ಕೆಲವರು ಮಾನವಹಕ್ಕುಗಳ ಹೆಸರಿನಲ್ಲಿ ದೇಶದ ಘನತೆ ಕುಗ್ಗಿಸಲು ಪ್ರಯತ್ನಿಸುತ್ತಿದ್ದಾರೆ: ಪ್ರಧಾನಿ ಮೋದಿ
photo: Twitter/BJP
ಹೊಸದಿಲ್ಲಿ: ಮಾನವ ಹಕ್ಕುಗಳ ಸಮಸ್ಯೆಗಳನ್ನು ಎತ್ತಿಕೊಳ್ಳುವಾಗ ಕೆಲವೊಂದನ್ನು ಮಾತ್ರ ಆಯ್ಕೆ ಮಾಡಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಜನರಲ್ಲಿ ಕೇಳಿಕೊಂಡರು.
"ಕೆಲವು ಜನರು ಮಾನವ ಹಕ್ಕುಗಳ ಹೆಸರಿನಲ್ಲಿ ದೇಶದ ಘನತೆಯನ್ನು ಕುಗ್ಗಿಸಲು ಪ್ರಯತ್ನಿಸುತ್ತಾರೆ. ನಾವು ಅದರ ಬಗ್ಗೆ ಎಚ್ಚರದಿಂದಿರಬೇಕು" ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್ ಎಚ್ ಆರ್ ಸಿ) 28 ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರಧಾನಿ ಮೋದಿ ಹೇಳಿದರು.
"ಕೆಲವು ಜನರು ಕೆಲವು ಘಟನೆಗಳಲ್ಲಿ ಮಾತ್ರ ಮಾನವ ಹಕ್ಕುಗಳ ಉಲ್ಲಂಘನೆಯನ್ನು ನೋಡುತ್ತಾರೆ. ಆದರೆ ಅದೇ ರೀತಿಯ ಇತರ ಘಟನೆಗಳಲ್ಲಿ ಅದನ್ನು ನೋಡುವುದಿಲ್ಲ. ರಾಜಕೀಯ ಲಾಭಗಳು ಹಾಗೂ ನಷ್ಟಗಳ ಮೇಲೆ ಕಣ್ಣಿಟ್ಟು ಮಾನವ ಹಕ್ಕುಗಳನ್ನು ನೋಡುವುದು ಈ ಹಕ್ಕುಗಳು ಹಾಗೂ ಪ್ರಜಾಪ್ರಭುತ್ವಕ್ಕೆ ಹಾನಿ ಮಾಡುತ್ತದೆ. ಆಯ್ದ ನಡವಳಿಕೆಯು ಪ್ರಜಾಪ್ರಭುತ್ವಕ್ಕೆ ಹಾನಿಕಾರಕ ಹಾಗೂ ರಾಷ್ಟ್ರದ ಘನತೆಗೆ ಧಕ್ಕೆ ತರುತ್ತದೆ. ಇಂತಹ ರಾಜಕೀಯದ ಬಗ್ಗೆ ನಾವು ಜಾಗರೂಕರಾಗಿರಬೇಕು'' ಎಂದು ಮೋದಿ ಹೇಳಿದರು.
ಭಾರತೀಯ ಸ್ವಾತಂತ್ರ್ಯ ಹೋರಾಟದ ಕುರಿತು ಮಾತನಾಡಿದ ಪ್ರಧಾನಿ "ನಾವು ಶತಮಾನಗಳಿಂದ ನಮ್ಮ ಹಕ್ಕುಗಳಿಗಾಗಿ ಹೋರಾಡಿದ್ದೇವೆ ಹಾಗೂ ಒಂದು ದೇಶ ಮತ್ತು ಸಮಾಜವಾಗಿ ಯಾವಾಗಲೂ ಅನ್ಯಾಯ ಮತ್ತು ದೌರ್ಜನ್ಯದ ವಿರುದ್ಧ ಪ್ರತಿಭಟಿಸುತ್ತಿದ್ದೇವೆ" ಎಂದು ಮೋದಿ ಹೇಳಿದರು.