ಉ.ಪ್ರ: ಲಖಿಂಪುರ ಖೇರಿಯಲ್ಲಿ ಹಿಂಸಾರೂಪಕ್ಕೆ ತಿರುಗಿದ ಸಚಿವರ ಭೇಟಿ ವಿರುದ್ಧದ ಪ್ರತಿಭಟನೆ, ಎಂಟು ಜನರ ಸಾವು
ಲಖಿಂಪುರ ಖೇರಿ, ಅ.3: ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ರವಿವಾರ ಉಪಮುಖ್ಯಮಂತ್ರಿ ಕೇಶವ ಪ್ರಸಾದ ಮೌರ್ಯ ಮತ್ತು ಕೇಂದ್ರದ ಸಹಾಯಕ ಗೃಹಸಚಿವ ಅಜಯ್ ಮಿಶ್ರಾ ಅವರ ಭೇಟಿಯನ್ನು ವಿರೋಧಿಸಿ ರೈತರ ಪ್ರತಿಭಟನೆಯಲ್ಲಿ ಹಿಂಸಾಚಾರವು ಭುಗಿಲೆದ್ದ ಪರಿಣಾಮ ಕನಿಷ್ಠ ಎಂಟು ಜನರು ಮೃತಪಟ್ಟಿದ್ದಾರೆ.
ಮಿಶ್ರಾ ಅವರ ಸ್ವಗ್ರಾಮ ಲಖಿಂಪುರ ಕೇರಿಯ ತಿಕುನಿಯಾದಲ್ಲಿ ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆಯನ್ನು ನಡೆಸುತ್ತಿದ್ದರು. ಮಿಶ್ರಾ ಗ್ರಾಮದಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದು,ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವಪ್ರಸಾದ ಮೌರ್ಯ ಅವರು ಮುಖ್ಯಅತಿಥಿಯಾಗಿ ಭಾಗವಹಿಸಲಿದ್ದರು. ಮೌರ್ಯ ಅವರಿಗೆ ಕಪ್ಪು ಬಾವುಟಗಳನ್ನು ತೋರಿಸಲು ರೈತರು ಆಯೋಜಿಸಿದ್ದರು.
ಮೌರ್ಯ ಭೇಟಿಯನ್ನು ವಿರೋಧಿಸಿ ತಿಕುನಿಯಾ-ಬನ್ಬೀರ್ಪುರ ರಸ್ತೆಯಲ್ಲಿ ಕೃಷಿ ಕಾಯ್ದೆಗಳ ವಿರೋಧಿ ಪ್ರತಿಭಟನಾಕಾರರ ಗುಂಪಿನ ಮೇಲೆ ಎರಡು ಎಸ್ಯುವಿಗಳು ಹರಿದಿದ್ದವು. ಈ ಘಟನೆಯಲ್ಲಿ ಹಲವಾರು ರೈತರು ಗಾಯಗೊಂಡಿದ್ದಾರೆ ಎಂದು ದೃಢಪಡದ ವರದಿಗಳು ತಿಳಿಸಿವೆ.
ಕ್ರುದ್ಧ ಪ್ರತಿಭಟನಾಕಾರರು ಎರಡೂ ವಾಹನಗಳನ್ನು ತಡೆದು ಅವುಗಳಿಗೆ ಬೆಂಕಿ ಹಚ್ಚಿದ್ದು,ಕೆಲವು ಪ್ರಯಾಣಿಕರನ್ನು ಥಳಿಸಿದರು ಎಂದು ಹೇಳಲಾಗಿದೆ.
ಪ್ರತಿಭಟನಾಕಾರರ ಮೇಲೆ ಹರಿದಿದ್ದ ಎಸ್ಯುವಿಗಳ ಪೈಕಿ ಒಂದರಲ್ಲಿ ಮಿಶ್ರಾರ ಪುತ್ರ ಆಶಿಷ್ ಮಿಶ್ರಾ ಇದ್ದರು ಎಂದು ರೈತ ನಾಯಕರು ಆರೋಪಿಸಿದ್ದಾರೆ. ಆಶಿಷ್ ಓರ್ವ ರೈತನನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಹೇಳಿದೆ.
