ಮುಂಬೈ ಕನ್ನಡಕ್ಕೆ ಕ್ರೈಸ್ತರ ಕೊಡುಗೆ
ಕೇಂದ್ರ ಸರಕಾರದ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪಡೆದ ಕರ್ನಾಟಕದ ಪ್ರಥಮ ಕೊಂಕಣಿ ಸಾಹಿತಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು ಜಾನ್ ಬ್ಯಾಪಿಸ್ಟ್ ಮೊರಾಯಸ್. ಜೆ.ಬಿ. ಮೊರಾಯಸ್ ಎಂದೇ ಖ್ಯಾತನಾಮವಾಗಿರುವ ಮೂಲತಃ ನಿಡ್ಡೋಡಿಯವರಾದ ಇವರು ತಮ್ಮ ‘ಭಿತರ್ಲೆಂ ತೂಫಾನ್’ ಎಂಬ ಕೊಂಕಣಿ ಕವಿತಾ ಸಂಕಲನಕ್ಕೆ (1985) ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪಡೆದಿದ್ದಾರೆ. ಇವರ ಕವಿತೆಗಳು ಸರಳವಾಗಿದ್ದರೂ ಧ್ವನಿಪೂರ್ಣವಾಗಿದ್ದು ಮೊರಾಯಸ್ ಅವರ ವ್ಯಕ್ತಿತ್ವವನ್ನು ಅವುಗಳು ಪ್ರತಿನಿಧಿಸುತ್ತಿವೆ.
ಭಾಗ-1
ಕರಾವಳಿ ಕರ್ನಾಟಕವು ಒಂದೊಮ್ಮೆ ಸೌಹಾರ್ದಕ್ಕೆ ಭಾವೈಕ್ಯಕ್ಕೆ ಅತ್ಯುತ್ತಮ ಉದಾಹರಣೆಯಾಗಿತ್ತು; ಮಾದರಿಯಾಗಿತ್ತು. ಕರಾವಳಿಯು ಕನ್ನಡದೊಂದಿಗೆ ತುಳು, ಬ್ಯಾರಿ, ಕುಂದಗನ್ನಡ, ಮೋಯ, ಮಲಯಾಳ, ಕೊರಗ, ಉರ್ದು, ಕೊಂಕಣಿ ಮೊದಲಾದ ಹತ್ತು ಹಲವು ಭಾಷೆಗಳ ಬೀಡಾದರೂ ಇಲ್ಲಿ ಕನ್ನಡಕ್ಕೆ ಎಂದೂ ಕುತ್ತಾಗಿಲ್ಲ. ಇಲ್ಲಿನ ಹೆಚ್ಚಿನ ಭಾಷೆಗಳಲ್ಲಿ ಕನ್ನಡದಷ್ಟೇ ಮಹತ್ವಪೂರ್ಣ ಸಾಹಿತ್ಯ ಕೃತಿಗಳು ಬೆಳಕು ಕಂಡಿವೆ; ಕಾಣುತ್ತಿವೆ. ಈ ಎಲ್ಲಾ ಭಾಷಿಕರಲ್ಲಿ ಅನೇಕರು ಅನಿವಾರ್ಯ ಕಾರಣಗಳಿಂದ ಮುಂಬೈಗಾಗಮಿಸಿ, ಇಲ್ಲಿ ನೆಲೆ ನಿಂತರೂ ಅವರು ಕನ್ನಡದ ಜತೆಜತೆಗೆ ತಮ್ಮ ಮಾತೃಭಾಷೆಗಳನ್ನೂ ಉಳಿಸಿ ಬೆಳೆಸುತ್ತ ಬಂದಿದ್ದಾರೆ. ಪ್ರಸ್ತುತ ಗೋವಾದ ಕಾರಣದಿಂದಾಗಿ ನಮ್ಮ ಕೊಂಕಣಿ ಭಾಷೆಗೆ ರಾಷ್ಟ್ರ ಮನ್ನಣೆಯೂ ದೊರೆತಿದೆ. ಕೊಂಕಣಿ ಭಾಷೆಯಲ್ಲಿ ಮುಂಬೈ ಕನ್ನಡಿಗ ಕ್ರೈಸ್ತರು ಮಾಡಿದ ಸಾಹಿತ್ಯ ಸಾಧನೆ ದಾಖಲಾರ್ಹವಾದುದು.
