varthabharthi


ವಿಶೇಷ-ವರದಿಗಳು

ಜಾತಿ ಗಣತಿ ವರದಿ ಬಿಡುಗಡೆಗೆ ಅಡ್ಡಿಯಿಲ್ಲ: ಕೋಟ ಶ್ರೀನಿವಾಸ ಪೂಜಾರಿ

ವಾರ್ತಾ ಭಾರತಿ : 13 Oct, 2021
ಸಂದರ್ಶನ- ಮಂಜುಳಾ ಮಾಸ್ತಿಕಟ್ಟೆ,/ ಬರಹ ರೂಪ- ಪ್ರಕಾಶ್ ರಾಮ ಜೋಗಿ ಹಳ್ಳಿ

ವಾರ್ತಾಭಾರತಿ: ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷಾ (ಜಾತಿ ಗಣತಿ)ವರದಿ ಬಿಡುಗಡೆಗೆ ಗೊಂದಲ ಏಕೆ?

ಕೋಟ: ಜಾತಿ ಗಣತಿ ವರದಿ ಸಿದ್ಧಪಡಿಸಲು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 200 ಕೋಟಿ ರೂ.ಗಳಷ್ಟು ಹಣವನ್ನು ಒದಗಿಸಿ 170ಕೋಟಿ ರೂ.ಗಳಷ್ಟು ವೆಚ್ಚ ಮಾಡಿ ವರದಿಯನ್ನು ಸಿದ್ಧಪಡಿಸಿದ್ದರು. ಆದರೆ, ತಮ್ಮ ಅವಧಿಯಲ್ಲಿ ವರದಿಯನ್ನು ಸ್ವೀಕರಿಸಲಿಲ್ಲ. ಅದಕ್ಕೆ ಕಾರಣವೇನು ಎಂದೂ ಹೇಳಲಿಲ್ಲ. ಮೈತ್ರಿ ಸರಕಾರದ ಅವಧಿಯಲ್ಲಿಯೂ ಅತ್ತ ಗಮನ ನೀಡಿಲ್ಲ. ಇದೀಗ ಬಿಜೆಪಿ ಸರಕಾರದತ್ತ ಸಿದ್ದರಾಮಯ್ಯ ಬೊಟ್ಟು ಮಾಡುತ್ತಿದ್ದಾರೆ. ಆದರೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ವರದಿ ಬಿಡುಗಡೆ ವಿಚಾರದಲ್ಲಿ ಬಿಜೆಪಿ ಸರಕಾರದಲ್ಲಿ ಯಾವುದೇ ಗೊಂದಲವಿಲ್ಲ. ಈಗಾಗಲೇ ಬಿ.ಎಸ್. ಯಡಿಯೂರಪ್ಪನವರೇ ಸ್ಪಷ್ಟಪಡಿಸಿದ್ದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ವರದಿ ಪರಿಶೀಲನೆ ನಡೆಸಿದ್ದು, ಸರಕಾರಕ್ಕೆ ಶೀಘ್ರದಲ್ಲೇ ವರದಿ ಸಲ್ಲಿಸಲಿದ್ದಾರೆ. ಆ ವರದಿಯನ್ನು ಸಂಪುಟದ ಮುಂದೆ ಮಂಡಿಸಿ ಸೂಕ್ತ ತೀರ್ಮಾನ ಮಾಡಲಾಗುವುದು.

ಬೆಂಗಳೂರು: ‘ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷಾ (ಜಾತಿ ಗಣತಿ)ವರದಿ ಬಿಡುಗಡೆ ಮಾಡುವ ವಿಚಾರದಲ್ಲಿ ಬಿಜೆಪಿಯಲ್ಲಿ ಯಾವುದೇ ರೀತಿಯ ಗೊಂದಲಗಳಿಲ್ಲ. ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಈ ಸಂಬಂಧ ಪರಿಶೀಲನೆ ನಡೆಸಿ ವರದಿ ನೀಡಿದ ಕೂಡಲೇ ಆ ವರದಿಯನ್ನು ಸಚಿವ ಸಂಪುಟದ ಮುಂದೆ ಮಂಡಿಸಿ, ಸೂಕ್ತ ತೀರ್ಮಾನ ಕೈಗೊಳ್ಳಲಿದ್ದೇವೆ. ನಮ್ಮ ಸರಕಾರ ಜಾತಿ ಗಣತಿ ವರದಿ ಬಿಡುಗಡೆಗೆ ಯಾವುದೇ ನಿರ್ಬಂಧ ಹೇರಿಲ್ಲ’ ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟಪಡಿಸಿದ್ದಾರೆ.

