ಬಾಕಿ ಇರಿಸಿದ 2800 ಕೋಟಿ ರೂ. ನೀಡಿದರೆ ಯುಪಿಸಿಎಲ್ ಕಾರ್ಯಾರಂಭ ?
‘ವಿದೇಶಿ ಕಲ್ಲಿದ್ದಲು ಸರಬರಾಜಿಗೆ ಸಮಸ್ಯೆ ಇಲ್ಲ’
ಉಡುಪಿ, ಅ.11: 2010ರಿಂದ ಸರಬರಾಜು ಮಾಡಿರುವ ವಿದ್ಯುಚ್ಛಕ್ತಿಗೆ ರಾಜ್ಯದ ಐದು ಎಸ್ಕಾಂಗಳು ಬಾಕಿ ಉಳಿಸಿಕೊಂಡಿರುವ 2800 ಕೋಟಿ ರೂ.ಗಳನ್ನು ನೀಡಿದರೆ, ಆಮದು ಮಾಡಿಕೊಳ್ಳುವ ವಿದೇಶಿ ಕಲ್ಲಿದ್ದಲಿನಿಂದ ನಡೆಯುವ ಪಡುಬಿದ್ರಿ ಎಲ್ಲೂರಿನ ಅದಾನಿ ಒಡೆತನದ ಉಡುಪಿ ಪವರ್ ಕಾರ್ಪೋರೇಷನ್ ಲಿಮಿಟೆಡ್ (ಯುಪಿಸಿಎಲ್) ಮತ್ತೆ ವಿದ್ಯುಚ್ಛಕ್ತಿ ಉತ್ಪಾದನೆಯನ್ನು ಪ್ರಾರಂಭಿಸಲು ಸಿದ್ಧವಿದೆ ಎಂದು ಕಂಪೆನಿಯ ಉನ್ನತ ಮೂಲಗಳು ‘ವಾರ್ತಾಭಾರತಿ’ಗೆ ತಿಳಿಸಿವೆ.
ಯುಪಿಸಿಎಲ್ ಕಳೆದ ಎರಡೂವರೆ ತಿಂಗಳಿನಿಂದ ವಿದ್ಯುತ್ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ. ಮಳೆಗಾಲದಲ್ಲಿ ವಿದ್ಯುತ್ ಬೇಡಿಕೆ ಕಡಿಮೆಯಾಗುವ ಕಾರಣ ರಾಜ್ಯದಲ್ಲಿ ಕಲ್ಲಿದ್ದಲು ಬಳಸಿ ವಿದ್ಯುತ್ ಉತ್ಪಾದಿಸುವ ಸ್ಥಾವರಗಳಿಗೆ ಹೆಚ್ಚಿನ ಬೇಡಿಕೆ ಇರುವುದಿಲ್ಲ. ಜಲವಿದ್ಯುತ್, ಸೌರ ಹಾಗೂ ಪವನ ವಿದ್ಯುತ್‌ನ್ನೇ ರಾಜ್ಯ ಸರಕಾರ ಈ ವೇಳೆ ಅವಲಂಬಿಸಿರುತ್ತದೆ. ಹೀಗಾಗಿ ಕಳೆದ ಅಗಸ್ಟ್‌ನಿಂದ ಯುಪಿಸಿಎಲ್ ವಿದ್ಯುತ್ ಉತ್ಪಾದಿಸುತ್ತಿಲ್ಲ ಎಂದು ಈ ಮೂಲ ತಿಳಿಸಿದೆ.
ಇದೀಗ ದೇಶದಲ್ಲಿ ಕಲ್ಲಿದ್ದಲಿಗೆ ತೀವ್ರ ಅಭಾವ ಕಂಡುಬಂದಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ರಾಯಚೂರಿನ ಎನ್‌ಟಿಪಿಸಿ ಸೇರಿದಂತೆ ವಿವಿದೆಡೆಯ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಸಮಸ್ಯೆ ತಲೆದೋರಿದ್ದು, ಇದರಿಂದ ರಾಜ್ಯದಲ್ಲಿ ವಿದ್ಯುತ್ ಸರಬರಾಜು ಅಸ್ತವ್ಯಸ್ಥಗೊಳ್ಳುವ ಭೀತಿ ಎದುರಾಗಿದೆ.
