ಮಹಾರಾಷ್ಟ್ರ:‘ಹಿಂಭಡ್ತಿ’ಗೆ ಅಸಮಾಧಾನ; ಕಾಂಗ್ರೆಸ್ ಪ್ರಮುಖ ವಕ್ತಾರ ಸ್ಥಾನ ತ್ಯಜಿಸಿದ ಸಚಿನ್ ಸಾವಂತ್
photo:the indian express
ಮುಂಬೈ: ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ಗೆ ಸಮಸ್ಯೆ ಉಂಟುಮಾಡುವ ಬೆಳವಣಿಗೆಯಲ್ಲಿ ರಾಜ್ಯದ ಪ್ರಮುಖ ವಕ್ತಾರರೊಬ್ಬರು ರಾಜ್ಯ ಅಧ್ಯಕ್ಷ ನಾನಾ ಪಟೋಲೆ ಮಾಡಿದ ಹೊಸ ನೇಮಕಾತಿಗಳನ್ನು ವಿರೋಧಿಸಿ ತಮ್ಮ ಸ್ಥಾನವನ್ನು ತೊರೆದಿದ್ದಾರೆ ಎಂದು ವರದಿಯಾಗಿದೆ.
ಅಸಮಾಧಾನಗೊಂಡಿರುವ ಸಚಿನ್ ಸಾವಂತ್ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಹೊಸ ಹುದ್ದೆಯನ್ನು ಕೋರಿ ಪತ್ರ ಬರೆದಿದ್ದಾರೆ ಎಂದು ವರದಿಯಾಗಿದೆ.
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ನ ಮುಖ್ಯ ವಕ್ತಾರರಾಗಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಮಾಜಿ ನಾಯಕ ಅತುಲ್ ಲೋಂಧೆಯವರನ್ನು ನಾನಾ ಪಟೋಲೆ ನೇಮಕ ಮಾಡಿದ್ದಾರೆ ಎಂದು ನಂಬಲಾಗಿದೆ. ಲೋಂಧೆ 2016 ರಲ್ಲಿ ಕಾಂಗ್ರೆಸ್ ಸೇರಿದ್ದರು.
10 ವರ್ಷಗಳಿಂದ ಮುಖ್ಯ ವಕ್ತಾರರಾಗಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಚಿನ್ ಸಾವಂತ್ ಅವರನ್ನು ಸಹಾಯಕ ವಕ್ತಾರರನ್ನಾಗಿ ಹಿಂಭಡ್ತಿ ನೀಡಲಾಗಿದೆ ಎಂದು ವರದಿಯಾಗಿದೆ. ಇದರಿಂದ ವ್ಯಗ್ರಗೊಂಡಿರುವ ಸಚಿನ್ ಸಾವಂತ್ ಮಂಗಳವಾರ ತನ್ನ ರಾಜೀನಾಮೆಯನ್ನು ನೀಡಿದರು ಎಂದು ವರದಿಗಳು ಹೇಳುತ್ತವೆ.
ಸಾವಂತ್ ಅವರು ತಮ್ಮ ಟ್ವಿಟರ್ ಬಯೋದಿಂದ ತಮ್ಮ ಹುದ್ದೆಯನ್ನು ತೆಗೆದು ಹಾಕಿದ್ದಾರೆ.
ಎನ್ ಡಿಟಿವಿಯೊಂದಿಗೆ ಮಾತನಾಡಿದ ಸಾವಂತ್ ಅವರು ರಾಜೀನಾಮೆ ನೀಡುವುದನ್ನು ಅಥವಾ ತಮ್ಮ ರಾಜ್ಯ ಮುಖ್ಯಸ್ಥರೊಂದಿಗಿನ ಯಾವುದೇ ಭಿನ್ನಾಭಿಪ್ರಾಯವನ್ನು ನಿರಾಕರಿಸಿದರು. ಆದರೆ ಅವರು ಹೊಸ ಹುದ್ದೆಗಾಗಿ ಹಾಗೂ ಅವರ ಪ್ರಸ್ತುತ ಹುದ್ದೆಯಿಂದ ಬಿಡುಗಡೆ ಹೊಂದುವಂತೆ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದಾರೆ ಎಂದು ಒಪ್ಪಿಕೊಂಡರು.
ಮೂರು ದಶಕಗಳಿಂದ ಕಾಂಗ್ರೆಸ್ ನೊಂದಿಗೆ ಗುರುತಿಸಿಕೊಂಡಿರುವ ಸಾವಂತ್ ಅವರು ಪ್ರತಿಸ್ಪರ್ಧಿ ಬಿಜೆಪಿ ಹಾಗೂ ಹಿಂದಿನ ದೇವೇಂದ್ರ ಫಡ್ನವೀಸ್ ಸರಕಾರದ ವಿರುದ್ಧ ಪಕ್ಷದ ಪ್ರಬಲ ಧ್ವನಿಯಾಗಿದ್ದರು.