varthabharthi


ಕರಾವಳಿ

► ವಿದ್ಯಾರ್ಥಿಗಳು, ಶಿಕ್ಷಣ ತಜ್ಞರ ತೀವ್ರ ಅಸಮಾಧಾನ ► ನನ್ನಿಂದ ತಪ್ಪಾಗಿದೆ, ಕ್ಷಮಿಸಿ : ಲೇಖಕರ ಪ್ರತಿಕ್ರಿಯೆ

ಬಿಎಡ್ ಮೂರನೇ ಸೆಮಿಸ್ಟರ್ ಪಠ್ಯದಲ್ಲಿ ಮೌಲ್ಯಾಧಾರಿತ ಶಿಕ್ಷಣದ ಹೆಸರಿನಲ್ಲಿ ಮುಸ್ಲಿಂ ದ್ವೇಷಿ ಸಾಲುಗಳು

ವಾರ್ತಾ ಭಾರತಿ : 13 Oct, 2021

ಮಂಗಳೂರು, ಅ.13: ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳಿಗೆ ಅನ್ವಯಗೊಂಡಂತೆ ಬಿಎಡ್ ಮೂರನೇ ಸೆಮಿಸ್ಟರ್ ಪಠ್ಯಪುಸ್ತಕವೊಂದರಲ್ಲಿ ಮೌಲ್ಯಾಧಾರಿತ ಶಿಕ್ಷಣದ ಹೆಸರಿನಲ್ಲಿ ಇಸ್ಲಾಂ ಧರ್ಮ ಮತ್ತು ಮುಸ್ಲಿಮರ ಕುರಿತು ಪೂರ್ವಗ್ರಹಪೀಡಿತ,  ಅವಹೇಳನಕಾರಿ ಅಂಶಗಳನ್ನು ತುರುಕಿರುವುದು ಬೆಳಕಿಗೆ ಬಂದಿದೆ. ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಬಯಲಾಗುತ್ತಿದ್ದಂತೆ ಇದಕ್ಕೆ ವಿದ್ಯಾರ್ಥಿಗಳು, ಶಿಕ್ಷಣ ತಜ್ಞರ ಸಹಿತ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ತುಮಕೂರಿನ ಕಾಲೇಜೊಂದರ ಸಹಾಯಕ ಪ್ರಾಧ್ಯಾಪಕ ಬಿ.ಆರ್. ರಾಮಚಂದ್ರಯ್ಯ ಎಂಬವರು ಬರೆದಿರುವ ಮೈಸೂರಿನ ವಿಸ್ಮಯ ಪ್ರಕಾಶನ ಪ್ರಕಟಿಸಿರುವ 'ಮೌಲ್ಯ ದರ್ಶನ ದಿ ಎಸ್ಸೆನ್ಸ್ ಆಫ್ ವ್ಯಾಲ್ಯೂ ಎಜುಕೇಷನ್' ಎಂಬ ಆಂಗ್ಲ ಕೃತಿಯಲ್ಲಿ ಇಸ್ಲಾಮ್ ಮತ್ತು ಮುಸ್ಲಿಮರನ್ನು ನಿಂದಿಸಲಾಗಿದೆ ಎಂದು ಆರೋಪ ಕೇಳಿ ಬಂದಿದೆ. ಈ ಕೃತಿಯನ್ನು ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳು ಕೂಡ ಬಿಎಡ್ ಮೂರನೇ ಸೆಮಿಸ್ಟರ್‌ಗೆ ಪಠ್ಯಪುಸ್ತಕವಾಗಿ ಆಯ್ಕೆ ಮಾಡಿಕೊಂಡಿವೆ  ಎಂದು ತಿಳಿದು ಬಂದಿದೆ.

