varthabharthi


ಅಂತಾರಾಷ್ಟ್ರೀಯ

ಚೀನಾವನ್ನು ದುರ್ಬಲಗೊಳಿಸಲು ತೈವಾನ್ ಕಾರ್ಡ್ ಬಳಸಲಾಗುತ್ತಿದೆ: ಚೀನಾ ಆಕ್ರೋಶ

ವಾರ್ತಾ ಭಾರತಿ : 13 Oct, 2021

 ಬೀಜಿಂಗ್,ಅ.13: ಚೀನಾದ ಸಾರ್ವಭೌಮತೆಯನ್ನು ದುರ್ಬಲಗೊಳಿಸುವುದಕ್ಕಾಗಿ ತೈವಾನ್ ಕಾರ್ಡ್ ಅನ್ನು ಬಳಸಿಕೊಳ್ಳಲು ಬಯಸುವ ಯಾವುದೇ ರಾಷ್ಟ್ರವನ್ನು ತಾನು ಒಲವು ತೋರುವುದಿಲ್ಲವೆಂದು ಬೀಜಿಂಗ್ ಬುಧವಾರ ಎಚ್ಚರಿಕೆ ನೀಡಿದೆ.

ತೈವಾನ್ ಸಮೀಪದ ಸಮುದ್ರಪ್ರದೇಶದಲ್ಲಿ ಚೀನಿ ಸೇನಾಪಡೆಗಳ ಸಮರಾಭ್ಯಾಸ ಹಾಗೂ ಯುದ್ಧವಿಮಾನಗಳ ಹಾರಾಟದ ಘಟನೆಗಳು ವರದಿಯಾಗಿರುವ ನಡುವೆಯೂ ಬೀಜಿಂಗ್ ಗುರುವಾರ ನೀಡಿರುವ ಈ ಹೇಳಿಕೆ ಹೆಚ್ಚಿನ ಮಹತ್ವ ಪಡೆದಿದೆ. ''ಅಮೆರಿಕದಲ್ಲಿರುವ ಕೆಲವರು 'ಒಂದೇ ಚೀನಾ ' (ತೈವಾನ್ ಚೀನಾದ ಅಂಗವೆಂದು ಪರಿಗಣಿಸುವುದು) ಬದ್ಧತೆಯನ್ನು ಉಲ್ಲಂಘಿಸುತ್ತಿದ್ದಾರೆ ಹಾಗೂ ತೈವಾನ್ ಕಾರ್ಡ್ ಆಡುವ ಮೂಲಕ ಅವರು ಅಪಾಯದ ಗೆರೆಗೆ ಕಾಲಿಡುತ್ತಿದ್ದಾರೆ. ಉಭಯದೇಶಗಳ ರಾಜತಾಂತ್ರಿಕ ಬಾಂಧವ್ಯಗಳ ಸ್ಥಾಪನೆ ಹಾಗೂ ಸುಧಾರಣೆಗೆ 'ಒಂದೇ ಚೀನಾ' ಸಿದ್ಧಾಂತ ಅಡಿಗಲ್ಲಾಗಿದೆ. ತೈವಾನ್ ಪ್ರಶ್ನೆಯನ್ನು ಬಳಸಿಕೊಂಡು ಚೀನಾವನ್ನು ನಿಯಂತ್ರಿಸಲು ನಡೆಯುವ ಯಾವುದೇ ಯತ್ನವು ವಿಫಲಗೊಳ್ಳಲಿದೆ'' ಎಂದು ಚೀನಾದ ಉಪವಿದೇಶಾಂಗ ಸಚಿವ ಲೆ ಯುಚೆಂಗ್ ಅವರು ಸರಕಾರಿ ಸ್ವಾಮ್ಯದ ಸುದ್ದಿವಾಹಿನಿ ಸಿಟಿಟಿಎನ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಜೋಬೈಡೆನ್ ಹಾಗೂ ಚೀನಾ ಅಧ್ಯಕ್ಷ ಕ್ಸಿಜಿನ್‌ಪಿಂಗ್ ನಡುವೆ ನಡೆಯಲಿರುವ ವಿಡಿಯೋ ಶೃಂಗಸಭೆಗೆ ಮೊದಲು ವಿವಿಧ ವಿಷಯಗಳಲ್ಲಿ ವಾಶಿಂಗ್ಟನ್ ಜೊತೆಗಿನ ವಿವಾದಗಳ ಬಗ್ಗೆ ಚರ್ಚಿಸಲು ಸಮಿತಿಯೊಂದನ್ನು ರಚಿಸಲಾಗಿದೆ ಎಂದು ಲಿ ಯುಚೆಂಗ್ ತಿಳಿಸಿದ್ದಾರೆ.

ಉಭಯ ದೇಶಗಳ ಬಾಂಧವ್ಯ ವೃದ್ಧಿಗೆ ''ಮಾತುಕತೆ ಹಾಗೂ ಸಹಕಾರವು ಅತ್ಯಗತ್ಯವಾಗಿದೆ ಹಾಗೂ ಸಂಘರ್ಷ ಹಾಗೂ ಬಿಕ್ಕಟ್ಟಿನಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದವರು ಹೇಳಿದರು. ಚೀನಾ ಹಾಗೂ ಅಮೆರಿಕದ ಹಿತಾಸಕ್ತಿಗಳಿಗೆ ಪರಸ್ಪರ ಆರ್ಥಿಕ ಸಹಕಾರ ಹಾಗೂ ವಾಣಿಜ್ಯವು ಅತ್ಯಂತ ಮಹತ್ವದ್ದಾಗಿದೆ ಎಂದವರು ಹೇಳಿದರು. ಟ್ರಂಪ್ ಆಡಳಿತದ ಅವಧಿಯಲ್ಲಿ ಉಭಯದೇಶಗಳ ನಡುವೆ ತಲೆದೋರಿದ್ದ ವಾಣಿಜ್ಯ ಸಮರವು, ಅಮೆರಿಕದ ಆರ್ಥಿಕತೆಯನ್ನು ತೀವ್ರವಾಗಿ ಬಾಧಿಸಿತ್ತು' ಎಂದರು.

ಆಸ್ಟ್ರೇಲಿಯ, ಬ್ರಿಟನ್ ಹಾಗೂ ಅಮೆರಿಕ ನಡುವೆ ಏರ್ಪಟ್ಟಿರುವ ತ್ರಿಪಕ್ಷೀಯ ಭದ್ರತಾ ಒಪ್ಪಂದವು ಪ್ರಾಂತೀಯ ಶಾಂತಿಗೆ ತೀವ್ರ ಅಪಾಯವನ್ನು ಒಡ್ಡಿದೆ ಹಾಗೂ ಅಣ್ವಸ್ತ್ರ ಪ್ರಸರಣೆಗೆ ಕಾರಣವಾಗಲಿದೆ ಎಂದು ಲಿ ಯುಚೆಂಗ್ ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)