ಮಂಗಳವಾರ ‘ವಾರ್ತಾಭಾರತಿ’ ಯೂಟ್ಯೂಬ್ ಚಾನಲ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ‘ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಜಿಲ್ಲೆಯಲ್ಲಿನ ಅನೈತಿಕ ಪೊಲೀಸ್‌ಗಿರಿ, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸುಧಾರಣೆ, ಆರೆಸ್ಸೆಸ್-ಬಿಜೆಪಿ ನಡುವಿನ ಸಂಬಂಧ, ರಾಜ್ಯದ ಅಭಿವೃದ್ಧಿ ಕಾರ್ಯಗಳು, ಉಪಚುನಾವಣೆ ಹಾಗೂ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಸಂಬಂಧಿಸಿದಂತೆ ಹಲವು ವಿಚಾರಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದು, ಓದುಗರಿಗಾಗಿ ಇಲ್ಲಿ ನೀಡಲಾಗಿದೆ.

► ವಾ.ಭಾ: ಆರೆಸ್ಸೆಸ್ ಕುರಿತು ಜೆಡಿಎಸ್ ಶಾಸಕಾಂಗ ಪಕ್ಷ ನಾಯಕ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ನಿಮ್ಮ ಪ್ರತಿಕ್ರಿಯೆ?

ಕೋಟ: ಆರೆಸ್ಸೆಸ್ ಟೀಕಿಸಿದರೆ ಹೆತ್ತ ತಾಯಿ ಯನ್ನು ಟೀಕಿಸಿದಂತೆ ಎಂದು ನಾನು ಹೇಳಿದ್ದಲ್ಲ. ಬೌದ್ಧ ಧಮ್ಮ ಗುರು ದಲಾಯಿಲಾಮಾ ಹೇಳಿದ್ದಾರೆ. ಆರೆಸ್ಸೆಸ್ ಭಾರತದ ಮಟ್ಟಿಗೆ ಅತ್ಯಂತ ಉನ್ನತ ಸ್ಥಾನದಲ್ಲಿರುವ ಒಂದು ರಾಷ್ಟ್ರೀಯ ಸಂಘಟನೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೆಸ್ಸೆಸ್ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಅವರಿಗೆ ತಿಳುವಳಿಕೆಯ ಕೊರತೆ ಇದೆ. ನೆಹರೂ ಆರೆಸ್ಸೆಸ್ ಬಗ್ಗೆ ಏನು ಹೇಳಿದ್ದಾರೆಂದು ಒಮ್ಮೆ ಇತಿಹಾಸವನ್ನು ತಿರುವಿಹಾಕಬೇಕೆಂದಷ್ಟೇ ನಾನು ಅವರಿಗೆ ಸಲಹೆ ನೀಡುತ್ತೇನೆ.

► ವಾ.ಭಾ: ಆರೆಸ್ಸೆಸ್-ಬಿಜೆಪಿ ನಡುವೆ ಯಾವುದೇ ಭಿನ್ನತೆ ಇಲ್ಲವೇ?

ಕೋಟ: ‘ಆರೆಸ್ಸೆಸ್ ಒಂದು ರಾಷ್ಟ್ರ ಭಕ್ತ ಸಂಘಟನೆ. ಬಿಜೆಪಿ ಅದರ ಅಡಿಯಲ್ಲಿ ಬರುವ ಒಂದು ರಾಜಕೀಯ ಪಕ್ಷ. ನಮ್ಮ ಮತ್ತು ಸಂಘದ ವಿಚಾರಧಾರೆಗಳಲ್ಲಿ ಯಾವುದೇ ವ್ಯತ್ಯಾಸಗಳಿಲ್ಲ. ಆರೆಸ್ಸೆಸ್ ನಮ್ಮ ಮಾತೃ ಸಂಸ್ಥೆ. ಬಿಜೆಪಿ ನಮ್ಮ ರಾಜಕೀಯ ಪಕ್ಷ. ಆರೆಸ್ಸೆಸ್ ಅಡಿಯಲ್ಲಿಯೇ ಬಿಎಂಎಸ್ ಕಾರ್ಮಿಕ ಸಂಘಟನೆ, ಆದಿವಾಸಿಗಳ ಕಲ್ಯಾಣಕ್ಕಾಗಿ ವನವಾಸಿ ಸೇರಿದಂತೆ ವಿವಿಧ ಸಂಘಟನೆಗಳು ಜನ ಸೇವೆಯಲ್ಲಿ ತೊಡಗಿಕೊಂಡಿವೆ. ರಾಷ್ಟ್ರದ ಒಳಿತಿಗಾಗಿ ಶ್ರಮಿಸುತ್ತಿವೆ. ಆರೆಸ್ಸೆಸ್ ಮತ್ತು ಬಿಜೆಪಿ ವಿಚಾರಗಳಲ್ಲಿ ಯಾವುದೇ ವೈಚಾರಿಕ ಭಿನ್ನತೆ, ಭೇದ-ಭಾವ ಇಲ್ಲ.

