ಯುಎಇಗಿಂತ ಮೊದಲು ಭಾರತದಲ್ಲಿ ಹೈಪರ್ ಲೂಪ್ ಸಾರಿಗೆ ವ್ಯವಸ್ಥೆ ಆರಂಭದ ಸಾಧ್ಯತೆ
ದುಬಾ, ಅ.3: ಪ್ರಯಾಣಿಕರು ಮತ್ತು ಸರಕುಗಳಿಗಾಗಿ ಅತೀ ವೇಗದ ನೆಲದ ಮೇಲಿನ ಸಾರಿಗೆ ವ್ಯವಸ್ಥೆಯಾಗಿರುವ ಹೈಪರ್ಲೂಪ್ ಯುಎಇಗಿಂತ ಭಾರತ ಅಥವಾ ಸೌದಿ ಅರೆಬಿಯಾದಲ್ಲಿ ಮೊದಲು ಜಾರಿಗೆ ಬರುವ ಸಾಧ್ಯತೆಯಿದೆ ಎಂದು ಎಮಿರೇಟ್ಸ್ ನ ಬಹುರಾಷ್ಟ್ರೀಯ ಸಾರಿಗೆ ಸಂಸ್ಥೆ ಡಿಪಿ ವರ್ಲ್ಡ್ ಸಿಇಒ ಸುಲ್ತಾನ್ ಅಹ್ಮದ್ ಬಿನ್ ಸುಲೇಮಾನ್ ರವಿವಾರ ಹೇಳಿದ್ದಾರೆ.
ದುಬೈಯಲ್ಲಿ ನಡೆಯುತ್ತಿರುವ 6 ತಿಂಗಳಾವಧಿಯ ಎಕ್ಸ್ಪೋ 2020ರ ನೇಪಥ್ಯದಲ್ಲಿ ಮಾತನಾಡಿದ ಅವರು, ಈ ದಶಕದ ಅಂತ್ಯದೊಳಗೆ ವಿಶ್ವದ ಹಲವೆಡೆ ಅತೀ ವೇಗದ ಸಾರಿಗೆ ವ್ಯವಸ್ಥೆ ವಾಸ್ತವ ರೂಪಕ್ಕೆ ಬರಲಿದೆ . ಇದಕ್ಕೆ ದಶಕಗಳವರೆಗೆ ಕಾಯಬೇಕಿಲ್ಲ, ಕೆಲ ವರ್ಷಗಳಷ್ಟೇ ಉಳಿದಿದೆ ಎಂದರು.
ಈಗಿನ ಸಂದರ್ಭಕ್ಕೆ ಅನ್ವಯಿಸಿ ಹೇಳುವುದಾದರೆ ಹೈಪರ್ಲೂಪ್ ಭಾರತ ಅಥವಾ ಸೌದಿ ಅರೆಬಿಯದಲ್ಲಿ ಮೊದಲು ಆರಂಭವಾಗಬಹುದು. ಆರ್ಥಿಕ ಅಭಿವೃದ್ಧಿಯ ಗುರಿ ಇಟ್ಟುಕೊಂಡಿರುವಾಗ , ದೀರ್ಘ ದೂರದವರೆಗೆ ಸರಕು ಸಾಗಿಸಬೇಕಿರುವ ಸಂದರ್ಭ, ವಿಮಾನ ಪ್ರಯಾಣದ ದರದಲ್ಲಿ ಲಾರಿಯ ಸೇವೆ ಬಳಕೆಗೆ ಲಭ್ಯವಾಗುವುದು ಉತ್ತಮ ವ್ಯವಸ್ಥೆಯಾಗಿದೆ ಎಂದರು.
ವರ್ಜಿನ್ ಹೈಪರ್ಲೂಪ್ ಸೇರಿದಂತೆ ಈ ವ್ಯವಸ್ಥೆಯನ್ನು ಹಲವು ಸಂಸ್ಥೆಗಳು ಅಭಿವೃದ್ಧಿಗೊಳಿಸಿವೆ.
ಕಡಿಮೆ ಗಾಳಿಯ ಒತ್ತಡವಿರುವ ಟ್ಯೂಬ್ಗಳ ಮೂಲಕ ವಾಹನಗಳು ಗಾಳಿಯ ಪ್ರತಿರೋಧ ಶಕ್ತಿಯಿಂದ ಅಥವಾ ಘರ್ಷಣೆಯಿಂದ ಮುಕ್ತವಾಗಿ ಸಂಚರಿಸುವ ವ್ಯವಸ್ಥೆಯಾಗಿರುವ ಹೈಪರ್ಲೂಪ್ನಲ್ಲಿ ಮನುಷ್ಯನ ಪ್ರಯಾಣವನ್ನು ಕಳೆದ ವರ್ಷದ ನವೆಂಬರ್ನಲ್ಲಿ ಯಶಸ್ವಿಯಾಗಿ ಪರೀಕ್ಷೆ ನಡೆಸಲಾಗಿದೆ. ಸರಕು ಅಥವಾ ಮಾನವರ ಪ್ರಯಾಣದ ಅವಧಿಯನ್ನು ಗಣಣೀಯ ಪ್ರಮಾಣದಲ್ಲಿ ಕಡಿಮೆಗೊಳಿಸುವ ಮೂಲಕ ಹೈಪರ್ಲೂಪ್ ಪ್ರಯಾಣ ವ್ಯವಸ್ಥೆಯು ಸಂಸ್ಥೆಗಳ ವೆಚ್ಚವನ್ನು 25% ದಷ್ಟು ಕಡಿಮೆಗೊಳಿಸಲಿದೆ ಎಂದು ಡಿಪಿ ವರ್ಲ್ಡ್ ಸಂಸ್ಥೆ ಹೇಳಿದೆ. ಮಹಾರಾಷ್ಟ್ರದ ಪುಣೆ ಮತ್ತು ನವಿ ಮುಂಬೈ ನಡುವಿನ ಹೈಪರ್ಲೂಪ್ ವ್ಯವಸ್ಥೆ ಶೀಘ್ರ ಆರಂಭವಾಗಲಿದೆ ಎಂದು ವರ್ಜಿನ್ ಹೈಪರ್ಲೂಪ್ ಸಂಸ್ಥೆಯ ರಿಚರ್ಡ್ ಬ್ರಾನ್ಸನ್ ಘೋಷಿಸಿದ್ದರು. ಆದರೆ ಕೊರೋನ ಸೋಂಕಿನ ಸಮಸ್ಯೆ ಈ ಯೋಜನೆಗೆ ಅಡ್ಡಿಯಾಗಿದೆ.