varthabharthi


ರಾಷ್ಟ್ರೀಯ

ಬಿಹಾರ ಬಿಜೆಪಿ ನಾಯಕನ ಹುಸಿ ಟ್ವೀಟ್ ನಿಂದ ಗೊಂದಲ ಸೃಷ್ಟಿ

ಐಸಿಜೆ ಮುಖ್ಯ ನ್ಯಾಯಮೂರ್ತಿಯಾಗಿ ದಲ್ವೀರ್ ನೇಮಕವಾಗಿಲ್ಲ: ʼದಿ ಕ್ವಿಂಟ್ʼ ನಿಂದ ‘ಸತ್ಯಶೋಧನೆ’

ವಾರ್ತಾ ಭಾರತಿ : 26 Sep, 2021

Photo: facebook

ಹೊಸದಲ್ಲಿ,ಸೆ.27: ಸುಪ್ರೀಂಕೋರ್ಟ್ ನ ಮಾಜಿ ನ್ಯಾಯಾಧೀಶ ದಲ್ವೀರ್ ಭಂಡಾರಿ ಅವರು ಹೇಗ್ನ ಅಂತಾರಾಷ್ಟ್ರೀಯ ನ್ಯಾಯಾಲಯ (ಐಸಿಜೆ)ದ ಮುಖ್ಯ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆಂದು ಬಿಹಾರದ ಬಿಜೆಪಿಯ ಸಂಘಟನಾ ಪ್ರಧಾನ ಕಾರ್ಯದರ್ಶಿ ನಾಗೇಂದ್ರನಾಥ್ ತ್ರಿಪಾಠಿ ಟ್ವೀಟ್ ಮಾಡಿದ್ದು, ಈ ಸಾಧನೆಗಾಗಿ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆಯನ್ನು ಸಲ್ಲಿಸಿದ್ದರು. ಮೋದಿಯ ಪರಿಶ್ರಮದಿಂದಾಗಿ ಜಗತ್ತಿನಾದ್ಯಂತ ವಿವಿಧ ದೇಶಗಳೊಂದಿಗೆ ಭಾರತಕ್ಕೆ ಉತ್ತಮ ಸಂಬಂಧವನ್ನು ಹೊಂದಲು ಸಾಧ್ಯವಾಗಿದೆಯೆಂದು ಅವರು ಹೇಳಿಕೊಂಡಿದ್ದರು. ಆದರೆ ದಲ್ವೀರ್ ಭಂಡಾರಿ ಅಂತಾರಾಷ್ಟ್ರೀಯ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ ನೇಮಕಗೊಂಡಿರುವುದಾಗಿ ಹೇಳುವ ಯಾವುದೇ ಸುದ್ದಿ ಕೂಡಾ ಜಾಲತಾಣಗಳಲ್ಲಿ ಅಥವಾ ಇತರ ಸುದ್ದಿಮಾಧ್ಯಮಗಳಲ್ಲಿ ಪ್ರಕಟವಾಗಿಲ್ಲವೆಂದು ದಿ ಕ್ವಿಂಟ್ ಸುದ್ದಿಜಾಲತಾಣ ವರದಿಯೊಂದರಲ್ಲಿ ತಿಳಿಸಿದೆ.

2017ರಿಂದೀಚೆಗೆ ಜಾಲತಾಣಗಳಲ್ಲಿ ಪ್ರಕಟವಾದ ಕೆಲವು ಲೇಖನಗಳಲ್ಲಿ ದಲ್ವೀರ್ ಅವರು ಅಂತಾರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರಾಗಿ ಪುನಾರಾಯ್ಕೆಗೊಂಡಿರುವ ಕುರಿತ ವಿವರಗಳಿವೆ. ಆದರೆ ಅವರು ಮುಖ್ಯ ನ್ಯಾಯಾಧೀಶರಾಗಿ ನೇಮಕವಾಗಿರುವ ಬಗ್ಗೆ ಯಾವುದೇ ವರದಿಗಳು ಬಂದಿಲ್ಲವೆಂದು ದಿ ಕ್ವಿಂಟ್ ತಿಳಿಸಿದೆ.

ಅಂತಾರಾಷ್ಟ್ರೀಯ ನ್ಯಾಯಾಲಯದ ಅಧಿಕೃತ ವರದಿಯ ಪ್ರಕಾರ, ಅಲ್ಲಿ ಯಾವುದೇ ಮುಖ್ಯ  ನ್ಯಾಯಮೂರ್ತಿ ಹುದ್ದೆಯಿರುವುದಿಲ್ಲ. ಅಧ್ಯಕ್ಷರ ಜೊತೆ 15 ಸದಸ್ಯ ಬಲದ ನ್ಯಾಯಾಧೀಶರಿದ್ದಾರೆ. ನ್ಯಾಯಾಲಯದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಇಬ್ಬರೂ ತಲಾ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸುತ್ತಾರೆ.

ಐಸಿಜೆ ಜಾಲತಾಣದ ಪ್ರಕಾರ ಪ್ರಸಕ್ತ ಅಮೆರಿಕದ ಜೋನ್. ಡೊನೋಗ್ಯುಯೆ ಹಾಗೂ ರಶ್ಯದ ಕಿರಿಲ್ ಗೆವೊರ್ಗಿಯನ್ ಅವರು 2021ರ ಫೆಬ್ರವರಿ 8ರಂದು ಅಂತಾರಾಷ್ಟ್ರೀಯ ನ್ಯಾಯಾಲಯದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ 2021ರ ಫೆಬ್ರವರಿ 8ರಂದು ಚುನಾಯಿತರಾಗಿದ್ದಾರೆ.

2012ರ ಎಪ್ರಿಲ್ 27ರಂದು ದಲ್ವೀರ್ ಅವರು ಐಸಿಜೆಯ 15 ಮಂದಿ ನ್ಯಾಯಾಧೀಶರಲ್ಲೊಬ್ಬರಾಗಿ ನೇಮಕಗೊಂಡಿದ್ದರು. 2018ರ ಫೆಬ್ರವರಿ 8ರಂದು ಅವರು 9 ವರ್ಷಗಳ ಅವಧಿಗೆ ಪುನರಾಯ್ಕೆಯಾಗಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)