► ವಾ.ಭಾ.: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಅನೈತಿಕ ಪೊಲೀಸ್‌ಗಿರಿ, ಪೊಲೀಸರು ‘ತಪ್ಪಿತಸ್ಥರಿಗೆ’ ಸುಲಭವಾಗಿ ಜಾಮೀನು ದೊರೆಯುವ ರೀತಿಯಲ್ಲಿ ಕೇಸು ಹಾಕಿರುವ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಕೋಟ: ಅನೈತಿಕ ಪೊಲೀಸ್‌ಗಿರಿಯನ್ನು ಯಾರೇ ಮಾಡಿದರೂ ತಪ್ಪು. ಕಾನೂನು ಕೈಗೆತ್ತಿಕೊಳ್ಳುವುದು ಸರಿಯಲ್ಲ. ಸಂವಿಧಾನ, ಕಾನೂನು ಇದೆ. ಆದರೆ, ಕರಾವಳಿ ಜಿಲ್ಲೆಗಳಲ್ಲಿ ಕೆಲವರು ಒಂದು ಕೋಮಿನ ಜನರ ನಂಬಿಕೆಗಳಿಗೆ ಗದಾಪ್ರಹಾರ ಮಾಡಿದರೆ ಹೇಗೆ? ಇದೇ ವೇಳೆ ಪೊಲೀಸ್ ಠಾಣೆಗೆ ಬೆಂಕಿ, ‘ಲವ್ ಜಿಹಾದ್’ ಮೂಲಕ ಮತಾಂತರ ಮಾಡುವುದು ಎಷ್ಟು ಸರಿ?

► ವಾ.ಭಾ.: ‘ಲವ್ ಜಿಹಾದ್’ ಎಂಬ ಪದವೇ ಇಲ್ಲ ಎಂದು ಕೇಂದ್ರ ಸರಕಾರ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದೆಯಲ್ಲ?

ಕೋಟ:  ಆ ಕುರಿತು ನನಗೆ ಮಾಹಿತಿ ಇಲ್ಲ. ಆದರೆ, ಲವ್ ಜಿಹಾದ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ವ್ಯಕ್ತಿ ವೈದ್ಯರನ್ನು ಮದುವೆಯಾದರೆ 15 ಲಕ್ಷ ರೂ., ವಿದ್ಯಾರ್ಥಿನಿಯನ್ನು ವಿವಾಹವಾದರೆ 10ಲಕ್ಷ ರೂ., ಬಡವರನ್ನು ಮದುವೆ ಮಾಡಿಕೊಂಡರೆ 3 ಲಕ್ಷ ರೂ.ಸಿಗುತ್ತದೆ ಎಂದು ಹೇಳಿರುವುದು ದಾಖಲಾಗಿದೆ. ಪೊಲೀಸ್ ಅಧಿಕಾರಿಗಳ ಮೇಲೆಯೇ ಹಲ್ಲೆ ನಡೆಸಿದ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಯಾರು ಏನೇ ಹೇಳಿದರೂ ದಕ್ಷಿಣ ಕನ್ನಡ ಜಿಲ್ಲೆ ಅಸ್ಪಶ್ಯತೆ ತೊಡೆದು ಹಾಕಿರುವ ಮತ್ತು ಪರಿಶಿಷ್ಟ ಜಾತಿ(ಎಸ್ಸಿ) ಮತ್ತು ಪರಿಶಿಷ್ಟ ಪಂಗಡ(ಎಸ್ಟಿ)ಕ್ಕೆ ಸಮಾನತೆ ನೀಡಿರುವ ಏಕೈಕ ಜಿಲ್ಲೆ. ಸಾಮಾಜಿಕ ಸಮಾನತೆ ಕಲ್ಪಿಸಿರುವ ಜಿಲ್ಲೆ ದಕ್ಷಿಣ ಕನ್ನಡ ಎಂಬುದನ್ನು ನಾನು ಸಮಾಜ ಕಲ್ಯಾಣ ಸಚಿವನಾಗಿ ಅತ್ಯಂತ ಹೆಮ್ಮೆಯಿಂದ ಹೇಳುತ್ತೇನೆ ಎಂದು ನುಡಿದರು.

