varthabharthi


ಈ ಹೊತ್ತಿನ ಹೊತ್ತಿಗೆ

ದಮನಿತರ ಸಂಕಟದ ಬದುಕನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುವ 'ನೀಲವ್ವ'

ವಾರ್ತಾ ಭಾರತಿ : 10 Oct, 2021
ರೇಣುಕಾರಾಧ್ಯ ಎಚ್. ಎಸ್.

ಭಾರತದಂತಹ ಜಾತಿ ವ್ಯವಸ್ಥೆಯ, ಪ್ಯೂಡಲ್ ಮನಸ್ಥಿತಿಯ, ಮೇಲ್ಜಾತಿಗಳಿಂದ ನಮ್ಮ ದಲಿತ ಜಗತ್ತು ಎಂದಿನಿಂದಲೂ ಎದುರಿಸುತ್ತಿರುವ ಸಂಕಟಗಳನ್ನು, ಸಾಮಾಜಿಕ ಅಪಮಾನಗಳನ್ನು, ದೌರ್ಜನ್ಯವನ್ನು, ತುತ್ತು ಕೂಳಿಗಾಗಿ, ತನ್ನ ಬದುಕಿಗೆ ಸಹಜವಾಗಿ ಸಿಗಲೇಬೇಕಾದ ಹಕ್ಕಿಗಾಗಿ ಪ್ರತಿಕ್ಷಣವೂ ಹೋರಾಡಲೇಬೇಕಾದ ಅನಿವಾರ್ಯತೆಯ ಪ್ರಶ್ನೆಗಳನ್ನು ಮತ್ತು ಅವುಗಳಿಗೆ ಕೆಲವು ಉತ್ತರರೂಪಿ ದಾರಿಗಳನ್ನು ವಿಕಾಸ್ ಆರ್. ಮೌರ್ಯ ಅವರ ಮೊದಲ ಕಥಾ ಸಂಕಲನ 'ನೀಲವ್ವ' ನೇರವಾಗಿ ಮೇಲ್ವರ್ಗಗಳ ಮನಸ್ಸಿಗೆ ತಾಕುವಂತೆ ಕ್ರಾಂತಿಗೀತೆಗಳ ಮಾದರಿಯಲ್ಲಿ ಹೇಳುತ್ತದೆ.

