ಕಾಶ್ಮೀರ ಕುರಿತು ಗೃಹ ಸಚಿವಾಲಯದ ವರದಿ ಕಟ್ಟು ಕಥೆಗಳಿಂದ ಕೂಡಿದೆ: ಗುಪ್ಕರ್ ಮೈತ್ರಿಕೂಟ
ಶ್ರೀನಗರ,ಅ.1: ಜಮ್ಮು-ಕಾಶ್ಮೀರದ ಐದು ಪ್ರಾದೇಶಿಕ ಪಕ್ಷಗಳ ಮೈತ್ರಿಕೂಟವಾಗಿರುವ ಗುಪ್ಕರ್ ಅಲಯನ್ಸ್ ಶುಕ್ರವಾರ ಪ್ರದೇಶದ ಕುರಿತು ಕೇಂದ್ರ ಗೃಹ ಸಚಿವಾಲಯದ ವರದಿಯು ಕಪೋಲಕಲ್ಪಿತವಾಗಿದೆ ಮತ್ತು ಕಟ್ಟುಕಥೆಗಳಿಂದ ಕೂಡಿದೆ ಎಂದು ಬಣ್ಣಿಸಿದೆ.
‘ಒಂದು ರಾಷ್ಟ್ರ,ಒಂದು ಕಾನೂನು,ಒಂದು ಚಿಹ್ನೆಯ ಕನಸು ನನಸಾಗಿದೆ ’ಶೀರ್ಷಿಕೆಯ ಸರಕಾರದ ವರದಿಯು ವಾಸ್ತವದಿಂದ ದೂರವಾಗಿದೆ. ಜಮ್ಮು-ಕಾಶ್ಮೀರದ ಜನತೆಯ ಅಧಿಕಾರಗಳನ್ನು ವ್ಯವಸ್ಥಿತವಾಗಿ ಕಿತ್ತುಕೊಳ್ಳಲಾಗುತ್ತಿದೆ ಎನ್ನುವುದು ವಾಸ್ತವವಾಗಿದ್ದು,ಅಧಿಕಾರಶಾಹಿಯ ಆಡಳಿತದ ಮೂಲಕ ಇದು ಮುಂದುವರಿದಿದೆ ಎಂದು ಗುಪ್ಕರ್ ಮೈತ್ರಿಕೂಟದ ವಕ್ತಾರ ಎಂ.ವೈ.ತಾರಿಗಾಮಿ ಅವರು ಇಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ ಹೇಳಿದರು.
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಒದಗಿಸಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸುವ ಮೂಲಕ ಬಿಜೆಪಿಯು ಜನರ ನೋವನ್ನು ನಿವಾರಿಸಿದೆ ಎಂದು ಸೆ.20ರಂದು ಬಿಡುಗಡೆಗೊಳಿಸಲಾದ ವರದಿಯು ಹೇಳಿಕೊಂಡಿತ್ತು.
ಸರಕಾರವು ಹೊಸ ಕೈಗಾರಿಕೆಗಳನ್ನು ಸ್ಥಾಪಿಸಿದೆ, ಉದ್ಯೋಗಾವಕಾಶಗಳನ್ನು ಹೆಚ್ಚಿಸಿದೆ,ಭಯೋತ್ಪಾದಕ ಘಟನೆಗಳನ್ನು ತಗ್ಗಿಸಿದೆ,ಭ್ರಷ್ಟಾಚಾರವನ್ನು ನಿರ್ಮೂಲಿಸಿದೆ ಮತ್ತು ಜನರ ಅಭ್ಯುದಯಕ್ಕಾಗಿ ಹೊಸ ಕೇಂದ್ರೀಯ ಕಾನೂನುಗಳನ್ನು ತಂದಿದೆ ಎಂದೂ ಗೃಹಸಚಿವಾಲಯದ ವರದಿಯು ಹೇಳಿದೆ.
ವರದಿಯಲ್ಲಿ ಉಲ್ಲೇಖಿಸಲಾಗಿರುವ ಯೋಜನೆಗಳಿಗೆ 2019ರ ಮೊದಲೇ ಮಂಜೂರಾತಿ ದೊರಕಿತ್ತು,ಆದರೆ ಅವುಗಳನ್ನು ವಿಧಿ 370ರ ರದ್ದತಿಯ ಫಲಶ್ರುತಿ ಎಂದು ಬಿಂಬಿಸಲಾಗಿದೆ. ನಾಶ್ರಿ ಸುರಂಗ,ರೆಜಿಲಾ ಸುರಂಗ,50 ಪದವಿ ಕಾಲೇಜುಗಳು ಮತ್ತು ವಿವಿಧ ವೈದ್ಯಕೀಯ ಕಾಲೇಜುಗಳ ಸ್ಥಾಪನೆ ಇಂತಹ ಯೋಜನೆಗಳಾಗಿವೆ ಎಂದು ತಾರಿಗಾಮಿ ಹೇಳಿದರು.
2015ರಲ್ಲಿ ಬಿಜೆಪಿ-ಪಿಡಿಪಿ ಸಮ್ಮಿಶ್ರ ಸರಕಾರವು ಪ್ರಕಟಿಸಿದ್ದ 80,000 ಕೋ.ರೂ.ಗಳ ಅಭಿವೃದ್ಧಿ ಪ್ಯಾಕೇಜನ್ನೂ ವಿಧಿ 370ರ ರದ್ದತಿಯ ಫಲಶ್ರುತಿಯೆಂದು ತೋರಿಸಲಾಗಿದೆ ಎಂದು ಹೇಳಿದ ತಾರಿಗಾಮಿ,ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಪರಿಣಾಮಕಾರಿ ಭೂ ಸುಧಾರಣೆಗಳನ್ನು ಜಾರಿಗೊಳಿಸಲಾಗಿದೆ, ಹೊರಗಿನ ವ್ಯಕ್ತಿಗಳು ಜಮ್ಮು-ಕಾಶ್ಮೀರದಲ್ಲಿ ಭೂಮಿ ಖರೀದಿಸುವುದನ್ನು ಸಾಧ್ಯವಾಗಿಸಲಾಗಿದೆ ಮತ್ತು ಮಾಹಿತಿ ಹಕ್ಕು ಕಾಯ್ದೆಯನ್ನು ಯಶಸ್ವಿಯಾಗಿ ಅನುಷ್ಠಾನಿಸಲಾಗಿದೆ ಎಂಬ ಸರಕಾರದ ಹೇಳಿಕೆಗಳು ಅಪ್ಪಟ ಸುಳ್ಳುಗಳಾಗಿವೆ ಎಂದೂ ತಾರಿಗಾಮಿ ಹೇಳಿದರು.