varthabharthi


ಅಂತಾರಾಷ್ಟ್ರೀಯ

ಎರಡನೇ ಮಾನವ ಸಹಿತ ಅಂತರಿಕ್ಷ ಯಾನಕ್ಕೆ ಚೀನಾ ಚಾಲನೆ

ವಾರ್ತಾ ಭಾರತಿ : 16 Oct, 2021

ಸಾಂದರ್ಭಿಕ ಚಿತ್ರ:PTI

ಬೀಜಿಂಗ್, ಅ.16: ಇಬ್ಬರು ಪುರುಷರು ಹಾಗೂ ಓರ್ವ ಮಹಿಳೆಯನ್ನೊಳಗೊಂಡ ಅಂತರಿಕ್ಷ ಯಾನಿಗಳ ತಂಡವನ್ನು ಬಾಹ್ಯಾಕಾಶಕ್ಕೆ ಕರೆದೊಯ್ಯುವ 6 ತಿಂಗಳ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಶನಿವಾರ ವಾಯವ್ಯ ಚೀನಾದ ಗನ್ಸು ಪ್ರಾಂತ್ಯದ ಜಿಯುಕ್ವಾನ್ ಉಪಗ್ರಹ ಉಡಾವಣಾ ಕೇಂದ್ರದಲ್ಲಿ ಚಾಲನೆ ನೀಡಲಾಗಿದೆ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ. ‌

ಚೀನಾವು ಅಂತರಿಕ್ಷದಲ್ಲಿ ನಿರ್ಮಿಸುತ್ತಿರುವ ತಿಯಾನೆ ಬಾಹ್ಯಾಕಾಶ ನಿಲ್ದಾಣದ ನಿರ್ಮಾಣ ಕಾರ್ಯಕ್ಕೆ ನೆರವಾಗುವುದು ಈ ಅಂತರಿಕ್ಷ ಯಾನಿಗಳ ಪ್ರಮುಖ ಕಾರ್ಯವಾಗಿದೆ. ಶೆನ್ಝೋ -13 (ದೈವಿಕ ನೌಕೆ) ಎಂಬ ಹೆಸರಿನ ಅಂತರಿಕ್ಷ ನೌಕೆಯನ್ನು ಮಾರ್ಚ್-2ಎಫ್ ರಾಕೆಟ್ ಮೂಲಕ ಶುಕ್ರವಾರ ರಾತ್ರಿ ಕಳೆದು 12.23 ಗಂಟೆಗೆ ಅಂತರಿಕ್ಷಕ್ಕೆ ಉಡಾಯಿಸಲಾಗಿದೆ. 

ಶನಿವಾರ ಬೆಳಿಗ್ಗೆ 6:56ಕ್ಕೆ ನೌಕೆಯು ನಿರ್ಮಾಣ ಹಂತದಲ್ಲಿರುವ ಬಾಹ್ಯಾಕಾಶ ನಿಲ್ದಾಣ ತಲುಪಿದ್ದು ಬೆಳಿಗ್ಗೆ 10:03 ಗಂಟೆಗೆ ಅಂತರಿಕ್ಷ ಯಾನಿಗಳು ಬಾಹ್ಯಾಕಾಶ ನಿಲ್ದಾಣದ ಒಳಗೆ ಪ್ರವೇಶಿಸಿದ್ದಾರೆ ಎಂದು ಚೀನಾದ ಮಾನವಸಹಿತ ಅಂತರಿಕ್ಷ ಪ್ರಯಾಣ ಸಂಸ್ಥೆಯ ಹೇಳಿಕೆ ತಿಳಿಸಿದೆ. ಚೀನಾದ ಬಾಹ್ಯಾಕಾಶ ಕಾರ್ಯಕ್ರಮದಲ್ಲೇ ಅತ್ಯಂತ ಸುದೀರ್ಘಾವಧಿಯ ಮಾನವಸಹಿತ ಅಂತರಿಕ್ಷ ಯಾತ್ರೆ ಇದಾಗಲಿದೆ. ಈ ತಂಡ ಚೀನಾ ನಿರ್ಮಿಸುತ್ತಿರುವ ಬಾಹ್ಯಾಕಾಶ ನಿಲ್ದಾಣದಲ್ಲಿ 6 ತಿಂಗಳು ವಾಸ್ತವ್ಯ ಹೂಡಿ ಅಲ್ಲಿ ನಿರ್ಮಾಣ ಕಾರ್ಯವನ್ನು ಮುಂದುವರಿಸಲಿದ್ದಾರೆ. 

ಇವರಲ್ಲಿ ಪೈಲಟ್ ಝಾಯಿ ಝಿಗಾಂಗ್ (55 ವರ್ಷ) ಮತ್ತು 41 ವರ್ಷದ ಮಹಿಳೆ ವ್ಯಾಂಗ್ ಯಾಪಿಂಗ್ ಈ ಹಿಂದೆಯೂ ಚೀನಾದ ಬಾಹ್ಯಾಕಾಶ ಯಾನದಲ್ಲಿ ಪಾಲ್ಗೊಂಡ ಅನುಭವಿಗಳು. ಯುರೋಪ್ನ ಬಾಹ್ಯಾಕಾಶ ಏಜೆನ್ಸಿಯಲ್ಲಿ ತರಬೇತಿ ಪಡೆದಿರುವ ಯಿ ಗ್ವಾಂಗ್ಫು ಇದೇ ಮೊದಲ ಬಾರಿ ಬಾಹ್ಯಾಕಾಶ ಯಾನ ಕೈಗೊಂಡಿದ್ದಾರೆ. ಬಾಹ್ಯಾಕಾಶದಲ್ಲಿ 6 ತಿಂಗಳ ಸುದೀರ್ಘ ವಾಸ ಅತ್ಯಂತ ಸವಾಲಿನ ಕಾರ್ಯವಾಗಿದೆ. ಇದಕ್ಕೆ ದೈಹಿಕ ಹಾಗೂ ಮಾನಸಿಕ ಸ್ಥಿರತೆ ಅಗತ್ಯ ಎಂದು ಝಿಗಾಂಗ್ ಗುರುವಾರ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದರು. 

ಚೀನಾ ನಿರ್ಮಿಸಲಿರುವ ಬಾಹ್ಯಾಕಾಶ ನಿಲ್ದಾಣ 3 ಭಾಗಗಳನ್ನು ಹೊಂದಲಿದ್ದು ಇದರಲ್ಲಿ ಒಂದು ಭಾಗ ಪೂರ್ಣಗೊಂಡಿದೆ. ಸಿಟಿ ಬಸ್ಗಿಂತ ತುಸು ದೊಡ್ಡದಿರುವ ಈ ನಿಲ್ದಾಣದಲ್ಲಿ ಬಾಹ್ಯಾಕಾಶ ನಿಲ್ದಾಣದ ವಾಸಿಗಳಿಗೆ ನೆಲೆಸುವ ವ್ಯವಸ್ಥೆಯಿದೆ. 2021ರ ಎಪ್ರಿಲ್ನಿಂದ ಆರಂಭವಾಗಿರುವ ಬಾಹ್ಯಾಕಾಶ ನಿಲ್ದಾಣ ನಿರ್ಮಾಣ ಕಾರ್ಯ 2022ರ ಡಿಸೆಂಬರ್ನಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)