varthabharthi


ಈ ಹೊತ್ತಿನ ಹೊತ್ತಿಗೆ

ಈ ಹೊತ್ತಿನ ಹೊತ್ತಿಗೆ

ಈ ಕಾಲಕ್ಕೆ ಅಗತ್ಯವಾದ ಪ್ರೇಮ ಕಥನ: ‘ಕಾಮನ ಹುಣ್ಣಿಮೆ’

ವಾರ್ತಾ ಭಾರತಿ : 17 Oct, 2021
ಎಚ್.ಎಸ್. ರೇಣುಕಾರಾಧ್ಯ

ಒಂದೇ ಗುಕ್ಕಿಗೆ ಓದಿಸಿಕೊಳ್ಳುವಂತೆ ಬರೆಯುವ ಕವಿ, ಕತೆಗಾರ, ವಿಮರ್ಶಕ, ಪ್ರಾಧ್ಯಾಪಕ ನಟರಾಜ್ ಹುಳಿಯಾರರ ಮೊದಲ ಕಾದಂಬರಿ ‘ಕಾಮನ ಹುಣ್ಣಿಮೆ’ ಇತ್ತೀಚಿನ ದಿನಗಳಲ್ಲಿ ಮತ್ತೆ ಮತ್ತೆ ಓದಿ ಬರೆಯುವಂತೆ ಒತ್ತಾಯಿಸಿದ ವಿಶಿಷ್ಟವಾದ ಕಾದಂಬರಿ.

ಚಿತ್ರದುರ್ಗದ ಬಯಲು ಸೀಮೆಯ ಮುತ್ತಿನ ಕೆರೆಯೆಂಬ ಹಳ್ಳಿಯಿಂದ ಕತೆ ಆರಂಭವಾಗಿ ಮೈಸೂರು ನಗರದಲ್ಲಿ ಮುಕ್ತಾಯಗೊಳ್ಳುತ್ತದೆ.ಸುತ್ತಮುತ್ತಲ ಊರಿನವರಿಗೆ ‘ಮಿಲುಟ್ರಿಯೋರ ಊರು’ ಎಂದೇ ಹೆಸರುವಾಸಿಯಾಗಿದ್ದ ಮುತ್ತಿನಕೆರೆಯ ಮಿಲಿಟ್ರಿ ಸೈನಿಕ ಕೃಷ್ಣಪ್ಪಮತ್ತು ಶಾಂತಕ್ಕನ ಮಗ ಚಂದ್ರ, ಈ ಕಾದಂಬರಿಯ ನಾಯಕ.

ಮಿಲಿಟ್ರಿಗೆ ಹೋದ ಚಂದ್ರನ ಅಪ್ಪ, ಒಂದೆರಡು ಬಾರಿ ರಜೆಯಲ್ಲಿ ಊರಿಗೆ ಬಂದು ಹೋದದ್ದು ಬಿಟ್ಟರೆ, ಮತ್ತೆ ಆತ ಏನಾದ ಎಂಬುದರ ಬಗೆಗೆ ಊರಿನವರಲ್ಲಿ ಬರೀ ಊಹಾಪೋಹದ ಕತೆಗಳಷ್ಟೇ ಹೊರತು ಸತ್ಯ ಏನೆಂದು ತಿಳಿಯದು. ತನ್ನ ಗಂಡನ ಸ್ಥಿತಿ ಏನಾಯಿತೆಂದು ತಿಳಿಯದ ಶಾಂತಕ್ಕ, ಇತ್ತ ಇರುವ ಒಬ್ಬ ಮಗನಾದರೂ ಚೆನ್ನಾಗಿ ಓದಿ, ಬದುಕಲಿ ಎಂದು, ಮಗನಿಗೆ ಅಪ್ಪನಂತೆ ಮಿಲಿಟ್ರಿಯರ ಬಗೆಗೆ ಆಸ್ಥೆ ಹುಟ್ಟದಂತೆ, ಹೆಜ್ಜೆ, ೆಜ್ಜೆಗೂ ಮಗನನ್ನು ಕಾಯುತ್ತಾಳೆ.

