ದ.ಕ.ದಲ್ಲಿ 550ಕ್ಕೂ ಅಧಿಕ ಅತಿಥಿ ಶಿಕ್ಷಕರು ಬೀದಿಪಾಲು!
► ಮನವಿಗೆ ಸಿಗದ ಸ್ಪಂದನ ► ಕೂಲಿ ಸಹಿತ ಸಣ್ಣಪುಟ್ಟ ಕೆಲಸ ಮಾಡಿ ಬದುಕುವ ಅನಿವಾರ್ಯತೆ
ಸಾಂದರ್ಭಿಕ ಚಿತ್ರ
ಲಾಕ್ ಡೌನ್ ಅನಂ(ವಾಂ)ತರ..!
ಮಂಗಳೂರು, ಸೆ.30: ಕೋವಿಡ್ ಮೊದಲ ಮತ್ತು 2ನೇ ಅಲೆಯ ಅಬ್ಬರಕ್ಕೆ ಸಿಲುಕಿದ ದ.ಕ.ಜಿಲ್ಲೆಯ 550ಕ್ಕೂ ಅಧಿಕ ಅತಿಥಿ ಶಿಕ್ಷಕರು ಬೀದಿ ಪಾಲಾಗಿದ್ದಾರೆ. ಕುಟುಂಬದ ನಿರ್ವಹಣೆಗಾಗಿ ಕೂಲಿ ಸಹಿತ ಸಣ್ಣಪುಟ್ಟ ಕೆಲಸ ಮಾಡಿ ಬದುಕುವ ಅನಿವಾರ್ಯತೆ ಎದುರಾಗಿದೆ. ಕೋವಿಡ್ ವಿಶೇಷ ಪ್ಯಾಕೇಜ್ ಘೋಷಿಸಿ ಮತ್ತು ಸಮಸ್ಯೆಗೆ ಪರಿಹಾರ ಕಲ್ಪಿಸಿ ಎಂದು ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಪದೇ ಪದೇ ಮನವಿ ಸಲ್ಲಿಸಿದರೂ ಅತಿಥಿ ಶಿಕ್ಷಕರ ಗೋಳನ್ನು ಕೇಳುವವರೇ ಇಲ್ಲದಂತಾಗಿದೆ.
ಕೋವಿಡ್-19 ಸಾಂಕ್ರಾಮಿಕ ರೋಗ ಕಾಣಿಸಿ ಕೊಂಡೊಡನೆ ಶಾಲಾ-ಕಾಲೇಜುಗಳನ್ನು ತಕ್ಷಣಕ್ಕೆ ಮುಚ್ಚಲಾಯಿತು. ಬಳಿಕ ಆನ್ಲೈನ್ ಮತ್ತು ವಿದ್ಯಾಗಮದ ಮೂಲಕ ತರಗತಿ ನಡೆಸಲಾಯಿತು. ಕೋವಿಡ್ ಪಾಸಿಟಿವಿಟಿ ದರ ಕಡಿಮೆಯಾಗುತ್ತಲೇ ಭಾಗಶಃ ಶಾಲಾ-ಕಾಲೇಜುಗಳ ಭೌತಿಕ ತರಗತಿಗಳನ್ನು ಆರಂಭಿಸಲಾಯಿತು. ಸರಕಾರಿ ಶಿಕ್ಷಕರ ಕರ್ತವ್ಯ ಶಾಲೆ ಮತ್ತು ಮನೆಯಲ್ಲಿ ಕೆಲಸ ಮಾಡಲು ಸೂಚಿಸಲಾಯಿತು. ಸಂಬಳ ನೀಡಲಾಯಿತು. ಆದರೆ, ಅತಿಥಿ ಶಿಕ್ಷಕರಿಗೆ ಅತ್ತ ಕೆಲಸವೂ ಇಲ್ಲ, ಇತ್ತ ಗೌರವಧನವೂ ಇಲ್ಲ. ಕಳೆದ ಒಂದುವರೆ ವರ್ಷದಿಂದ ಅತಿಥಿ ಶಿಕ್ಷಕರು ನಿರುದ್ಯೋಗಿಗಳಾಗಿ ಭಾಗಶಃ ಬೀದಿಪಾಲಾಗಿದ್ದಾರೆ.
