ರೈತರ ಸರದಾರ
1929ರಲ್ಲಿ ಪ್ರಕಟವಾದ ಬಾರ್ಡೊಲಿ ಸತ್ಯಾಗ್ರಹದ ಕುರಿತ ಕೃತಿಯಲ್ಲಿ ಮಹಾದೇವ ದೇಸಾಯಿ ಅವರು ಸರ್ದಾರ್ ಪಟೇಲರು ನೈಜವಾದ ಸಾಮಾಜಿಕ ಆರ್ಥಿಕತೆಯಲ್ಲಿ ರೈತನ ಸ್ಥಾನವು ಉನ್ನತಮಟ್ಟದ್ದಾಗಿದೆ ಎಂದು ಪ್ರತಿಪಾದಿಸಿದ್ದರು ಹಾಗೂ ‘ಆದರೆ ಆತನನ್ನು ಅತ್ಯಂತ ದಯನೀಯ ಮಟ್ಟಕ್ಕೆ ಇಳಿಸಿರುವ ಬಗ್ಗೆ ಅವರು ಕಟುವಾದ ಆಕ್ರೋಶವನ್ನು ಹೊಂದಿದ್ದರು’ ಎಂದು ಹೇಳಿದ್ದಾರೆ. ‘‘ರೈತನು ಉತ್ಪಾದಕನಾಗಿದ್ದಾನೆ. ಇತರರು ಪರಾವಲಂಬಿಗಳು’’ ಎಂದು ಪಟೇಲ್ ಭಾರತೀಯ ರೈತನ ಗುಣಗಾನ ಮಾಡಿದ್ದಾರೆಂದು ದೇಸಾಯಿ ಉಲ್ಲೇಖಿಸಿದ್ದಾರೆ. ಬಾರ್ಡೊಲಿ ಸತ್ಯಾಗ್ರಹವು ಹೇಗೆ ಯಶಸ್ವಿಯಾಯಿತೆಂದರೆ, ಸರ್ದಾರ್ ಅವರು ತನ್ನ ಸಹ ರೈತರಿಗೆ ನಿರ್ಭೀತಿತನ ಹಾಗೂ ಏಕತೆ ಎಂಬ ಎರಡು ಮೂಲಭೂತ ಪಾಠಗಳನ್ನು ಬೋಧಿಸಿದ್ದರೆಂದು ದೇಸಾಯಿ ಹೇಳುತ್ತಾರೆ.
1931ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ವಾರ್ಷಿಕ ಸಭೆಯು ಬಂದರು ನಗರ ಕರಾಚಿಯಲ್ಲಿ ನಡೆದಿತ್ತು. ವಲ್ಲಭಭಾಯ್ ಪಟೇಲ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಈ ಸಂದರ್ಭ ಅವರು ತನ್ನ ಭಾಷಣದ ಆರಂಭದಲ್ಲಿ ಹೀಗೆ ಹೇಳಿದ್ದರು. ‘‘ನೀವು ಓರ್ವ ಸಾಮಾನ್ಯ ರೈತನನ್ನು ಯಾವುದೇ ಭಾರತೀಯ ಹಂಬಲಿಸುವಂತಹ ಉನ್ನತ ಹುದ್ದೆಗೆ ಆಯ್ಕೆ ಮಾಡಿದ್ದೀರಿ. ದೇಶದ ಪ್ರಥಮ ಸೇವಕನಾಗಿ ನನ್ನನ್ನು ನೀವು ಆಯ್ಕೆ ಮಾಡಿರುವುದು ನಾನು ಮಾಡಬೇಕಾದ ಕಾರ್ಯಗಳಿಗಿಂತ ದೊಡ್ಡದೇನೂ ಅಲ್ಲವೆಂಬ ಪ್ರಜ್ಞೆ ನನಗಿದೆ. ಆದರೆ ಗುಜರಾತ್ ಮಾಡಿರುವ ಅದ್ಭುತವಾದ ತ್ಯಾಗಕ್ಕೆ ನೀಡಿದ ಮನ್ನಣೆ ಇದಾಗಿದೆ. ಔದಾರ್ಯದೊಂದಿಗೆ ನೀವು ಗುಜರಾತ್‌ಗೆ ಈ ಗೌರವವನ್ನು ನೀಡಿದ್ದೀರಿ. ಆದರೆ ವಾಸ್ತವಿಕವಾಗಿ ನಮಗೆ ತಿಳಿದಿರುವ ಆಧುನಿಕ ಕಾಲಘಟ್ಟದಲ್ಲಿ ದೇಶದ ಪ್ರತಿಯೊಂದು ಪ್ರಾಂತವೂ ಮಹೋನ್ನತವಾದ ರಾಷ್ಟ್ರೀಯ ಜಾಗೃತಿಗಾಗಿ ಶ್ರಮಿಸಿದೆ.
