ಉತ್ತರಾಖಂಡ ಭೂಕುಸಿತಕ್ಕೆ 6 ಬಲಿ; ನೈನಿತಾಲ್ ರಸ್ತೆ ಸಂಪರ್ಕ ಕಡಿತ
ಸಾಂದರ್ಭಿಕ ಚಿತ್ರ (Source: PTI)
ಲ್ಯಾನ್ಸ್ಡೌನ್, ಅ.19: ಉತ್ತರಾಖಂಡದಲ್ಲಿ ಕಳೆದ 24 ಗಂಟೆಗಳಿಂದ ಭಾರಿ ಮಳೆಯಾಗುತ್ತಿದ್ದು, ವಿವಿಧೆಡೆ ಭೂಕುಸಿತ ಸಂಭವಿಸಿರುವುದು ವರದಿಯಾಗಿದೆ. ಮಳೆ ಸಂಬಂಧಿ ದುರಂತಗಳಲ್ಲಿ ಮೂವರು ನೇಪಾಳಿ ಪ್ರಜೆಗಳು ಮತ್ತು ಕಾನ್ಪುರದ ಒಬ್ಬ ಪ್ರವಾಸಿ ಸೇರಿದಂತೆ ಒಟ್ಟು ಆರು ಮಂದಿ ಮೃತಪಟ್ಟಿದ್ದಾರೆ.
ಸೋಮವಾರ ನಡೆದ ಅತ್ಯಂತ ಭೀಕರ ಮಳೆ ಸಂಬಂಧಿ ದುರಂತದಲ್ಲಿ ನೇಪಾಳದ ಇಬ್ಬರು ಮಹಿಳೆಯರು ಹಾಗೂ ಒಂದು ಮಗು ಪೌರಿ ಜಿಲ್ಲೆಯ ಲ್ಯಾನ್ಸ್ಡೌನ್ನಲ್ಲಿ ನಿರ್ಮಾಣ ಹಂತದಲ್ಲಿದ್ದ ಹೋಟೆಲ್ ಬಳಿ ನಡೆದ ಭೂಕುಸಿತದಲ್ಲಿ ಜೀವ ಕಳೆದುಕೊಂಡಿದ್ದಾರೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ಪ್ರಕಟಿಸಿದೆ. ಮೃತಪಟ್ಟವರನ್ನು ಸಮೂನಾ (50), ಸಪ್ನ (4) ಮತ್ತು ಅಬಿಸಾ (4) ಎಂದು ಗುರುತಿಸಲಾಗಿದೆ.
ರುದ್ರ ಪ್ರಯಾಗ್ ಜಿಲ್ಲೆಯಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ ಕಾನ್ಪುರದ 27 ವರ್ಷದ ಪ್ರವಾಸಿ ಸುಧೀರ್ ಅವಸ್ತಿ ಎಂಬವರು ಮೃತಪಟ್ಟಿದ್ದಾರೆ. ರುದ್ರಪ್ರಯಾಗ್ನ ಸಂಗಮ್ ಮಾರುಕಟ್ಟೆಯಲ್ಲಿ ಸಂಭವಿಸಿದ ಕುಸಿತದ ವೇಳೆ ದೊಡ್ಡ ಕಲ್ಲು ಬಡಿದು ಅವರು ಮೃತಪಟ್ಟರು ಎಂದು ಅಧಿಕಾರಿಗಳು ಹೇಳಿದ್ದಾರೆ. ಚಂಪಾವತ್ ಜಿಲ್ಲೆಯಲ್ಲಿ 48 ವರ್ಷದ ಮಹಿಳೆ ಮತ್ತು ಆಕೆಯ 17 ವರ್ಷದ ಮಗ ಭೂಕುಸಿತ ಸಂಭವಿಸಿದ ವೇಳೆ ಜೀವಂತ ಸಮಾಧಿಯಾದರು.
ಈ ನಡುವೆ ನೈನಿತಾಲ್ ಸೋಮವಾರ ರಾಜ್ಯದ ಇತರ ಭಾಗಗಳ ಜತೆ ಸಂಪರ್ಕ ಕಡಿದುಕೊಂಡಿದೆ. ಈ ಬೆಟ್ಟ ನಗರವನ್ನು ಸಂಪರ್ಕಿಸುವ ಎಲ್ಲ ಮೂರು ಹೆದ್ದಾರಿಗಳು ಭೂಕುಸಿತದಿಂದಾಗಿ ಮುಚ್ಚಿವೆ. ಹಲವು ಮಂದಿ ಪ್ರವಾಸಿಗರು ರಸ್ತೆ ಮತ್ತು ಹೋಟೆಲ್ಗಳಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ನೈನಿತಾಲ್ನಿಂದ ಪ್ರಯಾಣಿಸುತ್ತಿದ್ದ ಹಲವು ಮಂದಿ ಪ್ರವಾಸಿಗರು ಮೂರೂ ಮಾರ್ಗಗಳಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ದಸರಾ ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ಅಪಾರ ಸಂಖ್ಯೆಯ ಪ್ರವಾಸಿಗರು ಈ ಗಿರಿಧಾಮಕ್ಕೆ ಆಗಮಿಸಿದ್ದರು. ಭಾರಿ ಮಳೆಯಿಂದಾಗಿ ನೈನಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ.