ಲಾಕ್ ಡೌನ್ನಿಂದ ಧ್ವನಿ ಕಳೆದುಕೊಂಡ ಯಕ್ಷಗಾನ
ಪ್ರತಿಧ್ವನಿಸದ ಚಂಡೆ ಸದ್ದು | ನಲುಗುತ್ತಿರುವ ಕಲಾವಿದರ ಬದುಕು
► ಲಾಕ್ ಡೌನ್ ಅನಂ(ವಾಂ)ತರ..!
ಉಡುಪಿ: ಪ್ರತಿವರ್ಷ ನವೆಂಬರ್ನಿಂದ ಮೇ ತಿಂಗಳವರೆಗೆ ಆರು ತಿಂಗಳ ಕಾಲ ಕರಾವಳಿಯ ಜಿಲ್ಲೆಗಳಲ್ಲಿ ಪ್ರತಿದಿನ ಸಂಜೆಯ ಬಳಿಕ ಹಳ್ಳಿಹಳ್ಳಿಗಳಲ್ಲಿ ಪ್ರತಿಧ್ವನಿಸುತ್ತಿದ್ದ ಯಕ್ಷಗಾನದ ಏರುಗತಿಯ ಚಂಡೆಯ ಸದ್ದು ಕಳೆದ ಒಂದೂವರೆ ವರ್ಷದಿಂದ ಕೇಳಿಸುತ್ತಲೇ ಇಲ್ಲ. ಚಂಡೆಯ ವೌನದೊಂದಿಗೆ ಅದನ್ನೇ ನಂಬಿ ಬದುಕು ಸಾಗಿಸುತ್ತಿದ್ದ ಸಾವಿರಾರು ಕಲಾವಿದರು, ಯಕ್ಷಗಾನ ಮೇಳಗಳ ಕಾರ್ಮಿಕರು ಹಾಗೂ ಅವರನ್ನೇ ನಂಬಿದ ಕುಟುಂಬಿಕರ ಬದುಕು ನಲುಗಿಹೋಗುತ್ತಿದೆ.
ಇತ್ತೀಚಿನ ವರ್ಷಗಳಲ್ಲಿ ಮಾನವನ ಬದುಕಿನ ಮೇಲೆ ಕೋವಿಡ್ ಸಾಂಕ್ರಾಮಿಕ ಬೀರಿದ ಪರಿಣಾಮವನ್ನು ಪ್ರಾಯಶ: ಬೇರೆ ಯಾವುದೂ ಬೀರಿದ ಉದಾಹರಣೆಗಳಿಲ್ಲ. ಆದರೆ ಕೋವಿಡ್ನೊಂದಿಗೆ ಅದನ್ನು ನಿಯಂತ್ರಿಸಲು ದೇಶಾದ್ಯಂತ ವಿಧಿಸಲಾದ ಲಾಕ್ಡೌನ್, ರಾತ್ರಿ ಕರ್ಫ್ಯೂ ಹಾಗೂ ವಾರಾಂತ್ಯ ಕರ್ಫ್ಯೂ ಜನಸಾಮಾನ್ಯರೊಂದಿಗೆ ಸಮಾಜದ ಪ್ರತಿಯೊಬ್ಬರ ಬದುಕನ್ನೇ ನಿತ್ಯ ನರಕವಾಗಿಸಿತು ಎಂಬುದರಲ್ಲಿ ಎರಡು ಮಾತಿಲ್ಲ.