ಆರಂಭದ ಒಂದೆರೆಡು ತಿಂಗಳು ಎಲ್ಲವೂ ಸರಿ ಹೋದೀತು ಎಂದು ಕಾದುಕುಳಿತ ಅತಿಥಿ ಶಿಕ್ಷಕರು ಆ ಬಳಿಕ ಕುಟುಂಬದ ನಿರ್ವಹಣೆಗಾಗಿ ತೋಟ, ಗದ್ದೆ ಸಹಿತ ಕೂಲಿ ಕೆಲಸ, ಬೀಡಿ ಕಟ್ಟುವುದು, ನಿರ್ದಿಷ್ಟ ಮನೆಗಳಿಗೆ ತೆರಳಿ ಅಡುಗೆ ಮಾಡಿಕೊಡುವುದು, ಬಟ್ಟೆಬರೆ ಒಗೆಯುವುದು, ಗುಡಿಸುವುದು, ಒರೆಸುವುದು, ಬಾಣಂತಿಯರ ಆರೈಕೆ, ಎಳೆಯ ಮಕ್ಕಳ ಲಾಲನೆ-ಪಾಲನೆ, ತರಕಾರಿ-ಹಣ್ಣು ಹಂಪಲು ಮಾರಾಟ, ಮೀನು ಮಾರಾಟ, ಟೈಲರಿಂಗ್, ಗೂಡಂಗಡಿ, ಸೇಲ್ಸ್ಮ್ಯಾನ್, ಫುಡ್ ಡೆಲಿವರಿ ಹೀಗೆ ಸಿಕ್ಕ ಸಿಕ್ಕ ಕೆಲಸ ಮಾಡುವುದು ಅನಿವಾರ್ಯವಾಗಿದೆ.
ಕೆಲವರು ಊರಲ್ಲೇ ಈ ಕೆಲಸಗಳನ್ನು ಮಾಡಿದರೆ ಇನ್ನು ಕೆಲವರು ಹೊರ ಊರಿಗೆ ತೆರಳಿ ಕೆಲಸ-ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಊರಲ್ಲೇ ಕೂಲಿ ಕೆಲಸ, ಸಣ್ಣಪುಟ್ಟ ವ್ಯಾಪಾರ ಮಾಡಿದರೆ ನಮ್ಮ ಶಿಷ್ಯರು ನಮ್ಮನ್ನು ಕೇವಲವಾಗಿ ಕಾಣುವ ಸಾಧ್ಯತೆ ಇದೆ. ಅಲ್ಲದೆ ಇದು ಮಾನಸಿಕವಾಗಿಯೂ ನಮ್ಮನ್ನು ಕುಬ್ಜರನ್ನಾಗಿಸುವ ಅಪಾಯವಿದೆ. ಹಾಗಾಗಿ ಜೀವನ ನಿರ್ವಹಣೆಗಾಗಿ ಶಿಷ್ಯಂದಿನ ಕಣ್ತಪ್ಪಿಸಿ ಏನಾದರೊಂದು ಕೆಲಸ ಮಾಡಿ ಕುಟುಂಬ ಸಾಕುವಂತಾಗಿದೆ. ನಮ್ಮಂತಹ ದಯನೀಯ ಸ್ಥಿತಿ ನಮ್ಮ ಶತ್ರುವಿಗೂ ಬಾರದಿರಲಿ ಎಂದು ಅತಿಥಿ ಶಿಕ್ಷಕರು ನೋವಿನಿಂದ ಹೇಳುತ್ತಾರೆ.
