varthabharthi


ಕರ್ನಾಟಕ

''ಪ್ರಚಾರದ ತೆವಲಿನಿಂದ ಕುಮಾರಸ್ವಾಮಿ ಏನೇನೋ ಮಾತಾಡುತ್ತಿದ್ದಾರೆ''

''ರಾಮ ಮಂದಿರಕ್ಕೆ ನೀವೆಷ್ಟು ದೇಣಿಗೆ ನೀಡಿದ್ದೀರಿ'': ಎಚ್ ಡಿಕೆ ಗೆ ಸಿ.ಟಿ.ರವಿ ಪ್ರಶ್ನೆ

ವಾರ್ತಾ ಭಾರತಿ : 16 Oct, 2021

ಚಿಕ್ಕಮಗಳೂರು, ಅ.16: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಯಲ್ಲಿ ಸ್ಪಷ್ಟತೆ, ನಿರ್ದಿಷ್ಟ ಉದ್ದೇಶಗಳಿಲ್ಲ. ಪ್ರಚಾರದ ತೆವಲಿಗೆ ಏನೇನೋ ಹೇಳಿಕೆ ನೀಡುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಹೇಳಿದರು.

ರಾಮಮಂದಿರ ನಿರ್ಮಾಣದ ಬಗ್ಗೆ ಲೆಕ್ಕ ಕೇಳಿದ ಎಚ್.ಡಿ.ಕುಮಾರಸ್ವಾಮಿಯವರ ಹೇಳಿಕೆಗೆ ನಗರದಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ನಾವು ರಾಮಂದಿರ ಹೋರಾಟ ಮಾಡುವಾಗ ಕುಮಾರಸ್ವಾಮಿ ಅವರು ಮಸೀದಿಯ ಜಪ ಮಾಡುತ್ತಿದ್ದರು. ನಾವು ಮನೆ ಮನೆಗೆ ಹೋಗಿ ರಾಮಮಂದಿರ ವಿಚಾರ ತಿಳಿಸುತ್ತಿದ್ದೆವು. ಅವರು ಟೋಪಿ ಹಾಕಿಕೊಂಡು ನಮಾಝ್ ಮಾಡಲು ಹೋಗುತ್ತಿದ್ದರು. ರಾಮಮಂದಿರಕ್ಕೆ ಹಣ ಕೊಟ್ಟವರಿಗೆ ಲೆಕ್ಕ ಕೇಳುವ ಅಧಿಕಾರವಿದೆ. ಕುಮಾರಸ್ವಾಮಿ ರಾಮ ಮಂದಿರಕ್ಕೆ ಎಷ್ಟು ಹಣ ನೀಡಿದ್ದೀರಿ ಎಂದು ಮೊದಲು ಹೇಳಿ ಆಮೇಲೆ ಲೆಕ್ಕ ಕೇಳಿ ಎಂದರು.

ರಾಮಮಂದಿರಕ್ಕೆ ಕೊಟ್ಟಿರುವ ಹಣದ ಲೆಕ್ಕ ಹೇಳಿ ರಾಮಮಂದಿರದ ಲೆಕ್ಕಕೇಳಿ, ರಾಮ ಮಂದಿರದ ಹಣವನ್ನು ದುರುಪಯೋಗ ಮಾಡುವುದಕ್ಕೆ ಫ್ಯಾಮಿಲಿ ಖಾನ್‍ದಾನ್ ಅಲ್ಲಿಲ್ಲ, ರಾಮಮಂದಿರ ಹೋರಾಟದಲ್ಲಿ ಕುಮಾರಸ್ವಾಮಿ ಅವರ ಪಾತ್ರವೇನು ಎಂಬುದನ್ನು ಮೊದಲು ತಿಳಿಸಬೇಕು ಎಂದ ಅವರು, ಕುಮಾರಸ್ವಾಮಿ ಅವರಿಗೆ ರಾಮಮಂದಿರ ನಿರ್ಮಾಣವಾಗುತ್ತಿರುವುದನ್ನು ನೋಡಿ ಸಂಕಟವಾಗ್ತಿದೆ, ರಾಮಮಂದಿರ ನಿರ್ಮಾಣವಾದ ಮೇಲೆ ಅವರು ಅಲ್ಲಿಗೆ ಪೂಜೆಗೆ ಬರಲಿ ಎಂದು ವ್ಯಂಗ್ಯವಾಡಿದರು.