ಇದೆಲ್ಲಾ ಕೆಲ ಸಮಯದ ಹಿಂದಿನ ಮಾತು. ಈಗ ನಿಧಾನವಾಗಿ ಎಲ್ಲಾ ಕ್ಷೇತ್ರಗಳು ಹಾಗೂ ಅದನ್ನು ಅವಲಂಬಿಸಿರುವ ಜನರು ಮತ್ತೆ ಹಿಂದಿನ ಹಳಿಗೆ ಬರಲು ಪ್ರಯತ್ನಿಸುತ್ತಿದ್ದಾರೆ. ಆದರೆ ಯಕ್ಷಗಾನ ಪ್ರಧಾನವಾಗಿ, ಸಾಂಸ್ಕೃತಿಕ ಕ್ಷೇತ್ರ ಮಾತ್ರ ಕೊರೋನ ಉಂಟು ಮಾಡಿದ ಪರಿಣಾಮಗಳಿಂದ ಇನ್ನೂ ಹೊರಬರಲಾ ಗದೇ ಒದ್ದಾಡುತ್ತಿದೆ. ಇದಕ್ಕೆ ಕೊರೋನದ ನಿಯಂತ್ರಣಕ್ಕೆ ಸರಕಾರ ವಿಧಿಸಿರುವ ಮಾರ್ಗಸೂಚಿಗಳು ಯಕ್ಷಗಾನ ಹಾಗೂ ಇತರ ಸಾಂಸ್ಕೃತಿಕ ಕಲೆಗಳಿಗೆ ನೇರವಾದ ಪರಿಣಾಮವನ್ನು ಬೀರುತ್ತಿದೆ.
ಸರಕಾರ ವಿಧಿಸಿದ ಸುರಕ್ಷತಾ ಅಂತರ ಯಕ್ಷಗಾನದಲ್ಲಿ ಪಾಲಿಸಲು ಸಾಧ್ಯವೇ ಇಲ್ಲ. ಅದೇ ರೀತಿ ಕಡ್ಡಾಯ ಮಾಸ್ಕ್ನ ಬಳಕೆ, ಮಾತು ಗಾರಿಕೆ ಹಾಗೂ ಭಾಗವತಿಕೆ ಪ್ರಧಾನವಾದ ಯಕ್ಷಗಾನದಲ್ಲಿ ಸಾಧ್ಯ ವಿಲ್ಲ. ಇದರೊಂದಿಗೆ ಹಗಲು ಯಕ್ಷಗಾನ, ಕಾಲಾನಿಗದಿ ಯಕ್ಷ ಗಾನ ಎಂದು ಎಷ್ಟೇ ಹೇಳಿದರೂ, ಹಳ್ಳಿ ಹಳ್ಳಿಗಳಲ್ಲಿ ಗ್ರಾಮೀಣ ಭಾಗದ ಜನರು ಈಗಲೂ ಬಯಸುವುದು ರಾತ್ರಿಯ ಯಕ್ಷಗಾನ ಬಯ ಲಾಟವನ್ನು. ಹೀಗಾಗಿ ಕೊರೋನ ವಿರುದ್ಧದ ಮಾರ್ಗಸೂಚಿಗಳು ಸಂಪೂರ್ಣವಾಗಿ ತೆರವುಗೊಳ್ಳುವವರೆಗೆ ಪೂರ್ಣಪ್ರಮಾಣದಲ್ಲಿ ಯಕ್ಷಗಾನ, ಬಯಲಾಟಗಳು ಮತ್ತೆ ಬಯಲು, ಗದ್ದೆ, ಮೈದಾನಗಳಲ್ಲಿ ಹಿಂದಿನ ರೀತಿಯಲ್ಲಿ ರಾರಾಜಿಸಲು ಸಾಧ್ಯವಾಗಲಿಕ್ಕಿಲ್ಲ.