ಸಂಕುಚಿತವಾದ ಎಂಬ ವಿಷಯವನ್ನು ವಿವರಿಸುವಾಗ ಜನಸಾಮಾನ್ಯರಿಗೆ ಬೇಕಾದುದು ಕರುಣೆ, ಶಾಂತಿ ಮತ್ತು ಸೌಹಾರ್ದ. ಆದರೆ ಸೌಹಾರ್ದ, ಶಾಂತಿ, ಮತ್ತು ಸಹಬಾಳ್ವೆ ಈ ದಾರಿಯಲ್ಲಿ ನಾವು ಭಿನ್ನ ಮೌಲ್ಯವನ್ನು ಹೊಂದಿದ್ದೇವೆ. ಮಾನವೀಯ ಹೋಲಿಕೆ ನಮ್ಮದಾಗಿದೆ. ಮುಸ್ಲಿಮರಿಗೆ ಕುರ್‌ಆನ್ ಸರ್ವಸ್ವವಾಗಿದೆ. ಅದು ಮುಹಮ್ಮದರಿಗೆ ವ್ಯಕ್ತಿನಿಷ್ಠವಾಗಿದೆ. ಮಸ್ಲಿಮರು ಕುರ್ ಆನ್ ಮೌಲ್ಯದಂತೆ ಮಾತ್ರ ಬಾಳುತ್ತಾರೆ. ಇದು ಹಾನಿಕಾರಕ ಮತ್ತು ಮರುಭೂಮಿಯಲ್ಲಿ ಹುಟ್ಟಿದ, ಹಳೆ ಕಾಲದ ಅಸಹ್ಯವೆನಿಸುವಂತಹದ್ದಾಗಿದೆ. ಮುಸ್ಲಿಮರ ನಂಬಿಕೆಯು ಸೀಮಿತ ದೃಷ್ಟಿಕೋನದ್ದಾಗಿದೆ. ವಿಸ್ತೃತ ಹಗೆತನಕ್ಕೆ ದಾರಿಯಾಗಿದೆ. ಮುಸ್ಲಿಮರ ಏಕ ಮೌಲ್ಯ ಗೌರವಿಸುವಿಕೆಯು ಇತರ ಮೌಲ್ಯಗಳನ್ನು ಟೀಕಿಸುವುದಾಗಿದ್ದು, ಅತಿವಾದಕ್ಕೆ ದಾರಿಯಾಗಿದೆ. ಇಸ್ಲಾಮಿಕ್ ಸೀಮಿತ ದೃಷ್ಟಿಕೋನವು ಸಾಕಷ್ಟು ಭೀಕರತೆಯನ್ನು ನಡೆಸಿದೆ. ಬಹುತ್ವ ಮತ್ತು ಬಹು ಸಂಸ್ಕೃತಿಗಳು ಇಸ್ಲಾಂ ಮೌಲ್ಯಕ್ಕೆ ಸಮನಾದುದಲ್ಲ ಎಂದು ಮುಸ್ಲಿಮರು ಹೇಳುತ್ತಾರೆ. ಜಿಹಾದ್ ಉಗ್ರಗಾಮಿಗಳು ಮಾನವತೆಯ ವಿರುದ್ಧ ಹೀನ ಅಪರಾಧಗಳನ್ನು ನಡೆಸುತ್ತಾರೆ. ದಾರಿ ತಪ್ಪಿದ ಇವರು ಅರ್ಥವಿಲ್ಲದ್ದಕ್ಕೆ ಜೀವ ತೆರುತ್ತಾರೆ. ಜಿಹಾದಿಗಳು ಬಲಿದಾನವನ್ನೂ ಸಮರ್ಥಿಸುತ್ತಾರೆ. ಇಸ್ಲಾಂ ಮೌಲ್ಯಕ್ಕೆ ಮಾತ್ರ ವಿಧೇಯರಾಗಿರುವವರು ಹೆಚ್ಚು ಅಪಾಯಕಾರಿಗಳು. ಅಲ್ಲಾಹ್ ಮಾತ್ರ ಸರ್ವ ಶ್ರೇಷ್ಠ ಮತ್ತು ಕುರ್‌ಆನ್ ಮೌಲ್ಯಗಳೇ ಎಲ್ಲವೂ ಎನ್ನುವ ಇಸ್ಲಾಮಿನ ಏಕ ನಂಬಿಕೆಯು ಕೆಡುಕುಗಳಿಗೆ ಮೂಲವಾಗಿದೆ ಎಂಬ ಸಾಲುಗಳು ಈ  ಪುಸ್ತಕದಲ್ಲಿವೆ. 

