ಹೋಂವರ್ಕ್ ಮಾಡಿಲ್ಲವೆಂದು ವಿದ್ಯಾರ್ಥಿಗೆ ಮನಬಂದಂತೆ ಥಳಿಸಿ ಕೊಲೆಗೈದ ಶಿಕ್ಷಕನ ಬಂಧನ
"ಸತ್ತಂತೆ ನಾಟಕವಾಡುತ್ತಿದ್ದಾನೆ" ಎಂದಿದ್ದ ಆರೋಪಿ
ಜೈಪುರ್: ಹೋಂವರ್ಕ್ ಮಾಡಿಲ್ಲವೆಂದು ಏಳನೇ ತರಗತಿಯ ಬಾಲಕನೊಬ್ಬನನ್ನು ಖಾಸಗಿ ಶಾಲಾ ಶಿಕ್ಷಕರೊಬ್ಬರು ಹೊಡೆದು ಸಾಯಿಸಿದ ಘಟನೆ ರಾಜಸ್ಥಾನದ ಚುರು ಜಿಲ್ಲೆಯ ಸಲಾಸರ್ ಗ್ರಾಮದಲ್ಲಿ ವರದಿಯಾಗಿದ್ದು ಆರೋಪಿ ಶಿಕ್ಷಕನನ್ನು ಬಂಧಿಸಲಾಗಿದೆ ಎಂದು indiatoday.in ವರದಿ ಮಾಡಿದೆ.
ಹದಿಮೂರು ವರ್ಷದ ಬಾಲಕ ಹೋಂವರ್ಕ್ ಪೂರ್ಣಗೊಳಿಸಿಲ್ಲವೆಂದು ಸಿಟ್ಟುಗೊಂಡ ಶಿಕ್ಷಕ ಮನೋಜ್ ಕುಮಾರ್ ಕೋಲಿನಿಂದ ಮನಬಂದಂತೆ ಥಳಿಸಿದ್ದಾನೆ.
ಬುಧವಾರ ಬೆಳಿಗ್ಗೆ ಶಿಕ್ಷಕ ಬಾಲಕನ ತಂದೆ ಓಂಪ್ರಕಾಶ್‍ಗೆ ಕರೆ ಮಾಡಿ ಆತನ ಪುತ್ರ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆಂದು ಮಾಹಿತಿ ನೀಡಿದ್ದ. ಬಾಲಕನ ತಂದೆ "ನನ್ನ ಮಗ ಹೇಗಿದ್ದಾನೆ, ಆತನನ್ನು ಸಾಯಿಸಿದ್ದೀಯಾ?," ಎಂದು ಕೇಳಿದಾಗ ಆತ "ಸತ್ತವರಂತೆ ನಾಟಕವಾಡುತ್ತಿದ್ದಾನೆ" ಎಂದು ಶಿಕ್ಷಕ ಹೇಳಿದ್ದ. ಬಾಲಕನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆತ ಅದಾಗಲೇ ಮೃತಪಟ್ಟಿದ್ದಾನೆಂದು ವೈದ್ಯರು ಹೇಳಿದ್ದಾರೆ.
ಬಾಲಕನನ್ನು ನೆಲಕ್ಕೆ ಬೀಳಿಸಿ ಕಾಲಿನಿಂದ ಒದ್ದು, ಮುಷ್ಠಿಯಿಂದ ಗುದ್ದಿ ಶಿಕ್ಷಕ ಥಳಿಸಿದ್ದಾನೆಂದು ಶಾಲೆಯ ಇತರ ವಿದ್ಯಾರ್ಥಿಗಳು ಹೇಳಿದ್ದಾರೆ.
ಕಳೆದ 15 ದಿನಗಳಲ್ಲಿ ಶಿಕ್ಷಕ ತನಗೆ ನಾಲ್ಕೈದು ಬಾರಿ ಥಳಿಸಿದ್ದಾರೆಂದು ಬಾಲಕ ದೂರಿದ್ದನೆಂದು ಆತನ ತಂದೆ ಹೇಳಿದ್ದಾರೆ.