ಅತೀಹೆಚ್ಚು ಬಾಧಿತ ಯಕ್ಷಗಾನ: ಕೊರೋನ ಸಮಯದಲ್ಲಿ ಬಾಧಿತರಾದ ಬಡ ಯಕ್ಷಗಾನ ಕಲಾವಿದರಿಗೆ ತಮ್ಮ ಕೈಲಾದ ನೆರವು, ಸಹಾಯ ನೀಡಿದ ಉಡುಪಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ಇದೇ ಮಾತನ್ನು ಪುಷ್ಟೀಕರಿಸುತ್ತಾರೆ. ಪ್ರಾಯಶ: ಕೊರೋನದಿಂದ ಅತೀ ಹೆಚ್ಚು ಬಾಧಿತವಾದ ಒಂದು ಕ್ಷೇತ್ರವಿದ್ದರೆ ಅದು ಯಕ್ಷಗಾನ. ಉದ್ಯಮವೂ ಸೇರಿದಂತೆ ಉಳಿದೆಲ್ಲಾ ಕ್ಷೇತ್ರಗಳ ಜನರು ಅವುಗಳಿಂದ ಹೊರಬಂದು ತಮ್ಮ ಬದುಕು ಕಟ್ಟಿಕೊಳ್ಳಲು ಪ್ರಯತ್ನ ಆರಂಭಿಸಿದ್ದರೆ, ಯಕ್ಷಗಾನ ಕಲಾವಿದರು ಹಾಗೂ ಯಕ್ಷಗಾನಕ್ಕೆ ಸಂಬಂಧಿತರು ಮಾತ್ರ ಇನ್ನೂ ತಮ್ಮ ಭವಿಷ್ಯದ ಕುರಿತು ಚಿಂತಿತರಾಗಿದ್ದಾರೆ ಎಂದವರು ಅಭಿಪ್ರಾಯಪಡುತ್ತಾರೆ.
ಇದಕ್ಕೆ ಕಾರಣ ಯಕ್ಷಗಾನ ಎಂಬುದು ಒಂದು ಸಮಷ್ಟಿ ಕಲೆ. ಜನರು ಹಾಗೂ ಕಲಾವಿದರು ಒಟ್ಟಿಗೆ ಸಾಗಬೇಕಾದ ಸಮೂಹಕಲೆ. ಇಲ್ಲಿ ಸಾಮಾಜಿಕ ಅಂತರ ಎಂಬುದು ಸಾಧ್ಯವಾಗದ ಅಥವಾ ಪೂರ್ಣಪ್ರಮಾಣದಲ್ಲಿ ಅಳವಡಿಸಲು ಸಾದ್ಯವಾಗದ ಕ್ರಿಯೆ. ಹೀಗಾಗಿ ಯಕ್ಷಗಾನಕ್ಕೆ ಸಂಬಂಧಿಸಿದವರನ್ನು ಹೊರತು ಪಡಿಸಿ ಉಳಿದವರೆಲ್ಲಾ ಕ್ರಿಯಾಶೀಲರಾಗಿದ್ದಾರೆ ಎಂದವರು ಹೇಳುತ್ತಾರೆ.
40 ಮೇಳ 1,500 ಕಲಾವಿದರು: ಅವಿಭಜಿತ ದ.ಕ. ಜಿಲ್ಲೆಯಲ್ಲಿ ಸುಮಾರು 40 ವೃತ್ತಿಪರ ಮೇಳಗಳಿವೆ. ಇವುಗಳಲ್ಲಿ ಸುಮಾರು 1,500ರಷ್ಟು ಕಲಾವಿದರು ದುಡಿಯುತ್ತಿದ್ದಾರೆ. ಈ ಮೇಳಗಳಲ್ಲಿ ಇತರ ಕಾರ್ಮಿಕರು ಸೇರಿ ಸುಮಾರು 3,000 ಮಂದಿಯ ಕುಟುಂಬ ಯಕ್ಷಗಾನ ಆಟವನ್ನೇ ನಂಬಿ ಬದುಕು ಸಾಗಿಸುತ್ತಿದೆ. ಇವುಗಳೊಂದಿಗೆ ಪ್ರತಿದಿನ ರಾತ್ರಿ ಯಕ್ಷಗಾನ ಆಟದ ಸಮಯದಲ್ಲಿ ಬೇರೆ ಬೇರೆ ರೀತಿಯಲ್ಲಿ ನೂರಾರು ಮಂದಿಗೆ ಇದು ಉದ್ಯೋಗ ನೀಡುತ್ತದೆ. ಕಳೆದ ಎರಡು ವರ್ಷಗಳಿಂದ ಯಕ್ಷಗಾನ ಬಯಲಾಟಗಳು ನಿಂತಿರುವುದರಿಂದ ಇವರೆಲ್ಲರೂ ಜೀವನಾಧಾರವನ್ನೇ ಕಳೆದುಕೊಂಡಿದ್ದಾರೆ ಎಂದು ಸಾಲಿಗ್ರಾಮ ಸೇರಿದಂತೆ 5 ಯಕ್ಷಗಾನ ಮೇಳಗಳನ್ನು ಮುನ್ನಡೆಸುವ ಪಿ.ಕಿಶನ್ ಹೆಗ್ಡೆ ವಿವರಿಸುತ್ತಾರೆ.
