ಮಕ್ಕಾ ಮಸೀದಿಯಲ್ಲಿ ಸುರಕ್ಷಿತ ಅಂತರ ನಿಯಮ ರದ್ದು
photo:PTI
ರಿಯಾದ್, ಅ.17: ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿರುವ ಗ್ರ್ಯಾಂಡ್ ಮಸೀದಿಯಲ್ಲಿ ಸುರಕ್ಷಿತ ಅಂತರ ನಿಯಮವನ್ನು ರದ್ದುಗೊಳಿಸಿದ್ದು, ಕೊರೋನ ಸೋಂಕಿನ ಬಳಿಕ ಇದೇ ಮೊದಲ ಬಾರಿಗೆ ರವಿವಾರ ಜನತೆ ಒಟ್ಟಿಗೆ ನಿಂತು ಪ್ರಾರ್ಥನೆ ನೆರವೇರಿಸಿದ್ದಾರೆ.
ಮಸೀದಿಯಲ್ಲಿ ಹಾಗೂ ಸುತ್ತಮುತ್ತ ಸುರಕ್ಷಿತ ಅಂತರ ಸೂಚಿಸಲು ರಚಿಸಲಾಗಿದ್ದ ವೃತ್ತವನ್ನು ಅಳಿಸಿ ಹಾಕಲಾಗಿದೆ. ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಜಾರಿಯಲ್ಲಿದ್ದ ನಿರ್ಬಂಧ ಕ್ರಮಗಳನ್ನು ಅಕ್ಟೋಬರ್ 17ರಿಂದ ಹಂತಹಂತವಾಗಿ ಸಡಿಲಿಸುವ ನಿರ್ಧಾರದ ಅಂಗವಾಗಿ ಮಸೀದಿಗೆ ಈ ಹಿಂದಿನಂತೆ ಪೂರ್ಣ ಪ್ರಮಾಣದಲ್ಲಿ ಜನರು ಭೇಟಿ ನೀಡಬಹುದಾಗಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಸೌದಿ ಪ್ರೆಸ್ ಏಜೆನ್ಸಿ(ಎಸ್ಪಿಎ) ವರದಿ ಮಾಡಿದೆ.
ಮಸೀದಿಯನ್ನು ಸಂದರ್ಶಿಸ ಬಯಸುವವರು ಕೊರೋನ ವಿರುದ್ಧದ ಪೂರ್ಣ ಲಸಿಕೆ ಪಡೆದಿರಬೇಕು ಮತ್ತು ಮಸೀದಿಯ ಒಳಗಡೆ ಮಾಸ್ಕ್ ಧಾರಣೆ ಕಡ್ಡಾಯವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸಂಪೂರ್ಣ ಲಸಿಕೆ ಪಡೆದವರಿಗೆ ಸಾರಿಗೆ, ರೆಸ್ಟಾರೆಂಟ್, ಸಿನೆಮ ಮುಂತಾದ ಸಾರ್ವಜನಿಕ ಪ್ರದೇಶದಲ್ಲಿ ಅಥವಾ ಸಾರ್ವಜನಿಕ ಸಮಾರಂಭಗಳಲ್ಲಿ ವಿಧಿಸಿರುವ ನಿರ್ಬಂಧಗಳಿಂದ ವಿನಾಯಿತಿ ನೀಡಲಾಗಿದೆ ಎಂದು ಸೌದಿ ಅರೆಬಿಯಾದ ಆರೋಗ್ಯ ಇಲಾಖೆ ಹೇಳಿದೆ.