ಕೊರೋನ: ಪ್ರಾಣ ಕಳಕೊಂಡವರಿಗೆ ಸಿಕ್ಕಿಲ್ಲ ಪರಿಹಾರ
► ಅತಿಥಿ ಉಪನ್ಯಾಸಕರ ಗೋಳು ಕೇಳುವವರು ಯಾರು? ► ಸಮಸ್ಯೆ ಆಲಿಸದೆ ಮರೆತುಬಿಟ್ಟ ರಾಜ್ಯ ಸರಕಾರ
ಸಾಂದರ್ಭಿಕ ಚಿತ್ರ
ಮಂಗಳೂರು, ಅ.17: ಕೋವಿಡ್ ಹಾವಳಿಯಿಂದಾಗಿ ಸಂಕಷ್ಟ ಎದುರಿಸಿದ ವಿವಿಧ ಸ್ತರದ ಕಾರ್ಮಿಕರು, ಉದ್ಯೋಗಿಗಳಿಗೆ ರಾಜ್ಯ ಮತ್ತು ಕೇಂದ್ರ ಸರಕಾರವು ನಾನಾ ರೀತಿಯಲ್ಲಿ ನೆರವಿನ ಹಸ್ತ ಚಾಚಿದ್ದರೂ ಕೂಡ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಬೋಧಿಸುವ ಅತಿಥಿ ಉಪನ್ಯಾಸಕರ ಗೋಳು ಕೇಳುವವರೇ ಇಲ್ಲವಾಗಿದೆ.
ದೇಶದಲ್ಲೇ ಪ್ರಥಮ ಎಂಬಂತೆ ಹೊಸ ಶಿಕ್ಷಣ ನೀತಿ (ಎನ್ಇಪಿ)ಯನ್ನು ಜಾರಿಗೊಳಿಸಲು ಆತುರ ತೋರುವ ರಾಜ್ಯ ಸರಕಾರವು ಅತಿಥಿ ಉಪನ್ಯಾಸಕರ ಸಮಸ್ಯೆಯನ್ನು ಆಲಿಸದೆ ವಸ್ತುಶ: ಮರೆತು ಬಿಟ್ಟಿದೆ ಎಂಬ ಆರೋಪ ಕೇಳಿ ಬಂದಿದೆ.
ಕೋವಿಡ್ ಕಾಲಘಟ್ಟದಲ್ಲಿ ರಾಜ್ಯಾದ್ಯಂತ ಸುಮಾರು 163 ಅತಿಥಿ ಉಪನ್ಯಾಸಕರು ಪ್ರಾಣ ಕಳಕೊಂಡಿದ್ದಾರೆ. ಆ ಪೈಕಿ ಕೆಲವರು ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಇನ್ನು ಹಲವರು ಆಸ್ಪತ್ರೆಯ ಬಿಲ್ ಪಾವತಿಸಲಾಗದ ಕಾರಣ ಸೂಕ್ತ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ. ಆದರೆ ರಾಜ್ಯ ಸರಕಾರವು ಈ ಸಂತ್ರಸ್ಥ ಕುಟುಂಬಗಳಿಗೆ ನಯಾಪೈಸೆಯ ನೆರವು ನೀಡಿಲ್ಲ ಎಂದು ಅತಿಥಿ ಉಪನ್ಯಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅತಿಥಿ ಉಪನ್ಯಾಸಕರು ಎಂಬ ಪರಿಕಲ್ಪನೆಯು ರಾಜ್ಯದಲ್ಲಿ ಸುಮಾರು 15 ವರ್ಷದ ಹಿಂದೆ ಸೃಷ್ಟಿಯಾಯಿತು. ಆ ಬಳಿಕ ಸಾವಿರಾರು ಅತಿಥಿ ಉಪನ್ಯಾಸಕರು ಲಕ್ಷಾಂತರ ವಿದ್ಯಾರ್ಥಿಗಳಿಗೆ ಪಾಠ ಬೋಧಿಸಿದ್ದಾರೆ. ಆದರೆ ಕೋವಿಡ್ ಅವಧಿಯಲ್ಲಿ ಈ ಉಪನ್ಯಾಸಕರು ಎದುರಿಸಿದ ಸಮಸ್ಯೆಗಳು ಮಾತ್ರ ಹೇಳತೀರದ್ದು. ತಾವು ಅನುಭವಿಸುವ ಕಷ್ಟಕಾರ್ಪಣ್ಯಗಳ ಬಗ್ಗೆ ಯಾರಲ್ಲಿ ಹೇಳುವುದು ಎಂದು ತಿಳಿಯದೆ ಅತಿಥಿ ಉಪನ್ಯಾಸಕರು ಕಂಗಾಲಾಗಿದ್ದಾರೆ. ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳ ಬಳಿ ವಸ್ತುಸ್ಥಿತಿ ಹೇಳಿದರೂ ಪ್ರಜನವಾಗುತ್ತಿಲ್ಲ ಎಂದು ದೂರಿದ್ದಾರೆ.