ನಾವು ನಮ್ಮ ಗೋಳನ್ನು ಎಲ್ಲರ ಬಳಿಯೂ ಹೇಳಿಯಾಗಿದೆ. ಸಚಿವರ ಸಹಿತ ಎಲ್ಲರೂ ಭರವಸೆ ನೀಡುತ್ತಾರೆಯೇ ವಿನಃ ನಮ್ಮ ಸಮಸ್ಯೆಗೆ ಯಾರೂ ಪರಿಹಾರ ಕಲ್ಪಿಸುವ ಇಚ್ಛಾಶಕ್ತಿ ತೋರಿಸುತ್ತಿಲ್ಲ ಎಂದು ಅತಿಥಿ ಶಿಕ್ಷಕರು ಅಳಲು ತೋಡಿಕೊಂಡಿದ್ದಾರೆ.
ನಮಗೂ ಹೆಂಡತಿ ಮಕ್ಕಳಿದ್ದಾರೆ, ದಿನನಿತ್ಯದ ಅಗತ್ಯ ಸಾಮಗ್ರಿ, ಗ್ಯಾಸ್, ಕರೆಂಟ್ ಬಿಲ್, ಮನೆ ಬಾಡಿಗೆ, ವೈದ್ಯಕೀಯ ವೆಚ್ಚ ಹೀಗೆ ಎಲ್ಲವನ್ನೂ ಸರಿದೂಗಿಸಲು ಸಾಧ್ಯವಿಲ್ಲದಂತಹ ಸ್ಥಿತಿಯಲ್ಲಿ ನಾವಿದ್ದೇವೆ. ಹೇಳಲು ನಾವು ಅತಿಥಿ ಶಿಕ್ಷಕರು. ಕೆಲಸ ಮಾತ್ರ ದಿನಪೂರ್ತಿ ಇದೆ. ಮಕ್ಕಳಿಗೆ ಪಾಠ ಮಾಡುವುದಲ್ಲದೆ ಅಕ್ಷರದಾಸೋಹದ ಕೆಲಸವಲ್ಲದೆ ಶಿಕ್ಷಣ ಇಲಾಖೆ ವಹಿಸಿದ ಇತರ ಕೆಲಸವನ್ನೂ ಮಾಡಬೇಕಿದೆ. ಆದರೆ, ನಮಗೆ ಸೇವಾ ಭದ್ರತೆಯೇ ಇಲ್ಲ. ನಾವು ಶಿಕ್ಷಕರು ಎಂಬುದಕ್ಕೆ ಅಧಿಕೃತ ದಾಖಲೆಪತ್ರವೂ ಕೊಡುವುದಿಲ್ಲ. ನಮ್ಮಲ್ಲಿ ಪದವಿ, ಸ್ನಾತಕೋತ್ತರ ಪದವಿ, ಬಿಇಡಿ, ಡಿಇಡಿ ಮಾಡಿದವರೂ ಇದ್ದಾರೆ. ಆದರೆ ನಮ್ಮ ಪಾಡು ಹೇಳತೀರದು ಎಂದು ಅತಿಥಿ ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
► ಯಾರಿವರು?: ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸಲು ರಾಜ್ಯ ಸರಕಾರವು ಸುಮಾರು 10 ವರ್ಷದ ಹಿಂದೆ ಅತಿಥಿ ಅಥವಾ ಅರೆಕಾಲಿಕ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭಿಸಿತ್ತು. 1ರಿಂದ 8ನೇ ತರಗತಿಯರೆಗೆ ಮಾತ್ರ ಅತಿಥಿ ಶಿಕ್ಷಕರು ಪಾಠ ಮಾಡಲು ಅವಕಾಶ ನೀಡಲಾಗಿದೆ. ದಿನದಲ್ಲಿ ಕಡ್ಡಾಯವಾಗಿ 8 ಪಿರೇಡ್ ಪಾಠ ಬೋಧಿಸಬೇಕು. 1ರಿಂದ 7ನೇ ತರಗತಿಯವರೆಗೆ ಪಾಠ ಮಾಡುವ ಶಿಕ್ಷಕರಿಗೆ ಮಾಸಿಕ 7,500 ರೂ. ಮತ್ತು 8ನೇ ತರಗತಿಗೆ ಪಾಠ ಮಾಡುವ ಶಿಕ್ಷಕರಿಗೆ ಮಾಸಿಕ 8 ಸಾವಿರ ರೂ. ಗೌರವಧನ ನೀಡಲಾಗುತ್ತದೆ, ಉಳಿದಂತೆ ಯಾವ ಸೌಲಭ್ಯವೂ ಇಲ್ಲ. ತರಗತಿಗೆ ಗೈರಾದರೆ ಗೌರವಧನದಲ್ಲಿ ಕಡಿತವೂ ಆಗುತ್ತದೆ.