1931ರ ವೇಳೆಗೆ ಕಾಂಗ್ರೆಸ್ ಪಕ್ಷವು ಅಸ್ತಿತ್ವಕ್ಕೆ ಬಂದು ನಾಲ್ಕು ದಶಕಗಳೇ ಕಳೆದಿದ್ದವು. ‘‘ಭಾರತದ ಬದುಕು ಅದರ ಹಳ್ಳಿಗಳಲ್ಲಿದೆ’’ ಎಂದು ಮಹಾತ್ಮಾಗಾಂಧಿಯವರು ಬಣ್ಣಿಸಿದ್ದರಾದರೂ, ಆ ಕಾಲದಲ್ಲಿ ಕಾಂಗ್ರೆಸ್ ಪಕ್ಷವು ರೈತ ಕುಟುಂಬದ ವ್ಯಕ್ತಿಯನ್ನು ಯಾವತ್ತೂ ಸಂಘಟನೆಯ ವರಿಷ್ಠನಾಗಿ ಆಯ್ಕೆ ಮಾಡಲಿಲ್ಲ. ಆ ತನಕ ಕಾಂಗ್ರೆಸ್‌ನ ಹಿಂದಿನ ಎಲ್ಲಾ ಅಧ್ಯಕ್ಷರು ನಗರಗಳಲ್ಲಿಯೇ ಹುಟ್ಟಿ ಬೆಳೆದವರಾಗಿದ್ದರು.
ವಲ್ಲಭಭಾಯ್ ಪಟೇಲ್ ಅವರು ಗ್ರಾಮೀಣ ಹಿನ್ನೆಲೆಯಿಂದ ಬಂದ ಸ್ವಾತಂತ್ರ ಹೋರಾಟದ ಪ್ರಪ್ರಥಮ ಪ್ರಮುಖ ನಾಯಕರಾಗಿದ್ದಾರೆ. ರೈತರನ್ನು ಸಂಘಟಿಸುವ ಮೂಲಕ ಅವರು ರಾಷ್ಟ್ರೀಯ ವೇದಿಕೆಯಲ್ಲಿ ತನ್ನ ಗುರುತನ್ನು ಮೂಡಿಸಿದರು. ಪಟೇಲ್ ಅವರ ಐತಿಹಾಸಿಕ ಸಾಧನೆ ಕುರಿತ ಚರ್ಚೆಗಳಲ್ಲಿ, ಅರಸೊತ್ತಿಗೆಯ ರಾಜ್ಯಗಳನ್ನು ಭಾರತೀಯ ಗಣರಾಜ್ಯದಲ್ಲಿ ವಿಲೀನಗೊಳಿಸುವಲ್ಲಿ ಮತ್ತು ಸ್ವಾತಂತ್ರ ಹಾಗೂ ವಿಭಜನೆಯ ಆನಂತರ ರಾಷ್ಟ್ರೀಯ ಏಕತೆಯನ್ನು ಮೂಡಿಸುವಲ್ಲಿ ಅವರು ವಹಿಸಿದಂತಹ ಪಾತ್ರದ ಬಗ್ಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಅವರ ಕೊಡುಗೆಗಳು ಖಂಡಿತವಾಗಿಯೂ ಗಮನಾರ್ಹವಾದುದಾಗಿವೆ. ಆದರೆ, ಅವುಗಳ ಬಗ್ಗೆಯೇ ವಿಶೇಷವಾದ ಗಮನವನ್ನು ನೀಡುತ್ತಾ ರೈತರ ಸಂಘಟಕನಾಗಿ ಅವರು ನಿರ್ವಹಿಸಿದಂತಹ ರಚನಾತ್ಮಕ ಕಾರ್ಯವನ್ನು ಮರೆಮಾಚುತ್ತಿರುವುದು ವಿಷಾದಕರವಾಗಿದೆ. ಮೋದಿ ಸರಕಾರದ ವಿರುದ್ಧ ಉತ್ತರ ಭಾರತದ ರೈತರು 9 ತಿಂಗಳಿಗೂ ಅಧಿಕ ಸಮಯದಿಂದ ಸತ್ಯಾಗ್ರಹವನ್ನು ನಡೆಸುತ್ತಿರುವುದು ಖಂಡಿತವಾಗಿಯೂ ಪಟೇಲ್ ಅವರು ಕಿಸಾನರ ಸರದಾರ (ನಾಯಕ)ನಾಗಿದ್ದುದು ಹಿಂದೆಂದಿಗಿಂತಲೂ ಇಂದು ನಮಗೆ ಹೆಚ್ಚು ಪ್ರಸ್ತುತವೆನಿಸುತ್ತದೆ.
