'ನೆಟ್‍ಫ್ಲಿಕ್ಸ್ ನ ಕ್ರೈಮ್ ಸ್ಟೋರೀಸ್' ವೆಬ್ ಸಿರೀಸ್ ಪ್ರಸಾರ ತಡೆಗೆ ಹೈ ಕೋರ್ಟ್ ಮೆಟ್ಟಿಲೇರಿದ ಆರೋಪಿ
ಬೆಂಗಳೂರು, ಅ.2: ಹೆತ್ತ ತಾಯಿಯನ್ನೇ ಕೊಂದು ಸಹೋದರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಮಹಿಳಾ ಟೆಕ್ಕಿ ಪ್ರಕರಣ ಕುರಿತು ನೆಟ್‍ಫ್ಲಿಕ್ಸ್ ಚಿತ್ರೀಕರಿಸಿರುವ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡದಂತೆ ತಾತ್ಕಾಲಿಕ ತಡೆ ಕೋರಿ ಪ್ರಕರಣದಲ್ಲಿ ಆರೋಪಿಯಾಗಿರುವ ಶ್ರೀಧರ್‍ರಾವ್ ಹೈ ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದಾರೆ.
ಕೆ.ಆರ್.ಪುರದ ಅಕ್ಷಯನಗರದಲ್ಲಿ ಹೆತ್ತ ತಾಯಿ ನಿರ್ಮಲಾ ಅವರನ್ನು ಮಗಳು ಅಮೃತಾ ಕೊಂದ ಪ್ರಕರಣ ಕುರಿತು ನೆಟ್‍ಫ್ಲಿಕ್ಸ್‍ಗಾಗಿ ಸಾಕ್ಷ್ಯಚಿತ್ರ ತಯಾರಿಸಿರುವ ಫಿಲ್ಮ್ ಕ್ಲಾರೀ ಗುಡ್‍ಲಸ್‍ನವರು ಆರೋಪಿ ಶ್ರೀಧರ್‍ರಾವ್ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎನ್ನುವಂತೆ ಬಿಂಬಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ, ಈ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡದಂತೆ ನಿರ್ಬಂಧ ವಿಧಿಸಬೇಕೆಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಹೈಕೋರ್ಟ್ ವಕೀಲ ಎ.ಎಂ.ಇಕ್ತಿಯಾರ್ ಉದ್ದೀನ್ ಅರ್ಜಿದಾರರ ಪರವಾಗಿ ವಾದಿಸುತ್ತಿದ್ದು, ಇದು ವೈಯಕ್ತಿಕ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಹಕ್ಕುಗಳ ರಕ್ಷಣೆಗೆ ನ್ಯಾಯಾಲಯವನ್ನು ಕೋರದೆ ಬೇರೆ ದಾರಿ ನಮಗೆ ಉಳಿದಿಲ್ಲ. ಈ ಸಾಕ್ಷ್ಯಚಿತ್ರವು ಖಾಸಗಿತನ ಮತ್ತು ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದೆ.
ಬಂಧನದಲ್ಲಿನ ವಿಚಾರಣೆಯನ್ನು ಸೋರಿಕೆ ಮಾಡುವುದು ಗಂಭೀರ ವಿಷಯವಾಗಿದೆ ಮತ್ತು ತನಿಖೆಯಲ್ಲಿನ ಹೇಳಿಕೆಗಳು ಹಾಗೂ ಚಾರ್ಜ್‍ಶೀಟ್‍ನ ಹೇಳಿಕೆಗಳು ವಿರುದ್ಧವಾಗಿವೆ. ನಮ್ಮ ಕಕ್ಷಿದಾರರ ಜೀವನ ಮತ್ತು ಸ್ವಾತಂತ್ರ್ಯಕ್ಕೆ ಗಂಡಾಂತರ ತರಲಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.