varthabharthi


ಈ ಹೊತ್ತಿನ ಹೊತ್ತಿಗೆ

ವರ್ತಮಾನದ ಉರಿಗನ್ನಡಿ: ‘ಗಾಂಧಿ ನೇಯ್ದಿಟ್ಟ ಬಟ್ಟೆ’

ವಾರ್ತಾ ಭಾರತಿ : 25 Sep, 2021
ಚಾಂದ್ ಪಾಷ ಎನ್. ಎಸ್. ಬೆಂಗಳೂರು

 

ಗಾಂಧಿ ಎಂಬ ಹಳೆಯ ರೂಪಕ ಈಗಲೂ ಹೊಸಕಾವ್ಯದಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಲೇ ಇರುವ ಉರಿಗನ್ನಡಿ. ಶಾಂತಿ, ಸಹನೆ, ತಾಳ್ಮೆಯಿಂದ ಹಸಿವು, ಬಡತನ, ನೋವು, ಸಿಟ್ಟು ಹೀಗೆ ರೂಪಾಂತರಿಯಾಗಿರುವ ಗಾಂಧಿ ಈ ಸಂಕಲನದಲ್ಲಿ ಕಾಣಸಿಗಬಲ್ಲರು! ಒದ್ದೆಗಣ್ಣಿನ ಬದುಕಿನಲ್ಲಿ ಗಾಂಧಿ ನಡಿಗೆ ಮಾದರಿಯಾಗಬಲ್ಲದೆ ಎಂಬ ಅನುಮಾನವೂ ಇದೆ. ಆದರೆ, ಇಲ್ಲಿರುವ ಬಹುತೇಕ ಎಲ್ಲ ಕಾವ್ಯದಲ್ಲೂ ಗಾಂಧಿ ನೇರವಾಗಿ ಕಾಣಲಾರರು. ಅವರು ಅಮೂರ್ತ ಪ್ರತಿಮೆಯಾಗಿ ಮಾತ್ರ ಪ್ರತಿಫಲಿಸಬಲ್ಲ ಪ್ರಜ್ಞೆ!

