varthabharthi


ರಾಷ್ಟ್ರೀಯ

ಸೋನಿಯಾ ಗಾಂಧಿ ಹೇಳಿಕೆ

"ನರೇಂದ್ರ ಮೋದಿ ಅವರ ಒಂದಂಶದ ಕಾರ್ಯಸೂಚಿ ‘ಮಾರಾಟ’ ಆಗಿರುವುದರಿಂದ ದೇಶದ ಸಾಮಾಜಿಕ ಗುರಿಗಳು ಅಪಾಯದಲ್ಲಿದೆ"

ವಾರ್ತಾ ಭಾರತಿ : 16 Oct, 2021

ಹೊಸದಿಲ್ಲಿ, ಅ. 16: ಕೇಂದ್ರ ಸರಕಾರದ ನ್ಯಾಷನಲ್ ಮಾನಿಟೈಸೇಷನ್ ಪೈಪ್ಲೈನ್ (ಎನ್ಎಂಪಿ) ಯೋಜನೆಯ ಬಗ್ಗೆ ಶನಿವಾರ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರ ಒಂದಂಶದ ಕಾರ್ಯಸೂಚಿ ‘ಮಾರಾಟ’ ಆಗಿರುವುದರಿಂದ ದೇಶದ ಸಾಮಾಜಿಕ ಗುರಿಗಳು ಅಪಾಯದಲ್ಲಿದೆ ಎಂದರು.

ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆ (ಸಿಡಬ್ಲುಸಿ)ಯಲ್ಲಿ ಮಾತನಾಡಿದ ಸೋನಿಯಾ ಗಾಂಧಿ, ಭಾರತದ ಆರ್ಥಿಕತೆ ಚೆನ್ನಾಗಿದೆ ಎಂದು ಕೇಂದ್ರ ಸರಕಾರ ಪ್ರಚಾರ ನಡೆಸುತ್ತಿರುವ ಹೊರತಾಗಿಯೂ ದೇಶದ ಆರ್ಥಿಕತೆ ಅಪಾಯದಲ್ಲೇ ಮುಂದುವರಿದಿದೆ ಎಂದರು.

‘‘ಆರ್ಥಿಕ ಚೇತರಿಕೆಗೆ ಕೇಂದ್ರ ಸರಕಾರದಲ್ಲಿ ಇರುವ ಏಕೈಕ ಉತ್ತರವೆಂದರೆ, ದಶಕಗಳ ಕಾಲ ಶ್ರಮಿಸಿ ನಿರ್ಮಿಸಿದ ರಾಷ್ಟ್ರೀಯ ಸೊತ್ತುಗಳನ್ನು ಮಾರಾಟ ಮಾಡುವುದು. ಇದು ನಮಗೆಲ್ಲ ತಿಳಿದೇ ಇದೆ.

ಸರಕಾರಿ ವಲಯದ ಸಂಸ್ಥೆಗಳಿಗೆ ಕೇವಲ ವ್ಯೆವಾಹತ್ಮಕ ಹಾಗೂ ಆರ್ಥಿಕ ಉದ್ದೇಶ ಮಾತ್ರ ಇರುವುದಲ್ಲ. ಅದಕ್ಕೆ ಸಾಮಾಜಿಕ ಗುರಿ ಕೂಡ ಇದೆ. ಉದಾಹರಣೆಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಸಬಲೀಕರಣ, ಹಿಂದುಳಿದ ಪ್ರದೇಶಗಳ ಅಭಿವೃದ್ಧಿ ಮಾಡುವ ಗುರಿ ಅದಕ್ಕೆ ಇದೆ. ಆದರೆ, ಮೋದಿ ಅವರು ಏಕ ಅಂಶ ಕಾರ್ಯಸೂಚಿ ಮಾರಾಟದಿಂದಾಗಿ ದೇಶದ ಆರ್ಥಿಕತೆ ಅಪಾಯದಲ್ಲಿದೆ’’ ಎಂದು ಅವರು ಹೇಳಿದರು.

ಹಣದುಬ್ಬರ ಏರಿಕೆಯಾಗುತ್ತಿರುವ ಕುರಿತು ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಸೋನಿಯಾ ಗಾಂಧಿ, ಆಹಾರ, ತೈಲ ಸೇರಿದಂತೆ ಅವಶ್ಯಕ ವಸ್ತುಗಳ ಬೆಲೆ ನಿರಂತರ ಏರಿಕೆಯಾಗುತ್ತಿದೆ. ಪೆಟ್ರೋಲ್ ಬೆಲೆ 100 ರೂ., ಡೀಸೆಲ್ ಬೆಲೆ 100 ರೂ., ಗ್ಯಾಸ್ ಸಿಲಿಂಡರ್ ಬೆಲೆ 900 ರೂ., ಅಡುಗೆ ಎಣ್ಣೆ ಬೆಲೆ 200 ರೂ. ಸಮೀಪ ತಲುಪುತ್ತದೆ ಎಂದು ಈ ದೇಶದ ಯಾರಾದರೂ ಒಬ್ಬರು ಕಲ್ಪಿಸಿದ್ದರೇ? ಇದು ದೇಶಾದ್ಯಂತ ಜನರ ಜೀವನವನ್ನು ದುಸ್ಥಿತಿಗೆ ತಳ್ಳಿದೆ ಎಂದು ಅವರು ಹೇಳಿದರು.

ಮೋದಿ ಆಳ್ವಿಕೆಯಲ್ಲಿ ಅಲ್ಪಸಂಖ್ಯಾತರನ್ನು ಸ್ಪಷ್ಟವಾಗಿ ಗುರಿ ಮಾಡಲಾಗುತ್ತಿದೆ. ಇದನ್ನು ಬಲವಾಗಿ ಖಂಡಿಸಬೇಕು ಎಂದು ಸೋನಿಯಾ ಗಾಂಧಿ ಅವರು ಹೇಳಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)