1928ರ ಬಾರ್ಡೊಲಿ ಸತ್ಯಾಗ್ರಹವನ್ನು ವಲ್ಲಭಭಾಯ್ ಪಟೇಲ್ ಸಂಘಟಿಸಿದ್ದರು ಹಾಗೂ ಅದರ ನೇತೃತ್ವ ವಹಿಸಿದ್ದರು. ಈ ಸತ್ಯಾಗ್ರಹದಲ್ಲಿ ಅವರು ರೈತರ ಆತ್ಮಗೌರವಕ್ಕಾಗಿನ ಹೋರಾಟದಲ್ಲಿ ಅಹಿಂಸೆಯ ಶಕ್ತಿ ಹಾಗೂ ಸಾಮರ್ಥ್ಯವನ್ನು ಸ್ಪಷ್ಟವಾಗಿ ತೋರ್ಪಡಿಸಿದ್ದರು. ಈ ಹೋರಾಟದಲ್ಲಿ ಅವರು ಗ್ರಾಮಾಂತರ ಗುಜರಾತ್‌ನ ರೈತರನ್ನು ವಸಾಹತುಶಾಹಿ ಬ್ರಿಟಿಷರ ದಮನಕಾರಿ ಕೃಷಿ ನೀತಿಗಳ ವಿರುದ್ಧ ಒಗ್ಗೂಡಿಸಿದ್ದರು. ಅವರ ಚಳವಳಿಯ ಸಮೃದ್ಧ ವಿವರಗಳು ಈಗ ಮುಂಬೈನ ಮಹಾರಾಷ್ಟ್ರ ರಾಜ್ಯ ಆರ್ಕೈವ್ಸ್‌ನಲ್ಲಿ ಸಂಗ್ರಹಿಸಿಡಲಾದ ಬಾಂಬೆ ಪ್ರೆಸಿಡೆನ್ಸಿ ಆಡಳಿತದ ದಾಖಲೆಗಳಲ್ಲಿ ಅಡಕವಾಗಿವೆ.
ಸತ್ಯಾಗ್ರಹದ ತಿಂಗಳುಗಳಲ್ಲಿ ಬಾರ್ಡೊಲಿಯಲ್ಲಿ ಪಟೇಲ್ ಅವರ ಭಾಷಣಗಳು ಭಾಷಾಂತರ ರೂಪಗಳು ಸಹ ಮತ್ತೆ ಮತ್ತೆ ಓದುವಂತೆ ಮಾಡುತ್ತವೆ. ಅವರು ತನ್ನ ಒಂದು ಭಾಷಣದಲ್ಲಿ ರೈತರು ದಿಟ್ಟತನ ಹಾಗೂ ತ್ಯಾಗವನ್ನು ಪ್ರದರ್ಶಿಸುವಂತೆ ಕರೆ ನೀಡಿದ್ದರು. ‘‘ನೀವು ಯಾರಿಗೆ ಹೆದರುತ್ತೀರಿ’’ ಎಂದವರು ಗುಜರಾತ್‌ನಲ್ಲಿ ರೈತರನ್ನು ಪ್ರಶ್ನಿಸುತ್ತಾರೆ. ‘‘ನಿಮ್ಮ ಸೊತ್ತುಗಳನ್ನು ಮುಟ್ಟುಗೋಲು ಹಾಕಲಾಗುವುದೆಂಬ ಭೀತಿಯೇ ನಿಮಗೆ? ನೀವು ಮದುವೆ ಕಾರ್ಯಕ್ರಮಗಳಿಗೆ ಸಾವಿರಾರು ರೂ. ಖರ್ಚು ಮಾಡುತ್ತೀರಿ. ಹೀಗಿರುವಾಗ ಸರಕಾರಿ ಅಧಿಕಾರಿಗಳು ಒಂದು ವೇಳೆ ನಿಮ್ಮ 200 ರೂ. ಅಥವಾ 500 ರೂ. ಬೆಲೆಬಾಳುವ ಸೊತ್ತುಗಳನ್ನು ಕೊಂಡೊಯ್ದಲ್ಲಿ ಯಾಕೆ ಚಿಂತಿಸುತ್ತೀರಿ. ಅವರು ಮುಂದುವರಿದು ‘‘ಐದು ಸಾವಿರ ಕುರಿಗಳನ್ನು ಹೊಂದುವುದಕ್ಕಿಂತ ಸಾಯಲು ಸಿದ್ಧರಿರುವಂತಹ ಐವರು ಜೊತೆಗಿದ್ದರೆ ಸಾಕು’’ ಎಂದು ಹೇಳಿದ್ದರು. ‘‘ಗುಜರಾತ್‌ನ ರೈತರನ್ನು ದಮನಿಸಲು ರಾಜ್ಯ ಸರಕಾರವು ಬುಲ್ಡೋಜರ್ ಅನ್ನು ಇಟ್ಟುಕೊಂಡಿದೆ’’ ಎಂದವವರು ವ್ಯಂಗ್ಯವಾಗಿ ಹೇಳಿದ್ದರು. ಮೂರನೆಯ ಭಾಷಣದಲ್ಲಿ ಪಟೇಲ್ ಅವರು, ‘‘ಸರಕಾರಿ ಪರ ಸುದ್ದಿಪತ್ರಿಕೆಯೊಂದು ಗುಜರಾತ್ ರಾಜ್ಯವು ಗಾಂಧಿ ಜ್ವರದಿಂದ ನರಳುತ್ತಿರುವುದಾಗಿ ಹೇಳಿತ್ತು. ಪ್ರತಿಯೊಬ್ಬರಿಗೂ ಅಂತಹ ಜ್ವರ ತಗಲಬೇಕೆಂದು ಆಶಿಸೋಣ’’ ಎಂದು ಪಟೇಲ್ ತಿರುಗೇಟು ನೀಡಿದ್ದರು. ಪೊಲೀಸ್ ವರದಿಯೊಂದು ವಲ್ಲಭಭಾಯ್ ಅವರು ಹೆಚ್ಚುಕಡಿಮೆ ಬಾರ್ಡೊಲಿ ತಾಲೂಕಿನ ಪ್ರತಿಯೊಂದು ಗ್ರಾಮದ ಮುಖಂಡರ ಜೊತೆ ಸಮಾಲೋಚಿಸುತ್ತಿದ್ದಾರೆಂದು ಸರಕಾರಕ್ಕೆ ಮುನ್ನೆಚ್ಚರಿಕೆ ನೀಡಿತ್ತು.
ಬಾಂಬೆ ಕ್ರೋನಿಕಲ್ ಪತ್ರಿಕೆಯ 1928ರ ಕೊನೆಯ ವಾರದ ಸಂಚಿಕೆಯಲ್ಲಿ ‘ವರಾಡ್‌ನಲ್ಲಿ ನಿನ್ನೆ ರಾತ್ರಿ ನಡೆದ ಬೆಳೆಗಾರರ ಸಭೆಯಲ್ಲಿ ವಲ್ಲಭಭಾಯ್ ಪಟೇಲ್ ಅವರ ಮೇಲೆ ಅಭಿಮಾನ ಹಾಗೂ ಪ್ರೀತಿಯ ಸುರಿಮಳೆಯಾಯಿತು’ ಎಂದು ವರದಿ ಮಾಡಿತ್ತು. ಖಾದಿ ಬಟ್ಟೆ ಧರಿಸಿದ ಮಹಿಳೆಯರು ಚರಕದ ನೂಲಿನಿಂದ ರಚಿತವಾದ ಹಾರಗಳನ್ನು ಸಮರ್ಪಿಸಿದರು ಮತ್ತು ಹೂಗಳು, ತೆಂಗಿನಕಾಯಿ, ಕುಂಕುಮ ಹಾಗೂ ಅಕ್ಕಿಯನ್ನು ನೀಡುವ ಮೂಲಕ ಗೌರವ ಸಲ್ಲಿಸಲು ಮಾರುಗಟ್ಟಲೆ ದೂರದವರೆಗೆ ಸರತಿ ಸಾಲಿನಲ್ಲಿ ನಿಂತಿದ್ದರು. ಹಿರಿಯ ತಲೆಮಾರಿನ ಜಾನಪದ ಗಾಯಕಿಯರ ಹಾಡುಗಳನ್ನು ಪ್ರಸಕ್ತ ಸಂದರ್ಭಕ್ಕೆ ತಕ್ಕಂತೆ ಬದಲಾಯಿಸಿ ಅವರು ಹಾಡುತ್ತಿದ್ದರು. ಸತ್ಯಕ್ಕಾಗಿ ನಡೆಯುವ ತಮ್ಮ ಪವಿತ್ರ ಹೋರಾಟದಲ್ಲಿ ದೇವರ ಅಶೀರ್ವಾದವನ್ನು ಕೋರುವ ಈ ಹಾಡನ್ನು ಸುಮಾರು 500 ಮಂದಿ ಮಹಿಳೆಯರು ಹಾಡುವ ಮೂಲಕ 2,500ಕ್ಕೂ ಅಧಿಕ ‘ಆತ್ಮ’ಗಳನ್ನು ಒಳಗೊಂಡ ಈ ಸಮಾವೇಶಕ್ಕೆ ಧಾರ್ಮಿಕ ತಿರುವು ದೊರೆಯಿತು ಎಂದು ಬಾಂಬೆ ಕ್ರೋನಿಕಲ್ ಪತ್ರಿಕೆ ವರದಿ ಮಾಡಿತ್ತು.
