varthabharthi


ವಿಶೇಷ-ವರದಿಗಳು

ಪಂಡಿತರನ್ನು ರಕ್ಷಿಸಿ, ಅಲ್ಪಸಂಖ್ಯಾತರಲ್ಲಿ ವಿಶ್ವಾಸ ಮರುಸ್ಥಾಪಿಸಿ: ಸಾರ್ವಜನಿಕರಿಗೆ ಶ್ರೀನಗರದ ಎರಡು ಮಸೀದಿಗಳ ಕರೆ

ವಾರ್ತಾ ಭಾರತಿ : 13 Oct, 2021

Photo: PTI

ಶ್ರೀನಗರ: ಸ್ಥಳೀಯ ಕಾಶ್ಮೀರಿ ಪಂಡಿತ ನಿವಾಸಿಗಳಲ್ಲಿ ಭೀತಿಯನ್ನುಂಟು ಮಾಡುವ ಯಾವುದೇ ಕೃತ್ಯದಿಂದ ದೂರವಿರುವಂತೆ ಕಳೆದ ಶುಕ್ರವಾರ ನಮಾಝ್ ಪೂರ್ವ ಪ್ರವಚನಗಳಲ್ಲಿ ಶ್ರೀನಗರದಲ್ಲಿಯ ಎರಡು ಮಸೀದಿಗಳು ಸಾರ್ವಜನಿಕರಿಗೆ ಕರೆಗಳನ್ನು ನೀಡಿವೆ. ಕಾಶ್ಮೀರ ಪಂಡಿತ ಸಂಘರ್ಷ ಸಮಿತಿ (ಕೆಪಿಎಸ್ಎಸ್)ಯು ಈ ಕರೆಗಳನ್ನು ಪ್ರಶಂಸಿಸಿದೆ ಎಂದು thewire.in ವರದಿ ಮಾಡಿದೆ.

ಕಾಶ್ಮೀರ ಕಣಿವೆಯಲ್ಲಿ ಸುಮಾರು 800 ಪಂಡಿತ ಕುಟುಂಬಗಳು ವಾಸವಾಗಿವೆ.

ಶ್ರೀನಗರ ಮತ್ತು ಬಂಡಿಪೋರ ಜಿಲ್ಲೆಗಳಲ್ಲಿ ಕಳೆದ ವಾರ ಮೂವರು ಹಿಂದುಗಳು ಮತ್ತು ಓರ್ವ ಸಿಖ್ ಸೇರಿದಂತೆ ಐವರ ಹತ್ಯೆಗಳಾಗಿರುವ ಹಿನ್ನೆಲೆಯಲ್ಲಿ ಈ ಮಸೀದಿಗಳ ಕರೆಗಳು ಹೊರಬಿದ್ದಿವೆ.

1990ರ ದಶಕದ ಆರಂಭದಲ್ಲಿ ಪಂಡಿತರ ಬೃಹತ್ ವಲಸೆ ಮತ್ತು ಬಂಡಾಯದ ಅಬ್ಬರದ ನಡುವೆಯೇ ಕಣಿವೆಯನ್ನು ತೊರೆಯದಿರಲು ನಿರ್ಧರಿಸಿದ್ದ ಪ್ರಮುಖ ಔಷಧಿ ವ್ಯಾಪಾರಿ ಮಖನಲಾಲ್ ಬಿಂದ್ರೂ ಅವರ ಹತ್ಯೆಯು ನೂರಾರು ಪಂಡಿತರಲ್ಲಿ ಮತ್ತೊಮ್ಮೆ ಭೀತಿಯನ್ನು ಸೃಷ್ಟಿಸಿದೆ.

ಪ್ರಚಲಿತ ಭೀತಿಯ ವಾತಾವರಣದಲ್ಲಿ ಕಾಶ್ಮೀರದಲ್ಲಿನ ನಾಗರಿಕ ಸಮಾಜವು ಅಗತ್ಯ ಪಾತ್ರವನ್ನು ನಿರ್ವಹಿಸಿಲ್ಲ ಎನ್ನುವುದು ಕಣಿವೆಯಲ್ಲಿ ಪಂಡಿತ ನಿವಾಸಿಗಳಲ್ಲಿಯ ಸಾಮಾನ್ಯ ಭಾವನೆಯಾಗಿದೆ.