ಈ ಬಗ್ಗೆ ಮಂಗಳೂರು ಮತ್ತು ತುಮಕೂರು ವಿಶ್ವವಿದ್ಯಾನಿಲಯದ ಅಧೀನದಲ್ಲಿರುವ ಕಾಲೇಜುಗಳಲ್ಲಿ ಬಿಎಡ್ ಕಲಿಯುತ್ತಿರುವ ಹಲವು ವಿದ್ಯಾರ್ಥಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಸ್ಲಾಮ್ ಧರ್ಮವನ್ನು ಉದ್ದೇಶಪೂರ್ವಕವಾಗಿ ನಿಂದಿಸುವ ಸಲುವಾಗಿ ವಿದ್ಯಾರ್ಥಿಗಳಿಗೆ ಇದನ್ನು ಪಠ್ಯವಾಗಿಸಲಾಗಿದೆ ಎಂದು ಅವರು ದೂರಿದ್ದಾರೆ. ನೈತಿಕ ಮೌಲ್ಯದ ಹೆಸರಿನಲ್ಲಿ ದ್ವೇಷ ಸಾಧಿಸುವ ಕುಕೃತ್ಯ ಇದಾಗಿದೆ. ಈ ಪಠ್ಯಪುಸ್ತಕವನ್ನು ಮುಂದುವರಿಸಿದರೆ ವಿದ್ಯಾರ್ಥಿಗಳ ಮಧ್ಯೆ ಕಂದಕ ಸೃಷ್ಟಿಯಾಗಬಹುದು. ಹಾಗಾಗಿ ಇದನ್ನು ವಿಶ್ವವಿದ್ಯಾನಿಲಯವು ಕೈ ಬಿಡಬೇಕು ಎಂದು ವಿದ್ಯಾರ್ಥಿಗಳ ಹೆತ್ತವರು ಆಗ್ರಹಿಸಿದ್ದಾರೆ.

ಅತ್ಯಂತ ಆಕ್ಷೇಪಾರ್ಹ : ಶಿಕ್ಷಣ ತಜ್ಞ ವಿ ಪಿ ನಿರಂಜನಾರಾಧ್ಯ

ಇದು ಅತ್ಯಂತ ಆಕ್ಷೇಪಾರ್ಹ. ಇಂತಹ ಸಾಲುಗಳನ್ನು ಬರೆದಿರುವ ಲೇಖಕರೇ ಸಂಕುಚಿತವಾದಿಯಾಗಿ ಹೀಗೆ ಬರೆದಿದ್ದಾರೆ. ಸಮಾಜದ ಒಂದು ಸಮುದಾಯವನ್ನು ಮಾತ್ರ ಗುರಿಯಾಗಿಸಿ ಅವರನ್ನು ಮೂಲಭೂತವಾದಿಗಳಾಗಿ ಬಿಂಬಿಸಿ, ಅವರ  ವಿರುದ್ಧ ಅನುಮಾನ, ದ್ವೇಷ ಹರಡುವ ಪ್ರಯತ್ನವಿದು. ಎಲ್ಲ ಧರ್ಮ , ವರ್ಗಗಳಲ್ಲೂ ಸಂಕುಚಿತವಾದವಿದೆ. ಅದನ್ನು ಸಮಗ್ರವಾಗಿ ನೋಡಬೇಕೇ ವಿನಃ ಗುಪ್ತ ಅಜೆಂಡಾ ಇಟ್ಟುಕೊಂಡು ಒಂದು ವರ್ಗವನ್ನು ಗುರಿ ಮಾಡುವುದು ಸಲ್ಲದು ಎಂದು ಹಿರಿಯ ಶಿಕ್ಷಣ ತಜ್ಞ ವಿ ಪಿ ನಿರಂಜನಾರಾಧ್ಯ ವಾರ್ತಾಭಾರತಿಗೆ ಹೇಳಿದ್ದಾರೆ. 