ರಾಯಸಾಬ ಎನ್. ದರ್ಗಾದವರ ಇವರ ‘ಗಾಂಧಿ ನೇಯ್ದಿಟ್ಟ ಬಟ್ಟೆ’ ಸಂಕಲನದಲ್ಲಿ ಈ ಹೊಸಗಾಲದಲ್ಲಿ ಕಾಲ್ತುಳಿತಕ್ಕೆ ಸಿಕ್ಕಿ ನರಳಿದ ಬದುಕು, ಆತ್ಮೀಯತೆ ಇಲ್ಲದೆ ಅಸುನೀಗಿದ ಮಾನವೀಯತೆ, ದಿಕ್ಕೆಟ್ಟ ಧರ್ಮಗಳ ಹುಚ್ಚಾಟಕ್ಕೆ ನೋಯುವ ಪ್ರೇಮಕಥನ, ಅನಾಯಾಸವಾಗಿ ಸಿಗುವ ಹತಾಶೆ, ಪರಕೀಯನೆಂಬ ಅನ್ಯ ದೃಷ್ಟಿ, ಹೀಗೆ ಸಮಾಜದ ಅನೇಕ ಬದುಕಿನ ಬಣ್ಣಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಾಣಿಸುತ್ತದೆ. ಕವಿಯ ದೃಷ್ಟಿ ಹಾದ ಕಡೆಗೆಲ್ಲ ‘ಜಾತಿಯ ಸ್ಟಿಕ್ಕರ್ ಅಂಟಿಸುವ..’, ‘ಸಾಯದ ಹಸಿದ ಹೊಟ್ಟೆಗಳು’, ‘ಸಿಗರೇಟಿನ ಸುಟ್ಟ ಬೂದಿಯ ಧೂಳು..’, ‘ಹೀಗೆ ಬಂದು ಹಾಗೆ ಹೋಗುವ ಕನಸು’, ‘ಬಾನಿನಲ್ಲಿ ಕಾಣುವ ನಕ್ಷತ್ರ ಸೂತಕ..’.... ಈ ಬಗೆಯ ನಿರಾಶಾದಾಯಕ ನಿಟ್ಟುಸಿರಿದೆ, ಅದರೊಟ್ಟಿಗೆ ನೈತಿಕ ಸಿಟ್ಟೂ ಇದೆ. ಹಾಗಾಗಿಯೇ ಕವಿ ತನ್ನೊಳಗಿನ ಬಂಡಾಯದ ಮೊನಚಾದ ಕವಿತ್ವದಿಂದ ತಿವಿಯುತ್ತಲೇ ಇರುತ್ತಾನೆ. ದಾರಿ ತಪ್ಪಿದ ಸಮಾಜದ ಸಹನೆಗೆ ಸರಿ ದಾರಿ ತೋರುವ ‘ಗಾಂಧಿ’ ಎಂಬ ಫಲಕವನ್ನು ತೋರುತ್ತಲೇ ಇದ್ದಾನೆ ಅನ್ನಿಸುತ್ತದೆ!
ವರ್ತಮಾನವನ್ನೇ ವಸ್ತುವಾಗಿಸಿಕೊಂಡು ಅಥವಾ ಕೇಂದ್ರವಾಗಿಟ್ಟುಕೊಂಡು ಕಾವ್ಯ ಕಟ್ಟುವುದು ಸವಾಲಿನ ಮತ್ತು ಮಹತ್ವದ ಜವಾಬ್ದಾರಿಯ ಕೆಲಸ. ಇಂತಹ ಸಂದರ್ಭದಲ್ಲಿ ಕಾವ್ಯ ವಾಚ್ಯವಾದರೆ, ಕವಿ ತನ್ನ ಕವಿತೆಯ ಸಮೇತ ಸೆರೆಯಾಳಾಗಬೇಕಾದೀತು. ಏಕೆಂದರೆ ವರ್ತಮಾನದ ಅರಾಜಕತೆ, ಪ್ರಭುತ್ವದ ನಯವಾದ ಹಿಂಸಾ ಸಾಮಗ್ರಿ, ಧರ್ಮದ ತೀಕ್ಷ್ಣವಾದ ಆಯುಧಗಳ ಅಂಗಡಿಗಳೆಲ್ಲ ಕವಿತೆಯ ಚಲನವಲನ ಗಮನಿಸಲು ಸಿಸಿಟಿವಿಗಳನ್ನು ನೇಮಕ ಮಾಡಿರುತ್ತವೆ. ಕವಿಗೆ ಇದರ ಅರಿವಿದೆ. ಹಾಗಾಗಿ ಕವಿತೆ ತನ್ನ ಮೇಲೆ ಹೊತ್ತುಕೊಂಡ ಜವಾಬ್ದಾರಿಯನ್ನು ನಿಭಾಯಿಸಲು ‘ರೂಪಕ ಮತ್ತು ಪ್ರತಿಮೆಗಳು’ ನೆರವಾಗಿವೆ. ಈ ಸಂಕಲನದಲ್ಲಿ ಸಮರ್ಥವಾಗಿ ರೂಪಕ ಪ್ರತಿಮೆಗಳು ತಮ್ಮ ಕೆಲಸ ಮಾಡಿವೆ. ಅಲ್ಲದೆ, ಕಾವ್ಯದ ಸೂಕ್ಷ್ಮ ಸೌಂದರ್ಯ ಮತ್ತು ಅರ್ಥದ ಅಂದವನ್ನು ಹೆಚ್ಚಿಸಿಲು ಪ್ರತಿಮೆಗಳು ಸಾಕಷ್ಟು ಶ್ರಮವಹಿಸಿವೆ ಎಂದರೆ ತಪ್ಪಾಗಲಾರದು.
ಇಲ್ಲಿರುವ ಕವಿತೆಗಳ ವಿಷಯವಸ್ತು ಹೊಸದಲ್ಲದಿದ್ದರೂ, ಹೊಸದಾಗಿ ನೋಡುವ ನೋಟಕ್ರಮ ಮಾತ್ರ ಫ್ರೆಶ್ ಅನ್ನಿಸದೆ ಇರದು!
 ಈ ಯುವ ಕವಿಯ ಅಂಬೆಗಾಲು ಹೆದ್ದಾರಿಯಲ್ಲಿ ನಡೆಯಬಲ್ಲ ಸಾಮರ್ಥ್ಯ ಇರುವುದರಲ್ಲಿ ಯಾವುದೇ ಅನುಮಾನಗಳಿಲ್ಲ, ಆದರೆ ನಡೆಯುವಾಗ ಎಡವಬಹುದು ಎಂಬ ಎಚ್ಚರ ಇದ್ದರೆ ಸಾಕು. ಬೆರಳೆಣಿಕೆಯಷ್ಟು ಕವಿತೆಗಳ ಬಂಧ ಮಾತ್ರ ಕೊಂಚ ಸಡಿಲವಾಯಿತೇನೋ ಅನ್ನಿಸುವಷ್ಟರಲ್ಲಿ ಕವಿತ್ವ ತನ್ನನ್ನು ತಾನು ಸರಿಪಡಿಸಿಕೊಂಡಿದೆ ಮತ್ತು ಸರಿಪಡಿಸಿಕೊಳ್ಳುತ್ತಿದೆ. ಕೆಲವು ಕಡೆಗೆ ಕವಿತೆ ತನ್ನನ್ನೇ ತಾನು ಸಾಬೀತುಪಡಿಸಿಕೊಳ್ಳುವ ಭರದಲ್ಲಿ ನಿರೂಪಣೆಯ ನಿಲುವು ನೀರವವಾಯಿತೇನೊ ಅನ್ನಿಸಿಬಿಡುತ್ತದೆ. ‘ಕಾವ್ಯಕ್ಕಿದು ಕಾಲವಲ್ಲ’ ಎನ್ನುವುದರ ನಡುವೆಯೂ ಭರವಸೆಯ ಕವಿತೆಯು ನೇಯ್ದಿಟ್ಟ ಬಟ್ಟೆ ಓದುಗರ ಪ್ರೀತಿಯ ಮೈಗಾವಲಾಗುವುದಂತೂ ಸುಳ್ಳಲ್ಲ.
‘ಗಾಂಧಿ ನೇಯ್ದಿಟ್ಟ ಬಟ್ಟೆ’ಯನ್ನು ಓದುತ್ತಿದ್ದರೆ ನಮಗಿರಿವಿಲ್ಲದೆಯೇ ಮೈ ಮನಸ್ಸು ಆ ಬಟ್ಟೆ ತೊಟ್ಟು ಕುಣಿದುಕುಪ್ಪಳಿಸದೆ ಇರದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)