ಕಲ್ಲಿದ್ದಲು ಸಮಸ್ಯೆ ಇಲ್ಲ: ಆದರೆ ಯುಪಿಸಿಎಲ್‌ಗೆ ಇಂಥ ಯಾವುದೇ ಸಮಸ್ಯೆ ಇಲ್ಲ. ಇದು ಸಂಪೂರ್ಣವಾಗಿ ವಿದೇಶದಿಂದ ಆಮದಿತ ಕಲ್ಲಿದ್ದಲನ್ನೇ ವಿದ್ಯುತ್ ಉತ್ಪಾದನೆಗೆ ಅವಲಂಬಿಸಿರುವುದರಿಂದ ಇಲ್ಲಿ ಕಲ್ಲಿದ್ದಲಿಗೆ ಕೊರತೆ ಯಾಗದು. ದೇಶದಲ್ಲಿ ಮೂರು ವಿದೇಶಿ ಕಲ್ಲಿದ್ದಲಿನಿಂದ ನಡೆಯುತ್ತಿರುವ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಯುಪಿಸಿಎಲ್ ಸಹ ಒಂದಾಗಿದ್ದು, ಇಂಡೋನೇಷ್ಯಾ, ಆಸ್ಟ್ರೇಲಿಯ ಹಾಗೂ ದಕ್ಷಿಣ ಆಫ್ರಿಕಗಳಿಂದ ಇಲ್ಲಿಗೆ ಕಲ್ಲಿದ್ದಲು ಸರಬರಾಜಾಗುತ್ತಿದೆ.
ಯುಪಿಸಿಎಲ್ ಹಾಗೂ ವಿದೇಶಿ ಕಲ್ಲಿದ್ದಲು ಸರಬರಾಜು ಕಂಪೆನಿಯೊಂದಿಗೆ ಮೂರು ವರ್ಷಗಳ ಒಪ್ಪಂದವಾಗಿದ್ದು, ಇವು ನಿಯಮಿತವಾಗಿ ಕಲ್ಲಿದ್ದಲು ಸರಬರಾಜು ಮಾಡುತ್ತಿವೆ. ಈವರೆಗೆ ರಾಜ್ಯಕ್ಕೆ ಸರಬರಾಜು ಮಾಡಿರುವ ವಿದ್ಯುತ್‌ಗೆ ಸರಕಾರದಿಂದ ಭಾರೀ ಮೊತ್ತದ ಹಣ ಬರಬೇಕಾಗಿರುವುದರಿಂದ ನಮಗೆ ಕಲ್ಲಿದ್ದಲು ಖರೀದಿಸುವುದು ಕಷ್ಟವಾಗುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಯುಪಿಸಿಎಲ್ ಎಸ್ಕಾಂಗಳಿಂದ ಬರುವ ಬೇಡಿಕೆಯಂತೆ ತಲಾ 600 ಮೆ.ವ್ಯಾಟ್ ಸಾಮರ್ಥ್ಯದ ಎರಡು ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದಿಸಿ ಎಸ್ಕಾಂಗೆ ಸರಬರಾಜು ಮಾಡುತ್ತಿದೆ. ಕಳೆದ ಎಪ್ರಿಲ್‌ನಿಂದ ಮೊದಲ ಯುನಿಟ್ 56 ದಿನ ಹಾಗೂ ಎರಡನೇ ಯುನಿಟ್ 65 ದಿನ ವಿದ್ಯುತ್ ಉತ್ಪಾದಿಸಿದೆ. ಬೇಡಿಕೆ ಇಲ್ಲದೇ ಕಳೆದ ಎರಡೂವರೆ ತಿಂಗಳಿನಿಂದ ಯಾವುದೇ ವಿದ್ಯುತ್ ಉತ್ಪಾದಿಸಿಲ್ಲ.