ಇತ್ತೀಚೆಗೆ ಸಚಿವ ಅಶ್ವತ್ಥನಾರಾಯಣ ಅತಿಥಿ ಉಪನ್ಯಾಸಕರ ಸೇವೆಯನ್ನು ಖಾಯಂಗೊಳಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿರುವುದು ಕೂಡ ಅತಿಥಿ ಉಪನ್ಯಾಸಕರಲ್ಲಿ ಅಸಮಾಧಾನದ ಛಾಯೆ ಮೂಡಿಸಿದೆ.
ರಾಜ್ಯದಲ್ಲಿ ಸದ್ಯ 14,447 ಅತಿಥಿ ಉಪನ್ಯಾಸಕರಿದ್ದಾರೆ. ಅದರಲ್ಲಿ ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಪದವಿ ಮತ್ತು ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳಿಗೆ ವಾರದಲ್ಲಿ ಮೂರು ದಿನ ಪಾಠ ಬೋಧಿಸಬೇಕು. ಅಂದರೆ ದಿನಕ್ಕೆ ಕನಿಷ್ಠ 8 ಗಂಟೆ ಕೆಲಸ ಮಾಡಬೇಕು. ಆದರೆ, ಇವರ ಮಾಸಿಕ ವೇತನ ಮಾತ್ರ ಕೇವಲ 11 ಸಾವಿರದಿಂದ 13 ಸಾವಿದವರೆಗೆ ಮಾತ್ರ. ಅದೂ ವರ್ಷಕ್ಕೆ 8 ತಿಂಗಳ ಕಾಲ ಮಾತ್ರ ಸಿಗುತ್ತದೆ. ಉಳಿದ 4 ತಿಂಗಳ ವೇತನವೇ ಇಲ್ಲ. ಅಂದಹಾಗೆ, ಪ್ರತೀ ತಿಂಗಳು ಕರಾರುವಕ್ಕಾಗಿ ವೇತನ ಸಿಗುವುದಿಲ್ಲ. ಕನಿಷ್ಠ 3 ತಿಂಗಳ ಬಳಿಕ ವೇತನವು ಕೈ ಸೇರುತ್ತದೆ ಎಂದು ಅತಿಥಿ ಉಪನ್ಯಾಸಕರು ಅಳಲು ತೋಡಿಕೊಂಡಿದ್ದಾರೆ.
ವಾರದಲ್ಲಿ ಮೂರು ದಿನ ಮಾತ್ರ ಕೆಲಸವಿದೆ ಅಂತ ಉಳಿದ ಮೂರು ದಿನ ಬೇರೆ ಕಡೆ ಕೆಲಸಕ್ಕೆ ಹೋಗುವಂತಿಲ್ಲ. ಯಾಕೆಂದರೆ ಯಾವಾಗ ಕಾಲೇಜಿನಿಂದ ಪಾಠ ಬೋಧಿಸಲು ಕರೆ ಬರುತ್ತದೆ ಎಂದು ಹೇಳಲಿಕ್ಕೆ ಆಗುವುದಿಲ್ಲ. ಹಾಗಾಗಿ ಕರೆಯ ನಿರೀಕ್ಷೆ ಯೊಂದಿಗೆ ಕಾಯುವ ಅನಿವಾರ್ಯತೆ ಇದೆ.
ಅದಲ್ಲದೆ ಈ ಅತಿಥಿ ಉಪನ್ಯಾಸಕರಿಗೆ ಬೇರೆ ಯಾವ ಸೌಲಭ್ಯವೂ ಇಲ್ಲ. ಸೇವಾ ಭದ್ರತೆ, ಇಎಸ್ಐ, ಪಿಎಫ್ ವ್ಯವಸ್ಥೆಯೂ ಇಲ್ಲ. ಉಪನ್ಯಾಸಕಿಯರಿಗೆ ಹೆರಿಗೆ ರಜೆಯೂ ಇಲ್ಲ. ಈ ಎಲ್ಲಾ ‘ಇಲ್ಲ’ಗಳ ಮಧ್ಯೆ ಕಡಿಮೆ ಸಂಬಳಕ್ಕೆ ಕೆಲಸ ಮಾಡಬೇಕಾಗಿದೆ. ಒಂದು ವೇಳೆ ಕೆಲಸ ಬೇಡ ಅಂದರೆ ನಿರುದ್ಯೋಗ ಕಟ್ಟಿಟ್ಟ ಬುತ್ತಿ ಎಂದು ಅತಿಥಿ ಉಪನ್ಯಾಸಕರು ಹೇಳುತ್ತಾರೆ.
ಕೋವಿಡ್ ಬಳಿಕವಂತೂ ಅತಿಥಿ ಉಪನ್ಯಾಸಕರ ಸಮಸ್ಯೆ ಆಲಿಸುವವರು ಅಥವಾ ಗೋಳು ಕೇಳುವವರು ಇಲ್ಲದಂತಾಗಿದೆ. ಪ್ರತೀ ವರ್ಷ ಅತಿಥಿ ಉಪನ್ಯಾಸಕರು ಉದ್ಯೋಗಕ್ಕಾಗಿ ಅರ್ಜಿ ಹಾಕಿ ನೇಮಕಾತಿ ಪತ್ರ ಪಡೆಯುತ್ತಾರೆ. ಆದರೆ ಕೋವಿಡ್ ಬಳಿಕ ಕಾಲೇಜುಗಳು ಸರಿಯಾಗಿ ತೆರೆಯದ ಕಾರಣ ಅತಿಥಿ ಉಪನ್ಯಾಸಕರಿಗೆ ಕೆಲಸವೇ ಇಲ್ಲ. ಕೆಲಸವಿಲ್ಲದ ಕಾರಣ ಸಂಬಳವೂ ಇಲ್ಲ ಎಂಬಂತಾಗಿದೆ. ಹಾಗಾಗಿ 2020ರ ಮಾರ್ಚ್ನಿಂದ ಈವರೆಗೆ ಬಹುತೇಕ ಅತಿಥಿ ಉಪನ್ಯಾಸಕರು ರಸ್ತೆ ಬದಿ ಹಣ್ಣು ಹಂಪಲು ವ್ಯಾಪಾರ, ಕೃಷಿ- ಕೂಲಿ ಕೆಲಸ, ಕುಲಕಸುಬು, ಫುಡ್ ಡೆಲಿವರಿ ಇತ್ಯಾದಿ ಕೆಲಸ ಮಾಡಿ ಸಂಸಾರ ಸಾಗಿಸುತ್ತಿದ್ದಾರೆ. ಕೆಲವರು ಸಂಕೋಚದಿಂದ ಹೊರ ಜಿಲ್ಲೆಗೆ ತೆರಳಿ ಈ ಕೆಲಸಗಳನ್ನು ಮಾಡತೊಡಗಿದರೆ ಇನ್ನು ಕೆಲವರು ಅನಿವಾರ್ಯವಾಗಿ ಈ ವೃತ್ತಿಗೆ ಗುಡ್ಬೈ ಹೇಳಲು ನಿರ್ಧರಿಸಿದ್ದಾರೆ.
ಪ್ರಾಣ ಕಳಕೊಂಡ 163 ಅತಿಥಿ ಉಪನ್ಯಾಸಕರು
''ರಾಜ್ಯದಲ್ಲಿ ಕೋವಿಡ್ ಅವಧಿಯಲ್ಲಿ ಸುಮಾರು 163 ಅತಿಥಿ ಉಪನ್ಯಾಸಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳು ಮಾಹಿತಿ ನೀಡುತ್ತಾರೆ. ಅದರಲ್ಲಿ ಕೆಲವರು ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆ ಮಾಡಿಕೊಂಡಿದ್ದರೆ ಇನ್ನೂ ಕೆಲವರು ಕೊರೋನ ಮತ್ತಿತರ ಚಿಕಿತ್ಸೆಗೆ ಸಕಾಲಕ್ಕೆ ಹಣ ಹೊಂದಿಸಲಾಗದೆ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಯಾರಿಗೂ ಸರಕಾರ ಪರಿಹಾರವನ್ನು ನೀಡಿಲ್ಲ ಎಂದು ತಿಳಿದು ಬಂದಿದೆ.
