varthabharthi


ರಾಷ್ಟ್ರೀಯ

ಪಂಜಾಬ್ ಸಂಪುಟ ವಿಸ್ತರಣೆ: 15 ಶಾಸಕರು ಸಚಿವರಾಗಿ ಪ್ರಮಾಣವಚನ

ವಾರ್ತಾ ಭಾರತಿ : 26 Sep, 2021

ಬ್ರಹ್ಮ ಮೊಹಿಂದ್ರ, photo: ANI

ಚಂಡೀಗಢ,ಸೆ.26: ಪಂಜಾಬ್‌ನ ನೂತನ ಮುಖ್ಯಮಂತ್ರಿ ಚರಣ್ ಜಿತ್ ಚನ್ನಿ ಅವರು ತನ್ನ ಸಂಪುಟಕ್ಕೆ ಆರು ಹೊಸ ಮುಖಗಳನ್ನು ಸೇರ್ಪಡೆಗೊಳಿಸಿದ್ದಾರೆ. ಹಿಂದಿನ ಮುಖ್ಯಮಂತ್ರಿ ಅಮರೀಂದ್ ಸಿಂಗ್ ಅವರ ಸಂಪುಟದಲ್ಲಿದ್ದ ಕೆಲವರನ್ನು ಕೈಬಿಟ್ಚಿದ್ದಾರೆ. ಇದರೊಂದಿಗೆ ಚನ್ನಿ ನೇತೃತ್ವದ ಪಂಜಾಬ್ ಕಾಂಗ್ರೆಸ್ಸರಕಾರದ ಸಚಿವರ ಒಟ್ಟು ಸಂಖ್ಯೆ 15ಕ್ಕೇರಿದೆ.

ಬ್ರಹ್ಮ ಮಹೀಂದ್ರ, ಮನ್ ಪ್ರೀತ್ ಸಿಂಗ್ ಬಾದಲ್, ತೃಪ್ತ್ ರಾಜೀಂದರ್ ಸಿಂಗ್ ಬಾಜ್ವಾ, ಸುಖ್ಬಿಂದರ್ ಸಿಂಗ್ ಸರ್ಕಾರಿಯಾ, ರಾಣಾ ಗುರುಜೀತ್ ಸಿಂಗ್, ಅರುಣಾ ಚೌಧುರಿ,ರಝಿಯಾ ಸುಲ್ತಾನಾ, ಭಾರತ್ ಭೂಷಣ್ ಅಶು, ವಿಜಯೀಂದರ್ ಸಿಂಗ್ಲಾ, ರಣದೀಪ್ ಸಿಂಗ್ ನಭಾ, ರಾಜ್ ಕುಮಾರ್ ವರ್ಕಾ, ಸಂಗತ್ ಸಿಂಗ್ ಗಿಲ್ಝಿಯಾನ್,ಪರಗತ್ ಸಿಂಗ್, ಅಮರೀಂದರ್ ಸಿಗ್ ರಾಜಾ ವಾರಿಂಗ್, ಗುರುಕೃತ್ ಸಿಂಗ್ ಕೊಟ್ಲಿ ಸಚಿವರಾಗಿ ರವಿವಾರ ಪ್ರಮಾಣವಚನ ಸ್ವೀಕರಿಸಿದರು.

 ಹಿಂದೂ ಸಮುದಾಯದ ಪ್ರಮುಖ ನಾಯಕನಾಗಿರುವ ಬ್ರಹ್ಮ ಮಹೀಂದ್ರ ಅವರು ಪಂಜಾಬ್ ಕಾಂಗ್ರೆಸ್‌ನ ಅತ್ಯಂತ ಹಿರಿಯ ನಾಯಕರಾಗಿದ್ದಾರೆ. ಅಮರೀಂದರ್ ಸಿಂಗ್ ಸಂಪುಟದಲ್ಲಿ ಅವರು ಸ್ಥಳೀಯಾಡಳಿತ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು.
ಉಳಿದ ಆರು ಮಂದಿ ನೂತನ ಸಚಿವರಾದ ನಬಾ, ವರ್ಕಾ, ಗಿಲ್ಝಿಯಾನ್, ಪರಗತ್ಸಿಂಗ್,ವಾರಿಂಗ್ ಹಾಗೂ ಕೋಟ್ಲಿ ಅವರು ಇದೇ ಮೊದಲ ಬಾರಿಗೆ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಅವರ ಮೊಮ್ಮಗ ಗುರುಕೃತ್ ಸಿಂಗ್ ಕೋಟ್ಲಿ ಅವರನ್ನು ಸಂಪುಟಕ್ಕೆ ಸೇರ್ಪಡೆಗೊಳಿಸಿರುವುದಕ್ಕೆ ಪ್ರತಿಪಕ್ಷಗಳಾದ ಶಿರೋಮಣಿ ಅಕಾಲಿದಳ ಹಾಗೂ ಆಮ್ ಆದ್ಮಿ ಪಕ್ಷ ಸಂಪೂರ್ಣ ವಿರೋಧ ವ್ಯಕ್ತಪಡಿಸಿವೆ. ಫ್ರೆಂಚ್ ಮಹಿಳಾ ಪ್ರವಾಸಿಯೊಬ್ಬರ ಅಪಹರಣೆ ಹಾಗೂ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಗುರುಕ್ರೀತ್ ಸಿಂಗ್  ವಿಚಾರಣೆಯನ್ನು ಎದುರಿಸಿದ್ದರು. ಆದರೆ 1999ರಲ್ಲಿ ದೋಷಮುಕ್ತಗೊಂಡಿದ್ದರು.
ಇನ್ನೋರ್ವ ಸಚಿವ ರಾಣಾ ಗುರು ಜಿತ್ ಸಿಂಗ್ ಅವರು ಮಾಜಿ ಮುಖ್ಯಮಂತ್ರಿ ಅವರ ಅಮರೀಂದರ್ ಸಿಂಗ್ ಸಂಪುಟದಲ್ಲಿ ಸಚಿವರಾಗಿದ್ದರು. ಆದರೆ ಅಕ್ರಮ ಮರಳುಗಾರಿಕೆ ಹಗರಣದಲ್ಲಿ ಅವರು ಮತ್ತು ಕುಟುಂಬ ಸದಸ್ಯರು ಭಾಗಿಯಾದ ಆರೋಪದಲ್ಲಿ ಅವರನ್ನು ಸಂಪುಟದಿಂದ ಕೈಬಿಡಲಾಗಿತ್ತು. 

ಪಂಜಾಬ್‌ನ ಶ್ರೀಮಂತ ಶಾಸಕರಲ್ಲೊಬ್ಬರೆಂದು ಗುರು ಜಿತ್ ಸಿಂಗ್ ಪರಿಗಣಿತರಾಗಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)