ವಿರೋಧಾಭಾಸದ ಹೇಳಿಕೆಯನ್ನು ನೀಡಿರುವ ಮಿಶ್ರಾ, ಪ್ರತಿಭಟನಾಕಾರರ ದಾಳಿಯಿಂದ ಕಾರು ಪಲ್ಟಿಯಾಗಿತ್ತು ಎಂದಿದ್ದಾರೆ. ಘಟನೆಯಲ್ಲಿ ತನ್ನ ಪುತ್ರ ಭಾಗಿಯಾಗಿದ್ದ ಎನ್ನುವುದನ್ನೂ ನಿರಾಕರಿಸಿರುವ ಅವರು,ಆತ ಸ್ಥಳದಲ್ಲಿ ಇರಲೇ ಇಲ್ಲ ಮತ್ತು ಇದನ್ನು ಸಾಬೀತುಗೊಳಿಸಲು ಪುರಾವೆಗಳು ಆತನ ಬಳಿಯಿವೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿದ್ದ ಕೆಲವು ದುಷ್ಕರ್ಮಿಗಳು ಮೂವರು ಬಿಜೆಪಿ ಸದಸ್ಯರು ಮತ್ತು ಓರ್ವ ಚಾಲಕನನ್ನು ಥಳಿಸಿ ಹತ್ಯೆ ಮಾಡಿದ್ದಾರೆ ಎಂದ ಅವರು,ಪ್ರತಿಭಟನಾನಿರತ ರೈತರ ಪೈಕಿ ಕೆಲವರು ಕಾರಿನತ್ತ ಕಲ್ಲುಗಳನ್ನು ತೂರಿದಾಗ ಅದು ಪಲ್ಟಿಯಾಗಿತ್ತು ಮತ್ತು ಅದರಡಿಗೆ ಸಿಲುಕಿ ಇಬ್ಬರು ರೈತರು ಮೃತಪಟ್ಟಿದ್ದಾರೆ ಎಂದರು.
‘ನನ್ನ ಪುತ್ರ ಉಪ ಮುಖ್ಯಮಂತ್ರಿಗಳ ಕಾರ್ಯಕ್ರಮದ ಸ್ಥಳದಲ್ಲಿದ್ದ. ಸಾವಿರಾರು ಜನರು,ಆಡಳಿತದ ಅಧಿಕಾರಿಗಳು ಮತ್ತು ಪೊಲೀಸರು ಅಲ್ಲಿದ್ದರು. ಕಾರ್ಯಕ್ರಮದುದ್ದಕ್ಕೂ ನಾನು ಉಪ ಮುಖ್ಯಮಂತ್ರಿಗಳ ಜೊತೆಯಲ್ಲಿಯೇ ಇದ್ದೆ ’ಎಂದೂ ಮಿಶ್ರಾ ತಿಳಿಸಿದರು.
ಘಟನೆಯಲ್ಲಿ ಹಲವಾರು ಪತ್ರಕರ್ತರೂ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ನಾಲ್ವರು ರೈತರು ಮತ್ತು ನಾಲ್ವರು ಬಿಜೆಪಿ ಕಾರ್ಯಕರ್ತರ ಸಾವುಗಳನ್ನು ಜಿಲ್ಲಾಡಳಿತವು ದೃಢಪಡಿಸಿದೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದ್ದು,ದೂರು-ಪ್ರತಿದೂರುಗಳು ದಾಖಲಾಗಿವೆ ಎಂದು ಅದು ತಿಳಿಸಿದೆ.
ಘಟನೆಯನ್ನು ವಿರೋಧಿಸಿ ಸೋಮವಾರ ಪೂರ್ವಾಹ್ನ 10 ಗಂಟೆಯಿಂದ ಅಪರಾಹ್ನ ಒಂದು ಗಂಟೆಯವರೆಗೆ ದೇಶಾದ್ಯಂತ ಜಿಲ್ಲಾಧಿಕಾರಿಗಳು ಮತ್ತು ವಿಭಾಗಾಧಿಕಾರಿಗಳ ಕಚೇರಿಗಳ ಹೊರಗೆ ಪ್ರತಿಭಟನೆಗೆ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದೆ. ಉತ್ತರ ಪ್ರದೇಶ ಆಡಳಿತದ ಬದಲು ಸರ್ವೋಚ್ಚ ನ್ಯಾಯಾಲಯದ ಹಾಲಿ ನ್ಯಾಯಾಧೀಶರಿಂದ ಘಟನೆಯ ಬಗ್ಗೆ ತನಿಖೆಗೆ ಅದು ಆಗ್ರಹಿಸಿದೆ.
ಅಜಯ್ ಮಿಶ್ರಾ ಅವರನ್ನು ತಕ್ಷಣ ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ಕೊಲೆ ಆರೋಪದಲ್ಲಿ ಸಚಿವರ ಪುತ್ರ ಮತ್ತು ಇತರ ಗೂಂಡಾಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದೂ ಮೋರ್ಚಾ ಆಗ್ರಹಿಸಿದೆ.