ನನ್ನಿಂದ ತಪ್ಪಾಗಿದೆ, ಕ್ಷಮಿಸಿ : ಲೇಖಕರ ಪ್ರತಿಕ್ರಿಯೆ

ಈ ಬಗ್ಗೆ ವಾರ್ತಾಭಾರತಿ  ಬಿ.ಆರ್. ರಾಮಚಂದ್ರಯ್ಯ ಅವರನ್ನು ಸಂಪರ್ಕಿಸಿದಾಗ ಮೊದಲು ಅಂತಹ ಯಾವುದೇ ಅಂಶಗಳು ತನ್ನ ಪುಸ್ತಕದಲ್ಲಿ ಇಲ್ಲ ಎಂದು ಹೇಳಿದ ಅವರು ಆ ಸಾಲುಗಳಿರುವ ಪುಟಗಳ ಚಿತ್ರಗಳನ್ನು ತೋರಿಸಿದಾಗ ಕೃತಿಯ ಮೊದಲ ಆವೃತ್ತಿಯಲ್ಲಿ ಮುಸ್ಲಿಂ ವಿರೋಧಿ ಅಂಶಗಳು ಉಲ್ಲೇಖವಾಗಿರುವುದು‌ ನಿಜ. ಹಾಗೆ ಆಗಬಾರದಿತ್ತು.  ನನ್ನಿಂದ ತಪ್ಪಾಗಿದೆ. ಪರಿಷ್ಕೃತ ಆವೃತ್ತಿಯಲ್ಲಿ ಆ ಇಡೀ ಭಾಗವನ್ನೇ ಬಿಡಲಾಗಿದೆ. ಈಗ ಆ ಸಾಲುಗಳು ಪುಸ್ತಕದಲ್ಲಿ ಇಲ್ಲ ಎಂದು ಕೃತಿಯ ಲೇಖಕ ಬಿಆರ್ ರಾಮಚಂದ್ರಯ್ಯ "ವಾರ್ತಾಭಾರತಿ" ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಬಿಜೆಪಿ ಸರಕಾರದ ದ್ವೇಷ ಹರಡುವ ಷಡ್ಯಂತ್ರ: ಪಿಎಫ್‌ಐ ಆರೋಪ

ಬಿಎಡ್ ಮೂರನೇ ಸೆಮಿಸ್ಟರ್‌ನಲ್ಲಿ ಇಸ್ಲಾಮ್ ವಿರೋಧಿ ಪಠ್ಯಪುಸ್ತಕವನ್ನು ಸೇರಿಸುವ ಮೂಲಕ ಬಿಜೆಪಿ ಸರಕಾರವು ವಿದ್ಯಾರ್ಥಿಗಳ ಮನಸ್ಸಿನಲ್ಲೂ ದ್ವೇಷ ಹರಡುವ ವ್ಯವಸ್ಥಿತ ಷಡ್ಯಂತ್ರ ನಡೆಸುತ್ತಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಕಾರ್ಯದರ್ಶಿ ಅಶ್ರಫ್ ಜೋಕಟ್ಟೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉದ್ದೇಶಪೂರ್ವಕವಾಗಿ ಕೋಮು ಭಾವನೆಯನ್ನು ಕೆರಳಿಸಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಿದ ಲೇಖಕ ಮತ್ತು ಪ್ರಕಾಶಕರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಅವರು  ಆಗ್ರಹಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)