ಈಗ ಸರಕಾರ ವಿದ್ಯುತ್‌ಗೆ ಬೇಡಿಕೆ ಇರಿಸಿದ್ದರೂ, ಕಲ್ಲಿದ್ದಲು ಸಂಗ್ರಹವಿಲ್ಲದ ಕಾರಣ ವಿದ್ಯುತ್ ಉತ್ಪಾದನೆ ಪ್ರಾರಂಭಿಸಿಲ್ಲ. ಸರಕಾರ ಹಣ ನೀಡಿದರೆ ಒಂದು ವಾರದೊಳಗೆ ಕಲ್ಲಿದ್ದಲು ತರಿಸಿ ವಿದ್ಯುತ್ ಉತ್ಪಾದನೆ ಪ್ರಾರಂಭಿಸುತ್ತದೆ ಎಂದು ಮೂಲಗಳು ವಿಶ್ವಾಸ ವ್ಯಕ್ತಪಡಿಸಿವೆ.
ಜನರ ತೆರಿಗೆ ಹಣ ಪೋಲು: ರಾಜ್ಯ ಸರಕಾರ ಯುಪಿಸಿಎಲ್‌ಗೆ ಒಟ್ಟು 2800 ಕೋಟಿ ರೂ. ವಿದ್ಯುತ್ ಸರಬರಾಜಿನ ಹಣ ಬಾಕಿ ಇರಿಸಿಕೊಂಡಿದೆ. ಹಿಂದೆ ಮಾಡಿಕೊಂಡ ಒಪ್ಪಂದದಂತೆ ಬಾಕಿ ಹಣಕ್ಕೆ ಶೇ.18ರ ಬಡ್ಡಿದರದಲ್ಲಿ ವರ್ಷಕ್ಕೆ 36 ಕೋಟಿ ರೂ. ಬಡ್ಡಿ ನೀಡಬೇಕಿದೆ. ಇದರಿಂದ ವರ್ಷಕ್ಕೆ 36 ಕೋಟಿ ರೂ. ಜನರ ತೆರಿಗೆ ಹಣ ಪೋಲಾಗುತ್ತಿದೆ. ಅಲ್ಲದೇ ಕಲ್ಲಿದ್ದಲು ಖರೀದಿಗಾಗಿ ಯುಪಿಸಿಎಲ್, ಬ್ಯಾಂಕುಗಳಿಂದ 4500 ಕೋಟಿ ರೂ.ಸಾಲ ಎತ್ತಿದೆ. ಇದಕ್ಕೂ ನಾವು ಶೇ.14ರ ಬಡ್ಡಿದರದಲ್ಲಿ ಸಾಲ ಮರುಪಾವತಿಸಬೇಕು. ಎಸ್ಕಾಂಗಳು ಬಾಕಿ ಹಣ ನೀಡಿದರೆ ಮಾತ್ರ ಸಾಲ ಮರುಪಾವತಿಸಲು ಕಂಪೆನಿಗೆ ಸಾಧ್ಯ ಎಂದು ಮೂಲ ತಿಳಿಸಿವೆ.
ವಿದೇಶಿ ಕಲ್ಲಿದ್ದಲು ಕಂಪೆನಿಗಳೊಂದಿಗೆ ಮೂರು ವರ್ಷಗಳಿಗೆ ಒಪ್ಪಂದವಾಗಿ ರುವುದರಿಂದ ನಮಗೆ ಕಲ್ಲಿದ್ದಲು ಕೊರತೆ ಇರುವುದಿಲ್ಲ. ಆದರೆ ವಿದ್ಯುತ್ ಸರಬರಾಜಿಗಾಗಿ ರಾಜ್ಯದ ಐದು ಎಸ್ಕಾಂ ಜೊತೆ ಮಾಡಿಕೊಂಡಿರುವ 25 ವರ್ಷಗಳ ಒಪ್ಪಂದದಂತೆ ಅವರು ಬಾಕಿ ಹಣವನ್ನು ನೀಡಬೇಕಾಗಿದೆ. ಇಲ್ಲದಿದ್ದರೆ ಸಮಸ್ಯೆಯಾಗುತ್ತದೆ. ಕೋವಿಡ್‌ನಿಂದಾಗಿ ಜಾಗತಿಕ ಆರ್ಥಿಕ ಹಿನ್ನಡೆಯೊಂದಿಗೆ ಕಲ್ಲಿದ್ದಲು ಆಮದಿಗೆ ತೀವ್ರ ಆರ್ಥಿಕ ಸಮಸ್ಯೆ ಎದುರಾಗಿದ್ದು, ಇನ್ನಷ್ಟು ಸಾಲ ಮಾಡಿ ಹಣ ಹೂಡಿಕೆ ಕಷ್ಟದಾಯಕವಾಗಿದೆ ಎಂದು ಮೂಲ ಹೇಳಿವೆ.