ಮಳೆಗಾಲದಲ್ಲೂ ಸಂಪಾದನೆ: ಇತ್ತೀಚಿನ ವರ್ಷಗಳಲ್ಲಿ ಯಕ್ಷಗಾನ ಬೇರೆ ಬೇರೆ ರೀತಿಯಲ್ಲಿ ಪಡೆದ ಜನಪ್ರಿಯತೆಯಿಂದ ಅದನ್ನು ನಂಬಿದ ಕಲಾವಿದರ ಬದುಕು ಸಂಪನ್ನಗೊಂಡಿತ್ತು. 6 ತಿಂಗಳ ಇವರು ಮೇಳಗಳಲ್ಲಿ ಬಣ್ಣ ಹಾಕಿ ಕುಣಿದರೆ, ಉಳಿದ 6 ತಿಂಗಳು ಸಹ ಇವರಿಗೆ ಕೈತುಂಬಾ ಕೆಲಸ ಸಿಗುತ್ತಿತ್ತು. ಮಳೆಗಾಲದ ಸಂದರ್ಭದಲ್ಲಿ ಹೆಚ್ಚಿನ ವರು ಒಂದೊಂದು ತಂಡದೊಂದಿಗೆ ಬೆಂಗಳೂರು, ಮುಂಬೈ, ಮೈಸೂರು, ಸೇರಿ ದಂತೆ ಹೊರಜಿಲ್ಲೆ, ಹೊರರಾಜ್ಯ, ಹೊರದೇಶಗಳ ಪ್ರಮುಖ ಪಟ್ಟಣಗಳಲ್ಲಿ ಯಕ್ಷಗಾನವನ್ನು ಆಡುತಿದ್ದರು. ಇದು ಅವರಿಗೆ ಯಕ್ಷಗಾನ ಮೇಳಕ್ಕಿಂತ ಹೆಚ್ಚಿನ ಸಂಪಾದನೆಯನ್ನು ನೀಡುತಿದ್ದವು. ಅಲ್ಲದೇ ಊರಿನಲ್ಲೂ ದೇವಸ್ಥಾನಗಳಲ್ಲಿ ನವರಾತ್ರಿ, ಅಷ್ಟಮಿ ಸಂದರ್ಭದಲ್ಲಿ ಯಕ್ಷಗಾನ ಪ್ರದರ್ಶನಗಳು ನಡೆಯುತಿದ್ದು, ಸಾಕಷ್ಟು ಮಂದಿ ತಾಳಮದ್ದಲೆ, ಚಿಕ್ಕಮೇಳಗಳಲ್ಲಿ ಪಾಲ್ಗೊಂಡು ಹೆಚ್ಚುವರಿ ಸಂಪಾದನೆ ಮಾಡುತ್ತಿದ್ದರು. ಕೊರೋನ ಬಂದು ಇವೆಲ್ಲವಕ್ಕೂ ಕತ್ತರಿ ಬಿತ್ತು ಎಂದು ಮುರಲಿ ಕಡೆಕಾರ್ ಹೇಳಿದರು.
