varthabharthi


ರಾಷ್ಟ್ರೀಯ

ಸ್ವಾತಂತ್ರ ಹೋರಾಟಗಾರರ ಪಿಂಚಣಿ ತಡೆಹಿಡಿಯುವುದು ನ್ಯಾಯಸಮ್ಮತವಲ್ಲ: ಬಾಂಬೆ ಹೈಕೋರ್ಟ್

ವಾರ್ತಾ ಭಾರತಿ : 27 Sep, 2021

ಮುಂಬೈ,ಸೆ,27: ಸ್ವಾತಂತ್ರ ಹೋರಾಟಗಾರರ ಪಿಂಚಣಿಯನ್ನು ತಡೆಹಿಡಿಯುವುದು ನ್ಯಾಯಸಮ್ಮತವಲ್ಲ ಎಂದು ಹೇಳಿರುವ ಬಾಂಬೆ ಉಚ್ಚ ನ್ಯಾಯಾಲಯವು 56 ವರ್ಷಗಳ ಹಿಂದೆ ಮೃತಪಟ್ಟಿರುವ ಸ್ವಾತಂತ್ರ ಹೋರಾಟಗಾರರೋರ್ವರ 90ರ ಹರೆಯದ ಪತ್ನಿ ಸರಕಾರದ ಪಿಂಚಣಿ ಯೋಜನೆಯ ಸೌಲಭ್ಯವನ್ನು ಕೋರಿ ಸಲ್ಲಿಸಿರುವ ಅರ್ಜಿಗೆ ಉತ್ತರಿಸುವಂತೆ ಮಹಾರಾಷ್ಟ್ರ ಸರಕಾರಕ್ಕೆ ನಿರ್ದೇಶ ನೀಡಿದೆ.

‌ನ್ಯಾಯಮೂರ್ತಿಗಳಾದ ಉಜ್ಜಲ್ ಭುಯಾನ್ ಮತ್ತು ಮಾಧವ ಜಾಮ್ದಾರ್ ಅವರ ಪೀಠವು ಸೆ.24ರಂದು ಈ ಆದೇಶವನ್ನು ಹೊರಡಿಸಿದ್ದು,ಅದರ ಪ್ರತಿಯನ್ನು ಸೋಮವಾರ ಲಭ್ಯವಾಗಿಸಲಾಗಿದೆ.

ತನ್ನ ದಿವಂಗತ ಪತಿ ಸ್ವಾತಂತ್ರ ಹೋರಾಟಗಾರರಾಗಿದ್ದರಿಂದ ‘ಸ್ವತಂತ್ರತಾ ಸೈನಿಕ ಸಮ್ಮಾನ ಪಿಂಚಣಿ ಯೋಜನೆ ’ಯ ಸೌಲಭ್ಯವನ್ನು ತನಗೆ ನೀಡಬೇಕು ಎಂದು ಕೋರಿ ರಾಯಗಡ ಜಿಲ್ಲೆಯ ನಿವಾಸಿ ಶಾಲಿನಿ ಚವಾಣ್ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ಕೈಗೆತ್ತಿಕೊಂಡಿತ್ತು.

ತನ್ನ ಪತಿ ಲಕ್ಷ್ಮಣ ಚವಾಣ್ ಅವರು 1942ರ ಚಲೇಜಾವ್ ಚಳವಳಿಯಲ್ಲಿ ಭಾಗವಹಿಸಿದ್ದು,ನಂತರ ಶಿಕ್ಷೆಗೆ ಗುರಿಯಾಗಿ 1944,ಎ.17ರಿಂದ 1944,ಅ.11ರವರೆಗೆ ಮುಂಬೈನ ಬೈಕುಲಾ ಜೈಲಿನಲ್ಲಿ ಬಂಧನದಲ್ಲಿದ್ದರು. ಅವರು 1965,ಮಾ.12ರಂದು ನಿಧನರಾಗಿದ್ದಾರೆ ಎಂದು ಚವಾಣ್ ತನ್ನ ಅರ್ಜಿಯಲ್ಲಿ ತಿಳಿಸಿದ್ದರು.

ಲಕ್ಷ್ಮಣ ಚವಾಣ್ ಬಂಧನ ಮತ್ತು ಜೈಲುವಾಸದ ದಾಖಲೆಗಳು ಲಭ್ಯವಿಲ್ಲ ಎಂಬ ಕಾರಣವನ್ನು ನೀಡಿ ಅವರ ಪತ್ನಿಗೆ ಪಿಂಚಣಿ ಯೋಜನೆಯ ಲಾಭಗಳನ್ನು ನಿರಾಕರಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ ಚವಾಣ್ ಪರ ವಕೀಲ ಜಿತೇಂದ್ರ ಪಠಾಡೆ ಅವರು,ಅರ್ಜಿದಾರರು ತನ್ನ ದಿವಂಗತ ಪತಿಯ ಜೈಲುವಾಸದ ದಾಖಲೆಗಳನ್ನು 1996ರಲ್ಲಿ ರಾಜ್ಯ ಸರಕಾರಕ್ಕೆ ಸಲ್ಲಿಸಿದ್ದರು,ಆದರೆ ಬೈಕುಲಾ ಜೈಲಿನಲ್ಲಿ ಹಳೆಯ ದಾಖಲೆಗಳು ಲಭ್ಯವಿಲ್ಲದ್ದರಿಂದ ಸರಕಾರಕ್ಕೆ ಅದನ್ನು ದೃಢಪಡಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ ಎಂದು ವಾದಿಸಿದ್ದರು.

ಲಭ್ಯವಿರುವ ದಾಖಲೆಗಳಂತೆ ಲಕ್ಷ್ಮಣ ಚವಾಣ್ ಅವರು ಸ್ವಾತಂತ್ರ ಹೋರಾಟಗಾರರಾಗಿದ್ದರು ಮತ್ತು ಅರ್ಜಿದಾರರು ಅವರ ವಿಧವೆಯಾಗಿದ್ದಾರೆ ಎನ್ನುವುದರಲ್ಲಿ ಯಾವುದೇ ವಿವಾದವಿದ್ದಂತೆ ಕಂಡು ಬರುತ್ತಿಲ್ಲ. ಹೀಗಿರುವಾಗ ಸ್ಯಾತಂತ್ರ ಹೋರಾಟಗಾರರೋರ್ವರ ಪಿಂಚಣಿಯನ್ನು ತಡೆಹಿಡಿದಿರುವುದು,ಅದೂ ಇಷ್ಟೊಂದು ದೀರ್ಘ ಅವಧಿಗೆ, ನ್ಯಾಯಸಮ್ಮತವಲ್ಲ ಎಂದು ಹೇಳಿದ ನ್ಯಾಯಾಲಯವು,ಸೆ.30ರೊಳಗೆ ಚವಾಣ್ ಅವರ ಅರ್ಜಿಗೆ ಉತ್ತರಿಸುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶ ನೀಡಿದೆ.
ತನ್ನ ಮಗನ ನಿಧನದ ಬಳಿಕ ಹಿರಿಯ ನಾಗರಿಕಳಾಗಿರುವ ತನಗೆ ಯಾವುದೇ ಬೆಂಬಲವಿಲ್ಲ ಮತ್ತು ತನ್ನ ದೈನಂದಿನ ಅಗತ್ಯಗಳಿಗೂ ಕಷ್ಟ ಪಡುತ್ತಿದ್ದೇನೆ ಎಂದು ಚವಾಣ್ ಅರ್ಜಿಯಲ್ಲಿ ತಿಳಿಸಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)