 ಎಲ್ಲ ಊರುಗಳಂತೆ, ಮನುಷ್ಯನ ಜಾತಿ, ಧರ್ಮ, ಸಾಮಾಜಿಕ ಮತ್ತು ಜಾತಿ ಸಂಬಂಧ ಮೊದಲಾದ ವಿಚಾರಗಳಲ್ಲಿ ಸಣ್ಣತನಗಳನ್ನು ಹೊಂದಿರುವ ಎಲ್ಲ ಊರುಗಳಂತೆ ಮುತ್ತಿನ ಕೆರೆಯೂ ಕೂಡ ಹೊರತಾದುದಲ್ಲ. ಇಂತಹ ಊರಿನಲ್ಲಿ ಹುಟ್ಟಿ, ಬೆಳೆದ ಹಳ್ಳಿತನದ ಎಲ್ಲಾ ಮುಗ್ಧತೆ, ಭಯ, ಚಾಲಾಕಿತನಗಳನ್ನು ಹೊಂದಿದ್ದ ಚಂದ್ರ, ಎಸೆಸೆಲ್ಸಿಯಲ್ಲಿ ಸೀಮೆಗೆ ಮೊದಲಿಗನಾಗುತ್ತಾನೆ. ತನ್ನ ಸಹಪಾಠಿ ಹಾಡಿನ ಕಮಲಿ, ‘‘ಮುಂದಿನ ಓದಿಗಾಗಿ ಮೈಸೂರಿಗೆ ಹೋಗ್ತೆನೆ’’ ಎಂದು ಹೇಳಿದ ಕಾರಣಕ್ಕೆ, ಅವಳ ಮೇಲಿನ ತನ್ನ ಮೋಹದ ಕಾರಣಕ್ಕೆ ತಾನೂ ಹೆಚ್ಚಿನ ಓದಿಗಾಗಿ ಮೈಸೂರು ನಗರಕ್ಕೆ ಬರುತ್ತಾನೆ. ಏನೂ ತಿಳಿಯದ ಮೈಸೂರು ನಗರಕ್ಕೆ ಕಾಲಿಡುತ್ತಲೇ ಅಲ್ಲಿನ ವಾತಾವರಣ ಕಂಡು, ಒಂದು ನಿಮಿಷವೂ ಇಲ್ಲಿರಬಾರದೆಂದು ವಾಪಸ್ ಬಸ್ ಹತ್ತಬೇಕು ಎಂದವನಿಗೆ ಆಸರೆಯಾಗುವುದು ಅಜ್ಞಾತ ಬಸ್ ಕಂಡಕ್ಟರ್ ಮತ್ತು ತನ್ನದೇ ಊರಿನ ದಲಿತರ ಹುಡುಗ ಶಿವಣ್ಣ. ಶಿವಣ್ಣನ ಒತ್ತಾಸೆಯಿಂದ, ಮೈಸೂರಿನ ನಗರದ ಬದುಕಿನ ಸಂಕಷ್ಟಗಳನ್ನು ಎದುರಿಸುತ್ತಾ, ಓದನ್ನು ಮುಂದುವರಿಸುತ್ತಾನೆ.

