varthabharthi


ರಾಷ್ಟ್ರೀಯ

ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ ತ್ರಿಪುರಾ ಸಿಎಂ

'ನ್ಯಾಯಾಂಗ ನಿಂದನೆಗೆ ಹೆದರಬೇಡಿ, ನಾನಿದ್ದೇನೆ: ಅಧಿಕಾರಿಗೆ ಭರವಸೆ ನೀಡಿದ ಬಿಪ್ಲಬ್ ದೇಬ್

ವಾರ್ತಾ ಭಾರತಿ : 27 Sep, 2021

ಹೊಸದಿಲ್ಲಿ,ಸೆ.27: ಕಾನೂನು ಮತ್ತು ಸುವ್ಯವಸ್ಥೆಯ ನಿರ್ದಿಷ್ಟ ಭಾಗ ತನ್ನ ನಿಯಂತ್ರಣದಲ್ಲಿದೆ, ಹೀಗಾಗಿ ಕರ್ತವ್ಯಗಳನ್ನು ನಿರ್ವಹಿಸುವಾಗ ನ್ಯಾಯಾಂಗ ನಿಂದನೆಯ ಬಗ್ಗೆ ಭಯ ಪಟ್ಟುಕೊಳ್ಳದಂತೆ ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ದೇಬ್ ಅವರು ನಾಗರಿಕ ಸೇವೆ ಅಧಿಕಾರಿಗಳಿಗೆ ಉಪದೇಶಿಸಿದ್ದಾರೆ.

ಶನಿವಾರ ತ್ರಿಪುರಾ ನಾಗರಿಕ ಸೇವೆ ಅಧಿಕಾರಿಗಳ 26ನೇ ದ್ವೈವಾರ್ಷಿಕ ಸಮ್ಮೇಳನದಲ್ಲಿ ಮುಖ್ಯಮಂತ್ರಿ ನೀಡಿರುವ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
‘ನ್ಯಾಯಾಂಗ ನಿಂದನೆಯ ಭೀತಿಯಿಂದಾಗಿ ನಿರ್ದಿಷ್ಟ ಕೆಲಸಗಳನ್ನು ಮಾಡಲು ತಮಗೆ ಸಾಧ್ಯವಾಗುತ್ತಿಲ್ಲ ಎಂದು ಹಲವು ಅಧಿಕಾರಿಗಳು ನನಗೆ ತಿಳಿಸಿದ್ದಾರೆ. ಅದಕ್ಕೇಕೆ ಭಯ? ನ್ಯಾಯಾಲಯವು ತನ್ನ ತೀರ್ಪನ್ನು ನೀಡುತ್ತದೆ,ಆದರೆ ಅದನ್ನು ಪೊಲೀಸರು ಅನುಷ್ಠಾನಿಸುತ್ತಾರೆ ಮತ್ತು ಪೊಲೀಸರು ನನ್ನ ನಿಯಂತ್ರಣದಲ್ಲಿದ್ದಾರೆ ’ ಎಂದು ಹೇಳಿದ ದೇಬ್,‘‘ನ್ಯಾಯಾಲಯಗಳು ಹುಲಿಗಳೇನೋ ಎಂಬಂತೆ ನಾಗರಿಕ ಸೇವೆ ಅಧಿಕಾರಿಗಳು ಹೆದರುತ್ತಿದ್ದಾರೆ. ಆದರೆ ಅದು ಹಾಗಲ್ಲ,ನಿಜವಾದ ಹುಲಿ ನಾನು. ಜನರಿಂದ ಆಯ್ಕೆಯಾದ ಸರಕಾರದ ಚುಕ್ಕಾಣಿ ನನ್ನ ಕೈಯಲ್ಲಿದೆ. ಜನರು ‘ಜನರ ಸರಕಾರದಿಂದ’ ಎಂದು ಹೇಳುತ್ತಾರೆ,ನ್ಯಾಯಾಲಯದಿಂದ ಎಂದು ಅಲ್ಲ. ನ್ಯಾಯಾಲಯ ಜನರಿಗಾಗಿ ಇದೆಯೇ ಹೊರತು ಜನರು ನ್ಯಾಯಾಲಯಕ್ಕಾಗಿ ಅಲ್ಲ ’’ಎಂದರು.

ದೇಬ್ ಹೇಳಿಕೆಯನ್ನು ಪ್ರತಿಪಕ್ಷಗಳು ಟೀಕಿಸಿವೆ. ದೇಬ್ ಹೇಳಿಕೆಯು ಅಚ್ಚರಿಯದ್ದು ಮತ್ತು ದುರದೃಷ್ಟಕರವಾಗಿದೆ. ರಾಜ್ಯದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿ ಸಂವಿಧಾನದ ಧ್ಯೇಯಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿರುವ ಹೇಳಿಕೆಯನ್ನು ಹೇಗೆ ನೀಡಬಲ್ಲರು ಎಂದು ಸಿಪಿಎಂ ತ್ರಿಪುರಾ ಕಾರ್ಯದರ್ಶಿ ಜಿತೇಂದ್ರ ಚೌಧುರಿ ಪ್ರಶ್ನಿಸಿದ್ದಾರೆ.

ಪ್ರತಿಯೊಬ್ಬ ವ್ಯಕ್ತಿಯೂ ನ್ಯಾಯಾಂಗವನ್ನು ಗೌರವಿಸಬೇಕು ಎಂದು ಹೇಳಿರುವ ತ್ರಿಪುರಾ ಕಾಂಗ್ರೆಸ್ ಅಧ್ಯಕ್ಷ ಬಿರಾಜಿತ್ ಸಿನ್ಹಾ ಅವರು, ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ನ್ಯಾಯಾಂಗ ಮತ್ತು ಕಾರ್ಯಾಂಗದ ನಡುವೆ ಘರ್ಷಣೆ ಅಪೇಕ್ಷಣಿಯವಲ್ಲ ಎಂದಿದ್ದಾರೆ.
ಆಧಾರರಹಿತ,ಅನಗತ್ಯ,ಅವಹೇಳನಕಾರಿ ಮತ್ತು ವ್ಯಂಗ್ಯ ಹೇಳಿಕೆಗಾಗಿ ದೇಬ್ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮವನ್ನು ಜರುಗಿಸುವಂತೆ ಪಶ್ಚಿಮ ಬಂಗಾಳದ ಸಚಿವ ಮೊಲೊಯ್ ಘಾಟಕ್ ಅವರು ಸರ್ವೋಚ್ಚ ನ್ಯಾಯಾಲಯವನ್ನು ಆಗ್ರಹಿಸಿದ್ದಾರೆ.
ತ್ರಿಪುರಾದ ಮುಖ್ಯಮಂತ್ರಿಗಳು ಇಡೀ ದೇಶಕ್ಕೆ ಅವಮಾನವಾಗಿದ್ದಾರೆ ಎಂದು ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಟ್ವೀಟಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)