ನಾವು ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪಾಠ ಬೋಧಿಸುವವರಾದರೂ ನಮ್ಮ ಬದುಕು ತೀರಾ ಶೋಚನೀಯವಾಗಿದೆ. 2018ರಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರವು ಅತಿಥಿ ಉಪನ್ಯಾಸಕರ ವೇತನವನ್ನು 5 ಸಾವಿರ ರೂ. ಹೆಚ್ಚಿಸುವುದಾಗಿ ಭರವಸೆ ನೀಡಿತ್ತು. ಅದರ ಕಡತ ಅಲ್ಲೇ ಬಾಕಿಯಾಗಿದೆ. ಕೋವಿಡ್ ಸಂಕಷ್ಟ ಕಾಲದಲ್ಲಿ ರಾಜ್ಯದಲ್ಲಿ 163 ಅತಿಥಿ ಉಪನ್ಯಾಸಕರು ಪ್ರಾಣ ಕಳೆದುಕೊಂಡಿದ್ದಾರೆ. ಅವರಿಗೆ ಪರಿಹಾರ ಧನ ಸಿಕ್ಕಿಲ್ಲ. ಯಾವ ಪ್ಯಾಕೇಜ್ಗಳ ಪ್ರಯೋಜನವೂ ಅತಿಥಿ ಉಪನ್ಯಾಸಕರಿಗೆ ಲಭಿಸಿಲ್ಲ''.
- ಪ್ರಭಾಕರ ಆಚಾರ್ಯ ರಾಜ್ಯ ಕಾರ್ಯದರ್ಶಿ
ಸರಕಾರಿ ಪ್ರಥಮ ರರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿ
''ಸಮಿತಿಯ ಗೌರವಾಧ್ಯಕ್ಷರೂ ಆಗಿರುವ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ರ ಪ್ರಯತ್ನದ ಫಲವಾಗಿ 2020ರ ಕೆಲವು ತಿಂಗಳ ವೇತನ ಬಿಡುಗಡೆಯಾಗಿದೆ. ಬಾಕಿಯುಳಿದ ತಿಂಗಳ ವೇತನವು ಮರೀಚಿಕೆಯಾಗಿದೆ. ನೂತನ ಶಿಕ್ಷಣ ನೀತಿ ಯಿಂದಾಗಿ ಉದ್ಯೋಗ ಕಳೆದುಕೊಳ್ಳಲಿದ್ದೇವೆಯೋ ಎಂಬ ಆತಂಕವೂ ನಮಗೆ ಎದುರಾಗಿದೆ. ಈ ಮಧ್ಯೆ ರಾಜ್ಯ ಸರಕಾರವು ಸುಮಾರು 1,250 ಸಹಾಯಕ ಪ್ರಾಧ್ಯಾಪಕ ನೇಮಕಾತಿಗೆ ಮುಂದಾಗಿದೆ. ಇದರಿಂದಲೂ ಅತಿಥಿ ಉಪನ್ಯಾಸಕರಿಗೆ ಆತಂಕ ಸೃಷ್ಟಿಯಾಗಿದೆ. ಸರಕಾರ, ಹಿರಿಯ ಅಧಿಕಾರಿಗಳು ನಮ್ಮ ಸಮಸ್ಯೆಯನ್ನು ಮಾನವೀಯ ನೆಲೆಯಲ್ಲಿ ಅವಲೋಕಿಸಿ ಪರಿಹಾರ ಕಲ್ಪಿಸಬೇಕಿದೆ.
- ಹೇಮಚಂದ್ರ ಕೆ. ದ.ಕ.ಜಿಲ್ಲಾ ಉಪಾಧ್ಯಕ್ಷ
ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿ
ಮುಖ್ಯ ಬೇಡಿಕೆಗಳು
1.ಸೇವಾ ಭದ್ರತೆ ನೀಡಬೇಕು.
2. ವರ್ಷದ ಎಲ್ಲಾ ತಿಂಗಳು ಕೂಡ ವೇತನ ನೀಡಬೇಕು.
3. ಇಎಸ್ಐ, ಪಿಎಫ್ ಸೌಲಭ್ಯ ಕಲ್ಪಿಸಬೇಕು.
4. ಉಪನ್ಯಾಸಕಿಯರಿಗೆ ವೇತನ ಸಹಿತ ಹೆರಿಗೆ ರಜೆ ನೀಡಬೇಕು.
5. ಹರಿಯಾಣ, ಕೇರಳ, ಆಂದ್ರಪ್ರದೇಶ, ಹೊಸದಿಲ್ಲಿ, ಪಶ್ಚಿಮಬಂಗಾಳ ರಾಜ್ಯಗಳಲ್ಲಿ ಅತಿಥಿ ಉಪನ್ಯಾಸಕರಿಗೆ ಕೊಡುವಂತಹ ಸೌಲಭ್ಯ ನೀಡಬೇಕು.