ಆಗಸ್ಟ್ ತಿಂಗಳಲ್ಲಿ ಬಾಂಬೆ ಕ್ರೋನಿಕಲ್ ಪತ್ರಿಕೆಯು ಸತ್ಯಾಗ್ರಹಿಗಳು ಹಾಗೂ ಸರಕಾರದ ನಡುವೆ ಏರ್ಪಟ್ಟ ಒಪ್ಪಂದದ ಬಗ್ಗೆ ವರದಿ ಮಾಡಿತ್ತು. ಈ ಒಪ್ಪಂದದನ್ವಯ ವಿವಾದಿತ ಅಂಶಗಳ ಬಗ್ಗೆ ಕಂದಾಯ ಅಧಿಕಾರಿಯೊಬ್ಬರ ಸಹಭಾಗಿತ್ವದೊಂದಿಗೆ ನ್ಯಾಯಾಂಗ ಅಧಿಕಾರಿಯಿಂದ ತನಿಖೆ ನಡೆಸಲು ಸರಕಾರ ಸಮ್ಮತಿಸಿತ್ತು. ಸರಕಾರವು ಎಲ್ಲಾ ಸತ್ಯಾಗ್ರಹಿಗಳನ್ನು ಜೈಲಿನಿಂದ ಬಿಡುಗಡೆಗೊಳಿಸಿತು ಹಾಗೂ ರಾಜೀನಾಮೆ ನೀಡಿದ್ದ ಎಲ್ಲಾ ಗ್ರಾಮ ಮುಖ್ಯಸ್ಥರನ್ನು ಮರುನೇಮಕಗೊಳಿಸಿತು.
1929ರಲ್ಲಿ ಪ್ರಕಟವಾದ ಬಾರ್ಡೊಲಿ ಸತ್ಯಾಗ್ರಹದ ಕುರಿತ ಕೃತಿಯಲ್ಲಿ ಮಹಾದೇವ ದೇಸಾಯಿ ಅವರು ‘ಸರ್ದಾರ್ ಪಟೇಲರು ನೈಜವಾದ ಸಾಮಾಜಿಕ ಆರ್ಥಿಕತೆಯಲ್ಲಿ ರೈತನ ಸ್ಥಾನವು ಉನ್ನತಮಟ್ಟದ್ದಾಗಿದೆ ಎಂದು ಪ್ರತಿಪಾದಿಸಿದ್ದರು’ ಹಾಗೂ ‘ಆದರೆ ಆತನನ್ನು ಅತ್ಯಂತ ದಯನೀಯ ಮಟ್ಟಕ್ಕೆ ಇಳಿಸಿರುವ ಬಗ್ಗೆ ಅವರು ಕಟುವಾದ ಆಕ್ರೋಶವನ್ನು ಹೊಂದಿದ್ದರು’ ಎಂದು ಹೇಳಿದ್ದಾರೆ. ‘‘ರೈತನು ಉತ್ಪಾದಕನಾಗಿದ್ದಾನೆ. ಇತರರು ಪರಾವಲಂಬಿಗಳು’’ ಎಂದು ಪಟೇಲ್ ಭಾರತೀಯ ರೈತನ ಗುಣಗಾನ ಮಾಡಿದ್ದಾರೆಂದು ದೇಸಾಯಿ ಉಲ್ಲೇಖಿಸಿದ್ದಾರೆ. ಬಾರ್ಡೊಲಿ ಸತ್ಯಾಗ್ರಹವು ಹೇಗೆ ಯಶಸ್ವಿಯಾಯಿತೆಂದರೆ, ಸರ್ದಾರ್ ಅವರು ತನ್ನ ಸಹ ರೈತರಿಗೆ ನಿರ್ಭೀತಿತನ ಹಾಗೂ ಏಕತೆ ಎಂಬ ಎರಡು ಮೂಲಭೂತ ಪಾಠಗಳನ್ನು ಬೋಧಿಸಿದ್ದರೆಂದು ದೇಸಾಯಿ ಹೇಳುತ್ತಾರೆ.