ಬಾಬಾ ಸಾಹೇಬರು ಹೇಳುವ ದಲಿತ ಸಮುದಾಯಗಳ ಸಮಸ್ಯೆಗಳ ವಿಮೋಚನೆಯ ದಾರಿಯ ಮೂರು ಮುಖ್ಯ ಅಂಶಗಳಾದ ಶಿಕ್ಷಣ, ಸಂಘಟನೆ ಮತ್ತು ಹೋರಾಟ ಇಲ್ಲಿನ ಎಲ್ಲಾ ಕತೆಗಳಲ್ಲಿ ಒಳವಿದ್ಯುತ್‌ನಂತೆ ಹರಿಯುತ್ತಾ, ಈ ಅಂಶವನ್ನು ಇಲ್ಲಿನ ಕತೆಗಳ ಮುಖ್ಯ ಪಾತ್ರಗಳು ಪರೋಕ್ಷವಾಗಿ ಹೇಳುತ್ತವೆ.
 ಈ ದೇಶ ಕಂಡ ಮಹಾ ಮಾನವತಾವಾದಿ ಡಾ. ಬಿ.ಆರ್. ಅಂಬೇಡ್ಕರ್ ಇಲ್ಲಿನ ಕತೆಗಳ ಪಾತ್ರಗಳ ಒಳಗೆ ಜೀವನ ಪ್ರೀತಿಯಾಗಿ, ತಾನು ನೋವುಂಡು ಸಮುದಾಯ ಮತ್ತು ಸಮಾಜದ ಏಳಿಗೆಯೇ ತನ್ನ ಬದುಕಿನ ಧ್ಯೇಯ ಎಂದು ತುಡಿಯುವ ವ್ಯಕ್ತಿತ್ವವಾಗಿ ನೀಲವ್ವ, ಗಂಟಪ್ಪ, ಭರಮಪ್ಪ, ಜಡೆಪ್ಪ, ಹುಲುಗ, ಉಮಾಶಂಕರ, ಚಂದ್ರ, ಪಾತ್ರಗಳಲ್ಲಿ ಕಾಣುತ್ತಾರೆ.
ಈ ಸಂಕಲನದ ಕತೆಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಬಹುದು. ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರದಲ್ಲೂ ದೇಶದ ನಗರಗಳಲ್ಲಿ, ದಲಿತ ಸಮುದಾಯ ಎದುರಿಸುತ್ತಿರುವ ಅಪಮಾನ, ನೋವು, ಸಂಕಟಗಳ ಕತೆಗಳು ಒಂದೆಡೆಯಾದರೆ, ಜಾತಿಯ ಬಿಲಗಳಾದ ಗ್ರಾಮೀಣ ಭಾರತದ ಮೇಲ್ಜಾತಿಗಳಿಂದ, ಇಲ್ಲಿನ ಪ್ಯೂಡಲ್‌ಗಳಿಂದ ದಲಿತ ಸಮುದಾಯ ಎದುರಿಸುತ್ತಿರುವ ಅಮಾನವೀಯವಾದ, ದೌರ್ಜನ್ಯ, ಅತ್ಯಾಚಾರ, ಅಪಮಾನಗಳ ಸರಣಿಗಳನ್ನು ಅವುಗಳ ಪರಿಣಾಮಗಳನ್ನು ಹಸಿಹಸಿಯಾಗಿ ಕಣ್ಣಿಗೆ ರಾಚುವಂತೆ ಮತ್ತೆ ಕೆಲವು ಕತೆಗಳು ಕಟ್ಟಿ ಕೊಟ್ಟಿವೆ.
'ಒಂದು ಹೆಜ್ಜೆ', 'ತೆರೆಮರೆಯ ಯೋಧ', 'ಮಳೆ ಬಂದಾಗ', 'ಚಿನ್ನದ ಕನ್ನಡಕ'-ಈ ಕತೆಗಳು ನಗರ ಕೇಂದ್ರಿತ ಕತೆಗಳಾದರೆ, 'ನೀಲವ್ವ', 'ಜಗವೆಂಬ ಜೈಲಿನಲಿ', 'ಜಡೆಪ್ಪನ ಮಗಳು ರಮ್ಯ', 'ದೇವರ ಬಾವಿ', 'ಹುಲುಗ', 'ತಲೆ ತಲಾಂತರ' ಕತೆಗಳು ಗ್ರಾಮೀಣ ಭಾರತದ ದಲಿತ ಜಗತ್ತಿನ ಬದುಕನ್ನು ಅಥೆಂಟಿಕ್ ಆದ ವಿವರಗಳೊಂದಿಗೆ ಕಟ್ಟಿಕೊಡುತ್ತವೆ.
