ದೇಶದಲ್ಲಿ 20 ಉಷ್ಣ ವಿದ್ಯುತ್ ಸ್ಥಾವರಗಳು ಬಂದ್: ಕಲ್ಲಿದ್ದಲು ಕೊರತೆಯಿಲ್ಲ ಎಂದು ಸಮರ್ಥಿಸುತ್ತಿರುವ ಕೇಂದ್ರ
ಹೊಸದಿಲ್ಲಿ, ಅ. 11: ವಿದ್ಯುತ್ ಉತ್ಪಾದಿಸಲು ಬೇಕಾಗುವಷ್ಟು ಕಲ್ಲಿದ್ದಲು ದಾಸ್ತಾನು ದೇಶದಲ್ಲಿ ಇದೆ ಎಂದು ಕೇಂದ್ರ ಸರಕಾರ ಭರವಸೆ ನೀಡಿದೆ. ಆದರೆ, ಕಲ್ಲಿದ್ದಲು ಕೊರತೆಯಿಂದ ಉಷ್ಣ ವಿದ್ಯುತ್ ಸ್ಥಾವರಗಳನ್ನು ಮುಚ್ಚುತ್ತಿರುವ ಕುರಿತು ರಾಜ್ಯ ಸರಕಾರಗಳು ವ್ಯಕ್ತಪಡಿಸಿರುವ ಆತಂಕವನ್ನು ಈ ಭರವಸೆ ನಿವಾರಿಸಿಲ್ಲ.
ಪಂಜಾಬ್‌ನ 3 ವಿದ್ಯುತ್ ಸ್ಥಾವರ, ಕೇರಳದ 4 ವಿದ್ಯುತ್ ಸ್ಥಾವರ ಹಾಗೂ ಮಹಾರಾಷ್ಟ್ರದ 13 ವಿದ್ಯುತ್ ಸ್ಥಾವರಗಳು ಈಗಾಗಲೇ ಮುಚ್ಚಿವೆ. ಕಲ್ಲಿದ್ದಲು ಪೂರೈಕೆ ಹೆಚ್ಚಿಸುವಂತೆ ಕರ್ನಾಟಕ ಹಾಗೂ ಪಂಜಾಬ್ ಮುಖ್ಯಮಂತ್ರಿಗಳು ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ. ದೇಶದಲ್ಲಿ ಕಲ್ಲಿದ್ದಲು ಕೊರತೆ ಉಂಟಾಗಿರುವುದಕ್ಕೆ ಕಾಂಗ್ರೆಸ್ ಕೇಂದ್ರ ಸರಕಾರವನ್ನು ಟೀಕಿಸಿದೆ. ಕಲ್ಲಿದ್ದಲು ಕೊರತೆಯಿಂದ ವಿದ್ಯುತ್ ದರ ಕೂಡ ಹೆಚ್ಚಾಗಲಿದೆ ಎಂಬ ಆಂತಕವನ್ನು ಕಾಂಗ್ರೆಸ್ ವ್ಯಕ್ತಪಡಿಸಿದೆ. ಭಾರತದಲ್ಲಿ ವಿದ್ಯುತ್ ಬಿಕ್ಕಟ್ಟಿನ ಆತಂಕವನ್ನು ಉತ್ಪ್ರೇಕ್ಷೆಗೊಳಿಸಲಾಗುತ್ತಿದೆ ಎಂದು ಕೇಂದ್ರ ಇಂಧನ ಸಚಿವಾಲಯ ರವಿವಾರ ಹೇಳಿತ್ತು.
ಬೇಡಿಕೆ ಈಡೇರಿಸಲು ಸಾಕಾಗುವಷ್ಟು ಕಲ್ಲಿದ್ದಲು ದೇಶದಲ್ಲಿ ಲಭ್ಯವಿದೆ ಎಂದು ಕಲ್ಲಿದ್ದಲು ಸಚಿವಾಲಯ ತಿಳಿಸಿತ್ತು. ವಿದ್ಯುತ್ ಸ್ಥಾವರಗಳಿಗೆ ಅಗತ್ಯ ಇರುವ ಕಲ್ಲಿದ್ದಲನ್ನು ಕೇಂದ್ರ ಸರಕಾರದ ತುರ್ತಾಗಿ ಪೂರೈಕೆ ಮಾಡದೇ ಇದ್ದರೆ, ದಿಲ್ಲಿ ವಿದ್ಯುತ್ ನಿಲುಗಡೆ ಎದುರಿಸಲಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪ್ರತಿಪಾದಿಸಿದ ಬಳಿಕ ಕೇಂದ್ರ ಸರಕಾರ ಈ ಪ್ರತಿಕ್ರಿಯೆ ನೀಡಿತ್ತು. ಕೇಂದ್ರ ಇಂಧನ ಸಚಿವಾಲಯದ ಹೇಳಿಕೆಯ ಬಳಿಕ ದಿಲ್ಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು, ಕೇಂದ್ರ ಸರಕಾರ ಕಲ್ಲಿದ್ದಲು ಕೊರತೆ ಒಪ್ಪಿಕೊಳ್ಳಲು ತಯಾರಿಲ್ಲ. ದೇಶಕ್ಕೆ ಕೆಡುಕು ಎಂದು ಸಾಬೀತುಪಡಿಸಬಹುದಾದ ಪ್ರತಿ ಸಮಸ್ಯೆಗಳ ಬಗ್ಗೆ ಜಾಣಗುರುಡು ಪ್ರದರ್ಶಿಸುವುದು ಕೇಂದ್ರ ಸರಕಾರದ ನೀತಿ ಎಂದು ಹೇಳಿದ್ದರು.
ಕಲ್ಲಿದ್ದಲು ಕೊರತೆ ಕುರಿತು ತನಿಖೆ ನಡೆಸುವಂತೆ ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಆಗ್ರಹಿಸಿದ್ದರು. ಮದ್ಯಪ್ರದೇಶದ ಇಂಧನ ಸಚಿವ ಪ್ರದ್ಯುಮ್ನ ಸಿಂಗ್ ಥೋಮರ್ ಅವರು ಕಲ್ಲಿದ್ದಲು ವಿಚಾರದಲ್ಲಿ ರಾಜ್ಯದ ಸ್ಥಿತಿ ಉತ್ತಮವಾಗಿದೆ ಎಂದಿದ್ದರು. ಅಕ್ಟೋಬರ್ 13ರ ವರೆಗೆ ಪ್ರತಿ ದಿನ 3 ಗಂಟೆಗಳ ಕಾಲ ವಿದ್ಯುತ್ ಕಡಿತಗೊಳಿಸಲಾಗುವುದು ಎಂದು ರಾಜ್ಯ ಸ್ವಾಮಿತ್ವದ ಸಂಸ್ಥೆಯಾಗಿರುವ ಪಿಎಸ್ಜಿಸಿಎಲ್ ರವಿವಾರ ಹೇಳುವ ಮೂಲಕ ಪಂಜಾಬ್ ನಲ್ಲಿ ವಿದ್ಯುತ್ ಕೊರತೆಯ ಶೋಚನೀಯ ಸ್ಥಿತಿ ಮುಂದುವರಿದಿರುವುದನ್ನು ಬಹಿರಂಗಪಡಿಸಿತ್ತು.