ಪಟೇಲ್ ನೇತೃತ್ವದಲ್ಲಿ ನಡೆದ ಬಾರ್ಡೊಲಿಯ ರೈತ ಚಳವಳಿ ಹಾಗೂ ಈಗಿನ ರೈತರ ಆಂದೋಲನಕ್ಕೂ ಸುಮಾರು 100 ವರ್ಷಗಳ ಅಂತರವೇ ಇದೆ. ಈಗಿನ ರೈತ ಪ್ರತಿಭಟನೆಯ ಸುಸ್ಥಿರತೆಯನ್ನು ಕಾಯ್ದುಕೊಳ್ಳುವಲ್ಲಿ ಮಹಿಳೆಯರ ಪಾತ್ರವು ಮಹತ್ವದ್ದಾಗಿದೆ. ಚಳಿ, ಬೇಸಿಗೆ, ಮಳೆ ಹಾಗೂ ಕೊರೋನ ಸೋಂಕಿನ ಹಾವಳಿಯನ್ನು ಎದುರಿಸಿ ಹೋರಾಟವನ್ನು ಮುಂದುವರಿಸಿರುವ ಸತ್ಯಾಗ್ರಹಿಗಳ ವೀರಗಾಥೆ ಒಂದೆಡೆಯಾದರೆ ಇನ್ನೊಂದೆಡೆ ಚಳವಳಿಯನ್ನು ವಿಭಜಿಸಲು ಇಲ್ಲವೇ ವಿಳಂಬಿಸಲು ಅಥವಾ ನಿಲ್ಲಿಸಲು ಸರಕಾರದ ಪ್ರಯತ್ನ ಮತ್ತು ಅದರ ನಾಯಕರ ಬಗ್ಗೆ ಸುಳ್ಳುಗಳನ್ನು ಹರಡಲಾಗುತ್ತಿದೆ.
1928ರ ಜುಲೈ 28ರಂದು ಬಾಂಬೆ ಸರಕಾರವು ಪ್ರಕಟಿಸಿದ ಟಿಪ್ಪಣಿಯಲ್ಲಿ ಪಟೇಲ್ ಅವರು ಗಾಂಧೀಜಿಯವರನ್ನು ಬಾರ್ಡೊಲಿ ಚಳವಳಿಯಿಂದ ಹೊರಗಿಟ್ಟಿದ್ದರು ಎಂದು ಹೇಳಿದೆ. ಯಾಕೆಂದರೆ ರಕ್ತಪಾತವನ್ನು ವಿರೋಧಿಸುವುದು ಹಾಗೂ ಚರಕ ನೇಯುವುದು, ಅಸ್ಪಶ್ಯತೆ ನಿವಾರಣೆಯ ವಿಷಯಕ್ಕೆ ಒತ್ತು ನೀಡುವ ಮೂಲಕ ಮುಖ್ಯ ವಿಷಯವನ್ನು ಹಿಂದಕ್ಕೆ ಸರಿಸುವ ವ್ಯಕ್ತಿಯು ಚಳವಳಿಯ ನೇತೃತ್ವವನ್ನು ವಹಿಸುವುದು ಅವರಿಗೆ ಬೇಕಾಗಿರಲಿಲ್ಲವೆಂದು ಹೇಳಿದ್ದಾರೆ. ಈ ವರದಿಯಲ್ಲಿ ವಲ್ಲಭಭಾಯ್ ಪಟೇಲ್ ಅವರು ಬಾಟಲಿ ಪ್ರಿಯರಾಗಿದ್ದರು ಎಂದು ನಿಂದನಾತ್ಮಕ ಟೀಕೆಗಳನ್ನು ಮಾಡಿತ್ತು.
