varthabharthi


ರಾಷ್ಟ್ರೀಯ

1 ಲಕ್ಷ ರೂ. ಲಂಚ ಪಡೆದ ಭೋಪಾಲ್ ಏಮ್ಸ್ ಉಪನಿರ್ದೇಶಕ ಸಿಬಿಐ ಬಲೆಗೆ

ವಾರ್ತಾ ಭಾರತಿ : 27 Sep, 2021

ಭೋಪಾಲ್,ಸೆ. 27: ಔಷಧಿ ವ್ಯಾಪಾರಿಯೊಬ್ಬರ ಬಿಲ್ಗಳನ್ನು ಇತ್ಯರ್ಥಪಡಿಸಲು 1 ಲಕ್ಷ ರೂ. ಲಂಚ ಸ್ವೀಕರಿಸಿದ ಆರೋಪದಲ್ಲಿ ಇಲ್ಲಿನ ಅಖಿಲ ಭಾರತೀಯ ವೈದ್ಯ ವಿಜ್ಞಾನ ಸಂಸ್ಥೆ (ಏಐಐಎಂಎಸ್)ಯ ಉಪನಿರ್ದೇಶಕರನ್ನು ಸಿಬಿಐನ ಭ್ರಷ್ಟಾಚಾರ ನಿಗ್ರಹ ದಳವು ಶನಿವಾರ ಬಂಧಿಸಿದೆ.

ಸಂಸ್ಥೆಯ ಆಡಳಿತ ವಿಭಾಗದ ಉಪನಿರ್ದೇಶಕರಾದ ಧೀರೇಂದ್ರ ಪ್ರತಾಪ್ ಸಿಂಗ್ ಅವರು 40 ಲಕ್ಷ ರೂ.ಗಳ ಬಿಲ್ಗಳನ್ನು ಇತ್ಯರ್ಥಪಡಿಸಲು 2 ಲಕ್ಷ ರೂ. ಅಥವಾ ತನಗೆ ಪಾವತಿಯಾಗಬೇಕಿದ್ದ ಮೊತ್ತದ ಶೇ.5ರಷ್ಟು ‘ಕಮೀಶನ್’ ನೀಡಬೇಕೆಂದು ಕೇಳಿದ್ದರು ಎಂದು ಏಮ್ಸ್ಗೆ ಔಷಧಿಗಳು ಹಾಗೂ ಇತರ ಆಸ್ಪತ್ರೆ ಸಾಮಾಗ್ರಿಗಳನ್ನು ಪೂರೈಕೆ ಮಾಡಿದ್ದ ಔಷಧಿ ವ್ಯಾಪಾರಿಯೊಬ್ಬರು ಸಿಬಿಐಗೆ ದೂರು ನೀಡಿದ್ದರು.

ದೂರುದಾರ ಔಷಧಿ ವ್ಯಾಪಾರಿಯು ಭೋಪಾಲ್ನ ಏಮ್ಸ್ ಆವರಣದಲ್ಲಿ ಪ್ರಧಾನಮಂತ್ರಿ ಭಾರತೀಯ ಜನ ಔಷಧಿ ಕೇಂದ್ರವನ್ನು ನಡೆಸುತ್ತಿದ್ದರು. ಧೀರೇಂದ್ರ ಪ್ರತಾಪ್ಸಿಂಗ್ಗೆ ಬಲೆ ಬೀಸಿದ ಸಿಬಿಐ ಅಧಿಕಾರಿಗಳು, ಆತನ ಲಂಚದ ಮೊದಲನೇ ಕಂತಾಗಿ ಒಂದು ಲಕ್ಷ ರೂ. ಹಣವನ್ನು ಪಡೆಯುತ್ತಿದ್ದಾಗ ಬಂಧಿಸಿದ್ದಾರೆಂದು ಕೇಂದ್ರೀಯ ತನಿಖಾಸಂಸ್ತೆಯು ರವಿವಾರ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ತಿಳಿಸಿದೆ.

ಆರೋಪಿ ಧೀರೇಂದ್ರ ಪ್ರತಾಪ್ ಸಿಂಗ್ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು ಮುಂದಿನ ತನಿಖೆ ನಡೆಯುತ್ತಿದೆಯೆಂದು ಸಿಬಿಐ ಮೂಲಗಳು ತಿಳಿಸಿವೆ. ಸಿಬಿಐ ತಂಡಗಳು ಆನಂತರ ಧೀರೇಂದ್ರ ಪ್ರತಾಪ್ ಅವರ ಕಚೇರಿ ಹಾಗೂ ಮನೆಯ ಮೇಲೂ ಶೋಧ ಕಾರ್ಯಾಚರಣೆ ನಡೆಸಿರುವುದಾಗಿ ಮೂಲಗಳು ತಿಳಿಸಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)