varthabharthi


ಬೆಂಗಳೂರು

ಬೆಂಗಳೂರು: 1 ಸಾವಿರ ರೂ. ಗಾಗಿ ಸ್ನೇಹಿತನ ಕೊಲೆ

ವಾರ್ತಾ ಭಾರತಿ : 13 Oct, 2021

ಬೆಂಗಳೂರು, ಅ.13: ಒಂದು ಸಾವಿರ ರೂಪಾಯಿ ಹಣದ ವಿಚಾರವಾಗಿ ಜಗಳ ನಡೆದು ವ್ಯಕ್ತಿಯೋರ್ವನನ್ನು ಕೊಲೆಗೈದಿರುವ ಘಟನೆ ಇಲ್ಲಿನ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕೋಣನಕುಂಟೆಯ ಮಂಜುನಾಥ್ ಕೊಲೆಯಾದ ವ್ಯಕ್ತಿ ಎಂದು ಪೊಲೀಸರು ಗುರುತಿಸಿದ್ದಾರೆ.

ಕೊಲೆಯಾದ ಮಂಜುನಾಥ್ ಹಾಗೂ ಆಕಾಶ್ ಎಂಬುವರು ಸ್ನೇಹಿತರಾಗಿದ್ದು, ಪ್ಲಂಬರ್ ಕೆಲಸ ಮಾಡಿಕೊಂಡಿದ್ದರು. ಇತ್ತೀಚೆಗೆ ಕೆಲಸದ ಸಂಬಳ ಬಂದಿದ್ದು, ಹೆಚ್ಚುವರಿಯಾಗಿ ಬಂದ 1 ಸಾವಿರಕ್ಕಾಗಿ ಇಬ್ಬರ ಮಧ್ಯೆ ಗಲಾಟೆ ಆರಂಭವಾಗಿದೆ. ಈ ವೇಳೆ ಆರೋಪಿ ಆಕಾಶ್ ಮಂಜುನಾಥ್ ಮೇಲೆ ತೀವ್ರ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ಗಾಯಗೊಂಡಿದ್ದ ಮಂಜುನಾಥ್‍ನನ್ನು ಅಪಘಾತವಾಗಿದೆ ಎನ್ನುವ ನೆಪಮಾಡಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಬಳಿಕ ಈ ಬಗ್ಗೆ ಕೋಣನಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಮಧ್ಯೆ ಮರಣೋತ್ತರ ಪರೀಕ್ಷೆ ವರದಿಯಲ್ಲಿ ವೈದ್ಯರು ಅನುಮಾನ ವ್ಯಕ್ತಪಡಿಸಿದ್ದು, ಆತನಿಗೆ ಅಪಘಾತದ ಸಂಬಂಧ ಗಾಯಗಳಾಗಿಲ್ಲ. ಹಲ್ಲೆಯಿಂದಾದ ಗಾಯಗಳು ಎಂದು ತಿಳಿಸಿದ್ದಾರೆ. 

ಪ್ರಕರಣ ಸಂಬಂಧ ಕೋಣನಕುಂಟೆ ಪೊಲೀಸರು ತನಿಖೆ ನಡೆಸಿದ್ದು, ಮೃತ ಮಂಜುನಾಥ್ ಹಾಗೂ ಆರೋಪಿ ಆಕಾಶ್ ನಡುವೆ ಗಲಾಟೆಯಾಗಿರುವುದು ತಿಳಿದು ಬಂದಿದೆ. ಬಳಿಕ ವಿಚಾರಣೆಗೊಳಪಡಿಸಿದಾಗ ಆಕಾಶ್ ತಪ್ಪೊಪ್ಪಿಕೊಂಡಿದ್ದು, ಈ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)