ಪ್ರತೀ ವರ್ಷದ ಜೂನ್ ಅಥವಾ ಜುಲೈಯಲ್ಲಿ ಅತಿಥಿ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗುತ್ತದೆ. ನೇಮಕಾತಿಯ ಬಳಿಕ ಮಾರ್ಚ್ವರೆಗೆ ತರಗತಿ ನಡೆಸಲು ಅವಕಾಶ ಕಲ್ಪಿಸಲಾಗುತ್ತದೆ. ಆ ಬಳಿಕ ಮತ್ತೆ ನೇಮಕಾತಿ ಪ್ರಕ್ರಿಯೆ ನಡೆಯುತ್ತದೆ. ಹಾಗಾಗಿ ಈ ಶಿಕ್ಷಕರಿಗೆ ಸೇವಾ ಭದ್ರತೆ ಎಂಬುದೇ ಇಲ್ಲ. ವರ್ಷದಲ್ಲಿ 8 ಅಥವಾ 9 ತಿಂಗಳು ಮಾತ್ರ ಕೆಲಸ ನೀಡಲಾಗುತ್ತದೆ. ಕೆಲಸ ಮಾಡದ ತಿಂಗಳು ಗೌರವಧನ ಸಿಗುವುದಿಲ್ಲ.
ಐದಾರು ತಿಂಗಳಿಗೊಮ್ಮೆ ಇವರಿಗೆ ಗೌರವಧನ ನೀಡಲಾಗುತ್ತದೆ. ಜೀವನ ನಿರ್ವಹಣೆಗೆ ಸಾಲ ಮಾಡುವುದು ಅತಿಥಿ ಶಿಕ್ಷಕರಿಗೆ ಅನಿವಾರ್ಯವಾಗಿದೆ.
2020ರ ಮಾರ್ಚ್ವರೆಗೆ ಪಾಠ ಮಾಡಿದ್ದ ಇವರು ಕೋವಿಡ್-19 ಮೊದಲ ಮತ್ತು ದ್ವಿತೀಯ ಅಲೆಯ ಬಳಿಕ ಅಂದರೆ 18 ತಿಂಗಳಿನಿಂದ ಕೆಲಸ ಕಳೆದುಕೊಂಡಿದ್ದಾರೆ. ಹಾಗಾಗಿ ಈ ಅತಿಥಿ ಶಿಕ್ಷಕರು ಶಿಕ್ಷಣ ಇಲಾಖೆಯ ವ್ಯಾಪ್ತಿಯೊಳಗಿದ್ದೂ ಇಲ್ಲದಂತಾಗಿದ್ದಾರೆ.