''ಉಡುಪಿ ಜಿಲ್ಲೆಯಲ್ಲಿ ಸದ್ಯಕ್ಕೆ ಯಾವುದೇ ಲೋಡ್‌ಶೆಡ್ಡಿಂಗ್, ಪವರ್ ಕಟ್ ಇಲ್ಲ. ನಾವು ಬೇರೆ ಬೇರೆ ಮೂಲಗಳಿಂದ ನೇಶನಲ್ ಗ್ರಿಡ್ ಮೂಲಕ ಗುಣಮಟ್ಟದ ವಿದ್ಯುತ್‌ನ್ನು ಜಿಲ್ಲೆಗೆ ನೀಡುತಿದ್ದೇವೆ. ಹೀಗಾಗಿ ಸದ್ಯ ಜಿಲ್ಲೆಯಲ್ಲಿ ವಿದ್ಯುತ್ ಸಮಸ್ಯೆ ಇಲ್ಲ''.
-ನರಸಿಂಹ ಪಂಡಿತ್, ಅಧೀಕ್ಷಕ ಇಂಜಿನಿಯರ್ ಮೆಸ್ಕಾಂ ಉಡುಪಿ ವಿಭಾಗ
ಕರಾವಳಿ ಬಗ್ಗೆ ಮಲತಾಯಿ ಧೋಣೆ; ಬೆಸ್ಕಾಂ, ಹೆಸ್ಕಾಂಗೆ ಗರಿಷ್ಠ ವಿದ್ಯುತ್
ಯುಪಿಸಿಎಲ್ ಸ್ಥಾಪನೆ ವಿರುದ್ಧ ಕರಾವಳಿ ಜನತೆ ಸುಮಾರು ಎರಡೂವರೆ ದಶಕಗಳ ಕಾಲ ತೀವ್ರ ಹೋರಾಟ ನಡೆಸಿದ್ದು, ಕೊನೆಗೂ ಸರಕಾರದ ಹಠಗೆದ್ದು 2010ರಲ್ಲಿ ಉಷ್ಣ ವಿದ್ಯುತ್ ಸ್ಥಾವರ ತಲೆ ಎತ್ತಿ ನಿಂತಿತ್ತು. ಜನರ ಹೋರಾಟ ದಿಂದಾಗಿ, ಪರಿಸರ ಸೂಕ್ಷ್ಮವಾದ ಕರಾವಳಿಯಲ್ಲಿ ದೇಶಿಯ ಕಲ್ಲಿದ್ದಲ್ಲಿಗೆ ಹೋಲಿಸಿದರೆ (ಶೇ.45ರಷ್ಟು) ಅತ್ಯಂತ ಕಡಿಮೆ ಬೂದಿ ಹೊರಸೂಸುವ ವಿದೇಶಿ ಕಲ್ಲಿದ್ದಲು (ಶೇ.6) ಮಾತ್ರ ಬಳಸುವಂತೆ ಸರಕಾರ ಆದೇಶಿಸಿದ್ದೆ ಜನರಿಗೆ ಸಿಕ್ಕಿದ ವಿನಾಯಿತಿಯಾಗಿತ್ತು.