 ತನ್ನ ಬಿ.ಎ. ಸಹಪಾಠಿ ಲಾಲ್‌ಚಂದ್ ರಜಪೂತ್‌ನ ತಂದೆ ರಾಮ್ ಚಂದ್ ಚನ್ನಪಟ್ಟಣದಲ್ಲಿ ನಡೆಸುತ್ತಿದ್ದ ಬೊಂಬೆಗಳಿಗೆ ಬಣ್ಣ ಹಚ್ಚುವ ಕೆಲಸಕ್ಕೆ ಸೇರಿ, ಅದು ಮುಂದಿನ ವಿದ್ಯಾಭ್ಯಾಸದ ಅವಧಿಯುದ್ದಕ್ಕೂ ಉಪಕ ಸುಬಿನ ಸಂಪಾದನೆಯಾಗಿ ನಗರದಲ್ಲಿ ಓದುತ್ತಲೇ ಬುದ್ಧಿವಂತ ಹಳ್ಳಿಹೈದನೊಬ್ಬ ಬದುಕಲು, ಬೇಕಾದ ಜೀವನ ಕಲೆಯನ್ನು ಹೇಗೆ ಕಲಿಯಬಲ್ಲ, ತನಗೆ ಗೊತ್ತಿಲ್ಲದ ಕಲೆಯನ್ನೂ, ಬದ್ಧತೆ ಮತ್ತು ಆಸ್ಥೆಯಿಂದ ಕಲಿಯಬಲ್ಲ ಎಂಬುದಕ್ಕೆ ಅತ್ಯುತ್ತಮ ಉದಾಹರಣೆಯಾಗುತ್ತಾನೆ.

 ಮುಂದೆ ಬಿ.ಎ. ಪದವಿ ಮುಗಿಸುವ ಹೊತ್ತಿಗೆ ಈ ಭಾರತೀಯ ಸಮಾಜದಲ್ಲಿ ಮನುಷ್ಯನೊಬ್ಬ ಮುಂದಿನ ಬದುಕಿಗೆ ಎದುರಿಸಬಹುದಾದ ಎಲ್ಲ ಸಮಸ್ಯೆಗಳನ್ನು, ಅಡ್ಡಿ ಆತಂಕಗಳನ್ನು ಎದುರಿಸುವ ಛಾತಿಯನ್ನು ಓದು ಮತ್ತು ಅನುಭವಗಳಿಂದ ಗಳಿಸುವ ಚಂದ್ರ, ಊರಿಗೆ ವಾಪಸಾಗಿ ತನ್ನ ಇಲ್ಲಿಯವರೆಗಿನ ವ್ರತದಂತಹ ಬದುಕಿಗೆ ಮತ್ತು ಮಗನ ಬದುಕಿಗಾಗಿ ಇಡೀ ತನ್ನ ವೈಯುಕ್ತಿಕ ಸುಖ, ಸಂತೋಷಗಳನ್ನೇ ಬಲಿಕೊಟ್ಟು, ಜಡವಾಗಿರುವ ತನ್ನವ್ವ ಶಾಂತಕ್ಕನ ಬದುಕಿಗೆ ಚೈತನ್ಯ ತುಂಬಿ, ತಾನು ತನ್ನ ಸಹಪಾಠಿ ವಿಧವೆಯನ್ನು ಮದುವೆಯಾಗಿ, ತನ್ನೂರಿನಲ್ಲಿ ನೀಲಕಂಠಸ್ವಾಮಿಯಾಗಿದ್ದು, ಆನಂತರ ತನ್ನಂತೆ ಊರು ಮತ್ತು ಕಾವಿ ಬಿಟ್ಟು ಪ್ರೊಪೆಸರ್ ಆದ ತನ್ನವ್ವ ಶಾಂತಕ್ಕನನ್ನು ಮೆಚ್ಚುತ್ತಿದ್ದ ನೀಲಗಂಗಯ್ಯನವರೊಂದಿಗೆ ತನ್ನವ್ವನ ಎರಡನೇ ಮದುವೆ ನೆರವೇರಿಸುವ ಕ್ರಾಂತಿಕಾರಿ ಉದ್ದೇಶದೊಂದಿಗೆ ಮತ್ತೆ ಮೈಸೂರು ನಗರ ಸೇರುವ ಚಂದ್ರನ ಕತೆಯೇ ‘ಕಾಮನ ಹುಣ್ಣಿಮೆ’ಯ ಕಥಾವಸ್ತು.