► ವಾ.ಭಾ.: ಕಾಂಗ್ರೆಸ್ ಗೇಣಿದಾರರಿಗೆ ಭೂಮಿಯ ಒಡೆತನ ನೀಡಿತ್ತು. ಆದರೆ, ಇಂದು ಕರಾವಳಿ ಭಾಗದಲ್ಲಿ ಕೋಮು ಸಂಘರ್ಷಕ್ಕೆ ಹಿಂದುಳಿದ ವರ್ಗಗಳ ಯುವಕರು ಹೆಚ್ಚು ಬಲಿಯಾಗುತ್ತಿದ್ದಾರೆ, ಉದ್ಯೋಗ ಕೊರತೆ ಮತ್ತು ಬೆಲೆ ಏರಿಕೆ ಬಗ್ಗೆ ನಿಮ್ಮ ಅನಿಸಿಕೆ?

ಕೋಟ: ಕೆಲ ಸಂಘರ್ಷಗಳು ನಡೆಯುತ್ತಿವೆ. ಇವುಗಳನ್ನು ಬೆಳೆಸಿಕೊಂಡು ಹೋಗುವುದು ಸರಿಯಲ್ಲ. ಬೆಂಕಿಯನ್ನು ನಂದಿಸುವ ಕಾರ್ಯವನ್ನು ಸರಕಾರ ಮಾಡುತ್ತಿದೆ. ಅದು ನಮ್ಮ ಜವಾಬ್ದಾರಿಯೂ ಹೌದು. ಇಂದು ವಿಶ್ವ ಭಾರತದತ್ತ ಎದುರು ನೋಡುತ್ತಿದೆ. ಸಂಘರ್ಷಕ್ಕೆ ಪುಷ್ಟಿ ನೀಡುವ ರೀತಿಯಲ್ಲಿ ಹಲವು ಘಟನೆಗಳು ನಡೆದಿವೆ. ಕೆಲ ವಿಚಾರಗಳು ನ್ಯಾಯಾಲಯದ ಮೆಟ್ಟಿಲು ಏರಿವೆ. ಹೀಗಾಗಿ ನಾನು ಈ ಸಂದರ್ಭದಲ್ಲಿ ಬಹಳ ಸ್ಪಷ್ಟವಾಗಿ ಹೇಳುವುದೇನೆಂದರೆ ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು. ಸರಕಾರ ಅದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ.

► ವಾ.ಭಾ.: ಹಾನಗಲ್ ಮತ್ತು ಸಿಂದಗಿ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿಗೆ ಜೆಡಿಎಸ್ ಪರೋಕ್ಷ ಬೆಂಬಲ ನೀಡುತ್ತಿದೆಯಲ್ಲ, ಈ ಬಗ್ಗೆ ನಿಮ್ಮ ನಿಲುವು?

ಕೋಟ: ಬಿಜೆಪಿಗೆ ಜೆಡಿಎಸ್ ಬೆಂಬಲ ನೀಡಲು ಸಾಧ್ಯವೇ ಇಲ್ಲ. ನಮ್ಮ ಸಂಘಟನೆ ಮತ್ತು ನಮ್ಮ ಸರಕಾರದ ಅಭಿವೃದ್ಧಿ ಕಾರ್ಯಗಳು ಹಾಗೂ ಆಡಳಿತವನ್ನು ಆಧರಿಸಿ ಎರಡೂ ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲ್ಲಲಿದೆ. ಆಯುಷ್ಮಾನ್ ಭಾರತ್, ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ, ಕಿಸಾನ್ ಸಮ್ಮಾನ್ ಸೇರಿದಂತೆ ನಮ್ಮ ಸರಕಾರದ ಹಲವು ಯೋಜನೆಗಳು ನಮ್ಮ ಬೆಂಬಲಕ್ಕೆ ಬರಲಿವೆ. ನಮ್ಮ ಸರಕಾರ ಉತ್ತಮ ಆಡಳಿತ ನೀಡುತ್ತಿದೆ.

► ವಾ.ಭಾ.: ಚಾಮರಾಜನಗರ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರು ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿದ್ದಾರೆ, ಇದನ್ನು ಉತ್ತಮ ಆಡಳಿತ ಎಂದು ಹೇಗೆ ಹೇಳುತ್ತೀರಿ?