ಇದೀಗ ಎಲ್ಲೂರಿನಲ್ಲಿ ಕಾರ್ಯಾಚರಿಸುತ್ತಿರುವ ಯುಪಿಸಿಎಲ್‌ನಿಂದ ಉಡುಪಿ ಜಿಲ್ಲೆ ಜನತೆ ಎದುರಿಸುತ್ತಿರುವ ಸಮಸ್ಯೆಗಳು ಒಂದೆರಡಲ್ಲ. ಈಗಲೂ ಸಮಸ್ಯೆಯಿಂದ ಕಾಪು, ಉಡುಪಿಯ ಜನತೆಗೆ ಮುಕ್ತಿ ಸಿಕ್ಕಿಲ್ಲ. ಇಷ್ಟೆಲ್ಲಾ ಇದ್ದರೂ ರಾಜ್ಯ ಸರಕಾರ ವಿದ್ಯುತ್ ನೀಡಿಕೆಯಲ್ಲಿ ಕರಾವಳಿ ಬಗ್ಗೆ ಮಲತಾಯಿ ಧೋರಣೆ ತೋರಿಸುತ್ತಿದೆ ಎಂದು ಜನತೆ ಆರೋಪಿಸಿದ್ದಾರೆ.
ರಾಜ್ಯದ ಐದು ಎಸ್ಕಾಂಗಳೊಂದಿಗೆ ಯುಪಿಸಿಎಲ್ ಒಪ್ಪಂದ ಮಾಡಿಕೊಂಡಿದ್ದು, ಇದರಂತೆ ಮೆಸ್ಕಾಂಗೆ ಅದು ನೀಡುತ್ತಿರುವ ವಿದ್ಯುತ್ ಶೇ.5ರಷ್ಟು ಮಾತ್ರ. ಆದರೆ ಇದಕ್ಕಾಗಿ ಯಾವುದೇ ತ್ಯಾಗ ಮಾಡದ ಬೆಸ್ಕಾಂಗೆ ಶೇ.45ರಷ್ಟು, ಹೆಸ್ಕಾಂಗೆ ಶೇ.30ರಷ್ಟು, ಜೆಸ್ಕಾಂಗೆ ಶೇ.20ರಷ್ಟು ವಿದ್ಯುತ್ ಯುಪಿಸಿಎಲ್‌ನಿಂದ ಹೋಗುತ್ತಿದೆ. ಅಲ್ಲದೇ ಎಸ್ಕಾಂ ಬಾಕಿ ಇರಿಸಿಕೊಂಡಿರುವ 2,800 ಕೋಟಿ ರೂ.ಗಳಲ್ಲಿ ಹೆಸ್ಕಾಂ ಒಂದೇ 1500 ಕೋಟಿ ರೂ.ಬಾಕಿ ಇರಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಯುಪಿಸಿಎಲ್‌ಗಾಗಿ ಎಲ್ಲಾ ರೀತಿಯ ತ್ಯಾಗಗಳನ್ನು ಮಾಡಿ, ಈಗಲೂ ಅದರಿಂದ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಮೆಸ್ಕಾಂ ವಿದ್ಯುತ್ ಬಿಲ್‌ನ್ನು ಪ್ರಾಮಾಣಿಕವಾಗಿ ಪಾವತಿಸುತಿದೆ. ಆದರೆ ವಿದ್ಯುತ್‌ನ ಸಿಂಹಪಾಲು ಪಡೆದ ಉಳಿದ ಎಸ್ಕಾಂಗಳು ಹಣ ನೀಡುತ್ತಿಲ್ಲ. ಹೀಗಾಗಿ ಕರಾವಳಿಯ ಎರಡು ಜಿಲ್ಲೆಗಳಿಗೆ ದಿನ 24 ಗಂಟೆ ಕಡ್ಡಾಯ ವಿದ್ಯುತ್ ಸರಬರಾಜು ಮಾಡುವಂತೆ ಯುಪಿಸಿಎಲ್‌ಗೆ ಸರಕಾರ ಆದೇಶಿಸುವಂತೆ ಇಲ್ಲಿನ ಜನಪ್ರತಿನಿಧಿಗಳು ಸರಕಾರದ ಮೇಲೆ ಒತ್ತಡ ಹೇರಬೇಕು ಎಂದು ಯೋಜನಾ ಪ್ರದೇಶದ ಜನತೆ ಒತ್ತಾಯಿಸುತ್ತಿದೆ.