ಮೂಲತಃ ಮಂಗಳೂರು ಪಳ್ನೀರ್‌ನ ಜಿ.ಎಂ.ಬಿ. ರೊಡ್ರಿಗಸ್ (6.1.1914) ಬಹುಮುಖ ಪ್ರತಿಭೆಯ ವ್ಯಕ್ತಿತ್ವ ಮೈಗೂಡಿಸಿಕೊಂಡವರು. ಬಡತನದಿಂದಾಗಿ ಬಾಲ್ಯದಲ್ಲೇ ಮದ್ರಾಸ್, ಕೋಲ್ಕತಾ, ಮುಂಬೈ ಎಂದು ಅಲೆದಾಡಿ ಕೊನೆಗೆ ನೆಲೆನಿಂತದ್ದು ಮುಂಬೈಯಲ್ಲೇ. ಪತ್ರಕರ್ತ, ಪ್ರಿಂಟರ್, ಪ್ರಕಾಶಕ, ನಾಟಕಕಾರ, ನಟ, ನಿರ್ದೇಶಕನಾಗಿ, ರೇಡಿಯೊ ಕಲಾವಿದನಾಗಿ, ಸಾಮಾಜಿಕ ಕಾರ್ಯಕರ್ತನಾಗಿ -ಹೀಗೆ ಎಲ್ಲ ಕಡೆಯೂ ತನ್ನನ್ನು ತಾನು ತೊಡಗಿಸಿಕೊಂಡವರು. ‘ಸಂಡೆ ಸ್ಟಾಂಡರ್ಡ್’, ‘ಬ್ಲಿಟ್ಜ್’, ‘ಟೈಮ್ಸ್ ಆಫ್ ಇಂಡಿಯಾ’ ಮೊದಲಾದ ಪ್ರಸಿದ್ಧ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದ್ದ ರೊಡ್ರಿಗಸ್, ಠಾಕ್ರೆ ಆ್ಯಂಡ್ ಕಂಪೆನಿ ಮತ್ತು ಪರ್ಲ್ ಪಬ್ಲಿಕೇಶನ್ ಇದರ ಪ್ರೂಫ್ ರೀಡಿಂಗ್ ಮಾಸ್ಟರ್ ಆಗಿದ್ದವರು. ಕೊಡಿಯಾಲ್‌ಬೈಲ್ ಪ್ರೆಸ್‌ನಲ್ಲಿ (1930) ಅಚ್ಚಿನ ಮನೆಯ ಮೂಲಪಾಠವನ್ನು ಕಲಿತು ಮುಂಬೈಗೆ ಆಗಮಿಸಿದ್ದರು. ಇಲ್ಲಿ ಇಳಿವಯಸ್ಸಿನಲ್ಲೂ ಅಚ್ಚಿನ ಮನೆಯ ಕ್ಷೇತ್ರದಲ್ಲಿದ್ದು ಹಲವಾರು ಯುವ ಮುದ್ರಕರಿಗೆ ಮಾರ್ಗದರ್ಶಕರಾಗಿದ್ದುದು, ಆ ವೃತ್ತಿಯಲ್ಲಿ ಅವರಿಗಿದ್ದ ಅಪರಿಮಿತ ಜ್ಞಾನವನ್ನು ಸೂಚಿಸುತ್ತದೆ.
