varthabharthi


ರಾಷ್ಟ್ರೀಯ

ಮೂರು ಗಡಿ ರಾಜ್ಯಗಳಲ್ಲಿ ಬಿಎಸ್ಎಫ್ ಅಧಿಕಾರ ವ್ಯಾಪ್ತಿ ವಿಸ್ತರಣೆ: ಪಂಜಾಬ್, ಬಂಗಾಳ ಆಕ್ಷೇಪ

ವಾರ್ತಾ ಭಾರತಿ : 14 Oct, 2021

ಹೊಸದಿಲ್ಲಿ: ಕಾರ್ಯಾಚರಣೆಯ ದಕ್ಷತೆಯನ್ನು ಸುಧಾರಿಸಲು ಹಾಗೂ  ಕಳ್ಳಸಾಗಣೆ ದಂಧೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಪಂಜಾಬ್, ಪಶ್ಚಿಮ ಬಂಗಾಳ ಹಾಗೂ  ಅಸ್ಸಾಂನಲ್ಲಿ ಅಂತಾರಾಷ್ಟ್ರೀಯ ಗಡಿಯೊಳಗೆ ಬಿಎಸ್‌ಎಫ್‌ನ ಅಧಿಕಾರ ವ್ಯಾಪ್ತಿಯನ್ನು 15 ಕಿಮೀ ನಿಂದ 50 ಕಿಮೀಗೆ ವಿಸ್ತರಿಸಲು ಗೃಹ ವ್ಯವಹಾರಗಳ ಸಚಿವಾಲಯದ ನಿರ್ಧರಿಸಿದೆ. ಆದರೆ ಈ ಕ್ರಮವು ವಿರೋಧ ಪಕ್ಷಗಳ ಆಡಳಿತವಿರುವ ಪಂಜಾಬ್ ಹಾಗೂ  ಪಶ್ಚಿಮ ಬಂಗಾಳದಿಂದ ತೀವ್ರ ಪ್ರತಿಕ್ರಿಯೆಯನ್ನು  ಹುಟ್ಟುಹಾಕಿದೆ. ಇದನ್ನು "ಅಪ್ರಬುದ್ಧ ನಿರ್ಧಾರ", "ಒಕ್ಕೂಟ ವ್ಯವಸ್ಥೆಯ ಮೇಲಿನ ನೇರ ದಾಳಿ" ಹಾಗೂ  "ಕೇಂದ್ರ ಏಜೆನ್ಸಿಗಳ ಮೂಲಕ ಹಸ್ತಕ್ಷೇಪ ಮಾಡುವ ಪ್ರಯತ್ನ" ಎಂದು ಪಂಜಾಬ್ ಹಾಗೂ ಪ.ಬಂಗಾಳ ರಾಜ್ಯಗಳು ಆಕ್ಷೇಪ ವ್ಯಕ್ತಪಡಿಸಿವೆ.

ಸೋಮವಾರ ಗೆಜೆಟ್ ಅಧಿಸೂಚನೆಯನ್ನು ಹೊರಡಿರುವ  ಸಚಿವಾಲಯವು 2014 ರ ಹಿಂದಿನ ಅಧಿಸೂಚನೆಯನ್ನು ತಿದ್ದುಪಡಿ ಮಾಡುತ್ತಿದ್ದು, ಅಂತರ್ ರಾಷ್ಟ್ರೀಯ ಗಡಿಯನ್ನು ಕಾಪಾಡುವ ರಾಜ್ಯಗಳಲ್ಲಿ ಬಿಎಸ್‌ಎಫ್ ತನ್ನ ಅಧಿಕಾರವನ್ನು ಚಲಾಯಿಸಲು ಹೇಳಿದೆ.

10 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸಚಿವಾಲಯವು ಹೇಳಿಕೊಂಡಿದೆ. ಆದರೆ ಇದು ಆಡಳಿತಾತ್ಮಕ ಮತ್ತು ರಾಜಕೀಯ ಸಮಸ್ಯೆಗಳನ್ನು ಕೂಡ ಎತ್ತಬಹುದು.

ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಅಧಿಕಾರಿಗಳಿಗೆ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದೊಂದಿಗೆ ಅಂತರರಾಷ್ಟ್ರೀಯ ಗಡಿಗಳನ್ನು ಹಂಚಿಕೊಳ್ಳುವ ಮೂರು ಹೊಸ ರಾಜ್ಯಗಳ ಒಳಗೆ 50 ಕಿ.ಮೀ. ವ್ಯಾಪ್ತಿಯಲ್ಲಿ ಬಂಧಿಸುವ, ಹುಡುಕುವ ಹಾಗೂ  ವಶಪಡಿಸಿಕೊಳ್ಳುವ ಅಧಿಕಾರವನ್ನು ಈಗ ಹೊಂದಿರುತ್ತದೆ.

"ಅಂತರ್ ರಾಷ್ಟ್ರೀಯ ಗಡಿಗಳಲ್ಲಿ 50 ಕಿ.ಮೀ .ವ್ಯಾಪ್ತಿಯಲ್ಲಿ ಬಿಎಸ್‌ಎಫ್‌ಗೆ ಹೆಚ್ಚುವರಿ ಅಧಿಕಾರವನ್ನು ನೀಡುವ ಕೇಂದ್ರ ಸರಕಾರದ ಏಕಪಕ್ಷೀಯ ನಿರ್ಧಾರವನ್ನು ನಾನು ಬಲವಾಗಿ ಖಂಡಿಸುತ್ತೇನೆ. ಇದು ಒಕ್ಕೂಟ ವ್ಯವಸ್ಥೆಯ ಮೇಲೆ ನೇರ ದಾಳಿ. ಈ ನಿರ್ಧಾರವನ್ನು ತಕ್ಷಣವೇ ಹಿಂಪಡೆಯುವಂತೆ ನಾನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಒತ್ತಾಯಿಸುತ್ತೇನೆ ‘’ಎಂದು ಪಂಜಾಬ್ ಮುಖ್ಯಮಂತ್ರಿ ಚರಣಜೀತ್ ಸಿಂಗ್ ಚನ್ನಿ ಟ್ವೀಟ್ ಮಾಡಿದ್ದಾರೆ

 "ಕೇಂದ್ರ ಸರಕಾರವು ದೇಶದ ಒಕ್ಕೂಟ ರಚನೆಯನ್ನು ಉಲ್ಲಂಘಿಸುತ್ತಿದೆ. ಕಾನೂನು ಮತ್ತು ಸುವ್ಯವಸ್ಥೆ ರಾಜ್ಯದ ವಿಷಯವಾಗಿದೆ.  ಆದರೆ ಕೇಂದ್ರ ಸರಕಾರವು ಕೇಂದ್ರ ಏಜೆನ್ಸಿಗಳ ಮೂಲಕ ಹಸ್ತಕ್ಷೇಪ ಮಾಡಲು ಪ್ರಯತ್ನಿಸುತ್ತಿದೆ’’ ಎಂದು ಪಶ್ಚಿಮ ಬಂಗಾಳದ ಸಾರಿಗೆ ಸಚಿವ ಮತ್ತು ಟಿಎಂಸಿ ನಾಯಕ ಫಿರ್ಹಾದ್ ಹಕೀಮ್ ಹೇಳಿದರು.

 “ಕೇಂದ್ರದ ನಿರ್ಧಾರವು ಸಾಂವಿಧಾನಿಕ ಸಾರ್ವಜನಿಕ ಆದೇಶ ಹಾಗೂ  ರಾಜ್ಯಗಳ ಪೋಲಿಸ್ ನಿಯಮಾವಳಿಗಳನ್ನು ಉಲ್ಲಂಘಿಸುತ್ತದೆ ಮತ್ತು ಪಂಜಾಬ್‌ನ ಅರ್ಧದಷ್ಟು ಭಾಗವು ಈಗ ಬಿಎಸ್‌ಎಫ್ ಅಧಿಕಾರ ವ್ಯಾಪ್ತಿಗೆ ಬರುತ್ತದೆ’’ ಎಂದು ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಟ್ವೀಟ್ ಮಾಡಿದರು.

ಪಂಜಾಬ್ ಗೃಹ ಸಚಿವ ಮತ್ತು ಕಾಂಗ್ರೆಸ್ ನಾಯಕ ಸುಖಜಿಂದರ್ ಸಿಂಗ್ ರಾಂಧವ ಅವರು ಈ ಕ್ರಮವನ್ನು ಆಂತರಿಕ ತುರ್ತುಸ್ಥಿತಿ ಹೇರಿಕೆಗೆ ಹೋಲಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)