► ಶಿಕ್ಷಕಿಯರೇ ಹೆಚ್ಚು: ದ.ಕ.ದಲ್ಲಿ ಸುಮಾರು 500 ಅತಿಥಿ ಶಿಕ್ಷಕಿಯರು ಮತ್ತು 50 ಅತಿಥಿ ಶಿಕ್ಷಕರಿದ್ದಾರೆ. ಸುಳ್ಯ, ಪುತ್ತೂರು, ಕಡಬ, ಬೆಳ್ತಂಗಡಿ ತಾಲೂಕಿನಲ್ಲೇ ಅಧಿಕ ಅತಿಥಿ ಶಿಕ್ಷಕರಿರುವುದು ಗಮನಾರ್ಹವಾಗಿದೆ. ಆರಂಭದಲ್ಲಿ ಈ ಶಿಕ್ಷಕರ ಮಧ್ಯೆ ಒಗ್ಗಟ್ಟಿರಲಿಲ್ಲ. ಬಳಿಕ ಎಲ್ಲರೂ ಸೇರಿಕೊಂಡು ಸಂಘಟನೆಯೊಂದನ್ನು ಸ್ಥಾಪಿಸಿ ಧ್ವನಿ ಎತ್ತತೊಡಗಿದ್ದಾರೆ. ಆದರೆ, ಆಳುವ ವರ್ಗಕ್ಕೆ ಈ ಧ್ವನಿ ಕೇಳಿಸದಿರುವುದು ವಿಪರ್ಯಾಸ.
ಇಬ್ಬರು ಶಿಕ್ಷಕಿಯರ ಆತ್ಮಹತ್ಯೆ?
ಕೋವಿಡ್ ಬಳಿಕ ದ.ಕ.ಜಿಲ್ಲೆಯಲ್ಲಿ ಇಬ್ಬರು ಅತಿಥಿ ಶಿಕ್ಷಕಿಯರು ಆರ್ಥಿಕ ಸಮಸ್ಯೆಯಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಅದನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳು ಅಥವಾ ಅತಿಥಿ ಶಿಕ್ಷಕರ ಸಂಘದ ಮುಖಂಡರು ಖಚಿತಪಡಿಸುತ್ತಿಲ್ಲ.
‘ಆ ವಿಷಯ ನಮ್ಮ ಗಮನಕ್ಕೆ ಬಂದಿಲ್ಲ’ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಹೇಳಿದರೆ, ‘ನಮ್ಮ ಗಮನಕ್ಕೆ ಬಂದ ತಕ್ಷಣ ನಾವು ಆ ಶಿಕ್ಷಕಿಯರ ಮನೆಯವರನ್ನು ಸಂಪರ್ಕಿಸಿ ಸಮಸ್ಯೆಯನ್ನು ಆಲಿಸಲು ಪ್ರಯತ್ನಿಸಿದ್ದೆವು. ಆದರೆ, ಸೂಕ್ತ ಸ್ಪಂದನ ಸಿಗದ ಕಾರಣ ನಾವೂ ಸುಮ್ಮನಿರಬೇಕಾಯಿತು’ ಎಂದು ಅತಿಥಿ ಶಿಕ್ಷಕರ ಸಂಘಟನೆಯ ಪದಾಧಿಕಾರಿಗಳು ಹೇಳಿದ್ದಾರೆ.
18 ತಿಂಗಳಿನಿಂದ ನಾವು ಮಕ್ಕಳಿಗೆ ಪಾಠ ಮಾಡುವುದಿಂದ ವಂಚಿತರಾಗಿದ್ದೇವೆ. ಅಂದರೆ ಅಕ್ಷರಶಃ ನಿರುದ್ಯೋಗಿಗಳಾಗಿದ್ದೇವೆ. ಸಮಸ್ಯೆಗಳ ಪರಿಹಾರಕ್ಕೆ ಪ್ರತಿಭಟನೆ ಅನಿವಾರ್ಯ ಎಂಬಂತಾಗಿದೆ. ನಾನು ಸದ್ಯ ಕೋಳಿಫಾರ್ಮ್ ತೆರೆದು ಸಂಸಾರ ಸಾಗಿಸುತ್ತಿದ್ದೇನೆ. ಬಹುತೇಕ ಅತಿಥಿ ಶಿಕ್ಷಕರು ನಿರುದ್ಯೋಗಿಗಳಾಗಿದ್ದಾರೆ. ಕೆಲವರು ಸಿಕ್ಕಿದ ಕೆಲಸ ಮಾಡುತ್ತಾರೆ. ಒಟ್ಟಿನಲ್ಲಿ ನಮ್ಮಬದುಕು ಶೋಚನೀಯವಾಗಿದೆ.
