ನಿರಾಳ ನಗೆ, ನಿಷ್ಠುರ ವಿಮರ್ಶೆ, ಹಠಾತ್ ಸ್ಫೋಟಗಳ ಜಿಕೆಜಿ
ನಾವೆಲ್ಲ ಅವರನ್ನು ಪ್ರೀತಿ ಗೌರವಗಳಿಂದ ‘ಜಿಕೆಜಿ’ ಎನ್ನುತ್ತಿದ್ದೆವು. ನಿರ್ಮಲ ಮುಗುಳ್ನಗೆಯ ಮಮತೆ ಸೂಸುತ್ತಿದ್ದ ಜಿಕೆಜಿ ಈಚಿನ ವರ್ಷಗಳಲ್ಲಿ ಕೋಮುವಾದದ ವಿಕಾರಗಳ ಬಗ್ಗೆ, ಆಳುವವರ ಸಮಯಸಾಧಕತನಗಳ ಬಗ್ಗೆ ಅತ್ಯಂತ ವ್ಯಗ್ರರಾಗುತ್ತಿದ್ದರು. ಯಾವ ವಯಸ್ಸಿನ ಲೇಖಕ, ಲೇಖಕಿಯರೇ ಆಗಲಿ, ಈ ಕುರಿತು ಬರೆದದ್ದು ಇಷ್ಟವಾದರೆ ಅವರಿಗೆ ಫೋನ್ ಮಾಡಿ ಮೆಚ್ಚುಗೆ ತೋರುತ್ತಿದ್ದರು; ಆ ಬರಹಗಳಲ್ಲಿ ಕಂಡಿದ್ದ ಉದಾರವಾದಿ, ಪ್ರೋಗ್ರೆಸೀವ್ ಐಡಿಯಾಗಳ ಬಗ್ಗೆ ಸಂಭ್ರಮಿಸುತ್ತಿದ್ದರು. ಈ ಮೆಚ್ಚುಗೆ, ಸಂಭ್ರಮಗಳು ಆ ಕ್ಷಣದ ಪ್ರೋತ್ಸಾಹದ ಪ್ರತಿಕ್ರಿಯೆಗಳಾಗಿರದೆ, ತಾವು ನಂಬಿ, ಬಿತ್ತಲೆತ್ನಿಸಿದ್ದ ಆರೋಗ್ಯಕರ ಧೋರಣೆಗಳು ಎಳೆಯರ ಮೂಲಕ ಬೇರೆ ಬೇರೆ ಥರದಲ್ಲಿ ಹಬ್ಬುವುದನ್ನು ಕಂಡು ಹುಟ್ಟಿದ ನೆಮ್ಮದಿಯ ಪ್ರತಿಕ್ರಿಯೆಗಳೂ ಆಗಿದ್ದವು. ದೇಶ ಕೋಮುವಾದದ ದಳ್ಳುರಿಗೆ ಸಿಕ್ಕಿ ನಾಶವಾಗುತ್ತಿರುವುದನ್ನು ಕಂಡು ಸದಾ ದುಗುಡಗೊಂಡು ಸಿಡಿಯುತ್ತಿದ್ದ ಕರ್ನಾಟಕದ ಮಹತ್ವದ ಕ್ರಿಯಾಶಾಲಿ ಬುದ್ಧಿಜೀವಿ ಪ್ರೊ. ಜಿ.ಕೆ. ಗೋವಿಂದರಾವ್ (27.04.1937-15.10.2021) ಜಾತೀಯತೆ ಹಾಗೂ ಬಿಜೆಪಿ, ಆರೆಸ್ಸೆಸ್‌ಗಳ ಕಟು ವಿಮರ್ಶಕರಾಗಿದ್ದರು; ಆದರೆ ತಾವು ವಿರೋಧಿಸುವವರ ಜೊತೆ ಕೂಡ ಮುಕ್ತ ಸಂವಾದಕ್ಕೆ ಸಿದ್ಧವಿರುತ್ತಿದ್ದರು. ಧರ್ಮಪ್ರಸಾರದ ಹಾದಿಯನ್ನು ಕೈಬಿಟ್ಟು ಅಗ್ಗದ ರಾಜಕೀಯ ಪ್ರಚಾರಕ್ಕಿಳಿದಿದ್ದ ಪೇಜಾವರರನ್ನು ಜಿಕೆಜಿ ಆಗಾಗ ಸಂವಾದಕ್ಕೆಳೆಯುತ್ತಿದ್ದರು. ಇಪ್ಪತ್ತು ವರ್ಷಗಳ ಕೆಳಗೆ ಟೆಲಿವಿಷನ್‌ನಲ್ಲಿ ನಡೆದ ಸಂವಾದವೊಂದರಲ್ಲಿ ಜಿಕೆಜಿ ಪೇಜಾವರರನ್ನು ತಬ್ಬಿಬ್ಬಾಗಿಸುವ ತಾರ್ಕಿಕ ಪ್ರಶ್ನೆಯೊಂದನ್ನು ಕೇಳಿದ್ದರು: ‘ಆ ಕಾಲದ ಸಂಪ್ರದಾಯದ ಪ್ರಕಾರ ರಾಮ ತಾಯಿ ಕೌಸಲ್ಯೆಯ ತವರುಮನೆಯಲ್ಲಿ ಹುಟ್ಟಿರುವ ಸಾಧ್ಯತೆಯಿದೆಯಲ್ಲವೇ?’ ಈ ಪ್ರಶ್ನೆಗೆ ಪೇಜಾವರರು ಉತ್ತರಿಸಲಾಗದೇ ಹಾರಿಕೆಯ ಉತ್ತರ ಕೊಟ್ಟಿದ್ದರು! ಆ ನಂತರ ಕೂಡ ಪೇಜಾವರರಿಗೆ ಆಗಾಗ ಬಹಿರಂಗ ಪ್ರಶ್ನೆಗಳನ್ನು ಕೇಳುತ್ತಿದ್ದ ಜಿಕೆಜಿ, ಈ ಪ್ರಶ್ನೆಗಳಿಂದ ಕೊನೆಯ ಪಕ್ಷ ಬ್ರಾಹ್ಮಣ ಸಮುದಾಯದ ಬುದ್ಧಿಜೀವಿಗಳಾದರೂ ಕೋಮುವಾದಿ ಧಾರ್ಮಿಕ ರಾಜಕಾರಣದ ಅಪಾಯವನ್ನು ಅರ್ಥ ಮಾಡಿಕೊಂಡು ಮುಕ್ತವಾಗಿ ಯೋಚಿಸಲೆತ್ನಿಸಲಿ ಎಂದು ಬಯಸಿದ್ದರು.
ಮೂವತ್ತು ವರ್ಷಗಳ ಕಾಲ ಸೈಂಟ್ ಜೋಸೆಫ್ಸ್ ಕಾಮರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರೊಫೆಸರ್ ಆಗಿ ಪಾಠ ಮಾಡಿದ ಜಿಕೆಜಿ ಕನ್ನಡದ ಅಪರೂಪದ ಶೇಕ್‌ಸ್ಪಿಯರ್ ವಿದ್ವಾಂಸರಾಗಿದ್ದರು. ಸಾಹಿತ್ಯವನ್ನು ತೀವ್ರವಾಗಿ ಅನುಭವಿಸಿ, ಸಾಹಿತ್ಯದ ಪರಿವರ್ತಕ ಶಕ್ತಿಯಲ್ಲಿ ನಿಜವಾದ ನಂಬಿಕೆಯಿಟ್ಟು ಪಾಠ ಮಾಡಬಲ್ಲ ಆದರ್ಶ ಮೇಷ್ಟ್ರುಗಳ ಪರಂಪರೆಯಲ್ಲಿ ಜಿಕೆಜಿ ಮುಂಚೂಣಿಯಲ್ಲಿದ್ದರು. ಭಾವತೀವ್ರ ಸ್ಥರದಲ್ಲಿಯೇ ಪಠ್ಯದ ಭಾವಗಳನ್ನು ವಿದ್ಯಾರ್ಥಿ, ವಿದ್ಯಾರ್ಥಿನಿಯರ ಎದುರು ಹರಡುತ್ತಿದ್ದ ಜಿಕೆಜಿಗೆ ತೀವ್ರವಾದ ಅಧ್ಯಾಪನ ಕೇಳುಗರನ್ನು ಸೂಕ್ಷ್ಮ ನಾಗರಿಕರನ್ನಾಗಿಸುತ್ತದೆ ಎಂಬ ಬಗ್ಗೆ ಖಚಿತವಾದ, ಅಚಲವಾದ ನಂಬಿಕೆಯಿತ್ತು. ನಿವೃತ್ತಿಯಾದ ಮೇಲೂ ಅವರ ಸಾರ್ವಜನಿಕ ಭಾಷಣಗಳಲ್ಲಿ ಈ ‘ಮೇಷ್ಟ್ರುಗಿರಿ’ ಮುಂದುವರಿಯುತ್ತಿತ್ತು. ಮೊನ್ನೆಮೊನ್ನೆಯವರೆಗೂ ಇಂಡಿಯಾದ ಗಂಭೀರ ರಾಜಕೀಯ, ಸಾಂಸ್ಕೃತಿಕ ಪುಸ್ತಕಗಳನ್ನು ಕೊಂಡು ಓದುತ್ತಾ, ಓದಿದ್ದನ್ನು ಇತರರಿಗೆ ಹೇಳುತ್ತಾ, ಬರೆಯುತ್ತಾ ಅವರು ಬೌದ್ಧಿಕ ಕೆಲಸಗಳಲ್ಲಿ ಬಿಝಿಯಾಗೇ ಇದ್ದರು. ಕೋಮುವಾದ ಸೃಷ್ಟಿಸಿರುವ ಭಯಾನಕ ಭಾರತದಲ್ಲಿ ಆರ್ಥಿಕತೆ, ರಾಜಕೀಯ, ಧರ್ಮ, ಸಂಸ್ಕೃತಿಗಳು ದಿಕ್ಕೆಟ್ಟು ಹೋಗುತ್ತಿರುವುದನ್ನು ಕುರಿತ ತೀರಾ ಇತ್ತೀಚಿನ ಇಂಗ್ಲಿಷ್ ಪುಸ್ತಕಗಳು ಅವರ ಟೇಬಲ್ ಮೇಲಿರುತ್ತಿದ್ದವು. ಅವುಗಳ ಪಕ್ಕದಲ್ಲೇ ಅವರು ಬಿಳಿಯ ಕಾರ್ಡುಗಳಲ್ಲಿ ಮಾಡಿಕೊಂಡ ಸುಂದರ ಕೈಬರಹಗಳ ಟಿಪ್ಪಣಿಗಳಿರುತ್ತಿದ್ದವು. ಆ ಪುಸ್ತಕಗಳಲ್ಲಿ ಅವರು ಓದಿ ಒಪ್ಪಿದ್ದ ವಾಕ್ಯಗಳ ಕೆಳಗೆ ಸ್ಕೇಲ್ ಇಟ್ಟು ಮಾಡಿರುತ್ತಿದ್ದ ಅಂಡರ್‌ಲೈನ್‌ಗಳು, ಟಿಪ್ಪಣಿಗಳು ಅತ್ಯಂತ ನೀಟಾಗಿರುತ್ತಿದ್ದವು; ಇವೆಲ್ಲವೂ ಮುಂದೊಮ್ಮೆ ಈ ವಿಷಯಗಳನ್ನು ಕುರಿತು ಬರೆಯಲಿರುವ, ಉಲ್ಲೇಖಿಸಲಿರುವ ನಿಜವಾದ ಬುದ್ಧಿಜೀವಿ-ವಿದ್ವಾಂಸರೊಬ್ಬರ ಗಂಭೀರ ಸಿದ್ಧತೆಗಳಂತಿದ್ದವು. ಸಾಹಿತ್ಯದ ಓದಿನಿಂದ ಬಂದ ಮಾನವ ವರ್ತನೆಯ ಗ್ರಹಿಕೆಗಳು ಜಿಕೆಜಿಯವರ ಚಿಂತನೆಯನ್ನು ಸದಾ ರೂಪಿಸುತ್ತಿದ್ದವು. ಶೇಕ್‌ಸ್ಪಿಯರನ ‘ಜೂಲಿಯಸ್ ಸೀಸರ್’ ಬಗ್ಗೆ ಗಂಟೆಗಟ್ಟಲೆ ಮಾತಾಡಬಲ್ಲವರಾಗಿದ್ದ ಜಿಕೆಜಿ, ನಾನೊಮ್ಮೆ ಆಂಟೋನಿಯೋ ಭಾಷಣದ ಕೃತ್ರಿಮ ಏರಿಳಿತಗಳನ್ನು ಮೋದಿ ಭಾಷಣದ ಧಾಟಿಗೆ ಹೋಲಿಸಿದಾಗ ಥ್ರಿಲ್ಲಾಗಿ ನಕ್ಕಿದ್ದರು. ನಿತ್ಯದ ರಾಜಕಾರಣವನ್ನು, ಬದುಕನ್ನು ವಿವರಿಸಲು ಸಾಹಿತ್ಯದ ಉದಾಹರಣೆಗಳನ್ನು ಬಳಸುತ್ತಿದ್ದ ಜಿಕೆಜಿಗೆ ಈ ಕಾಲದ ರಾಜಕಾರಣದ ಸಂಚು-ಪ್ರತಿಸಂಚುಗಳ ಲೋಕ, ದ್ರೋಹ, ಕಪಟ, ಭಾಷೆಯ ಸುಳ್ಳು, ನಿಜಗಳು ಶೇಕ್‌ಸ್ಪಿಯರ್ ಕನ್ನಡಿಯ ಮೂಲಕವೂ ಅರ್ಥವಾಗುತ್ತಿದ್ದವು. ಶೇಕ್‌ಸ್ಪಿಯರ್ ನಾಟಕಗಳ ಮೇಲೆ ಅವರು ಪುಸ್ತಕವನ್ನೂ ಬರೆದರು. ವ್ಯವಸ್ಥೆಯನ್ನು ಪ್ರಶ್ನಿಸುವ ‘ನಿಷ್ಠುರ ಅರಾಜಕ’ ವ್ಯಕ್ತಿತ್ವದ ಅಗತ್ಯವನ್ನು ತರುಣರಿಗೆ ಒತ್ತಿ ಹೇಳುತ್ತಿದ್ದ ಅವರ ‘ನಾಗರಿಕತೆ ಮತ್ತು ಅರಾಜಕತೆ’ ಕನ್ನಡದ ಸಂಸ್ಕೃತಿ ವಿಮರ್ಶೆಯ ಮುಖ್ಯ ಪುಸ್ತಕಗಳ ಸಾಲಿನಲ್ಲಿರುತ್ತದೆ. ಸಾಹಿತ್ಯ ಪಠ್ಯಗಳನ್ನು ಎಲ್ಲರ ಮನ ಮುಟ್ಟುವಂತೆ ವಿವರಿಸುತ್ತಿದ್ದ ಜಿಕೆಜಿಯವರ ಕ್ರಮ ಅವರ ವಿಮರ್ಶಾ ಬರಹಗಳ ವಿವರಣಾತ್ಮಕ ಶೈಲಿಯಲ್ಲೂ ಇತ್ತು. ಅವರು ಬರೆದ ಏಕಮಾತ್ರ ನೀಳ್ಗತೆ ‘ಈಶ್ವರ ಅಲ್ಲಾ’ ಅವರ ಜಾತ್ಯತೀತತೆಯ ಕನಸಿನ ಕಥಾರೂಪವಾಗಿತ್ತು. ಎಪ್ಪತ್ತು-ಎಂಭತ್ತರ ದಶಕದ ಹೊಸ ಅಲೆಯ ಸಿನೆಮಾಗಳಲ್ಲಿ ಅವರ ನಟನೆ, ಅನೇಕ ಟೆಲಿ ಧಾರಾವಾಹಿಗಳ ಪಾತ್ರಗಳು ಅವರ ನಟನಾ ಪ್ರತಿಭೆಯ ದಾಖಲೆಗಳಾಗಿವೆ. ನಾಡು ಕಟ್ಟುವ ಸಾಮಾಜಿಕ ಚಳವಳಿಗಳ ತರುಣರು ಕರೆದರೆ ಜಿಕೆಜಿ ಕರ್ನಾಟಕದ ಯಾವ ಮೂಲೆಯಲ್ಲಾದರೂ ಹೋಗಿ ಭಾಷಣ ಮಾಡಲು ತಮ್ಮ ಕೈಬರಹದ ಟಿಪ್ಪಣಿಗಳ ಸಮೇತ ಸಿದ್ಧರಾಗಿ ಹಾಜರಾಗುತ್ತಿದ್ದರು. ದಲಿತ ಸಂಘರ್ಷ ಸಮಿತಿಗಳ ಕಾರ್ಯಕರ್ತರ ಹಲವು ಕಮ್ಮಟಗಳಲ್ಲಿ ಅವರು ಖಾಯಂ ಅತಿಥಿಯಾಗಿರುತ್ತಿದ್ದರು. ಇಂಥ ಕಮ್ಮಟ, ಸಂಕಿರಣಗಳ ನಂತರದ ಸಂಧ್ಯಾಕೂಟಗಳನ್ನು ಅವರು ಆನಂದದಿಂದ ಅನುಭವಿಸುತ್ತಿದ್ದರು. ಸಿನೆಮಾ, ಟೆಲಿವಿಷನ್ ನಟರಾಗಿ ಅವರು ಪಡೆದ ಸಾರ್ವಜನಿಕ ಖ್ಯಾತಿ ಹಾಗೂ ಆಕರ್ಷಕ ವ್ಯಕ್ತಿತ್ವ ಕೂಡ ಜನ ಅವರ ಮಾತುಗಳನ್ನು ಗಮನವಿಟ್ಟು ಕೇಳುವಂತೆ ಸೆಳೆಯುತ್ತಿತ್ತು. ನಟನಾಗಿ, ಮೇಷ್ಟರಾಗಿ ತಮ್ಮ ದನಿಯ ಏರಿಳಿತಗಳನ್ನು ಸೂಕ್ತವಾಗಿ ಬಳಸುವ ಕಲೆಯನ್ನು ರೂಢಿಸಿಕೊಂಡಿದ್ದ ಅವರು ಆ ಕಲೆಯನ್ನು ಬೃಹತ್ ಸಭೆಗಳಲ್ಲಿ ಉತ್ತಮ ಚಿಂತನೆಗಳನ್ನು ಬಿತ್ತಲು ಪರಿಣಾಮಕಾರಿಯಾಗಿ ಬಳಸುತ್ತಿದ್ದರು. ಸಾಹಿತ್ಯದ ಸಭೆಗಳಲ್ಲಿ ‘ಕುವೆಂಪು ಬರೆದಿದ್ದನ್ನು ನೀವು ಓದಿಲ್ಲ ಅಂತ ನಂಗೆ ಗೊತ್ತು; ಆದರೆ ಕೊನೇ ಪಕ್ಷ ಕುವೆಂಪು ತಮ್ಮ ಮಗನನ್ನು ಸ್ವತಂತ್ರವಾಗಿ ಬೆಳೆಯಲು ಬಿಟ್ಟಿದ್ದನ್ನು ನೋಡಿಯಾದರೂ ನಿಮ್ಮ ಮಕ್ಕಳನ್ನು ಆ ಥರ ಬೆಳೆಸೋಕೆ ಏನ್ರೀ ಧಾಡೀ ನಿಮಗೆ?’ ಎಂದು ಪೋಷಕರನ್ನು ತಿವಿಯುತ್ತಿದ್ದರು. ಸಭೆಯಲ್ಲಿ ಗುಜುಗುಜು ಮಾತಾಡಿ, ಮೊಬೈಲ್ ಬಳಸಿ ಕಿರಿಕಿರಿ ಮಾಡುವ ಸಭಿಕರತ್ತ ಛಟ್ಟನೆ ಚಿಟಿಕೆ ಹೊಡೆದು ಗತ್ತಿನಿಂದ ಆವಾಝ್ ಹಾಕಿ ಅವರನ್ನು ತೆಪ್ಪಗಾಗಿಸಿ ಮಾತು ಮುಂದುವರಿಸುವ ಅವರ ಆ ಕ್ಷಣದ ಕೋಪ ಕೂಡ ಮೋಹಕವಾಗಿರುತ್ತಿತ್ತು! 