ಕೊಡಿಯಾಲ್‌ಬೈಲ್ ಪ್ರೆಸ್‌ನಲ್ಲಿದ್ದಾಗ ಪ್ರೆಸ್ ಕಾರ್ಮಿಕರು ಸೇರಿ ರಂಗಕ್ಕೆ ತಂದ ‘ಅಲೋಶಿಯಸ್’ ನಾಟಕದಲ್ಲಿ ಮುಖ್ಯ ಭೂಮಿಕೆಯನ್ನು ನಿರ್ವಹಿಸಿದ್ದ ರೊಡ್ರಿಗಸ್ ನಂತರ ನಾಟಕ ರಂಗದಲ್ಲಿ ಸದಾ ಕ್ರಿಯಾಶೀಲರಾಗಿದ್ದವರು. ಸುಮಾರು 50ಕ್ಕಿಂತಲೂ ಹೆಚ್ಚು ನಾಟಕಗಳನ್ನು ರಚಿಸಿದ್ದ ಇವರು 53ನಾಟಕಗಳಲ್ಲಿ ಅಭಿನಯಿಸಿದ್ದರು. 57ನಾಟಕಗಳನ್ನು ತಮ್ಮ ಜೀವಿತಕಾಲದಲ್ಲಿ ನಿರ್ದೇಶಿಸಿ ರಂಗಕ್ಕೆ ತಂದಿದ್ದ ರೊಡ್ರಿಗಸ್ ಅವರನ್ನು ನಾಟಕ ಪ್ರೇಮಿಗಳು ಇಂದೂ ಸ್ಮರಿಸುತ್ತಿದ್ದಾರೆ. ‘ತಾಯಿಯ ಮಮತೆ’, ‘ನನ್ನ ಮದುವೆ’, ‘ಭೂಕಂಪ’ ಈ ಮೂರು ನಾಟಕಗಳು ಇವರ ಅತ್ಯುತ್ತಮ ನಾಟಕಗಳೆಂದು ಗುರುತಿಸಲ್ಪಟ್ಟಿವೆ. ‘ಜನವಾಣಿ’ ಮತ್ತು ‘ಪ್ರಜಾಮತ’ಗಳಲ್ಲಿ ದುಡಿಯುತ್ತಿದ್ದಾಗ ಆಂಗ್ಲ ಸರಕಾರದ ಧೋರಣೆಯಿಂದ ಕೆಲಸ ಕಳೆದುಕೊಂಡ ರೊಡ್ರಿಗಸ್, ಮಹಾನಗರದಲ್ಲಿ ಪತ್ರಿಕಾ ರಂಗದ ನಂಟು ಮುಂದುವರಿಸಿದ್ದರು. ಅವರು ‘ಸುಖ-ದುಃಖ’ (ಪಾಕ್ಷಿಕ), ‘ಪೂಲ್’ (ದೈನಿಕ), ‘ಸಮಾಜಿಚ್ಚೆಮ್ ವೊಜ್ರ’(ಮಾಸಿಕ) ಹಾಗೂ ‘ಎಕ್‌ವೊಟ್ಟ್’ ಮೊದಲಾದ ಕೊಂಕಣಿ ಪತ್ರಿಕೆಗಳನ್ನು ಸಂಪಾದಿಸಿ, ಪ್ರಕಟಿಸಿದ್ದರು.
ಹಲವಾರು ನಾಟಕಗಳನ್ನು ನಿರ್ದೇಶಿಸಿ ರಂಗಕ್ಕೆ ತಂದ ರೊಡ್ರಿಗಸ್ ಕೊಂಕಣಿಯಲ್ಲಿ ‘ಸುಖಿ ಕೋಣ್?’ ಎಂಬ ಚಲನ ಚಿತ್ರ ನಿರ್ಮಿಸಿದ್ದರು. ಆ ಚಿತ್ರ ಅಷ್ಟೊಂದು ಯಶಸ್ವಿ ಅನಿಸದಿದ್ದರೂ ಮಂಗಳೂರು ಕೊಂಕಣಿಗರ ಪ್ರಥಮ ಚಲನಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ತಮ್ಮ ನಾಟಕ ಹಾಗೂ ಅಭಿನಯಕ್ಕಾಗಿ 1936, 1939, 1942ರಲ್ಲಿ ಹಾಗೂ ನಾಟಕಕ್ಕಾಗಿ 1943ರಲ್ಲಿ ಪ್ರಶಸ್ತಿಗಳನ್ನು ಪಡೆದಿದ್ದ ರೊಡ್ರಿಗಸ್‌ರನ್ನು ಇಲ್ಲಿನ ‘ಮಜ್ದೂರ್ ಸಂಘ’ (1972), ‘ಕಾರ್ಕಳ ಡ್ರಮ್ಯಾಟಿಕ್ ಅಸೋಸಿಯೇಶನ್, ಬಾಂಬೆ’ (1973) ‘ಕಲಾಸಾಗರ ಮುಂಬೈ’ ಮೊದಲಾದ ಸಂಘ ಸಂಸ್ಥೆಗಳು ಗೌರವಿಸಿದ್ದಲ್ಲದೆ 1976ರಲ್ಲಿ ಜರುಗಿದ ಅಖಿಲ ಭಾರತ ಕೊಂಕಣಿ ಸಮಾವೇಶದಲ್ಲಿ ಗೌರವ ಪುರಸ್ಕಾರಕ್ಕೂ ಅವರು ಭಾಜನರಾಗಿದ್ದರು.