 ಈ ಕಾದಂಬರಿಯ ವಿಶೇಷತೆ ಇರುವುದೇ ಕಾದಂಬರಿ ಕಾರನ ಕಥನ ಶೈಲಿ. ಚಿತ್ರದುರ್ಗಕ್ಕಿಂತ ತುಮಕೂರು, ಹುಳಿಯಾರ್ ಗಡಿಯ ಹಳ್ಳಿಯ, ನುಡಿಗಟ್ಟುಗಳು ಮತ್ತು ಶೈಲಿಯಲ್ಲಿ ಇಡೀ ಕತೆ ಸರಾಗವಾಗಿ, ಕುತೂಹಲಬರಿತವಾಗಿ ಸಾಗುತ್ತದೆ. ಇಲ್ಲಿನ ಕತೆ 80- 90ರ ದಶಕದ್ದು. ಆ ದಶಕದಲ್ಲಿದ್ದ ನಮ್ಮ ಗ್ರಾಮೀಣ ಬದುಕಿನ ಜೀವನಾನುಭವ ಈ ಕಾದಂಬರಿಯಲ್ಲಿ ಹರಳುಗಟ್ಟಿದೆ.

  ಎಸೆಸೆಲ್ಸಿ ವಯಸ್ಸಿನ ಹುಡುಗರಲ್ಲಿನ ತಾರುಣ್ಯದ ಎಲ್ಲ ಪರಿಣಾಮ ಗಳನ್ನು ಎದುರಿಸುತ್ತಲೇ ಬಲಿತ್ಕೊಂಡ ಚಂದ್ರ ಆ ವಯೋಮಾನದಲ್ಲಿ ಎಲ್ಲ ಯುವಕರೂ ಎದುರಿಸುವ ಎಲ್ಲ ಬಗೆಯ ದೈಹಿಕ, ಮಾನಸಿಕ ರೋಮಾಂಚನಗಳನ್ನು, ಮುಜುಗರವನ್ನು ಎದುರಿಸಿದ ಬಗೆಯನ್ನು ಲೇಖಕರು ಕಟ್ಟಿರುವ ಬಗೆಯೇ ಓದುಗನಲ್ಲಿ ಮತ್ತೊಮ್ಮೆ ತಮ್ಮ ತಾರುಣ್ಯದ ಕೆಲ ರೋಮಾಂಚಕಾರಿ ನೆನಪುಗಳನ್ನು ಖಂಡಿತ ಹಸಿರಾಗಿಸುವಷ್ಟು ಶಕ್ತಿಯುತವಾಗಿವೆ.

ಈ ಕಾದಂಬರಿ ಮನಸ್ಸಿಗೆ ಇಳಿಯುವುದು ಮತ್ತು ಸಾಂಸ್ಕೃತಿಕವಾಗಿ ಬಹುಮುಖ್ಯ ಎನಿಸುವುದು, ಇಲ್ಲಿನ ಗಟ್ಟಿ ಸ್ತ್ರೀ ಪಾತ್ರಗಳಿಂದ. ಕತೆಯ ನಾಯಕನ ತಾಯಿ, ಶಾಂತಕ್ಕ, ನಾಯಕನ ದೊಡವ್ವ, ದೊಡವ್ವನ ಮಗಳು ಚೆಲುವಕ್ಕ, ಅವ್ವನ ಸಿನೆಮಾ ಜೊತೆಗಾಗಿ, ಊರಿನ ಚಿನ್ನಮ್ಮ, ನಾಯಕನ ಸಹಪಾಠಿಗಳಾದ ಕಮಲಿ, ಫೆಮಿನಿಸ್ಟ್ ರಾಧ ಹಾಗೂ ನಾಯಕನ ಪ್ರೇಮಿ, ಕಡೆಗೆ ಬಾಳ ಸಂಗಾತಿಯಾಗುವ ಭಾರತಿ. ಇವರೆಲ್ಲ ಹೆಂಗಸರಾಗಿ ಬಾಳಿನ ಒಂದಲ್ಲ ಒಂದು ಗೋಳಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದರೂ ಅದೇ ಬದುಕಿಗೆ ಬಹುದೊಡ್ಡ ಅಡ್ಡಿ,ಆತಂಕ ಎಂದು ತಿಳಿಯದೆ, ತಮ್ಮ ಬದುಕುವ ಛಲ ಮತ್ತು ಗಟ್ಟಿ ನಿಲುವಿನ ಕಾರಣದಿಂದ ಕಾದಂಬರಿಯ ಗಂಡು ಪಾತ್ರಗಳಿಗಿಂತಲೂ ಮೆಚ್ಚಿನವರಾಗುತ್ತಾರೆ. ಇಲ್ಲಿನ ಗಂಡುಗಳ ಬದುಕಿಗೆ ನೇರವಾದ ಜೀವನೋತ್ಸಾಹಿ ಶಕ್ತಿಗಳಾಗಿದ್ದಾರೆ.

 ಇಡೀ ಕಾದಂಬರಿ ಇವತ್ತಿನ ಯುವ ಸಮುದಾಯ ಉತ್ತಮ ಶಿಕ್ಷಣ ಪಡೆದು ಧೈರ್ಯದಿಂದ, ಅಷ್ಟೇ ಬುದ್ಧಿವಂತಿಕೆಯಿಂದ, ಸ್ನೇಹವೆಂಬ ಬಹುದೊಡ್ಡ ಶಕ್ತಿಯ ಬೆಂಬಲ ಪಡೆದು, ಪ್ರೇಮವೆಂಬ ಗಾರುಡಿ ಮಂತ್ರವನ್ನು ಬದುಕಿನ ತಳಹದಿಯನ್ನಾಗಿ ಮಾಡಿಕೊಂಡರೆ, ಸಮಾಜ ಎದುರಿಸುತ್ತಿರುವ ಕೋಮುವಾದ, ಮನುವಾದ ಮತ್ತು ಬಂಡವಾಳಶಾಹಿ ತ್ರಿವಳಿಗಳೆಂಬ ಹಾವಿನ ವಿಷವನ್ನು ಇಳುಹಿ, ಅಮೃತರಾಗಿ ಬದುಕಬಹುದೆಂಬ ಕೈಮರವಾಗಿ ದಾರಿ ತೋರುತ್ತದೆ.

  ತಾರುಣ್ಯವೆಂಬುದು ಈ ಸಮಾಜ ಸೃಷ್ಟಿಸಿರುವ ಅಥವಾ ಹೇರಿರುವ ಮನುಷ್ಯನ ಮೇಲಿನ ಮಾನಸಿಕ, ದೈಹಿಕ ಅಡ್ಡಿ-ಆತಂಕಗಳನ್ನಷ್ಟೇ ಮೀರದೆ ಸಾಮಾಜಿಕವಾಗಿ ಹೇರುವ ಎಲ್ಲಾ ಜೀವ ವಿರೋಧಿ ನೀತಿ, ನಿಯಮಗಳನ್ನು ಮೀರುತ್ತದೆ. ಜೊತೆಗೆ ವಯೋಮಾನದ ಭೇದವಿಲ್ಲದೆ ಮನುಷ್ಯನೊಳಗೆ ಸದಾ ಜೀವಂತವಿರುವ ಕಾಮನೆಗಳು ಸಮಾಜದ ಎಲ್ಲಾ ಹೇರುವಿಕೆಗಳನ್ನು ಜಾತಿ, ಧರ್ಮದಿಂದಾಚೆಗೆ ಎಸೆದು ಕೇವಲ ಮನುಷ್ಯರನ್ನಾಗಿ ಮಾಡುತ್ತವೆ ಎಂಬ ಕಟು ಸತ್ಯವನ್ನು ಕಾದಂಬರಿ ಮನಗಾಣಿಸುತ್ತದೆ.