2005ರಲ್ಲಿ ಜನತಾದಳದ ಹಿರಿಯ ನಾಯಕ ಸಿದ್ದರಾಮಯ್ಯನವರನ್ನು ಪಕ್ಷದಿಂದ ಉಚ್ಚಾಟಿಸಿದಾಗ ನಡೆದ ಐತಿಹಾಸಿಕ ಚಾಮುಂಡೇಶ್ವರಿ ವಿಧಾನಸಭಾ ಉಪಚುನಾವಣೆಯಲ್ಲಿ ಜಿಕೆಜಿ ಸಿದ್ದರಾಮಯ್ಯನವರ ಪರವಾಗಿ ಚುನಾವಣಾ ಪ್ರಚಾರಕ್ಕಿಳಿದರು. ನಂತರದ ಚುನಾವಣೆಗಳಲ್ಲಿ ಬಿಜೆಪಿಯನ್ನು ವಿರೋಧಿಸಿ ಕಾಂಗ್ರೆಸ್ ಪರ ಕೆಲವೆಡೆ ಚುನಾವಣಾ ಭಾಷಣ ಮಾಡಿದ ಜಿಕೆಜಿ ಮುಖ್ಯವಾಗಿ ಆ ಪ್ರಚಾರವನ್ನು ತಾತ್ವಿಕ ಕಾರಣಗಳಿಗಾಗಿ ಮಾಡಿದ್ದರು; ಆದ್ದರಿಂದಲೇ ಆನಂತರ ಅವರು ಯಾವ ಸರಕಾರಿ ಹುದ್ದೆಯನ್ನೂ ಬಯಸಲಿಲ್ಲ. ಗಾಂಧಿ, ಲೋಹಿಯಾ ಚಿಂತನೆಗಳನ್ನು ಮತ್ತೆ ಮತ್ತೆ ಓದಿ ಪ್ರೇರಣೆ ಪಡೆಯುತ್ತಿದ್ದ ಜಿಕೆಜಿ ಗಾಂಧೀಜಿಯ ಉಪವಾಸಗಳನ್ನು ಕುರಿತ ಪುಸ್ತಕವೊಂದನ್ನು ಬರೆಯಹೊರಟಿದ್ದರು. ಈಚಿನ ದಶಕಗಳಲ್ಲಿ ಅಂಬೇಡ್ಕರ್ ಚಿಂತನೆಗಳತ್ತ ಅವರು ಹೆಚ್ಚು ಒಲಿದಂತಿತ್ತು. ಕಾದಂಬರಿಯೊಂದನ್ನು ಬರೆಯಲು ಟಿಪ್ಪಣಿ ಮಾಡಿಕೊಳ್ಳುತ್ತಾ, ‘ಏನ್ ಗೊತ್ತಾ! ಇದು ಆರ್ಡಿನರಿ ನಾವೆಲ್ ಅಲ್ಲ; ಏಕ್‌ದಂ ನೊಬೆಲ್ ಬರಬೇಕು! ಹುಷಾರಾಗಿರಿ!’ ಎಂದು ತಮಾಷೆ ಮಾಡಿಕೊಳ್ಳುತ್ತಿದ್ದರು. ಅದರ ಜೊತೆಗೇ, ‘ಏಜ್ ಈಸ್ ನಾಟ್ ಆನ್ ಮೈ ಸೈಡ್... ನನಗೆ ಇನ್ನು ಉಳಿದಿರುವ ವರ್ಷಗಳಲ್ಲಿ ಎಷ್ಟಾಗುತ್ತೋ ಅಷ್ಟು...’ ಎಂದಾಗ ಅಲ್ಲಿ ಸಣ್ಣಗಿನ ವಿಷಾದದ ಎಳೆಯ ಜೊತೆಗೇ ನಿರ್ಲಿಪ್ತ ನಗುವೂ ಇರುತ್ತಿತ್ತು. ಎಂಭತ್ತು ದಾಟಿದ್ದಾಗಲೂ, ನಡೆಯುವಾಗ ಇನ್ನೊಬ್ಬರ ಸಹಾಯವನ್ನು ಕೋರದ, ನೆರವಾಗಲು ಬಂದವರನ್ನು ರೇಗಿ ಓಡಿಸುತ್ತಿದ್ದ ಜಿಕೆಜಿ ಆ ವಯಸ್ಸಿನಲ್ಲೂ ತಮ್ಮ ಆರೋಗ್ಯದ ಏರುಪೇರಿನ ಬಗ್ಗೆ ಸಾಮಾನ್ಯವಾಗಿ ಮಾತಾಡಿದವರಲ್ಲ. ಅಷ್ಟರಮಟ್ಟಿಗೆ ಅವರು ಮಾತ್ರೆಗಳು, ಆಹಾರಗಳ ಶಿಸ್ತಿನ ಮೂಲಕ ತಮ್ಮ ಆರೋಗ್ಯವನ್ನು ಸಾಕಷ್ಟು ದಕ್ಷವಾಗಿ ಕಾಪಾಡಿಕೊಂಡಂತಿದೆ. ‘ನಮ್ಮ ಮಂಜುಳಾ ಊಟದ ಮುಂದೆ ಇವೆಲ್ಲ ನಥಿಂಗ್!’ ಎಂದು ಅವರು ಮಧ್ಯಾಹ್ನದ ಊಟಕ್ಕೆ ಮನೆಯತ್ತ ಓಡುತ್ತಿದ್ದುದು ನೆನಪಾಗುತ್ತದೆ. ಸಭೆ ಮುಗಿದ ಮೇಲೆ ಎಂದೋ ಅಪರೂಪಕ್ಕೊಮ್ಮೆ ಅವರ ಮಂಡಿನೋವಿನ ಮಾತು ಇಣುಕುತ್ತಿದ್ದರೂ, ಅದರ ನೆಪವೊಡ್ಡಿ ಸಭೆ, ಭಾಷಣಗಳನ್ನು ಅವರು ತಪ್ಪಿಸಿಕೊಂಡವರಲ್ಲ; ಪರಿಣಾಮಕಾರಿ ಭಾಷಣ ತಮ್ಮಿಳಗೆ ಉಕ್ಕಿಸುತ್ತಿದ್ದ ಅಸಾಧ್ಯ ಎನರ್ಜಿಯನ್ನು ಅವರು ಸುಲಭವಾಗಿ ಬಿಟ್ಟುಕೊಡುವವರಾಗಿರಲಿಲ್ಲ. ಜಡ ವ್ಯವಸ್ಥೆಯ ನಿರಂತರ ವಿರೋಧದ ಮೂಲಕವೇ ಬುದ್ಧಿಜೀವಿಯ ವ್ಯಕ್ತಿತ್ವ ಗಟ್ಟಿಯಾಗುವ ಬಗ್ಗೆ ಅವರಿಗೆ ನಂಬಿಕೆಯಿತ್ತು. ಯಾವ ಲೌಕಿಕ, ಸರಕಾರಿ ಅಧಿಕಾರವನ್ನೂ ಒಲ್ಲದೆ, ಒಮ್ಮೆ ರಾಜ್ಯೋತ್ಸವ ಪ್ರಶಸ್ತಿಯನ್ನೂ ತಿರಸ್ಕರಿಸಿದ್ದ ಜಿಕೆಜಿ, ಸಮಾಜ-ಸಂಸ್ಕೃತಿಗಳ ಆರೋಗ್ಯಕ್ಕಾಗಿ ಕೆಲಸ ಮಾಡುವುದಷ್ಟೇ ತಮ್ಮ ಕೆಲಸ; ಅದೇ ತಮ್ಮ ಬದುಕಿನ ಉದ್ದೇಶ ಮತ್ತು ಸಾರ್ಥಕತೆ ಎಂದು ನಂಬಿದ್ದರು. ಯಾವ ಸ್ವಂತ ಆಸ್ತಿಯೂ ಇರದ ಲೋಹಿಯಾ ವ್ಯಕ್ತಿತ್ವದ ಬಗ್ಗೆ ಜಿಕೆಜಿಯವರಿಗೆ ಎಷ್ಟೊಂದು ಗೌರವ ಇತ್ತೆಂದರೆ, ಸ್ವತಃ ಜಿಕೆಜಿ ಕೂಡ ತಮ್ಮ ಹೆಸರಿನಲ್ಲಿ ಯಾವ ಆಸ್ತಿಯನ್ನೂ ಮಾಡಿರಲಿಲ್ಲ. ಅವರ ಪತ್ನಿ ಮಂಜುಳಾ ಹಾಗೂ ಇಬ್ಬರು ಹೆಣ್ಣು ಮಕ್ಕಳು ಎಷ್ಟೊಂದು ಪ್ರೀತಿ ಹರಿಸಿ ಅವರನ್ನು ನೋಡಿಕೊಳ್ಳುತ್ತಿದ್ದರೆಂದರೆ, ಜಿಕೆಜಿಗೆ ಓದು, ಬರಹ, ಭಾಷಣ, ಸಮಾಜಗಳಾಚೆಗೆ ಬೇರೆ ಯಾವುದರ ಬಗೆಗೂ ಯೋಚಿಸಬೇಕೆಂದೇ ಅನ್ನಿಸುತ್ತಿರಲಿಲ್ಲವೇನೋ. ಕಳೆದೆರಡು ತಿಂಗಳಿಂದ ಹುಬ್ಬಳ್ಳಿಯಲ್ಲಿ ತಮ್ಮ ಪೇಂಟರ್ ಮಗಳು ಶ್ಯಾಮಲಾ ಅವರ ಮನೆಯಲ್ಲಿದ್ದ ಜಿಕೆಜಿ ಈಚೆಗೆ ಮಹಿಳಾ ಮೀಸಲಾತಿ ಕುರಿತು ನಾನು ಬರೆದ ಬರಹವೊಂದನ್ನು ಹುಡುಕಿ ಓದಿ ಮಾತಾಡಿ, ಹುಬ್ಬಳ್ಳಿಗೆ ಬರಲು ಕರೆದಿದ್ದರು. ಅವತ್ತಿನ ಮಾತಿನ ಕೊನೆಗೆ, ಕಿಂಗ್ ಲಿಯರ್ ಬಗ್ಗೆ ಬರೆದು, ನಾಟಕದಲ್ಲಿ ಕಿಂಗ್ ಲಿಯರ್ ಪಾತ್ರವನ್ನೂ ಮಾಡಿದ್ದ ಜಿಕೆಜಿಗೆ, ‘ನಿಮ್ಮ ಇಬ್ಬರೂ ಹೆಣ್ಣು ಮಕ್ಕಳೂ ಕಿಂಗ್ ಲಿಯರ್‌ನ ಕೊನೆಯ ಮಗಳು ಕರುಣಾಳು ಕಾರ್ಡೀಲಿಯಾಳಂತೆ ಇರುವುದು ನಿಮ್ಮ ಭಾಗ್ಯ!’ ಎಂದೆ. ಜಿಕೆಜಿ ಮನತುಂಬಿ ನಕ್ಕರು. ಆ ನಗು ಕಳೆದ ಮೂವತ್ತೈದು ವರ್ಷಗಳಿಂದ ನನ್ನ ಚಿರಪರಿಚಿತ ನಗುವಾಗಿತ್ತು. ಆ ಮುಗ್ಧ ನಗೆಯ ಜಿಕೆಜಿ ನನ್ನಂಥ ಸಾವಿರಾರು ಗೆಳೆಯರ ಮನಸ್ಸಿನಲ್ಲಿ ಸದಾ ಹಾಗೇ ಉಳಿದಿರಲಿ; ಅವರ ಶುಭ್ರ ಬದುಕು, ಕಹಿಯಿಲ್ಲದ ಮನೋಲೋಕ, ಸ್ವಂತದ ಅಹಮ್ಮುಗಳಿಲ್ಲದ ತಾತ್ವಿಕ ಜಗಳ; ಗಟ್ಟಿ ಸಾಮಾಜಿಕ ಬದ್ಧತೆಯ ಒಳಲೋಕ; ಸ್ವಾರ್ಥವಿಲ್ಲದ ಕಾಳಜಿ, ಪ್ರೀತಿಯನ್ನು ಬಿಟ್ಟುಕೊಡದ ನಿಷ್ಠುರತೆ, ವ್ಯಕ್ತಿತ್ವದ ಅಪರೂಪದ ಇಂಟಿಗ್ರಿಟಿ... ಇವೆಲ್ಲ ಕರ್ನಾಟಕದ ಹೊಸ ಹೊಸ ತಲೆಮಾರುಗಳ ಆದರ್ಶಗಳಾಗಿ ಮುನ್ನಡೆಯುತ್ತಿರಲಿ.