ಐಪಿಎಲ್ :ರಾಜಸ್ಥಾನದ ವಿರುದ್ಧ ಡೆಲ್ಲಿಗೆ ಭರ್ಜರಿ ಜಯ
photo: twitter
ಅಬುಧಾಬಿ: ಡೆಲ್ಲಿ ಕ್ಯಾಪಿಟಲ್ಸ್ ತಂಡ ಶನಿವಾರ ನಡೆದ ಐಪಿಎಲ್ ಟ್ವೆಂಟಿ-20 ಟೂರ್ನಿಯ 36ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು 33 ರನ್ ಗಳ ಅಂತರದಿಂದ ಮಣಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿತು. ಗೆಲ್ಲಲು 155 ರನ್ ಬೆನ್ನಟ್ಟಿದ ರಾಜಸ್ಥಾನ ತಂಡವು 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 121 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ನಾಯಕ ಸಂಜು ಸ್ಯಾಮ್ಸನ್(ಔಟಾಗದೆ 70, 53 ಎಸೆತ, 8 ಬೌಂಡರಿ, 1 ಸಿಕ್ಸರ್)ಏಕಾಂಗಿ ಹೋರಾಟ ನೀಡಿದರು. ಆದರೆ ಅವರಿಗೆ ಮತ್ತೊಂದು ಕಡೆಯಿಂದ ಸೂಕ್ತ ಬೆಂಬಲ ಸಿಗಲಿಲ್ಲ. ಮಹಿಪಾಲ್ ಲೊಮ್ರೊರ್ 19 ರನ್ ಗಳಿಸಿದರು. ಆರಂಭಿಕ ಬ್ಯಾಟ್ಸ್ ಮನ್ ಗಳಾದ ಲಿಯಾಮ್ ಲಿವಿಂಗ್ ಸ್ಟೋನ್(1), ಯಶಸ್ವಿ ಜೈಸ್ವಾಲ್(5), ಡೇವಿಡ್ ಮಿಲ್ಲರ್(7), ರಿಯಾನ್ ಪರಾಗ್(2) ಹಾಗೂ ರಾಹುಲ್ ಟೆವಾಟಿಯ(9)ವಿಫಲರಾದರು.
ಡೆಲ್ಲಿ ಪರವಾಗಿ ಅನ್ರಿಚ್ ನೋಟ್ಜೆ(2-18) ಯಶಸ್ವಿ ಬೌಲರ್ ಎನಿಸಿಕೊಂಡರು. ಆವೇಶ್ ಖಾನ್, ಆರ್.ಅಶ್ವಿನ್, ಕಾಗಿಸೊ ರಬಾಡ ಹಾಗೂ ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಪಡೆದರು.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ತಂಡ 21 ರನ್ ಗೆ 2 ವಿಕೆಟ್ ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. ಆಗ ತಂಡಕ್ಕೆ ಆಸರೆಯಾದವರು ಶ್ರೇಯಸ್ ಅಯ್ಯರ್(43) ಹಾಗೂ ನಾಯಕ ರಿಷಭ್ ಪಂತ್(24). ಇಬ್ಬರೂ 3ನೇ ವಿಕೆಟ್ ಗೆ 62 ರನ್ ಜೊತೆಯಾಟ ನಡೆಸಿದರು. ಅಯ್ಯರ್ ತಂಡದ ಪರ ಸರ್ವಾಧಿಕ ಸ್ಕೋರ್ ಗಳಿಸಿದರು. ಈ ಸಾಧನೆಗೆ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಶಿಮ್ರಾನ್ ಹೆಟ್ಮೆಯರ್ 28, ಲಲಿತ್ ಯಾದವ್ ಔಟಾಗದೆ 14 ರನ್ ಗಳಿಸಿದರು.