ಕೋಟ: ಕೋವಿಡ್ ನಮ್ಮನ್ನು ಹೇಳಿ-ಕೇಳಿ ಬಂದಿಲ್ಲ. ಹಾಗೆಂದು ಲೋಪಗಳು ಆಗಿಲ್ಲ ಎಂದು ನಾನು ಹೇಳುವುದಿಲ್ಲ. ಆದರೆ, ಕೋವಿಡ್ ಸೋಂಕಿನ ಸಂಕಷ್ಟದ ಸಂದರ್ಭದಲ್ಲಿ ಆಸ್ಪತ್ರೆ, ಹಾಸಿಗೆ, ಆಕ್ಸಿಜನ್ ಸಹಿತ ಆರೋಗ್ಯ ಸೌಲಭ್ಯ ವೃದ್ಧಿಗೆ ನಮ್ಮ ಸರಕಾರ ವಿಶೇಷ ಆದ್ಯತೆ ನೀಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.83ರಷ್ಟು ಜನರು ಆಯುಷ್ಮಾನ್ ಭಾರತ್ ಯೋಜನೆಯಡಿ ಚಿಕಿತ್ಸೆ ಪಡೆದಿದ್ದಾರೆ. ಕೋವಿಡ್ ನಿರ್ವಹಣೆಯಲ್ಲಿ ದೇಶದಲ್ಲೇ ಕರ್ನಾಟಕ ನಂಬರ್ 1 ಎಂದು ಮಾಧ್ಯಮಗಳೇ ಹೇಳಿವೆ.

► ವಾ.ಭಾ: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸಹಿತ ಅಗತ್ಯ ವಸ್ತುಗಳ ಬೆಲೆ ಏರಿಕೆ ಬಗ್ಗೆ ಏನು ಹೇಳುವಿರೀ?

ಕೋಟ: ಕೋವಿಡ್ ಸೋಂಕಿನ ಕಠಿಣ ಸಂದರ್ಭದಲ್ಲಿ ಬೆಲೆ ಏರಿಕೆಯಾಗಿದೆ. ಆದರೆ, ಇದೇ ಸಂದರ್ಭದಲ್ಲಿ ಬಿಜೆಪಿ 10 ಕೋಟಿ ಕುಟುಂಬಗಳಿಗೆ ಉಜ್ವಲ ಯೋಜನೆಯಡಿ ಅನಿಲ ಸಂಪರ್ಕ ಕಲ್ಪಿಸಿದೆ. ಬೆಲೆ ಏರಿಕೆ ವೈಭವೀಕರಣ ಸರಿಯಲ್ಲ. ಯಾವುದೇ ಸಬ್ಸಿಡಿ ಕಡಿತವನ್ನು ಮಾಡಿಲ್ಲ. ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲೋತ್ಪನ್ನ ಬೆಲೆ ಏರಿಕೆಯಿಂದ ನಮ್ಮಲ್ಲಿಯೂ ಬೆಲೆ ಏರಿಕೆಯಾಗಿದೆ. ಆದರೆ, ಈ ವಿಷಯದಲ್ಲಿ ಪ್ರತಿಪಕ್ಷಗಳು ರಾಜಕೀಯ ಮಾಡುತ್ತಿವೆ.

► ವಾ.ಭಾ.: ಹಿಂದಿ ಹೇರಿಕೆ, ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣ ನಿರ್ವಹಣೆ ಖಾಸಗಿಯವರಿಗೆ ನೀಡುವುದು(ಅದಾನಿ ಕಂಪೆನಿಗೆ ಮಂಗಳೂರು ವಿಮಾನ ನಿಲ್ದಾಣ ನೀಡಿದ್ದು) ಎಷ್ಟು ಸರಿ?

ಕೋಟ: ಹಿಂದಿ ಹೇರಿಕೆ ಪ್ರಶ್ನೆಯೇ ಇಲ್ಲ. ವಿಮಾನ ನಿಲ್ದಾಣ, ಬಂದರು ನಿರ್ವಹಣೆ ಖಾಸಗಿಯವರಿಗೆ ನೀಡುವುದರಿಂದ ಜನಸಾಮಾನ್ಯರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಆದರೆ, ಜನರಿಗೆ ಒಳ್ಳೆಯ ರಸ್ತೆ, ಶಿಕ್ಷಣ, ಆರೋಗ್ಯ, ಕೈಗಾರಿಕೆಗಳ ಅಭಿವೃದ್ಧಿ ಮೂಲಕ ಉದ್ಯೋಗ ಕಲ್ಪಿಸಬೇಕು. ಅಧಿಕಾರ ಜನಸಾಮಾನ್ಯರಿಗೆ ನೆರವಾಗುವ ನಿಟ್ಟಿನಲ್ಲಿ ಇರಬೇಕೇ ಹೊರತು ತಮ್ಮ ವೈಯಕ್ತಿಕ ಹಿತಕ್ಕಾಗಿ ಅಲ್ಲ. ಖಾಸಗಿಯವರ ಬದಲಿಗೆ ಸರಕಾರದ ವ್ಯವಸ್ಥೆ ಹೆಚ್ಚಾಗಬೇಕಿದೆ.

► ವಾ.ಭಾ.: ನಿಮ್ಮ ಮನೆ ನಿರ್ಮಾಣ ವಿವಾದ ಆಗಿದ್ದೇಕೇ?

ಕೋಟ: ನನ್ನ ಸ್ವಂತ ಜಾಗದಲ್ಲಿ 60 ಲಕ್ಷ ರೂ.ವೆಚ್ಚದಲ್ಲಿ ಮನೆ ನಿರ್ಮಿಸಲು ಮುಂದಾಗಿದ್ದೇನೆ. ನಾನು ಮೇಲ್ಮನೆ ಸದಸ್ಯನಾಗಿ ನನ್ನ ಆದಾಯ ಮತ್ತು ನನ್ನ ಪುತ್ರ ನಡೆಸುವ ಕಾರ್ಖಾನೆಯಿಂದ ಬಂದ ಆದಾಯದಿಂದ ಈ ಕೆಲಸಕ್ಕೆ ಕೈಹಾಕಿದ್ದೇನೆ. ನನಗೆ ಬಂದ ನಿಗದಿತ ಆದಾಯಕ್ಕಿಂತ ಹೆಚ್ಚಿನ ಮೊತ್ತವಿದ್ದರೆ ತನಿಖೆ ನಡೆಸಲು ಕೋರಿ ನಾನೇ ಲೋಕಾಯುಕ್ತಕ್ಕೆ ದೂರು ನೀಡಿದ್ದೇನೆ.

► ವಾ.ಭಾ.: ಕರಾವಳಿ ಜಿಲ್ಲೆಯಲ್ಲಿ ಕೋಮು ಸಾಮರಸ್ಯ ವೃದ್ಧಿಗೆ ನಿಮ್ಮ ಸಲಹೆ?

ಕೋಟ: ನಾನು ಮೇಲ್ಮನೆ ಸದಸ್ಯ ಹಾಗೂ ಸಚಿವನಾದ ಬಳಿಕ ಅಲ್ಪಸಂಖ್ಯಾತ ಸಮುದಾಯದ ಯಾವುದೇ ವ್ಯಕ್ತಿಗೆ ಸರಕಾರದ ಸೌಲಭ್ಯಗಳ ಹಂಚಿಕೆಯಲ್ಲಿ ಅನ್ಯಾಯ ಅಥವಾ ಯಾವುದೇ ಲೋಪ ಆಗಿದ್ದರ ಬಗ್ಗೆ ನಿರೂಪಿಸಿದರೆ ನಾನು ರಾಜಕೀಯ ನಿವೃತ್ತಿಯ ಕುರಿತು ಆಲೋಚಿಸುತ್ತೇನೆ. ಅಭಿವೃದ್ಧಿ ದೃಷ್ಟಿಯಿಂದ ಹಿಂದೂ, ಮುಸ್ಲಿಮ್, ಕ್ರೈಸ್ತ ಎಂಬ ಭೇದ-ಭಾವ ಇಲ್ಲದೆ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕಾದ ಅಗತ್ಯವಿದೆ.
ವಾ.ಭಾ: ಮುಂಬರುವ ವಿಧಾನಸಭೆ ಚುನಾವಣೆಯನ್ನು ಬಿಜೆಪಿ ಯಾರ ನೇತೃತ್ವದಲ್ಲಿ, ಯಾವ ವಿಚಾರಗಳನ್ನು ಮುಂದಿಟ್ಟುಕೊಂಡು ಎದುರಿಸಲಿದೆ?
ಕೋಟ: ಮುಂಬರುವ ವಿಧಾನಸಭೆ ಚುನಾವಣೆಯನ್ನು ಬಿಜೆಪಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಮ್ಮ ಆಡಳಿತ ಮತ್ತು ಅಭಿವೃದ್ಧಿ ವಿಚಾರಗಳನ್ನು ಮುಂದಿಟ್ಟುಕೊಂಡು ಎದುರಿಸಲಿದ್ದು, ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ. ಕೇಂದ್ರ ಹಾಗೂ ರಾಜ್ಯ ಸರಕಾರದ ಅಭಿವೃದ್ಧಿ ಕಾರ್ಯಗಳು ನಮ್ಮ ಕೈಹಿಡಿಯಲಿವೆ.