ವೃತ್ತಿಪರರಾದ ಯಕ್ಷಗಾನ ಕಲಾವಿದರಿಗೆ ಯಕ್ಷಗಾನ ಬಣ್ಣಹಾಕು ವುದನ್ನು ಬಿಟ್ಟರೆ ಬೇರೆ ಏನೂ ಗೊತ್ತಿರಲಿಲ್ಲ. ಮನೆಯಲ್ಲಿ ಕೃಷಿ ಇದ್ದವರು ಏನೋ ಅದರತ್ತ ಮುಖ ಮಾಡಿರಬಹುದಾದರೆ ಉಳಿದವರು ಬೇರೆ ಏನೂ ಮಾಡಲಾರದೇ ಪರದಾಡುವಂತಾಗಿದೆ. ಅವರೊಂದಿಗೆ ಅವರ ಕುಟುಂಬವೂ ಸಂಕಷ್ಟಕ್ಕೊಳಗಾಯಿತು ಎಂದು ಮುರಲಿ ಕಡೆಕಾರ್ ಹೇಳಿದರೆ, ಮೊದಲ ಕೊರೋನ ಅಲೆಯ ಸಂದರ್ಭದಲ್ಲಿ ಯಕ್ಷಗಾನ ಕಲಾವಿದರು ನಿಜಕ್ಕೂ ತುಂಬಾ ಕಷ್ಟಕ್ಕೊಳಗಾಗಿದ್ದರು. ಆದರೆ ಎರಡನೇ ಅಲೆ ಸಂದರ್ಭದಲ್ಲಿ ಕೆಲವರಾದರೂ ಅನ್ಯ ಕೆಲಸಗಳತ್ತ ಮುಖ ಮಾಡಿದ್ದರು ಎಂದು ಕಿಶನ್ ಹೆಗ್ಡೆ ತಿಳಿಸಿದರು.
ಇದರಿಂದ 2ನೇ ಅಲೆ ಸಂದರ್ಭ ದಲ್ಲಿ ಕೆಲವು ರೆಡಿಮೇಡ್, ಚಪ್ಪಲಿ, ತರಕಾರಿ ಇಂಥ ಅಂಗಡಿ ತೆರೆದು ವ್ಯಾಪಾರದಲ್ಲಿ ತೊಡಗಿಸಿಕೊಂಡರು ಎಂದು ಹೆಗ್ಡೆ ತಿಳಿಸಿದರು. ಯಕ್ಷಗಾನ ಬಿಟ್ಟು ಬೇರೆ ಏನೂ ಗೊತ್ತಿಲ್ಲದ ನಾನು 2ನೇ ಅಲೆ ಸಂದರ್ಭದಲ್ಲಿ ತೋಟದ ಕೆಲಸಗಳಿಗೆ ಹೋಗಿ ದುಡಿದು ಮನೆ ನಡೆಸಲು ನೆರವಾದೆ ಎಂದು ಮಂದಾರ್ತಿ ಮೇಳದ ಕಲಾವಿದರೊಬ್ಬರು ತಿಳಿಸಿದರು.
