ಟ್ವೆಂಟಿ-20 ಕ್ರಿಕೆಟ್: 10,000 ರನ್ ಪೂರೈಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಕೊಹ್ಲಿ
ದುಬೈ: ಭಾರತದ ನಾಯಕ ವಿರಾಟ್ ಕೊಹ್ಲಿ ರವಿವಾರ ಎಲ್ಲ ಮಾದರಿಯ ಟ್ವೆಂಟಿ-20 ಕ್ರಿಕೆಟ್ ನಲ್ಲಿ(ಅಂತರ್ ರಾಷ್ಟ್ರೀಯ, ದೇಶೀಯ, ಫ್ರಾಂಚೈಸಿ) 10,000 ರನ್ ಮೈಲುಗಲ್ಲು ತಲುಪಿದರು.
ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಐಪಿಎಲ್ ಟ್ವೆಂಟಿ-20 ಟೂರ್ನಿಯ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಟ್ವೆಂಟಿ-20 ಕ್ರಿಕೆಟ್ ಪಂದ್ಯದಲ್ಲಿ 10,000 ರನ್ ಪೂರೈಸಿದ ಭಾರತದ ಮೊದಲ ಹಾಗೂ ವಿಶ್ವದ ಐದನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಮೂಲಕ ಹೊಸ ಮೈಲುಗಲ್ಲು ಸ್ಥಾಪಿಸಿದರು.
314ನೇ ಟಿ-20 ಪಂದ್ಯವನ್ನು ಆಡಿದ ಕೊಹ್ಲಿ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಬೌಲಿಂಗ್ ನ ಸತತ ಎಸೆತಗಳಲ್ಲಿ ಬೌಂಡರಿ ಹಾಗೂ ಸಿಕ್ಸರ್ ಸಿಡಿಸಿ 10,000 ರನ್ ಪೂರೈಸಿದರು.
ಪ್ರಸ್ತುತ ಟ್ವೆಂಟಿ-20 ಕ್ರಿಕೆಟ್ ನಲ್ಲಿ ಗರಿಷ್ಠ ಸ್ಕೋರ್ ಗಳಿಸಿದ ದಾಖಲೆ 'ಯೂನಿವರ್ಸ್ ಬಾಸ್' ಖ್ಯಾತಿಯ ಕ್ರಿಸ್ ಗೇಲ್ ಹೆಸರಲ್ಲಿದೆ. ಆ ನಂತರದ ಸ್ಥಾನದಲ್ಲಿ ವಿಂಡೀಸ್‌ನ ಇನ್ನೋರ್ವ ಆಟಗಾರ ಕಿರೋನ್ ಪೊಲಾರ್ಡ್ ಅವರಿದ್ದಾರೆ. ಪಾಕಿಸ್ತಾನದ ಶುಐಬ್ ಮಲಿಕ್ ಹಾಗೂ ಆಸ್ಟ್ರೇಲಿಯದ ಡೇವಿಡ್ ವಾರ್ನರ್ ಕ್ರಮವಾಗಿ 3ನೇ ಹಾಗೂ 4ನೇ ಸ್ಥಾನದಲ್ಲಿದ್ದಾರೆ.