ಕೇಂದ್ರ ಸರಕಾರದ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪಡೆದ ಕರ್ನಾಟಕದ ಪ್ರಥಮ ಕೊಂಕಣಿ ಸಾಹಿತಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು ಜಾನ್ ಬ್ಯಾಪಿಸ್ಟ್ ಮೊರಾಯಸ್. ಜೆ.ಬಿ. ಮೊರಾಯಸ್ ಎಂದೇ ಖ್ಯಾತನಾಮವಾಗಿರುವ ಮೂಲತಃ ನಿಡ್ಡೋಡಿಯವರಾದ ಇವರು ತಮ್ಮ ‘ಭಿತರ್ಲೆಂ ತೂಫಾನ್’ ಎಂಬ ಕೊಂಕಣಿ ಕವಿತಾ ಸಂಕಲನಕ್ಕೆ (1985) ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪಡೆದಿದ್ದಾರೆ. ಇವರ ಕವಿತೆಗಳು ಸರಳವಾಗಿದ್ದರೂ ಧ್ವನಿಪೂರ್ಣವಾಗಿದ್ದು ಮೊರಾಯಸ್ ಅವರ ವ್ಯಕ್ತಿತ್ವವನ್ನು ಅವುಗಳು ಪ್ರತಿನಿಧಿಸುತ್ತಿವೆ. ಬದುಕನ್ನು ಅರಸುತ್ತಾ ಮುಂಬೈಗೆ ಆಗಮಿಸಿದ್ದ (1951) ಕನಸುಗಾರ ಮೊರಾಯಸ್ ಇಲ್ಲಿ ಜೂನಿಯರ್ ಕ್ಲರ್ಕ್ ಆಗಿ ಸೇರಿಕೊಂಡದ್ದು ‘ಪಾರ್ಕ್ ಡೇವಿಸ್’ ಎಂಬ ಪ್ರತಿಷ್ಠಿತ ಕಂಪೆನಿಯಲ್ಲಿ. ಅಲ್ಲಿ ಪ್ರಾಮಾಣಿಕತೆ, ಬದ್ಧತೆಯಿಂದ ದುಡಿದು ನಿವೃತ್ತರಾಗುವಾಗ (1993) ಆ ದೊಡ್ಡ ಕಂಪೆನಿಯ ರೀಜನಲ್ ಮ್ಯಾನೇಜರ್ ಆಗಿದ್ದರು.
ಮೊರಾಯಸ್ ಅವರ ಕವಿತೆ, ಕಥೆಗಳಲ್ಲಿ ಅವಿದ್ಯಾವಂತರು, ಸಮಾಜದಲ್ಲಿ ಕಡೆಗಣಿಸಲ್ಪಟ್ಟವರು, ಜಾತಿ ವ್ಯವಸ್ಥೆ, ಬಡತನ ಹಾಗೂ ಕೆಳಸ್ತರದ ಜನರ ಬದುಕಿನ ಚಿತ್ರಗಳು ರೂಪಕ, ಉಪಮೆಗಳ ಮೂಲಕ ಚಿತ್ರಿತವಾಗುತ್ತಿದ್ದವು. ಸುಮಾರು ಹದಿನೆಂಟಕ್ಕಿಂತಲೂ ಹೆಚ್ಚು ಕೃತಿಗಳನ್ನು ಕೊಂಕಣಿ ಸಾಹಿತ್ಯ ಲೋಕಕ್ಕೆ ನೀಡಿರುವ ಮೊರಾಯಸ್ ಅವರ ಮಹಾನ್ ಕೃತಿ ಬೈಬಲ್ ಆಧಾರಿತ ‘ಜೀವಾಮೃತ’ ಮಹಾಕಾವ್ಯ. ಜಾರ್ಜ್ ಫೆರ್ನಾಂಡಿಸ್ ಅವರ ಜೀವನ ವೃತ್ತಾಂತ ಆಧರಿತ ‘ಏಕ್ ಸಾಹಸಿ ಜೀಣ್’ (1999) ಕೃತಿಯು ಶ್ರೇಷ್ಠಕೃತಿಯೆಂದು ಗುರುತಿಸಲ್ಪಟ್ಟಿತ್ತು. ಈ ಕೃತಿ ಡಾ. ಟಿ.ಎಂ.ಎ. ಪೈ ಫೌಂಡೇಶನ್, ಮಣಿಪಾಲ ಇದರ ವರ್ಷದ ಅತ್ಯುತ್ತಮ ಕೃತಿ ಪುರಸ್ಕಾರ ಪಡೆದಿತ್ತು. ಕವಿತೆ, ಅನುವಾದ, ಕಾದಂಬರಿ, ನಾಟಕ, ಮಹಾಕಾವ್ಯಗಳನ್ನು ಬರೆದಿದ್ದ ಮೊರಾಯಿಸ್ ಅವರು ಸಾಹಿತ್ಯ ಅಕಾಡಮಿಗಾಗಿ ‘ಕನ್ನಡ ಸಾಹಿತ್ಯ ಚರಿತ್ರೆ’ಯನ್ನು ಅನುವಾದಿಸಿದ್ದಾರೆ. ಹಾಗೆಯೇ ‘ಮೇಕರ್ಸ್ ಆಫ್ ಇಂಡಿಯನ್ ಲಿಟರೇಚರ್’ ಮಾಲಿಕೆಗೂ ತಮ್ಮ ಕೊಡುಗೆ ನೀಡಿದ್ದಾರೆ. ಶೇಕ್ಸ್‌ಪಿಯರ್‌ನ ಪ್ರಸಿದ್ಧ ನಾಟಕ ‘ರೋಮಿಯೋ ಜೂಲಿಯಟ್’ ಅನ್ನು ಕೊಂಕಣಿಗೆ ತಂದಿದ್ದಾರೆ(1954). ಸುಮಾರು 45 ವರ್ಷಗಳ ಕಾಲ ವಿವಿಧ ಪತ್ರಿಕೆಗಳ ಸಂಪಾದಕರಾಗಿದ್ದ ಮೊರಾಯಿಸ್ ‘ಕೊಂಕಣಿ ದಾಯ್ಜಿ’ ಮಾಸಿಕದ (1958) ಮೂವರು ಸ್ಥಾಪಕ ಸಂಪಾದಕರಲ್ಲಿ ಓರ್ವರಾಗಿದ್ದಾರೆ.
‘ಪಯ್ಣರಿ’ ವಾರಪತ್ರಿಕೆಯಲ್ಲಿ ಹನ್ನೆರಡು ವರ್ಷಗಳ ಕಾಲ ಸಂಪಾದಕೀಯ ಮಂಡಳಿಯಲ್ಲಿದ್ದು, ಪ್ರಸಿದ್ಧ ಮಂಗಳೂರು ಸಾಧಕರ ಕುರಿತು ಪ್ರತಿವಾರ ಬರೆಯುತ್ತಿದ್ದರು. ‘ದಿವೋ’ ವಾರಪತ್ರಿಕೆಯ (1995) ಸ್ಥಾಪಕ ಸಂಪಾದಕರಾಗಿದ್ದರು. ಕೊಂಕಣಿ ಭಾಷಾ ಮಂಡಲದ ತ್ರೈಮಾಸಿಕ ಪತ್ರಿಕೆಯ ಸಂಪಾದಕರಾಗಿದ್ದ ಇವರು 1995ರಲ್ಲಿ ನಡೆದ ಪ್ರಥಮ ವಿಶ್ವ ಕೊಂಕಣಿ ಸಮಾವೇಶದಲ್ಲಿ ‘ಕೊಂಕಣಿ ಪತ್ರಿಕೋದ್ಯಮದ ಸವಾಲುಗಳು’ ಕುರಿತು ಮಹತ್ತರ ಪ್ರಬಂಧ ಮಂಡಿಸಿದ್ದಾರೆ.