1920ರ ದಶಕದಲ್ಲಿ ಬ್ರಿಟಿಷ್ ರಾಜ್ ಜೊತೆ ಕೈಜೋಡಿಸಿದವರಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಕಂದಾಯ ಅಧಿಕಾರಿಗಳು ಹಾಗೂ ಗುಜರಾತ್‌ನ ಹೊರಗಿನಿಂದ ಕರೆತರಲಾದ ಬಾಡಿಗೆ ಗೂಂಡಾಗಳು ಕೂಡಾ ಇದ್ದರು. ಈಗ 2020ರ ದಶಕದಲ್ಲಿ ಪೊಲೀಸರು ಹಾಗೂ ‘ಗೋದಿ ಮಿಡಿಯಾ’ಗಳು ವಸಾಹತುಶಾಹಿ ಆನಂತರದ ಆಡಳಿತಕ್ಕೆ ಸಹಕಾರ ನೀಡುತ್ತಿವೆ. ಮೊದಲನೆಯದಾಗಿ ರೈತ ಚಳವಳಿಯನ್ನು ಹತ್ತಿಕ್ಕಲು, ಎರಡನೆಯದಾಗಿ ಅವರು ನೀಡುವ ಸಂದೇಶವನ್ನು ತಿರುಚಲು ಹಾಗೂ ಅವರ ನಾಯಕರಿಗೆ ಕಳಂಕ ತರಲು ಅವರು ಪ್ರಯತ್ನಿಸುತ್ತಿದ್ದಾರೆ. ಖಂಡಿತವಾಗಿಯೂ ಜಲಫಿರಂಗಿಗಳ ಬಳಕೆ, ರಸ್ತೆಗಳಲ್ಲಿ ಲೋಹದ ಮೊಳೆಗಳು, ಇಂಟರ್‌ನೆಟ್ ಶಟ್‌ಡೌನ್, ದ್ವೇಷಪೂರಿತ ಪ್ರಚಾರದ ಮೂಲಕ ಮೋದಿ-ಶಾ ಆಡಳಿತದ ಅತಿರೇಕವು ಬ್ರಿಟಿಷ್ ರಾಜ್ ಆಳ್ವಿಕೆಯನ್ನು ಕೂಡಾ ಮೀರಿಸುತ್ತಿದೆ.
ವಲ್ಲಭಭಾಯ್ ಪಟೇಲ್ ಅವರ ಜೀವನಚರಿತ್ರೆ ಬರೆದ ಮೊದಲಿಗರಲ್ಲೊಬ್ಬರಾದ ನರಹರಿ ಪಾರೀಖ್ ಅವರು ತನ್ನ ಕೃತಿಯಲ್ಲಿ ಪಟೇಲ್ ರೈತರಿಗೆ ಹೇಳಿದ ಈ ಮಾತನ್ನು ಉಲ್ಲೇಖಿಸಿದ್ದಾರೆ. ‘‘ನೆನಪಿಡಿ, ಸತ್ಯಕ್ಕಾಗಿ ಎಲ್ಲವನ್ನೂ ಕಳೆದುಕೊಳ್ಳುವುದಕ್ಕಾಗಿ ಸಿದ್ಧರಿರುವ ನೀವು ಅಂತಿಮವಾಗಿ ಗೆಲ್ಲಲೇಬೇಕು. ಅಧಿಕಾರಿಗಳ ಜೊತೆ ಕೈಜೋಡಿಸಿದ ಜನರು ತಮ್ಮ ಕೃತ್ಯಕ್ಕಾಗಿ ವಿಷಾದಿಸುವರು.’’ ಗಾಂಧೀಜಿಯವರ ಅನುಯಾಯಿಯಾಗಿ ಪಟೇಲ್ ಅವರು ಸತ್ಯ ಹಾಗೂ ಅಹಿಂಸೆಯು ಅಂತಿಮವಾಗಿ ಜಯಗಳಿಸಲಿದೆ ಎಂಬ ಭರವಸೆಯನ್ನು ಹೊಂದಿದ್ದರು. ‘‘ಹೃದಯ ಪರಿವರ್ತನೆಯಾಗಿ ಈಗಿನ ಸರಕಾರವು ಕೃತಿಗಿಳಿಸಿರುವ ದ್ವೇಷ ಹಾಗೂ ಕಹಿಭಾವನೆಯ ಸ್ಥಾನದಲ್ಲಿ ಅನುಕಂಪ ಹಾಗೂ ತಿಳುವಳಿಕೆ ಉಂಟಾಗಲಿದೆ’’ಎಂದಿದ್ದರು.
ಈಗಿನ ಆಡಳಿತಕ್ಕೆ ಅನುಕಂಪ ಹಾಗೂ ತಿಳುವಳಿಕೆಯ ಭಾವನೆಗಳು ಬ್ರಿಟಿಷ್ ಆಡಳಿತಕ್ಕಿಂತಲೂ ಪರಕೀಯವಾದುದೆಂಬುದು ಹಿಂದಿನ ಅನುಭವಗಳಿಂದ ಅರಿವಿಗೆ ಬಂದಿದ್ದರೂ ಈಗಿನ ರೈತ ನಾಯಕರು ಕೂಡಾ ಅದೇ ರೀತಿಯ ಆಶಾವಾದವನ್ನು ಹೊಂದಿದ್ದಾರೆ.
