ರೈತರ ಸಾವಿಗೆ ಕಾರಣವಾದ ಲಖೀಂಪುರ್ ಖೇರಿ ಘಟನೆ 'ಖಂಡಿತವಾಗಿಯೂ ಖಂಡನಾರ್ಹ': ನಿರ್ಮಲಾ ಸೀತಾರಾಮನ್
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (File Photo: PTI)
ಬಾಸ್ಟನ್: ನಾಲ್ಕು ಮಂದಿ ರೈತರ ಸಾವಿಗೆ ಕಾರಣವಾದ ಲಖೀಂಪುರ್ ಖೇರಿ ಘಟನೆ 'ಖಂಡಿತವಾಗಿಯೂ ಖಂಡನಾರ್ಹ' ಎಂದು ಹೇಳಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಅಂತಹುದೇ ಸ್ವರೂಪದ ಘಟನೆಗಳು ದೇಶದ ಇತರೆಡೆಗಳಲ್ಲೂ ನಡೆಯುತ್ತಿವೆ ಹಾಗೂ ಅಂತಹ ಘಟನೆ ನಡೆದಾಗ ಅವುಗಳನ್ನು ಪ್ರಶ್ನಿಸಬೇಕು ಬದಲು ಉತ್ತರ ಪ್ರದೇಶ ಸರಕಾರ ಬಿಜೆಪಿ ಸರಕಾರವೆಂಬ ಕಾರಣಕ್ಕೆ ಇತರರಿಗೆ ಲಾಭವಾಗಲು ಪ್ರಶ್ನಿಸುವುದಲ್ಲ,'' ಎಂದು ಹೇಳಿದರು.
ಅಮೆರಿಕಾ ಪ್ರವಾಸದಲ್ಲಿರುವ ನಿರ್ಮಲಾ ಸೀತಾರಾಮನ್ ಅವರು ಹಾರ್ವರ್ಡ್ ಕೆನ್ನಡಿ ಸ್ಕೂಲ್ನಲ್ಲಿ ಮಂಗಳವಾರ ನಡೆದ ಸಂವಾದವೊಂದರಲ್ಲಿ ಮಾತನಾಡುತ್ತಿರುವ ವೇಳೆ ಈ ಪ್ರಶ್ನೆಯನ್ನು ಒಬ್ಬರು ಅವರನ್ನು ಕೇಳಿದರು.
ದೇಶದ ಪ್ರಧಾನಿ, ಹಿರಿಯ ಸಚಿವರುಗಳಿಂದ ಈ ಘಟನೆಯ ಬಗ್ಗೆ ಯಾವುದೇ ಪ್ರತಿಕ್ರಿಯೆ ಏಕಿಲ್ಲ ಹಾಗೂ ಕೇವಲ ರಕ್ಷಣಾತ್ಮಕ ಪ್ರತಿಕ್ರಿಯೆಯನ್ನು ಏಕೆ ವ್ಯಕ್ತಪಡಿಸಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವೆ, "ಖಂಡಿತವಾಗಿಯೂ ಇಲ್ಲ, ಆ ಒಂದು ಘಟನೆಯನ್ನು ಎತ್ತಿಕೊಂಡಿದ್ದೀರಿ ಹಾಗೂ ಅದು ಖಂಡಿತವಾಗಿಯೂ ಖಂಡನಾರ್ಹ, ನಾವೆಲ್ಲರೂ ಹಾಗೆಯೇ ಹೇಳುತ್ತೇವೆ. ಅಂತೆಯೇ ಇತರೆಡೆಗಳೂ ಘಟನೆಗಳು ನಡೆಯುತ್ತಿವೆ, ಇದು ನನ್ನ ಕಳವಳಕ್ಕೆ ಕಾರಣ,'' ಎಂದರು.
"ನನ್ನ ಪಕ್ಷ ಅಥವಾ ಪ್ರಧಾನಿ ರಕ್ಷಣಾತ್ಮಕವಾಗಿಲ್ಲ. ಅದು ಭಾರತದ ಬಗ್ಗೆ ರಕ್ಷಣಾತ್ಮಕ. ನಾನು ಭಾರತದ ಬಗ್ಗೆ, ಬಡವರಿಗೆ ನ್ಯಾಯವೊದಗಿಸುವ ಬಗ್ಗೆ ಮಾತನಾಡುತ್ತೇನೆ. ನನ್ನನ್ನು ಅಣಕಿಸುವ ಹಾಗಿಲ್ಲ, ಹಾಗಿದ್ದಲ್ಲಿ ನಾನು ರಕ್ಷಣಾತ್ಮಕವಾಗಿರುತ್ತೇನೆ, ಕ್ಷಮಿಸಿ, ವಾಸ್ತವಗಳ ಬಗ್ಗೆ ಮಾತನಾಡುವ ಎಂದು ಹೇಳುತ್ತೇನೆ. ಇದು ನಿಮಗೆ ನನ್ನ ಉತ್ತರ,'' ಎಂದರು.