 ಇಲ್ಲಿನ ಈ ಎರಡೂ ಕಡೆಯ ದಲಿತ ಸಮುದಾಯದ ಮೇಲೆ ನಡೆಯುವ ದೌರ್ಜನ್ಯವನ್ನು ಈ ಕತೆಗಳು ಚಿತ್ರಿಸುತ್ತಲೇ, ದೌರ್ಜನ್ಯಕ್ಕೆ ಕಾರಣರಾದವರ ಮೇಲೆ ಸಹಜ ಆಕ್ರೋಶವನ್ನು ತೋರುತ್ತವೆ. ಆ ಆಕ್ರೋಶ ಕೇವಲ ಸೇಡಿನ ರೂಪವಾಗದೆ ಮ್ಮ ಮೇಲೆ ಈ ಮೇಲ್ಜಾತಿ ಸಮುದಾಯಗಳು ನಡೆಸುತ್ತಿರುವ ಎಲ್ಲಾ ಬಗೆಯ ದೌರ್ಜನ್ಯಗಳಿಗೆ ಉತ್ತರ ಕಂಡುಕೊಳ್ಳುವ ದಾರಿಯ ಕಡೆ ಚಲಿಸುವ ಹ್ಯಾಂಡ್‌ಪೋಸ್ಟ್‌ಗ ಳಾಗಿವೆ ಎಂಬುದು ಬಹಳ ವಿಶೇಷ. ಮತ್ತೆ ಇಲ್ಲಿನ ಕತೆಗಳ ಕಾಲವೂ ಕೂಡ 1990 ಆಚಿನಿಂದ, ಇವತ್ತಿನದ್ದು.
ಈ ಸಂಕಲನದಲ್ಲಿನ ಕತೆಗಳಲ್ಲಿನ ಭಾಷೆ, ನಿರೂಪಣೆ, ವರ್ಣನೆಗಳಲ್ಲಿನ ವಿವರವು ಕೊಂಚ ಹಸಿ ಹಸಿ ಎನ್ನಿಸುತ್ತದೆ. ಬಹುಶಃ ಕತೆಗಾರ ಪ್ರಜ್ಞಾಪೂರ್ವಕವಾಗಿಯೇ ಓದುಗರನ್ನು, ಅವರ ಜಡ್ಡುಗಟ್ಟಿದ ಪರಂಪರೆಯ ಹಳೆಯ ಕಥಾ ರಚನೆಯ ಎಲಿಮೆಂಟ್ಸ್‌ಗಳನ್ನು ಮುರಿಯಲೆಂದೇ ಈ ಪ್ರಯೋಗ ಮಾಡುತ್ತಿರುವಂತೆ ಮೇಲ್ನೋಟಕ್ಕೆ ಅನ್ನಿಸಿದರೂ ಕತೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅದು ಪ್ರಜ್ಞಾಪೂರ್ವಕವಾದುದಲ್ಲ, ಕತೆ ಬರೆಯುವ ಹಾದಿಯ ಹೊಸ ಪಯಣಿಗನ ಪ್ರಯತ್ನದ ಹೆಜ್ಜೆಗಳು ಎಂಬುದು ತಿಳಿಯುತ್ತದೆ.
'ನೀಲವ್ವ' ಸಂಕಲನ ವಿಕಾಸ್ ಮೌರ್ಯ ಅವರ ಮೊದಲ ಸಂಕಲನವಾಗಿರುವುದರಿಂದ ಇಲ್ಲಿನ 'ನೀಲವ್ವ' ಮತ್ತು 'ಮಳೆ ಬಂದಾಗ' ಈ ಎರಡು ಕತೆಗಳನ್ನು ಬಿಟ್ಟರೆ ಉಳಿದ ಕತೆಗಳಲ್ಲಿ ಸಣ್ಣ ಕತೆಗಳಲ್ಲಿ ಇರಬೇಕಾದ ಬಿಗಿಯಾದ ನಿರೂಪಣೆ, ತಂತ್ರ, ಪಾತ್ರಗಳ ಬೆಳವಣಿಗೆ, ಪರಿಣಾಮಕಾರಿ ಅಂತ್ಯಗಳ ಕೊರತೆ ಇರುವುದು ನಿಜ. ಇಲ್ಲಿನ ಕತೆಗಳನ್ನು ಓದುತ್ತಿದ್ದರೆ ವಿಕಾಸ್ ಆರ್. ಮೌರ್ಯ ಅವರಲ್ಲಿ ಅಪಾರ ಅನುಭವದ ಕಚ್ಚಾ ಸಾಮಗ್ರಿ ಇದೆ. ಆ ಸಾಮಗ್ರಿಯನ್ನು ಕ್ರೋಡೀಕರಿಸಿ, ಗುಣಮಟ್ಟದ, ಆಕರ್ಷಣೀಯ ಶಿಲ್ಪವನ್ನು ತಯಾರಿಸುವ ಕಸುಬಿನಲ್ಲಿ ಇನ್ನಷ್ಟು ಪಳಗಬೇಕು ಅನ್ನಿಸುತ್ತದೆ. ಅದಕ್ಕೆ ಕನ್ನಡ ಕಥಾ ಜಗತ್ತು ಅವರ ನೆರವಿಗೆ ಖಂಡಿತ ಬರುತ್ತದೆ, ಆ ಹಾದಿಯಲ್ಲಿ ಅವರ ನಡಿಗೆ ಮುಂದಿನ ದಿನಗಳಲ್ಲಿ ಇದ್ದು, ಮುಂದಿನ ಸಂಕಲನ ಇಲ್ಲಿನ ಕೊರತೆಗಳನ್ನು ನೀಗಿಸುತ್ತದೆ ಎಂಬ ನಂಬಿಕೆ ಇಟ್ಟುಕೊಳ್ಳಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)