ಈಗ ತಿರುಗಾಟ ನಡೆಸುವ 40 ಮೇಳಗಳಲ್ಲಿ 18-19 ಮೇಳಗಳು ತಮ್ಮ ಕಲಾವಿದರಿಗೆ ದಿನಗೂಲಿ ಆಧಾರದಲ್ಲಿ ಸಂಬಳ ನೀಡುತ್ತಿವೆ. ಇವರು ಪ್ರತಿದಿನ ವೇಷ ಮಾಡಿದರೆ ಮಾತ್ರ ದಿನದ ಕೂಲಿ ಸಿಗುತ್ತದೆ. ಅವರು ಎಷ್ಟು ದಿನ ವೇಷ ಹಾಕುತ್ತಾರೋ ಅಷ್ಟು ದಿನದ ಸಂಬಳ. ಬೇರೆ ಯಾವುದೇ ಸೌಲಭ್ಯ ಅವರಿಗಿಲ್ಲ. ಇನ್ನು ಸುಮಾರು 19 ಮೇಳಗಳು ಕಾಂಟ್ರಾಕ್ಟ್ ಪದ್ಧತೆಯನ್ನು ಅಳವಡಿಸಿಕೊಂಡಿವೆ. ಹೆಚ್ಚಾಗಿ ದೇವಸ್ಥಾನದ ಮೂಲಕ ನಡೆಯುವ ಮೇಳಗಳು 1 ವರ್ಷಕ್ಕೆ ಕಲಾವಿದರೊಂದಿಗೆ ಒಪ್ಪಂದ ಮಾಡಿಕೊಂಡಿರುತ್ತವೆ. ಅವರಿಗೆ ಕಂತು ಕಂತಾಗಿ ಹಣ ನೀಡುತ್ತವೆ. ಇವುಗಳಲ್ಲಿ ಕೊರೋನದಿಂದ ಹೆಚ್ಚು ತೊಂದರೆಗೊಳಗಾದವರು ದಿನಗೂಲಿ ಆಧಾರದಲ್ಲಿ ದುಡಿಯುವವರು ಎಂದು ಮುರಲಿ ಕಡೆಕಾರ್ ಹೇಳಿದರು.
ಸದ್ಯ ಸರಕಾರದ ನಿರ್ದೇ ಶನದಂತೆ ಅ.13ರವರೆಗೆ ಯಾವುದೇ ಸಾಂಸ್ಕೃತಿಕ ಪ್ರದರ್ಶನಕ್ಕೆ ಅವಕಾಶವಿಲ್ಲ. ಸರಕಾರದ ಮುಂದಿನ ಮಾರ್ಗ ಸೂಚಿಯಂತೆ ಜಿಲ್ಲಾಡಳಿತ ಯಕ್ಷಗಾನ ಪ್ರದರ್ಶನಕ್ಕೆ ಅನುಮತಿ ನೀಡುವ ಬಗ್ಗೆ ನಿರ್ಧರಿಸಲಿದೆ. ಇನ್ನು ಯಕ್ಷಗಾನ ಕಲಾವಿದರ ಸಂಕಷ್ಟದ ಬಗ್ಗೆ ಸರಕಾರಕ್ಕೂ ಅರಿವಿದೆ. ಅವರು ಏನಾದರೂ ಕ್ರಮ ಕೈಗೊಳ್ಳಬಹುದು. ಕೊರೋನ ಪ್ರಭಾವ ತಗ್ಗಿ ಯಕ್ಷಗಾನ ಪ್ರದರ್ಶನಗಳಿಗೆ ಅವಕಾಶ ಸಿಗುವಂತಾಗಲಿ ಎಂಬುದು ನಮ್ಮ ಆಶಯವೂ ಆಗಿದೆ.
- ಕೂರ್ಮಾ ರಾವ್ ಎಂ., ಜಿಲ್ಲಾಧಿಕಾರಿ ಉಡುಪಿ
ಕೊರೋನ ನಮ್ಮ ನಿತ್ಯ ಬದುಕಿನ ಮೇಲೆ ತೀವ್ರ ಪರಿಣಾಮ ಉಂಟು ಮಾಡಿತ್ತು. ಮನೆ ಖರ್ಚು ನಿಭಾ ಯಿಸಲು ನಾನು ಪರದಾಡಿದ್ದೆ. ಮನೆಯಲ್ಲಿ ಮಗ-ಮಗಳು ಕೆಲಸವಿಲ್ಲದೇ ಸಂಕಷ್ಟದಲ್ಲಿದ್ದರು. ಇದರಿಂದ ನಾನು ಭಾವನ ಜೊತೆ ತೋಟದ ಕೆಲಸಕ್ಕೆ ಹೋಗುತಿದ್ದೆ. ಇದೀಗ ಮತ್ತೆ ಮಂದಾರ್ತಿ ಮೇಳದೊಂದಿಗೆ 1 ವರ್ಷದ ಒಪ್ಪಂದಕ್ಕೆ ಸಹಿ ಹಾಕಿದ್ದೇನೆ. ಮುಂದಿನ ನವೆಂಬರ್ನಿಂದ ಮೇಳದ ಪ್ರದರ್ಶನ ಆರಂಭಗೊಳ್ಳಬಹುದು.