ಮಹಾರಾಷ್ಟ್ರ ಗೌರವ ಪುರಸ್ಕಾರ (1990) ಪಡೆದಿರುವ ಮೊರಾಯಸ್ ಅವರು ಸಂದೇಶ ಪ್ರತಿಷ್ಠಾನ ಸಾಹಿತ್ಯ ಪ್ರಶಸ್ತಿ(2001)ಗೂ ಭಾಜನರಾಗಿದ್ದಾರೆ. ನಿಧಾನವಾಗಿ ಹೆಜ್ಜೆ ಇಡುತ್ತಿದ್ದ ‘ಕೊಂಕಣಿ ಭಾಷಾ ಮಂಡಳ್, ಮುಂಬೈ’ ಇದಕ್ಕೆ ಪುನಶ್ಚೇತನ ಕೊಟ್ಟು (1992), ಅದರ ಗೌರವ ಕಾರ್ಯದರ್ಶಿಯಾಗಿದ್ದು 1993ರಲ್ಲಿ ಅರ್ಥಪೂರ್ಣವಾಗಿ ಅದರ ಐವತ್ತರ ಸಂಭ್ರಮ ಆಚರಿಸುವಂತಾಯಿತು. ಮಡ್ಗಾಂವ್‌ನಲ್ಲಿ ಜನವರಿ 1993ರಲ್ಲಿ ಜರುಗಿದ ಅಖಿಲ ಭಾರತ ಕೊಂಕಣಿ ಪರಿಷತ್ತಿನ ಅಧಿವೇಶನದ ಅಧ್ಯಕ್ಷತೆ ಅವರಿಗೆ ದೊರೆತುದು ಕನ್ನಡಿಗರೆಲ್ಲರಿಗೂ ಹೆಮ್ಮೆಯ ಸಂಗತಿ. ಭಾರತೀಯ ಜ್ಞಾನಪೀಠ ಪ್ರಶಸ್ತಿ ಸಲಹಾ ಮಂಡಳಿಯ ಕೊಂಕಣಿ ಭಾಷೆಯ ಸಂಯೋಜಕನಾಗಿಯೂ, ಕೇಂದ್ರ ಸಾಹಿತ್ಯ ಅಕಾಡಮಿಯ ಜನರಲ್ ಕೌನ್ಸಿಲ್ ಹಾಗೂ ಕೊಂಕಣಿ ಸಲಹಾ ಸಮಿತಿಯ ಸದಸ್ಯರಾಗಿದ್ದವರು ಮೊರಾಯಸ್.
ಬಯಲಾಟ, ನೇಮ, ಕಂಬಳ ಇತ್ಯಾದಿಗಳ ನಡುವೆ ಕೃಷಿಕ ಕುಟುಂಬದಲ್ಲಿ ಬಾಲ್ಯವನ್ನು ಕಳೆದಿದ್ದ ವಿ.ಡಿ. ಸಿಲ್ವಾ (85ರ ಹರೆಯ) ಬದುಕನ್ನರಿಸಿ ಮುಂಬೈಗೆ ಬಂದು ಪ್ರಿಂಟಿಂಗ್ ಪ್ರೆಸ್‌ನಲ್ಲಿ ದಿನ ಕೂಲಿಗಾಗಿ ಕೆಲಸ ಮಾಡುತ್ತಾ ಬದುಕನ್ನು ಕಟ್ಟಿಕೊಂಡವರು. ಕೊಂಕಣಿ ಸಮಾಜದ ಸಾಂಪ್ರದಾಯಿಕ ಮದುವೆ ಕುರಿತು ಬರೆದ ಇವರ ಕೃತಿ ದೇವನಾಗರಿ ಹಾಗೂ ಕನ್ನಡ ಲಿಪಿಗಳಲ್ಲಿ ಬೆಳಕು ಕಂಡು ಇವರಿಗೆ ಪ್ರತಿಷ್ಠೆ ತಂದುಕೊಟ್ಟಿದೆ. ಮೂಲತಃ ಕವಿಯಾಗಿರುವ ಇವರ ನಾಲ್ಕು ಕವಿತಾ ಸಂಕಲನಗಳು ಬೆಳಕಿಗೆ ಬಂದಿವೆ. ಇವರ ‘ಮಾಯಿ ಮೊಕ್ ಬಕ್ಷಿ’ (ತಾಯಿ ನನ್ನ ಕ್ಷಮಿಸು) ಕವಿತೆಯು ಗೋವಾದ ಹತ್ತನೇ ತರಗತಿ ವಿದ್ಯಾರ್ಥಿಗಳ ಪಠ್ಯದಲ್ಲಿ ಸೇರ್ಪಡೆಯಾಗಿದೆ. ಮಂಗಳೂರಿನ ಕುಲಶೇಖರದವರಾದ ವಿ.