ದಿಲ್ಲಿ ಗಡಿಯ ಘಾಜಿಪುರದ ಪ್ರತಿಭಟನಾ ತಾಣದಲ್ಲಿದ್ದ ಭಾರತೀಯ ಕಿಸಾನ ಯೂನಿಯನ್(ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಅವರು ಹಲವಾರು ಬೆಂಬಲಿಗರೊಂದಿಗೆ ತಿಕುನಿಯಾಕ್ಕೆ ಧಾವಿಸಿದ್ದಾರೆ.
‘ಲಖಿಂಪುರದಲ್ಲಿ ಪ್ರತಿಭಟನೆಯ ಬಳಿಕ ಮರಳುತ್ತಿದ್ದ ರೈತರ ಮೇಲೆ ದಾಳಿ ನಡೆಸಲಾಗಿದೆ. ಕೆಲವರ ಮೇಲೆ ವಾಹನಗಳನ್ನು ಹರಿಸಲಾಗಿದೆ,ಅವರತ್ತ ಗುಂಡುಗಳನ್ನೂ ಹಾರಿಸಲಾಗಿದೆ. ನಮಗೆ ಈವರೆಗೆ ತಿಳಿದುಬಂದಿರುವ ಮಾಹಿತಿಯಂತೆ ಹಲವಾರು ಜನರು ಮೃತಪಟ್ಟಿದ್ದಾರೆ ’ಎಂದು ಟಿಕಾಯತ್ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿರುವ ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ.
ಘಟನೆಯಿಂದ ಕ್ರುದ್ಧ ರೈತರು ಮೂರು ಕಾರುಗಳನ್ನು ಸುಟ್ಟುಹಾಕಿದ್ದು,ಇವುಗಳಲ್ಲಿ ಆಶಿಷ್ ಕಾರೂ ಸೇರಿದೆ ಎನ್ನಲಾಗಿದೆ. ತಿಕುನಿಯಾದಲ್ಲಿ ರೈತರ ಪ್ರತಿಭಟನೆ ಮುಂದುವರಿದಿದ್ದು,ಉದ್ವಿಗ್ನ ಸ್ಥಿತಿ ಸೃಷ್ಟಿಯಾಗಿದೆ.
ಉ.ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥರ ನಿರ್ದೇಶದಂತೆ ಎಡಿಜಿಪಿ ಪ್ರಶಾಂತ್ ಕುಮಾರ ಮತ್ತು ಲಕ್ನೋ ವಲಯದ ಐಜಿಪಿ ಲಕ್ಷ್ಮಿ ಸಿಂಗ್ ಅವರು ಸ್ಥಳಕ್ಕೆ ಧಾವಿಸಿ ಮೊಕ್ಕಾಂ ಹೂಡಿದ್ದಾರೆ. ಹೆಚ್ಚುವರಿ ಪೊಲೀಸ್ ಪಡೆಯನ್ನು ರವಾನಿಸಲಾಗಿದ್ದು,ಇತರ ಜಿಲ್ಲೆಗಳ ಪೊಲೀಸ್ ಅಧಿಕಾರಿಗಳನ್ನೂ ಸ್ಥಳದಲ್ಲಿ ನಿಯೋಜಿಸಲಾಗಿದೆ. ಈ ಘಟನೆಯ ಹಿನ್ನೆಲೆಯಲ್ಲಿ ಇಡೀ ರಾಜ್ಯದಲ್ಲಿ ಪೊಲೀಸರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.
ಲಖಿಂಪುರ ಖೇರಿಗೆ ಹೊಂದಿಕೊಂಡಿರುವ ಜಿಲ್ಲೆಗಳಲ್ಲಿ ಕಟ್ಟೆಚ್ಚರವನ್ನು ಘೋಷಿಸಲಾಗಿದೆ. ಯಾವುದೇ ವಿಧದ ಚಟುವಟಿಕೆಗಳ ಮೇಲೆ ನಿಕಟ ನಿಗಾಯಿರಿಸುವಂತೆ ಸೂಚಿಸಲಾಗಿದೆ ಎಂದು ಡಿಜಿಪಿ ಮುಕುಲ್ ಗೋಯಲ್ ಅವರು ಸುದ್ದಿಗಾರರಿಗೆ ತಿಳಿಸಿದರು.