 ಕಾದಂಬರಿ ಇಂತಹ ಸಾಕಷ್ಟು ಇತ್ಯಾತ್ಮಕ ಅಂಶಗಳನ್ನು ತನ್ನೊಳಗೆ ಇಟ್ಟುಕೊಂಡಿದೆ, ಜೊತೆಗೆ ಈ ಕಾದಂಬರಿ ಕೆಲವೊಂದು ಪ್ರಶ್ನೆಗಳನ್ನೂ ಹುಟ್ಟಿಸುತ್ತದೆ. ಒಂದೆರಡು ಮಿತಿಗಳನ್ನು ಮೀರಿ ಕಾಮನ ಹುಣ್ಣಿಮೆ ಕಾದಂಬರಿ ಇತ್ತೀಚಿನ ಕನ್ನಡ ಕಾದಂಬರಿಗಳ ಸಾಲಿನಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಪಡೆಯುವ ಸಾಮರ್ಥ್ಯವಿದೆ ಮತ್ತು ಕನ್ನಡದ ಶ್ರೇಷ್ಠ ಕಾದಂಬರಿಗಳ ಆಶಯದ ಮುಂದುವರಿಕೆಯಂತೆ ಈ ಕಾದಂಬರಿಯ ಆಶಯವೂ ಇದೆ.

ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ

ಕಾದಂಬರಿಯ ಕೊನೆಯಲ್ಲಿ ಪ್ರೊ.ನೀಲಗಂಗಯ್ಯ ಪಾತ್ರ ವಾಚು ನೋಡಿಕೊಂಡು ಹೇಳುವ ‘‘ಕಾಲ ಬರುತ್ತೆ ಬರುತ್ತೆ ಅಂತ ಹಳೇ ಕಾಲದೋರ ಥರಾ ಸುಮ್ನೆ ಕಾಯ್ತೆ ಕೂತಿರಬಾರದು; ಒಂದು ಸರಿಯಾದ ಕೆಲಸ ಮಾಡಬೇಕೂಂದರೆ ಅದಕ್ಕೆ ತಕ್ಕ ಕಾಲಾನ ನಾವೇ ಕ್ರಿಯೇಟ್ ಮಾಡ್ಕೋಬೇಕು’’ ಎನ್ನುವ ಮಾತುಗಳು ಕಾಲವನ್ನು ಕಾಯುತ್ತಾ ಕೂರುವುದಕ್ಕಿಂತ ಮನುಷ್ಯ ಹೇಗೆ ಕಾಲವನ್ನು ಸಮಾಜವನ್ನು ಬದಲಾಯಿಸುವ ದಾರಿಗಳನ್ನು ಕಂಡುಕೊಂಡರಷ್ಟೆ ಬದುಕುವ ದಾರಿ ತೆರೆದೀತು ಇಲ್ಲದಿದ್ದರೆ ವಿನಾಶ ಖಂಡಿತಾ ಎನ್ನುವ ಎಚ್ಚರಿಕೆಯನ್ನೂ, ದಾರಿಯನ್ನೂ ತೋರಿಸುತ್ತದೆ.

ಅಷ್ಟೇ ಅಲ್ಲದೆ ಈ ಹೊತ್ತಿನ ಈ ಮಣ್ಣಿನ ಎಲ್ಲ ಕೇಡುಗಳಿಗೆ, ಅಡ್ಡಿ ಆತಂಕಗಳಿಗೆ ಪಾಸಿಟಿವ್ ಆದ ಎನರ್ಜಿಯನ್ನು ಸ್ತ್ರೀ ಚೈತನ್ಯದಿಂದಲೇ ಪಡೆಯುವುದು ಒಂದಾದರೆ, ಮತ್ತೊಂದು ಮನುಷ್ಯನ Basic Instinct ಗಳು ಕೂಡ ಈ ನಮ್ಮ ಸುತ್ತಲಿನ ಕೇಡುಗಳನ್ನು ಸೋಲಿಸುವ ದಾರಿಗಳನ್ನು ಹುಡುಕಿಕೊಡುತ್ತವೆ ಎಂಬ ಹೊಳಹುಗಳನ್ನು ಇಡೀ ಕಾದಂಬರಿ ಹೇಳುತ್ತಾ ಹೋಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)