- ಚಂದ್ರ ನಾಯ್ಕ, ಮಂದಾರ್ತಿ ಮೇಳದ ಕಲಾವಿದ
ನಿಜವಾಗಿಯೂ ಮೊದಲ ಲಾಕ್ಡೌನ್ ಸಂದರ್ಭದಲ್ಲಿ ಕೊರೋನ ಬಗ್ಗೆ ಏನೊಂದು ಗೊತ್ತಿಲ್ಲದ ಯಕ್ಷಗಾನ ಕಲಾವಿದರು ತುಂಬಾ ಸಂಕಷ್ಟಕ್ಕೆ ಒಳಗಾಗಿದ್ದರು. ಆದರೆ 2ನೇ ಲಾಕ್ಡೌನ್ ವೇಳೆ ಕೆಲವರಾದರೂ ಎಚ್ಚೆತ್ತು ಕೊಂಡು ಬೇರೆ ಬೇರೆ ಉದ್ಯೋಗದತ್ತ ಮುಖ ಮಾಡಿದ್ದರು. ಏನಿದ್ದರೂ ಯಕ್ಷಗಾನ ಪ್ರದರ್ಶನ ಮತ್ತೆ ಪ್ರಾರಂಭಗೊಳ್ಳಲಿ ಎಂದು ಎಲ್ಲಾ ಕಲಾವಿದರೂ ಹಾರೈಸುತ್ತಿದ್ದಾರೆ.
- ಪಿ.ಕಿಶನ್ ಹೆಗ್ಡೆ, ಐದು ಯಕ್ಷಗಾನ ಮೇಳಗಳ ಮಾಲಕ ಉಡುಪಿ
ಯಕ್ಷಗಾನ ಕಲೆ ಎಂಬುದು ಸಮಷ್ಟಿ ಕಲೆಯಾದ ಕಾರಣ, ಕೊರೋನ ಮಾರ್ಗಸೂಚಿಗಳು ಇದರ ಮೇಲೆ ನೇರ ಪರಿಣಾಮ ಬೀರುತ್ತಿವೆ. ಇದರಿಂದ ಉಳಿದೆಲ್ಲಾ ಕ್ಷೇತ್ರಗಳಂತೆ ಯಕ್ಷಗಾನ ಇನ್ನೂ ಜನತೆ ಮುಂದೆ ಬರಲು ಸಾಧ್ಯವಾಗಿಲ್ಲ. ಬಡ ಹಾಗೂ ಹಿರಿಯ ಯಕ್ಷಗಾನ ಕಲಾವಿದರು ಕೊರೋನ ದಿಂದ ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ. ಯಕ್ಷಗಾನ ಕುಣಿತ ಬಿಟ್ಟು ಬೇರೇನೂ ತಿಳಿದಿಲ್ಲದ ಈ ಕಲಾವಿದರಿಗೆ ಯಕ್ಷಗಾನ ಕಲಾರಂಗ ಕೈಲಾದ ನೆರವು ನೀಡಿದೆ.
- ಮುರಲಿ ಕಡೆಕಾರ್, ಪ್ರ.ಕಾರ್ಯದರ್ಶಿ ಯಕ್ಷಗಾನ ಕಲಾರಂಗ ಉಡುಪಿ