ಡಿ. ಸಿಲ್ವಾರ ಕವಿತೆಗಳಲ್ಲಿ ತುಳುನಾಡಿನ ವೈವಿಧ್ಯ, ಮೊಗವೀರ, ಕೃಷಿಕರ ಬದುಕು, ಅಲ್ಲಿನ ಜಾನಪದ ಪರಂಪರೆಗಳು ಪಡಿಮೂಡಿವೆ. ‘ಕುಟಾಮ್’ ‘ರಾಕ್ಣೊ’, ‘ದಿವೋ’ ಮೊದಲಾದ ಪತ್ರಿಕೆಗಳಲ್ಲಿ ಇವರ ನೂರಾರು ವೈಚಾರಿಕ ಲೇಖನಗಳು ಬೆಳಕು ಕಂಡಿವೆ. ಕಲಾಜಗತ್ತು ಮುಂಬೈ ಇವರ ಸೇವೆಯನ್ನು ಗುರುತಿಸಿ ‘ತೌಳವ ಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ. ‘ದಿವೋ’ ಪತ್ರಿಕೆ ಬಳಗ ನೀಡುವ ಜೀವನ ಸಾಧನೆ ಹಾಗೂ ಮಹಾರಾಷ್ಟ್ರ ಕೊಂಕಣ್ ಅಸೋಸಿಯೇಶನ್ ಕೊಡಮಾಡುವ ಜೀವನ ಸಾಧನೆ ಪ್ರಶಸ್ತಿಯನ್ನು ಪಡೆದಿದ್ದಾರೆ.
1973ರಲ್ಲಿ ಮುಂಬೈಗಾಗಮಿಸಿ ಮರುವರ್ಷದಿಂದಲೇ ಇಲ್ಲಿನ ಮನಪಾ ಕನ್ನಡ ಶಾಲೆಗೆ ಅಧ್ಯಾಪನ ಮಾಡಲು ಸೇರಿಕೊಂಡ ಸಿಸಿಲ್ಯಾ ಸಿಪ್ರಿಯನ್ ಡಿ’ ಕಾಸ್ತ ಸದ್ದಿಲ್ಲದೆ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ಆದರ್ಶ ವ್ಯಕ್ತಿತ್ವ. ತಮ್ಮ ಹುಟ್ಟೂರು ಉಪ್ಪಿನಂಗಡಿಯಲ್ಲಿ ಹತ್ತನೇ ತರಗತಿ ಮುಗಿಸಿ ಟೀಚರ್ ಟ್ರೈನಿಂಗ್ ಪಡೆದು ಇಲ್ಲಿ ಎಸ್‌ಎನ್‌ಡಿಟಿ ಯುನಿರ್ವಸಿಟಿ ಮೂಲಕ ಬಿಎ ಪದವಿ ಪಡೆದರು. ಕೆಲ ವರ್ಷ ನಿತ್ಯಾನಂದ ರಾತ್ರಿಶಾಲೆ(ಕನ್ನಡ)ಯಲ್ಲಿ ಅಧ್ಯಾಪನ ಮಾಡಿದ್ದ ಸಿಪ್ರಿಯನ್ ‘ಬಂಟರವಾಣಿ’ ಮೊದಲಾದ ಪತ್ರಿಕೆಗಳಿಗೆ ಕಳೆದ ಇಪ್ಪತ್ತು ವರ್ಷಗಳಿಂದ ಲೇಖನಗಳನ್ನು ಬರೆಯುತ್ತಿದ್ದಾರೆ. ಸಾಮಾಜಿಕ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಇವರ ಲೇಖನಗಳು ಕೂಡ ಅಂತಹ ವಿಷಯಗಳಿಂದಲೇ ಕೂಡಿವೆ. ಸಾವಿರಾರು ಲೇಖನಗಳನ್ನು ಬರೆದಿರುವ ಸಿಪ್ರಿಯನ್ ವಿಕ್ರೋಲಿಯಲ್ಲಿ ತಮ್ಮ ನಿವೃತ್ತಿ ಬದುಕು ಸಾಗಿಸುತ್ತಿದ್ದಾರೆ. ಸುರತ್ಕಲ್‌ನಲ್ಲಿರುವ ತಮ್ಮ ಮನೆಗೆ ಆಗಾಗ ಭೇಟಿ ನೀಡಿ ಬರುತ್ತಿರುವ ಇವರಿಗೆ ಸಾಹಿತ್ಯ ಸಮಾರಂಭ, ನಾಟಕಗಳೆಂದರೆ ಪಂಚಪ್ರಾಣ.