ಆರೆಸೆಸ್‍ನವರು ಎಲ್ಲಾ ವಿವಿಗಳಲ್ಲಿ ಸಿಂಡಿಕೇಟ್ ಸದಸ್ಯರಾಗಿದ್ದಾರೆ ಎಂಬ ಹೇಳಿಕೆಗೆ ಪ್ರತ್ಯುತ್ತರ ನೀಡಿದ ಸಿ.ಟಿ.ರವಿ, ಎಚ್.ಡಿ.ಕುಮಾರಸ್ವಾಮಿಯವರು ಆರೆಸ್ಸೆಸ್ ಏನು ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿಲ್ಲ, ಸ್ವಯಂ ಸೇವಕರಾಗಿ ಆರೆಸೆಸ್‍ನಲ್ಲಿ ಸೇವೆ ಸಲ್ಲಿಸಿದಾಗ ಮಾತ್ರ ಅದು ಅರ್ಥವಾಗುತ್ತದೆ. ಆರೆಸೆಸ್ ಸ್ವಯಂ ಸೇವಕರಿಗೆ ವಿವಿಯಲ್ಲಿ ಸಿಂಡಿಕೇಟ್ ಸದಸ್ಯತ್ವ ಇಲ್ಲದಿರುವಾಗ ವಿವಿಯ ಸಿಂಡಿಕೇಟ್ ಸದಸ್ಯರಾಗಲು ಹೇಗೆ ಸಾಧ್ಯ, ಇದರಿಂದ ಕುಮಾರಸ್ವಾಮಿಯವರ ಅಜ್ಞಾನ ತಿಳಿಯುತ್ತದೆ. ಅಜ್ಞಾನದಿಂದ ಮಾತನಾಡಿ ನಗೆಪಾಟಲಿಗೆ ಇಡಾಗಬೇಡಿ ಎಂದು ಸಿ.ಟಿ. ರವಿ ಹೇಳಿದರು.

ಆರೆಸೆಸ್ ಇಲ್ಲದಿದ್ದರೇ ಭಾರತ್‍ಮಾತಾಕೀ ಜೈ ಅನ್ನೋಕೆ ಯಾರು ಇರುತ್ತಿರಲಿಲ್ಲ, ಜೆಡಿಎಸ್‍ನಲ್ಲಿ ದೇವೇಗೌಡರಿಗೆ ಜೈ, ಕುಮಾರಸ್ವಾಮಿಗೆ ಜೈ, ನಿಖಿಲ್ ಅಣ್ಣನಿಗೆ ಜೈ ಅನ್ನಬೇಕಿತ್ತು. ಕಾಂಗ್ರೆಸ್‍ನಲ್ಲಿ ಸೋನಿಯಾಗಾಂಧಿಗೆ ಜೈ, ರಾಹುಲ್ ಗಾಂಧಿಗೆ ಜೈ ಪ್ರಿಯಾಂಕ ಗಾಂಧಿಗೆ ಜೈ ಅನ್ನಬೇಕಿತ್ತು. ಭಾರತ್ ಮಾತಾಕೀ ಜೈ ಅನ್ನುವುದು ಎಚ್.ಡಿ.ಕುಮಾರಸ್ವಾಮಿ ಅವರ ದೃಷ್ಟಿಯಲ್ಲಿ ಅಪರಾಧವೇ? ಎಂದು ಪ್ರಶ್ನಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)