► ವಾ.ಭಾ: ನೈತಿಕತೆ ಬೋಧನೆ ಮಾಡುವ ‘ಸಂಘ’/ ಬಿಜೆಪಿ ಭ್ರಷ್ಟಾಚಾರದ ಆರೋಪ, ಕೆಲ ವಿಚಾರಗಳಲ್ಲಿ ಕೋರ್ಟ್‌ಗಳಿಂದ ತಡೆಯಾಜ್ಞೆ ಬಗ್ಗೆ ನಿಮ್ಮ ನಿಲುವೇನು?

ಕೋಟ: ‘ಸಾವಿಲ್ಲದ ಮನೆಯಿಂದ ಸಾಸಿವೆ ತರುವುದು ಸುಲಭವಲ್ಲ’ ಎಂದು ಭಗವಾನ್ ಬುದ್ಧ ಹೇಳುತ್ತಾರೆ. ಕೆಲ ತಪ್ಪುಗಳಾಗಿವೆ, ಗೊಂದಲಗಳು ಆಗಿವೆ. ವ್ಯವಸ್ಥೆಯನ್ನು ಮುನ್ನಡೆಸುವ ಸಂದರ್ಭದಲ್ಲಿ ಕೆಲ ಲೋಪಗಳು ಸಹಜ. ನಾನು ಎಲ್ಲವೂ ಸರಿಯಾಗಿದೆ ಎಂದು ಸಮರ್ಥನೆ ಮಾಡುವುದಿಲ್ಲ. ಅವುಗಳನ್ನು ಸರಿಪಡಿಸಿಕೊಂಡು ಮುನ್ನಡೆಯಬೇಕು. ಆ ನಿಟ್ಟಿನಲ್ಲಿ ನಮ್ಮ ಸರಕಾರ ಮುನ್ನಡೆಯುತ್ತದೆ’.

‘ನನಗೆ ಯಾವುದಾದರೇನು?’
► ವಾ.ಭಾ.: ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಹೊಣೆ ತಮ್ಮ ಕೈ ತಪ್ಪಿದ್ದು ಏಕೆ?

ಕೋಟ: ತಾಪಂ, ಜಿಪಂ, ಎರಡು ಬಾರಿ ಶಾಸಕನಾಗಿ ಗೆಲುವು-ಸೋಲು ಕಂಡಿದ್ದೇನೆ. ಆರೆಸ್ಸೆಸ್ ಹಿನ್ನೆಲೆಯಿಂದ ಬಂದ ನನಗೆ ಪಕ್ಷ ಮೂರು ಅವಧಿ ವಿಧಾನಪರಿಷತ್ ಸದಸ್ಯನಾಗಿ ಕೆಲಸ ಮಾಡಲು ಅವಕಾಶ ನೀಡಿದೆ. ಇದೀಗ ಸಚಿವ ಆಗಿದ್ದೇನೆ. ಕೊಡಗು ಜಿಲ್ಲೆಯ ಉಸ್ತುವಾರಿ ನೀಡಿದ್ದಾರೆ. ನನಗೆ ಮಡಿಕೇರಿ, ಗದಗ ಯಾವುದಾದರೇನು? ಪಕ್ಷ ವಹಿಸುವ ಜವಾಬ್ದಾರಿಯನ್ನು ನಿರ್ವಹಿಸುವುದಷ್ಟೇ ನನ್ನ ಕೆಲಸ.

‘ದಾಳಿಗೂ ರಾಜಕಾರಣಕ್ಕೂ ಹೋಲಿಕೆ ಸರಿಯಲ್ಲ’

► ವಾ.ಭಾ.: ಬಿಎಸ್‌ವೈ ಆಪ್ತರ ಮನೆ ಮೇಲಿನ ಐಟಿ ದಾಳಿ, ರಾಜ್ಯ ಪ್ರವಾಸಕ್ಕೆ ಆಕ್ಷೇಪದ ಬಗ್ಗೆ ನಿಮ್ಮ ಅಭಿಪ್ರಾಯ?

ಕೋಟ: ಆದಾಯ ತೆರಿಗೆ ಇಲಾಖೆ ನಿಗದಿತ ಆದಾಯಕ್ಕಿಂತ ಹೆಚ್ಚಿನ ಮೊತ್ತದ ಆಸ್ತಿ ಗಳಿಕೆ ಮಾಡಿರುವವರ ಮೇಲೆ ದಾಳಿ ಮಾಡುವುದು ಸಹಜ. ಅದಕ್ಕೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ. ಈ ಹಿಂದೆ ಕೇಂದ್ರದಲ್ಲಿ ಯುಪಿಎ ಸರಕಾರದ ಅವಧಿಯಲ್ಲಿ ಜನಾರ್ದನ ರೆಡ್ಡಿ ಅವರ ನಿವಾಸಗಳ ಮೇಲೆ ಐಟಿ ದಾಳಿ ನಡೆದಿತ್ತು. ದಾಳಿ ರಾಜಕೀಯ ಪ್ರೇರಿತ ಅಲ್ಲ ಎಂದು ಖುದ್ದು ಯಡಿಯೂರಪ್ಪನವರೇ ಹೇಳಿಕೆ ನೀಡಿದ್ದಾರೆ. ಅಕ್ರಮ ಆಸ್ತಿಗಳ ಕುರಿತು ಐಟಿ ಪರಿಶೀಲನೆ ನಡೆಸುತ್ತದೆ. ದಾಳಿಗೂ ರಾಜಕಾರಣಕ್ಕೂ ಹೋಲಿಕೆ ಸರಿಯಲ್ಲ.