ಯುಪಿಸಿಎಲ್ 2ನೇ ಹಂತದ ವಿಸ್ತರಣೆ ರದ್ದು
ರಾಜ್ಯ ಸರಕಾರದ ಅಸಹಕಾರ ಧೋರಣೆಯಿಂದ ಬೇಸತ್ತು ಯುಪಿಸಿಎಲ್ ತನ್ನ ಎರಡನೇ ಹಂತದ ವಿಸ್ತರಣೆಯ ಯೋಜನೆಯನ್ನು ಸಂಪೂರ್ಣವಾಗಿ ಕೈಬಿಟ್ಟಿದೆ ಎಂದು ಕಂಪೆನಿ ಮೂಲಗಳು ಬಹಿರಂಗ ಪಡಿಸಿವೆ. ಈಗಾಗಲೇ 1200 ಮೆ.ವ್ಯಾಟ್ ವಿದ್ಯುತ್ ಉತ್ಪಾದಿಸುತಿದ್ದ ಯುಪಿಸಿಎಲ್‌ಗೆ ಇನ್ನೂ 1200 ಮೆ.ವ್ಯಾ.ವಿದ್ಯುತ್ ಉತ್ಪಾದಿಸುವ ಎರಡು ಹೆಚ್ಚುವರಿ ಸ್ಥಾವರಗಳಿಗೆ ಕೇಂದ್ರ ಸರಕಾರ ಒಪ್ಪಿಗೆ ಸೂಚಿಸಿದ್ದಲ್ಲದೇ ಈ ಬಗ್ಗೆ ಒಪ್ಪಂದವನ್ನೂ ಮಾಡಿಕೊಂಡಿತ್ತು.
ಆದರೆ ರಾಜ್ಯ ಸರಕಾರ ವಿದ್ಯುತ್ ಖರೀದಿ ಒಪ್ಪಂದ (ಪಿಪಿಎ) ಮಾಡಿ ಕೊಳ್ಳಲು ಮುಂದೆ ಬಾರದ ಕಾರಣ, ಕಾದು ಬೇಸತ್ತ ಯುಪಿಸಿಎಲ್, ಯೋಜನೆಯ ವಿಸ್ತರಣೆಯನ್ನೇ ಕೈಬಿಟ್ಟಿದೆ ಎಂದು ತಿಳಿದುಬಂದಿದೆ. ವಿಸ್ತರಣೆಗಾಗಿ ಪಡುಬಿದ್ರಿ ಆಸುಪಾಸಿನ 700 ಎಕರೆ ಜಾಗವನ್ನು ಕೆಐಎಡಿಬಿ ನೋಟಿಫೈ ಮಾಡಿತ್ತು. ಅಲ್ಲದೇ ಜಿಲ್ಲಾಡಳಿತ ಜಾಗದ ಸಂತ್ರಸ್ಥರಿಗೆ ಗರಿಷ್ಠ ಪರಿಹಾರ ನೀಡಿ 160 ಎಕರೆ ಪ್ರದೇಶವೂ ಕಂಪೆನಿಗೆ ಪರಭಾರೆ ಮಾಡಿತ್ತು.
ಕಂಪೆನಿ ವಿಸ್ತರಣೆಗಾಗಿ 400 ಕೋಟಿ ರೂ.ಖರ್ಚು ಮಾಡಿದ್ದು, ಎಲ್ಲವೂ ನೀರಲ್ಲಿ ಮಾಡಿದ ಹೋಮದಂತಾಗಿದೆ. ಅಲ್ಲದೇ ಸ್ವಾಧೀನ ಪಡಿಸಿಕೊಂಡ ಪ್ರದೇಶದ 37 ಮಂದಿಗೆ ಯುಪಿಸಿಎಲ್‌ನಲ್ಲಿ ಉದ್ಯೋಗ ನೀಡಲು ನಿರ್ಧರಿ ಸಲಾಗಿದೆ ಎಂದು ಕಂಪೆನಿ ಮೂಲ ತಿಳಿಸಿವೆ.
ವಿಸ್ತರಣಾ ಯೋಜನೆ ರದ್ದಾಗಿರುವುದರಿಂದ ಕೆಐಎಡಿಬಿಐ ನೋಟಿಫೈ ಮಾಡಿರುವ 500 ಎಕರೆ ಪ್ರದೇಶವನ್ನು ಡಿನೋಟಿಫೈ ಮಾಡಬೇಕಾಗಿದೆ.