ಬಿಕೆಯು (ಚಧುನಿ)ನಾಯಕ ಗುರ್ನಾಮ ಸಿಂಗ್ ಚಧುನಿ ಅವರು ತಿಕುನಿಯಾದಲ್ಲಿ ಬೃಹತ್ ಸಂಖ್ಯೆಯಲ್ಲಿ ಸಮಾವೇಶಗೊಳ್ಳುವಂತೆ ರೈತರಿಗೆ ಕರೆ ನೀಡಿದ್ದಾರೆ. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ದಾಳಿ ನಡೆಸಿರುವ ಕಾಂಗ್ರೆಸ್ ನ್ಯಾಯಾಂಗ ತನಿಖೆ ನಡೆಸುವಂತೆ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದೆ.
ಲಖಿಂಪುರ ಖೇರಿಯಲ್ಲಿ ರವಿವಾರ ನಡೆದ ಅಮಾನುಷ ನರಮೇಧದ ಬಳಿವೂ ಮೌನವಾಗಿರುವವರು ಈಗಾಗಲೇ ಸತ್ತುಹೋಗಿದ್ದಾರೆ ಎಂದು ಟ್ವೀಟಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು,‘ರೈತರ ಬಲಿದಾನ ವ್ಯರ್ಥವಾಗಲು ನಾವು ಬಿಡುವುದಿಲ್ಲ.ರೈತರ ಸತ್ಯಾಗ್ರಹ ಚಿರಾಯುವಾಗಲಿ ’ಎಂದಿದ್ದಾರೆ.
ರೈತರಿಗೆ ಈ ದೇಶದಲ್ಲಿ ಬದುಕುವ ಹಕ್ಕು ಇಲ್ಲವೇ ಎಂದು ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದ್ದಾರೆ. ಅವರು ಸೋಮವಾರ ಲಖಿಂಪುರ ಖೇರಿಗೆ ಭೇಟಿ ನೀಡಲಿದ್ದಾರೆ.
ಪ್ರತಿಪಕ್ಷ ನಾಯಕರ ಖಂಡನೆ
ಘಟನೆಯನ್ನು ಖಂಡಿಸಿದ ಎಸ್ಪಿ ನಾಯಕ ಅಖಿಲೇಶ್ ಯಾದವ್ ಅವರು ಬಿಜೆಪಿ ವಿರುದ್ಧ ತೀವ್ರ ದಾಳಿ ನಡೆಸಿದರು. ಕೃಷಿ ಕಾಯ್ದೆಗಳ ವಿರುದ್ಧ ಶಾಂತಿಯುತ ಪ್ರತಿಭಟನೆಯನ್ನು ನಡೆಸುತ್ತಿದ್ದ ರೈತರೊಂದಿಗೆ ಕೇಂದ್ರ ಸಹಾಯಕ ಗೃಹಸಚಿವರು ನಡೆದುಕೊಂಡಿರುವ ರೀತಿಯು ಅತ್ಯಂತ ಅಮಾನವೀಯ ಮತ್ತು ಕ್ರೂರವಾಗಿದೆ ಎಂದರು. ರೈತರು ಕಾರುಗಳನ್ನು ಸುಡುತ್ತಿರುವ ವೀಡಿಯೊವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ಕುಮಾರ್ ಲಲ್ಲು ಅವರು,ಬಿಜೆಪಿಯು ಹಿಟ್ಲರ್ ನಂತೆ ವರ್ತಿಸಿ ಪ್ರತಿಭಟನೆಗಳನ್ನು ದಮನಿಸುತ್ತಿದೆ ಎಂದು ಹೇಳಿದ್ದಾರೆ.
ಕೇಂದ್ರ ಸಚಿವ ಅಮಿತ್ ಶಾ ಅವರ ವಿರುದ್ಧ ನೇರ ದಾಳಿಯನ್ನು ನಡೆಸಿದ ಆರ್ಎಲ್ಡಿ ಅಧ್ಯಕ್ಷ ಜಯಂತ ಚೌಧರಿ,ರೈತರ ಪ್ರತಿಭಟನೆಯನ್ನು ದಮನಿಸಲು ಗೃಹಸಚಿವರು ಸಂಚು ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಆಪ್ ನಾಯಕ ಸಂಜಯ್ ಸಿಂಗ್ ಅವರು ಘಟನೆಯ ಕುರಿತು ಸಿಬಿಐ ತನಿಖೆಗೆ ಆಗ್ರಹಿಸಿದ್ದಾರೆ.
ಸುಹಲದೇವ್ ಭಾರತೀಯ ಸಮಾಜ ಪಾರ್ಟಿಯ ಸ್ಥಾಪಕ ಓಂ ಪ್ರಕಾಶ ರಾಹಭರ್ ಅವರೂ ಘಟನೆಯನ್ನು ಖಂಡಿಸಿ ಬಿಜೆಪಿಯನ್ನು ತರಾಟೆಗೆತ್ತಿಕೊಂಡರು.