸಂಬಾರ ಪದಾರ್ಥಗಳಿಂದ ಹಿಡಿದು ಅಮೂಲ್ಯ ರತ್ನಗಳವರೆಗೆ ಪ್ರತಿಯೊಂದೂ ಇಲ್ಲಿ ಮಾರಾಟವಾಗುತ್ತಿತ್ತು.
ಮಹೋದಯಪುರಂ ಅಥವಾ ಮುಯಿರಿಕ್ಕೋಡ ಎಂದೂ ಕರೆಯಲಾಗುವ ಈ ಸ್ಥಳವು ಕ್ರಿ.ಶ.9 ಮತ್ತು 12ನೇ ಶತಮಾನಗಳ ನಡುವೆ ಚೆರಾ ರಾಜಮನೆತನದ ದೊರೆಗಳಾದ 'ಪೆರುಮಾಳ್'ಗಳ ರಾಜಧಾನಿಯಾಗಿತ್ತು.

ಕ್ರಿಸ್ತಶಕದ ಆರಂಭಿಕ ಶತಮಾನಗಳಲ್ಲಿ ವ್ಯಾಪಾರಿಗಳ ವಸಾಹತು ಆಗಿದ್ದ ಕೊಡಂಗಲ್ಲೂರ್ ವಿವಿಧ ಸಂಸ್ಕೃತಿಗಳು ಮತ್ತು ಜನಾಂಗಗಳಿಗೆ ಭಾರತದ ಹೆಬ್ಬಾಗಿಲು ಆಗಿತ್ತು ಮತ್ತು ವಿವಿಧ ನಾಗರಿಕತೆಗಳ ತೊಟ್ಟಿಲಾಗಿ ಹೊರಹೊಮ್ಮಿತ್ತು. ಎಂಎಚ್ಪಿ ದಾಖಲೆಗಳಂತೆ 1341ರಲ್ಲಿ ಭಾರೀ ಪ್ರವಾಹದಿಂದಾಗಿ ಈ ಪ್ರದೇಶವು ಮುಳುಗಡೆಗೊಂಡ ಬಳಿಕ ಇದೆಲ್ಲ ಏಕಾಏಕಿ ಅಂತ್ಯ ಕಂಡಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)