ನಾನು ಈ ಲೇಖನವನ್ನು ಆರಂಭಿಸಿದಂತೆ, 1931ರಲ್ಲಿ ಸರ್ದಾರ್ ಪಟೇಲ್ ಅವರ ಅಧ್ಯಕ್ಷೀಯ ಭಾಷಣದ ಉಲ್ಲೇಖದೊಂದಿಗೆ ಮುಕ್ತಾಯಗೊಳಿಸುತ್ತಿದ್ದೇನೆ. ‘‘ಸಾಮೂಹಿಕ ಅಹಿಂಸಾವಾದವೆಂಬುದು ಓರ್ವ ದೃಷ್ಟಾರನ ಪೊಳ್ಳು ಕನಸಾಗಲಿ ಅಥವಾ ಸಾಮಾನ್ಯ ಮನುಷ್ಯನ ಹಪಾಹಪಿಯಾಗಲಿ ಅಲ್ಲ. ನಮ್ಮ ಅತ್ಯಂತ ಕೆಟ್ಟ ಸಂದೇಹವಾದಿಗಳ ಭೀತಿಗಳನ್ನು ರೈತರು ಹುಸಿಗೊಳಿಸಿದ್ದಾರೆಂಬ ವಾಸ್ತವದಲ್ಲಿ ನಮ್ಮ ಚಳವಳಿಯ ಅಹಿಂಸಾವಾದವು ಅಡಗಿದೆ. ಅಹಿಂಸಾ ಚಳವಳಿಯನ್ನು ಆಯೋಜಿಸುವುದು ತುಂಬಾ ಕಷ್ಟಕರವೆಂದು ಬಣ್ಣಿಸಲಾಗಿತ್ತು. ಆದರೆ ಅವರು ಈ ಸತ್ವಪರೀಕ್ಷೆಯನ್ನು ಶೌರ್ಯದೊಂದಿಗೆ ಎದುರಿಸಿದ್ದಾರೆ. ಅವರು ಎಲ್ಲಾ ನಿರೀಕ್ಷೆಗಳನ್ನು ಮೀರಿ ಸಹನೆ ಪ್ರದರ್ಶಿಸಿದ್ದಾರೆ. ಈ ಹೋರಾಟದಲ್ಲಿ ಮಹಿಳೆಯರು ಹಾಗೂ ಮಕ್ಕಳ ಪಾಲು ಕೂಡಾ ದೊಡ್ಡದಿದೆ. ಅವರು ಕೂಡಲೇ ಈ ಕರೆಗೆ ತಕ್ಷಣವೇ ಪ್ರತಿಕ್ರಿಯಿಸಿದರು ಹಾಗೂ ಈ ಹೋರಾಟದಲ್ಲಿ ಪಾತ್ರ ವಹಿಸಿದರು. ಹೀಗಾಗಿ ಹೋರಾಟದಲ್ಲಿ ಅಹಿಂಸಾತ್ಮಕತೆಯನ್ನು ಸಂರಕ್ಷಿಸುವಲ್ಲಿ ಹಾಗೂ ಚಳವಳಿಯ ಯಶಸ್ಸಿನ ಹೆಚ್ಚಿನ ಶ್ರೇಯಸ್ಸನ್ನು ಅವರಿಗೆ ನೀಡಿದಲ್ಲಿ ತಪ್ಪೇನೂ ಇಲ್ಲ ಎಂದು ನಾನು ಯೋಚಿಸುತ್ತೇನೆ’’ ಎಂದವರು ಹೇಳಿದ್ದರು.
1931ರಲ್ಲಿ ಅವರು ಹೇಳಿದ ಈ ಪದಗಳು 2021ರಲ್ಲಿ ಓದುವಾಗಲೂ ಭಾವುಕರಾಗುತ್ತೇವೆ. ಯಾಕೆಂದರೆ ಮತೊಮ್ಮೆ ಭಾರತದ ರೈತರು ಭಾವನೆರಹಿತ ಹಾಗೂ ಕಾಳಜಿ ರಹಿತ ಆಡಳಿತದ ವಿರುದ್ಧ ಘನತೆಯಿಂದ ಕೂಡಿದ ಹಾಗೂ ದೃಢವಾದ ಹೋರಾಟವನ್ನು ನಡೆಸುತ್ತಿದ್ದಾರೆ