‘ವರದಿ ಬಂದ ಕೂಡಲೇ ಕಾನೂನು ಕ್ರಮ’
► ವಾ.ಭಾ.: ಇಲಾಖೆಯಲ್ಲಿನ ಭ್ರಷ್ಟಾಚಾರದ ಆರೋಪ ಬಗ್ಗೆ ಏನು ಹೇಳ್ತೀರಿ?

ಕೋಟ: ಇಲಾಖೆಯಲ್ಲಿ ಭ್ರಷ್ಟಾಚಾರವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಈಗಾಗಲೇ ಆರೋಪ ಕೇಳಿಬಂದ ಕೂಡಲೇ ವರದಿ ನೀಡಲು ಸೂಚನೆ ನೀಡಿದ್ದು, ಮೇಲುನೋಟಕ್ಕೆ ಭ್ರಷ್ಟಾಚಾರ ನಡೆದಿರುವುದು ಕಂಡುಬಂದ ಕಾರಣ ಸಂಬಂಧಪಟ್ಟ ವ್ಯಕ್ತಿಯನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿದೆ. ಅಲ್ಲದೆ, ಸಮಗ್ರ ತನಿಖೆ ನಡೆಸಿ ವರದಿ ನೀಡಲು ಸೂಚಿಸಿದ್ದು ವರದಿ ಬಂದ ಕೂಡಲೇ ಕಾನೂನು ಅನ್ವಯ ಕ್ರಮ ಜರುಗಿಸಲಾಗುವುದು.

ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ಸಮಾಜವನ್ನು ಕಟ್ಟುವ ಕೆಲಸ ಮಾಡಬೇಕಿದೆ. ಆರ್ಥಿಕವಾಗಿ ಹಿಂದುಳಿದ ಜನರ ಸಬಲೀಕರಣ ಮಾಡಬೇಕು. ಅವರಿಗೆ ಮನೆ, ಶುದ್ಧ ಕುಡಿಯುವ ನೀರು ಸೇರಿದಂತೆ ನಾಗರಿಕ ಸೌಲಭ್ಯಗಳನ್ನು ಒದಗಿಸಬೇಕು. ರಾಜ್ಯದಲ್ಲಿ 1.27 ಕೋಟಿ ಜನ ಹಾಗೂ 27 ಲಕ್ಷಕ್ಕೂ ಅಧಿಕ ಎಸ್ಸಿ-ಎಸ್ಟಿ ಮತ್ತು ಹಿಂದುಳಿದ ವರ್ಗಗಳ ಜನರ ಶ್ರೇಯೋಭಿವೃದ್ಧಿ ನಮ್ಮ ಆದ್ಯತೆ. 5.50 ಲಕ್ಷ ಕುಟುಂಬಗಳಿಗೆ ಮನೆ ಇಲ್ಲ. 4.50ಲಕ್ಷ ಕುಟುಂಬಗಳು ತಾವು ನಿಂತ ನೆಲೆ ತಮ್ಮದಲ್ಲ. ಹೀಗಾಗಿ ಅವರಿಗೆ ಮನೆ ಮತ್ತು ಹಕ್ಕುಪತ್ರ ನೀಡಬೇಕಿದೆ. ಜೊತೆಗೆ ಇಲಾಖೆಯಲ್ಲಿ ಸುಧಾರಣೆ ಹಾಗೂ ಪಾರದರ್ಶಕತೆ ತರಲು ಆಸ್ಥೆ ವಹಿಸಲಾಗಿದೆ. ತಪ್ಪು ಮಾಡಿದ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಶಿಕ್ಷೆ, ಉತ್ತಮ ಕೆಲಸ ಮಾಡುವವರಿಗೆ ಪ್ರೋತ್ಸಾಹ ನೀಡುವ ಮೂಲಕ ಭ್ರಷ್ಟಚಾರ ನಿರ್ಮೂಲನೆ ಮಾಡಲಾಗುವುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)