ಆದರೆ ಶ್ರೀನಗರದಲ್ಲಿಯ ಈ ಎರಡು ಮಸೀದಿಗಳು ಧನಾತ್ಮಕ ಪೂರ್ವನಿದರ್ಶನವೊಂದನ್ನು ಸ್ಥಾಪಿಸಲು ನಿರ್ಧರಿಸಿವೆ. ಈ ಪೈಕಿ ಒಂದು ಮಸೀದಿ ನಗರದ ನಕಶ್ಪೋರ ಪ್ರದೇಶದಲ್ಲಿದ್ದರೆ, ಇನ್ನೊಂದು ಸಾತು ಬರ್ಬಾರಶಾ ಬಳಿಯಿದ್ದು, ಸಾಂಪ್ರದಾಯಿಕ ಇಸ್ಲಾಮಿಕ್ ಶಾಲೆಯಾಗಿರುವ ಅಹ್ಲ್-ಎ-ಹದೀತ್ನೊಂದಿಗೆ ಗುರುತಿಸಿಕೊಂಡಿದೆ.

ಪಂಡಿತರ ರಕ್ಷಣೆಗಾಗಿ ಕರೆ ನೀಡಿದ ಮಸೀದಿಯ ಮೌಲ್ವಿ ರಿಯಾಝ್ ಭಟ್ ಅವರು, ‘ಈ ಜನರು ನಮ್ಮ ಸೋದರರಾಗಿದ್ದಾರೆ ಮತ್ತು ದಶಕಗಳಿಂದಲೂ ಇಲ್ಲಿ ವಾಸವಾಗಿದ್ದಾರೆ. ಈ ಸಮಯದಲ್ಲಿ ಯಾವುದೇ ಕಿಡಿಗೇಡಿತನವು ಭೀತಿಯನ್ನು ಸೃಷ್ಟಿಸುತ್ತದೆ ಎಂದು ನಾವು ಕಳವಳಗೊಂಡಿದ್ದೇವೆ ಮತ್ತು ಅದನ್ನು ನಾವು ಬಯಸುವುದಿಲ್ಲ’ ಎಂದು ಹೇಳಿದರು.

ತನ್ನ ಕರೆಯ ಹಿಂದಿನ ಕಾರಣವನ್ನು ವಿವರಿಸಿದ ಅವರು, ‘ನನ್ನ ಧಾರ್ಮಿಕ ಮೌಲ್ಯಗಳು ನನಗೆ ನ್ಯಾಯ ಮತ್ತು ಮಾನವೀಯತೆಯನ್ನು ಬೋಧಿಸುತ್ತವೆ. ನಾನು ಅದನ್ನೇ ಮಾಡಿದ್ದೇನೆ. ಜನರ, ವಿಶೇಷವಾಗಿ ಅಲ್ಪಸಂಖ್ಯಾತರ ರಕ್ಷಕರಾಗುವಂತೆ ನಾನು ಸಾರ್ವಜನಿಕರಿಗೆ ಹೇಳಿದ್ದೇನೆ’ ಎಂದರು.

ಇದಕ್ಕೆ ಪ್ರತಿಯಾಗಿ ತನ್ನ ವಾಟ್ಸ್ಆ್ಯಪ್ ಗ್ರೂಪ್ ನಲ್ಲಿ ಸಂದೇಶವನ್ನು ರವಾನಿಸಿರುವ ಕೆಪಿಎಸ್ ಎಸ್, ಸಾರ್ವಜನಿಕ ವ್ಯವಸ್ಥೆಗಳ ಮೂಲಕ ಕಣಿವೆಯಲ್ಲಿನ ಎಲ್ಲ ಅಲ್ಪಸಂಖ್ಯಾತರಲ್ಲಿ ವಿಶ್ವಾಸವನ್ನು ಮರುಸ್ಥಾಪಿಸುವಂತೆ ಕಾಶ್ಮೀರದಲ್ಲಿಯ ಎಲ್ಲ ಮಸೀದಿ ಸಮುದಾಯಗಳನ್ನು ಕೋರಿಕೊಂಡಿದೆ. ಕಳೆದ ಶುಕ್ರವಾರ ಈ ಕಾರ್ಯವನ್ನು ಮಾಡಿರುವುದಕ್ಕಾಗಿ ಶ್ರೀನಗರದಲ್ಲಿಯ ಎರಡು ಮಸೀದಿಗಳಿಗೆ ಅದು ತನ್ನ ಕೃತಜ್ಞತೆಗಳನ್ನು ವ್ಯಕ್ತಪಡಿಸಿದೆ.

ಮಸೀದಿಗಳ ಸದ್ಭಾವವನ್ನು ಕಾಶ್ಮೀರಿ ಪಂಡಿತರು ಸ್ವಾಗತಿಸಿದ್ದಾರಾದರೂ ಕಳೆದ ವಾರದ ಹತ್ಯಾ ಸರಣಿಯಿಂದಾಗಿ ಈಗಲೂ ಅವರು ಭೀತಿಯಲ್ಲಿ ಮುಳುಗಿದ್ದಾರೆ. ಕೆಲವು ಕಾಶ್ಮೀರಿ ಪಂಡಿತ ಕುಟುಂಬಗಳು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಂಡಿವೆ ಎಂದು ವರದಿಯಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)