ಆದರ್ಶ ಶಿಕ್ಷಕರೊಬ್ಬರ ಮಗಳಾಗಿ ತಾಯಿಯ ಆಸರೆಯಲ್ಲಿ ಜನಪದ ಕಥೆಗಳನ್ನು ಕೇಳುತ್ತಾ ಬೆಳೆದ ಮೇರಿ ಎಂಬ ಪುಟ್ಟ ಬಾಲಕಿ ಅಂದಿನ ಸ್ವಸ್ಥ ಸಮಾಜದಲ್ಲಿ ಅರಳಿ ವೈವಾಹಿಕ ಜೀವನದ ನಂತರ ಮುಂಬೈಗೆ ಆಗಮಿಸಿ ಇಲ್ಲಿ ತಂದೆ ತಾಯಿಯಿತ್ತ ಸಂಸ್ಕಾರದಿಂದ ಆದರ್ಶ ಶಿಕ್ಷಕಿ, ಲೇಖಕಿಯಾದ ಕಥೆ ಚೇತೋಹಾರಿಯಾದುದು. ಸಮಾಜದಲ್ಲಿ ತುಳಿತಕ್ಕೊಳಗಾದವರನ್ನು ಕಂಡರೆ ಸದಾ ಅವರ ಸಾಂತ್ವನಕ್ಕೆ ಧಾವಿಸುವ ನಿಸ್ವಾರ್ಥ ಮನಸ್ಸಿನ ಮೇರಿ ಬಿ. ಪಿಂಟೋ ಕೊಳೆಗೇರಿ ಪ್ರದೇಶದಲ್ಲಿ ಮನಪಾ ಶಾಲೆಗಳ ಹುಟ್ಟಿಗೆ ಕಾರಣರಾಗಿದ್ದವರು. ಎಪ್ಪತ್ತರ ದಶಕದಿಂದಲೇ ಕಥೆ, ಕವನ, ಲೇಖನಗಳನ್ನು ಬರೆಯಲು ಆರಂಭಿಸಿದ್ದ ಮೇರಿ ಬಿ. ಪಿಂಟೋ ಅವರ ಪ್ರಥಮ ಕಥೆ ‘ಸತ್ಯಕ್ಕೆ ಜಯ’ (1977) ‘ಪಯ್ಣೆರಿ’ ವಾರಪತ್ರಿಕೆಯಲ್ಲಿ ಬೆಳಕು ಕಂಡಿತ್ತು. ಮುಂದೆ ‘ಕರ್ನಾಟಕ ಮಲ್ಲ’ ಮೊದಲಾದ ಪತ್ರಿಕೆಗಳಲ್ಲಿ ಕತೆ, ಲೇಖನಗಳು ಕೊಂಕಣಿ ಹಾಗೂ ಕನ್ನಡದಲ್ಲಿ ಪ್ರಕಟಗೊಳ್ಳುತ್ತಿದ್ದವು. ಹಲವಾರು ಕಥೆಗಳನ್ನು, ನೂರಾರು ಲೇಖನಗಳನ್ನು ಬರೆದಿದ್ದ ಮೇರಿ ಬಿ. ಪಿಂಟೋ ಅವರ ಕನ್ನಡ ಕಥಾಸಂಕಲನ ‘ಆಸರೆ’ (2012) ಬೆಳಕು ಕಂಡು ಸಹೃದಯರ ಮೆಚ್ಚುಗೆಗೆ ಪಾತ್ರವಾಗಿದೆ. ಇವರನ್ನು ‘ದಿವೋ’ ವಾರ್ಷಿಕ ಪ್ರಶಸ್ತಿಯನ್ನಿತ್ತು ಗೌರವಿಸಿದೆ