ಯತೀಶ್ ಕುಮಾರ್ ಕೆ.ಎಂ., ಕಾರ್ಯದರ್ಶಿ, ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘ, ದ.ಕ.ಜಿಲ್ಲೆ
ಈ ವರ್ಷ ಅತಿಥಿ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿ ಸರಕಾರದಿಂದ ಆದೇಶ ಬಂದಿಲ್ಲ. ಮಂಜೂರಾತಿಗೆ ಆದೇಶ ಬಂದೊಡನೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಇನ್ನು ಕೋವಿಡ್ ಬಳಿಕ ಆರ್ಥಿಕ ಸಮಸ್ಯೆಗೆ ಸಿಲುಕಿ ಜಿಲ್ಲೆಯಲ್ಲಿ ಶಿಕ್ಷಕಿಯರು ಆತ್ಮಹತ್ಯೆ ಮಾಡಿಕೊಂಡ ಬಗ್ಗೆಯೂ ನಮಗೆ ಯಾವುದೇ ಮಾಹಿತಿ ಇಲ್ಲ.
ಮಲ್ಲೇಸ್ವಾಮಿ, ಡಿಸಿಪಿಐ, ದ.ಕ.ಜಿಲ್ಲೆ
ಹತ್ತು ವರ್ಷದಿಂದ ಅತಿಥಿ/ಅರೆಕಾಲಿಕ ಶಿಕ್ಷಕರಾಗಿ ಕೆಲಸ ಮಾಡುತ್ತಿರುವ ನಮಗೆ ಗೌರವಧನವಲ್ಲದೆ ಸರಕಾರದ ಬೇರೆ ಯಾವ ಸೌಲಭ್ಯವೂ ಇಲ್ಲ. ಕೋವಿಡ್ ಬಂದ ಬಳಿಕವಂತೂ ನಮ್ಮ ಸ್ಥಿತಿ ಶೋಚನೀಯವಾಗಿದೆ. ನಮ್ಮನ್ನು ಯಾರೂ ಕೇಳುವವರು ಇಲ್ಲವಾಗಿದೆ. ಪದೇ ಪದೇ ಮನವಿ ಮಾಡಿದರೂ ಸ್ಪಂದನ ಇಲ್ಲ. ಭರವಸೆ ನೀಡಿ ಸುಮ್ಮನಿರುತ್ತಾರೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಸರಕಾರ ಕೆಲವು ವರ್ಗದವರಿಗೆ ಪ್ಯಾಕೇಜ್ ಘೋಷಿಸಿತ್ತು. ಆದರೆ, ನಮಗೆ ಯಾವುದೇ ರೀತಿಯ ನೆರವು ನೀಡಲೇ ಇಲ್ಲ. ಸರಕಾರ ಇನ್ನಾದರೂ ನಮಗೆ ಕೋವಿಡ್ ಪ್ಯಾಕೇಜ್ ಬಿಡುಗಡೆಗೊಳಿಸಬೇಕು. ಉದ್ಯೋಗ ಖಾಯಂಗೊಳಿಸಬೇಕು. ಸೇವಾ ಭದ್ರತೆ ನೀಡಬೇಕು.
ಚಿತ್ರಲೇಖಾ ಕೆ., ಅಧ್ಯಕ್ಷೆ, ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘ, ದ.ಕ.ಜಿಲ್ಲೆ